Tuesday, 24 November 2015

ರಿನೈಸನ್ಸ್ (Renaissance)

ಎಲ್ಲರೂ ಸತ್ತು ಮತ್ತೆ ಹುಟ್ಟೋಣ್ವಾ?
ಬ್ರಹ್ಮ, ಅಬ್ರಹಂ, ಇಬ್ರಾಹಿಂ ಒಪ್ಪಿದ್ದಾರೆ
ಬನ್ನಿ ಎಲ್ಲರೂ ಸಾಯೋಣ
ಎಲ್ಲವನ್ನೂ ಸಾಯಿಸೋಣ


ಮನುಕುಲದ ಹುಟ್ಟು ಎಲ್ಲಿಂದ? ಯಾರಿಂದ?
ಹೇಗಾಗುವುದೆಂಬ ಚಿಂತೆ ಬೇಡ
ಒಗಟುಗಳ ತಗಾದೆ ಬೇಡ
ಮೊದಲುಗಳ ಮೂಲ ಹುಡುಕುತ್ತ
ಮೆದುಳುಗಳು ಕೊಳೆವುದು ಬೇಡ
ನೆನ್ನೆಗಳ ಸಮರ್ಥನೆಗೆ ಇಂದು-ನಾಳೆಗಳ ಕಳೆವುದು ಬೇಡ


ಹುಟ್ಟು ಹುಟ್ಟಾಗಿರಲಿ, ಸಾವು ಗುಟ್ಟಾಗಿರಲಿ
ಪುನರ್ಜನ್ಮಗಳ ಕಂತೆ ಪುಟಗಳೆಲ್ಲ ಹರಿಯಲಿ
ದೇವರೇ ಇಳಿದು ಬಂದು ತಾ ದೇವರೆಂದರೂ
ದೇವನೊಬ್ಬನೇ ಎಂದು ಯಾರೇ ಸಾರಿದರೂ
ದೇವರು ಮತ್ತೆ ಹುಟ್ಟಿ ಬರುತ್ತಾನೆಂದರೂ
ದೇವರು ಮೊದಲು ನಮ್ಮಲ್ಲಿ ನೆಲೆಸದ ಹೊರತು
ಅದು ದೇವರೆಂಬುದೇ ಇಲ್ಲವೆನ್ನದ ಹೊರತು
ಅದು ಅದಾಗಿ ಅವ/ಅವಳಾಗದ ಹೊರತು
ದೇವರನ್ನ ದೂರವಿಟ್ಟೇ ನೋಡೋಣ


ಒಂದು ಹಸಿವಿಗೆ ನೂರು ಕೈ
ಒಂದು ನೋವಿಗೆ ನೂರು ಮನಸು
ಒಂದು ಅಳಲಿಗೆ ನೂರು ಕಣ್ಣು
ಸಂಸ್ಕೃತಿಯ ಅಡಿಪಾಯದ ಮೇಲೆ
ಭವ್ಯ ಬಂಗಲೆಗಳ ಕಟ್ಟೋಣ,
ಕೋಣೆಯಲ್ಲಿ ದೇವರ ಕಟ್ಟಿ ಹಾಕುವುದು ಬೇಡ
ಅದಕ್ಕೂ ಸ್ವತಂತ್ರ ತಂತ್ರದ ಅರಿವಾಗಲಿ
ಅನ್ಯ ಗ್ರಹಗಳೇನಾದರೂ ಬದಲಾದ ಭೂಮಿಯಿಂದ ಕಲಿವಂತಿದ್ದರೆ
ದಾರಾಳವಾಗಿ ಅದು ಕಲಿಸಲಿ
ಆದರೆ ದೇವರಾಗಿ ಅಲ್ಲ!!


ಸಾವು ಸ್ವಸ್ಥ್ಯ ವೃದ್ಧಿಸುವುದಾದರೆ
ಇಡಿ ದೇಶ ದೇಶಗಳು ಸ್ಮಶಾಣಗಳಾಗಲಿ
ಆದರೆ ಮನುಷ್ಯರು ಹೀಗೂ ಇದ್ದರೆಂಬ
ಕುರುಹುಗಳ ಉಳಿಸದಿರಲಿ ಸಾಕು!!


                                          - ರತ್ನಸುತ

Friday, 20 November 2015

ಯುದ್ಧಗಳು ನಡೆದೇಹೋದವು

ಗೋರಿಗಳು ಬಿರುಕು ಬಿಡುತ್ತಿವೆ
ಅಲ್ಲೆಲ್ಲೋ ಸಿಡಿದ ಬಾಂಬುಗಳ ಕಂಪನಕೆ,
ಕಪ್ಪು ಬಾವುಟವ ಪ್ರದರ್ಶಿಸಲು
ಇತ್ತ ಕೈಗಳನ್ನೇ ಕಳೆದುಕೊಂಡವರು
ಪ್ರಾಣ ಕಳೆದುಕೊಂಡವರ ಮಣ್ಣು ಮಾಡಲಾಗದಕ್ಕೆ
ಕಣ್ಣೀರಿಡುತ್ತಿದ್ದಾರೆ ಪಾಪ


ಮನಸು ಮನಸುಗಳು ತೇಪೆ ಹಾಕಿಕೊಳಲಿ
ಹರಿದವರು ಹರಿವವರ ಹುಟ್ಟಿಸುತ್ತಲೇ ಇರುವರು,
ಕೈ ತುತ್ತು ಅನುಕಂಪದಾಚೆ ಅನುಮಾನಕ್ಕೆಡೆಮಾಡುತ್ತಿದೆ
ಅನುಮಾನಿಸಿ ಅವಮಾನಿಸಿದವರೆಲ್ಲ ಕ್ಷೇಮ
ನಂಬಿದವರ ಕೊರಳಲ್ಲೀಗ ಮಾತು ಹೊರಡುತ್ತಿಲ್ಲ
ಮೌನಕ್ಕೂ ಜಾಗವಿಲ್ಲ


ಶವ ಪೆಟ್ಟಿಗೆ ತಯಾರಿಸುವ ಬಡಗಿಗೆ
ಬಿಡುವಿಲ್ಲದಷ್ಟು ಕೆಲಸ,
ಮನೆ ಮುಂದೆ ಸಾಲು ಸಾಲು ಗಿರಾಕಿಗಳು
ತಮಗೂ ಇರಲೆಂದು ಹೆಚ್ಚಿಗೇ ಬೇಡಿಕೆಯಿಟ್ಟಿದ್ದಾರೆ,
ಹಾಗೇ ಕೊಳೆಯಲಿಕ್ಕೆ ಇಲ್ಲಿ ಯಾರಿಗೂ ಮನಸಿಲ್ಲ
ಗುರುತಾಗಬಯಸುವವರೇ ಎಲ್ಲ


ಆಟದ ಮೈದಾನಗಳ ನಡುವೆ ಗಡಿಯಿಟ್ಟು
ಗೆರೆಯ ಎಳೆದವರಾರಿಗೂ ಆಟ ಕಿತ್ತುಕೊಂಡ
ಪ್ರಜ್ಞೆ ಕಾಡುತ್ತಲೇ ಇಲ್ಲವೆನಿಸುತ್ತೆ,
ಸಾವು ಬದುಕಿನ ಆಟಕ್ಕೆ ಸಜ್ಜಾಗಿದೆ ಮೈದಾನ
ಅತಿ ಹೆಚ್ಚು ತಲೆ ಉರುಳಿಸಿದವರೇ ಗೆದ್ದಂತೆ,
ಸೋತವರಲ್ಲಿ ಸತ್ತವರಷ್ಟೇ ಅಲ್ಲ
ಸಾವಿನ ಪರಿಚಯ ಮಾಡಿಸಿದವರೂ ಇದ್ದರು


ಯುದ್ಧವೆಂಬುದು ನಡೆದೇಹೋಗಿತ್ತು
ರಕ್ತದಲ್ಲಿ ಬರೆದುಕೊಳ್ಳಲು ನೂರು ಕೈಗಳು
ಅಕ್ಷರದ ಕೆಂಪು ಒಂದೇ
ಅದರೆ ಕಂಪು ಮಾತ್ರ ಬಿನ್ನ,
ಪುಟಗಳಿಗೆ ನಿಬಂಧನೆಗಳಿಲ್ಲ
ಯಾರೇ ಹೊರಳಿಸಿದರೂ ಹೊರಳತಕ್ಕದ್ದು
ಇತಿಹಾಸದ ಸಮೀಪ ಕರೆದೊಯ್ದು ನಿಲ್ಲಿಸುವ ಶಕ್ತಿ
ಯಾವುದೇ ಗೀಟುಗಳಿಗೆ ಸಾಧ್ಯವಾಗಲಿಲ್ಲ


                                                  - ರತ್ನಸುತ

Tuesday, 17 November 2015

ಕವಿತೆಗಳಾಗದಿದ್ದಾಗ

ಕವಿತೆ ಬಾಗಿಲಾಚೆ ನಿಂತು ಸತಾಯಿಸುತಿದೆ
ಹೊರಗೆ ವಿಪರೀತ ತಂಡಿ
ಕವಿತೆ ನಡುಗಿ ಸಾಯಬಹುದೇನೋ
ಒಂದು ಕಂಬಳಿಯಾದರೂ ಹೊದಿಸಿಬರಬೇಕು
ಅಥವ ಎದೆಗೊತ್ತಿ ಬೆಚ್ಚಗಿರಿಸಬೇಕು


ಕಾಣದ ಕವಿತೆಯ ಅಸ್ತಿತ್ವದ ಬಗ್ಗೆ
ಕಣ್ಣಿಗೆ ಇನ್ನಿಲ್ಲದ ಸಂಶಯ,
ಮನಸು ಇರುವಿಕೆಯ ಪುರಾವೆ ಒದಗಿಸಿ
ಮುನ್ನುಗ್ಗುವ ಸೂಚನೆ ನೀಡಿದರೂ
ಒಂದು ಹೆಜ್ಜೆಯಾದರೂ ಇಡುವ ಮನಸಿಲ್ಲ
ಕವಿತೆ ನಡುಗಿ ಒಡೆಯದೊಡಗಿತು
ಕಣ್ಣು ತುಂಬಿ ಬರಲೇ ಇಲ್ಲ!!


ಒಡೆದ ಕವಿತೆ ವಿರೂಪಗೊಳ್ಳದೆ ಉಳಿದು
ಹಂತ-ಹಂತದಲ್ಲೊಂದೊಂದು ಆಕಾರ ಪಡೆಯಿತು,
ನೀಳ ಗದ್ಯದಂತಿದ್ದದ್ದು
ಹನಿಗವನಗಳಾಗಿ ಹರಿಯುತ್ತಿದ್ದಂತೆ
ಉಳಿದಲೇ ಉಳಿದದ್ದೂ ಒಂದು ಕಿರು ಕವ್ಯ


ಅಂಗಳದ ತುಂಬೆಲ್ಲ ಚೆಲ್ಲಾಡಿಕೊಂಡ
ಮಕ್ಕಳ ಆಟಿಕೆಗಳಂತೆ
ಎಲ್ಲವೂ ಬೇಕನಿಸಿಯೂ ಎಲ್ಲವನ್ನೂ ಬಳಸಲಾಗದೆ
ಒಂದೆರಡನ್ನಷ್ಟೇ ಹಿಡಿಯಲಾದ ಕೈಗಳಿಗೆ
ಮನಸು ಮತ್ತಷ್ಟು ಕೈಗಳನ್ನ ಒದಗಿಸುವ
ಇಂಗಿತ ವ್ಯಕ್ತಪಡಿಸುತ್ತಿತ್ತು


ಕವಿತೆ ಎಲ್ಲೂ ನಿಲ್ಲುವಂತದ್ದಲ್ಲ
ನಿಂತರದು ಕವಿತೆ ಅಲ್ಲವೇ ಅಲ್ಲ,
ಹರಿಬಿಟ್ಟದ್ದಷ್ಟೂ ಕವಿತೆಗಳು
ಜೊತೆಗಿರಿಸಿಕೊಂಡವು ಬಿಕ್ಕುತ್ತಿವೆ
ಕವಿತೆಗಳಾಗಲಾರದ ನೋವಿನಿಂದ!!


                                               - ರತ್ನಸುತ

Monday, 9 November 2015

ದೀಪಾವಳಿ


ಮಣ್ಣ ಹಣತೆ
ಬೀಜದೆಣ್ಣೆ
ನಾರು ಬತ್ತಿ
ಬೆಂಕಿ ಕಡ್ಡಿ
ಒಂದುಗೂಡಿ
ನಸುಕ ಸೀಳಿ
ದೀಪವಾಯ್ತು ಮನೆಯಲಿ
ಹರುಷದ ದೀಪಾವಳಿ!!

                  - ರತ್ನಸುತ

ಪಾಕಶಾಲೆ


ಮಣ್ಣಿನ ಕುಡಿಕೆಯ ತಣ್ಣನೆ ನೀರು
ಒಲೆಯಲಿ ಕುದಿಸಿದ ಮೆಣಸಿನ ಸಾರು
ದುಂಡಗೆ ತೊಳೆಸಿದ ರಾಗಿ ಮುದ್ದೆ
ಕಾವಿರಿಸಲು ಉರಿಸಿದ ಓಣ ಸೌದೆ


ಸಗಣಿ, ಗಂಜಲ ಸಾರಿಸಿ ಮೊರದಲಿ
ಕಲ್ಲು, ಕಡ್ಡಿಯ ಹೆಕ್ಕುವ ಸರದಿ
ಉಕ್ಕಿ ಬಂತು ಹಾಲಿನ ಪಾತ್ರೆ
ಮಾಳಿಗೆ ಬೆಕ್ಕಿಗೆ ತಲುಪಿತು ವರದಿ


ಚಿಮಣಿಯ ಗೋಡೆಯ ನೆರಳಿನ ಆಟ
ಬಿಳಿ ಸುಣ್ಣಕೆ ಕರಿ ಮಬ್ಬಿನ ಪಾಠ
ಕೆಮ್ಮಣ್ಣಿನ ರಂಗೋಲಿಯ ಹೊಸಲು
ಉದುರಿದ ಚಕ್ಕೆಗೆ ಇಟ್ಟಿಗೆ ಬಯಲು


ಮಜ್ಜಿಗೆ ಕಡಿದ ಬೆಣ್ಣೆಯ ಕೋಲು
ಚಿಲಕಕೆ ಸಿಕ್ಕಿದ ಸೀರೆಯ ನೂಲು
ಇರುವೆಯ ಸಾಲಲಿ ಸವೆದ ಬಣ್ಣ
ರುಬ್ಬೋ ಕಲ್ಲಿಗೂ ಇರುವುದು ಪ್ರಾಣ


ಬೀದಿ ನಾಯಿ ಕಾಯುತಲಿತ್ತು
ರಾತ್ರಿಯ ತಂಗಲು ನೋಯುತಲಿತ್ತು
ಹಸಿದ ಹೊಟ್ಟೆಗೆ ನಾಲ್ಕು ತುತ್ತು
ಮಿಕ್ಕಿದ್ದೆಲ್ಲವೂ ಅನ್ಯರ ಸ್ವತ್ತು


ಅಡುಗೆ ಮನೆಯಲಿ ಹೊಗೆಯೋ ಹೊಗೆ
ಮೂಗನು ಬಿಗಿಸಿ, ಕಣ್ಣನು ತುಂಬಿಸಿ
ಸೆರಗೋ ಹಣೆಯನು ಒತ್ತುತಲಿತ್ತು
ಘಮಲೋ ಎಲ್ಲವ ಮೀರಿಸುತಿತ್ತು!!


                                  - ರತ್ನಸುತ

Sunday, 8 November 2015

ಹಿಂಗಾರು ಹನಿಯೇ!!


ಇಂದೇಕೋ ಸುಂದರ ಕನಸೊಂದು
ಕಣ್ಣೆವೆಯಲ್ಲಿ ಜೋತಾಡಿದಂತನಿಸುತಿದೆ
ನಿದ್ದೆಯನ್ನ ಹಾಸಿಗೆಗೇ ಹೊರೆಸಿ ಬಂದಾಗಿದೆ
ಅದರ ನೆರಳಷ್ಟೇ ಹಾಳು ಮಂಪರು


ಹೆಲ್ಮೆಟ್ಟಿನ ಗಾಜುರಕ್ಷೆಗೆ ಅಂಟಂಟಿ
ಒಂದರ ಬಾಲ ಹಿಡಿದಂತೆ ಮತ್ತೊಂದು
ಮಂಜು ಆಕಾರ ಪಡೆಯುತ್ತಿದ್ದಾಗ
ದಾರಿಗಳೆಲ್ಲ ಮೈ ಮುರಿದು ಬರಮಾಡಿಕೊಂಡವು


ರವಿ ಇನ್ನೂ ಹಲ್ಲುಜ್ಜಿಲ್ಲೆಂಬಂತೆ
ತುಟಿಯ ಜಗ್ಗಿಸದೆ ನಗುತ್ತಿದ್ದಾನೆ
ಮುಖಕ್ಕೆ ಬಡಿಸಿಕೊಂಡ ಸಾಲು ಸಾಲು ಪೊರೆಯ
ಪೊರೆದಂತೆಯೇ ಶಾಂತನಾಗಿ ಉಳಿದು


ಬಿಸಿ ಕಾಫಿ ಲೋಟಕ್ಕೇನೋ ಅವಸರ
ಹೀಗೆ ಸುರಿದು, ಹಾಗೆ ತಿರುಗಿ ನೋಡುವಷ್ಟರಲ್ಲಿ
ಶಾಖವನ್ನೆಲ್ಲ ನುಂಗಿ ತಣ್ಣಗಾಗಿಸುತ್ತೆ,
ಅಧರದೊಳಗೆ ಇನ್ನೂ ಅದರಿತು ನಾಲಗೆ


ಮೋಡಗಳು ತಬ್ಬಿಕೊಂಡಂತೆ ಆಗಸವ
ಎಲ್ಲೂ ಚೂರು ಬಿಟ್ಟುಗೊಡದ ಹಠ
ಹೂಗಳಿನ್ನೂ ಹಸಿಯಾಗಿವೆ ಅಂತೆಯೇ ತಳಿರು
ಆದರೂ ತುಂತುರಿಗೆ ಮೈಯ್ಯೊಡ್ಡುವ ಚಟ


ಆಕಳಿಕೆಯಾಚೆಗಿನ ಕೆಲಸಕ್ಕೆ ಮನಸೇ ಇಲ್ಲ
ಹೊರಗೆ ಮಳೆ, ಬಸಿರಾಗಿಸಿ ಗರಿಕೆಯ
ಇದ್ದಲ್ಲಿ ತೂಕಡಿಕೆ
ಹಿಡಿದಿಡಲಾಗದೆ ಜಾರಿಸಿ ಗೊರಕೆಯ!!


                                       - ರತ್ನಸುತ

Tuesday, 3 November 2015

ಇಷ್ಟೇ ಸಾಕು


ಕರೆದಾಗ ನೀ ತಿರುಗಿ ನೋಡದಿರೆ ಅದು ಘಾಸಿ
ನೀಗಿಸುವ ನಗುವಾಗು ಅಷ್ಟೇ ಸಾಕು
ಬರೆವಾಗ ನೀ ಒರಗಿ ಇರಲೇಬೇಕೆಂದಲ್ಲ
ಮೂಡುವ ಪದವಾಗು ಅಷ್ಟೇ ಸಾಕು


ನೀ ಎದುರು ಬಂದಾಗ ಬೆದರುವೆ ಭಯದಲ್ಲಿ
ಚೆದುರು ಮೌನವ ಮಾತು ಮೂಡುವಂತೆ
ನಿದಿರೆ ದೂರಾದಾಗ ನವಿರು ಕನಸಾಗಿ ಬಾ
ನಿಶೆಗಿಷ್ಟು ನಶೆಯಿರಲಿ ಅಷ್ಟೇ ಸಾಕು


ದೇವರಲಿ ಕೈ ಮುಗಿದ ನನ್ನಾಸೆಗಳನೊಮ್ಮೆ
ನೀ ದಾಟುವ ಮುನ್ನ ಸೋಕಿ ಹೋಗು
ಹಸಿವಿನಲಿ ಹಿಡಿ ಮುದ್ದೆ ತಿನಿಸದಿದ್ದರೂ ಸಹಿತ
ನೆನಪನ್ನೇ ಎದೆಗಿರಿಸು ಅಷ್ಟೇ ಸಾಕು


ಮೊದಲಾಗುವ ಮೊದಲು ನೀ ನನ್ನ ಮೊದಲಾಗು
ಹಗಲಿರುಳು ದಿನವುರುಳಿ ಏನಾದರೂ
ಬದಲಾಗುವ ಸಮಯ ಎಲ್ಲ ಬದಲಾಗುವುದು
ನಮ್ಮೊಲವು ಸ್ಥಿರವಾದರಷ್ಟೇ ಸಾಕು


ಹಣ್ಣಾದ ಹೃದಯದಲಿ ಇನ್ನಾರ ಧ್ಯಾನಿಸಲಿ
ನಿನ್ನ ವಿನಹ ಎಲ್ಲ ಗೊಡ್ಡು ಸಪ್ಪೆ
ಮಣ್ಣಾಗುವ ಮುನ್ನ ನೀ ನನ್ನವಳು ಎಂಬ
ಭಾವ ಚೇತನವಿರಲಿ ಅಷ್ಟೇ ಸಾಕು!!


                                           - ರತ್ನಸುತ

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...