Thursday 15 December 2022

ಆ ಬೆಟ್ಟದ ತುತ್ತ ತುದಿ

ಆ ಬೆಟ್ಟದ ತುತ್ತ ತುದಿ

ಅಲ್ಲಿಯ ಏಕಾಂತ
ತಣ್ಣಗೆ ಬೀಸೋ ಗಾಳಿಗೆ
ಸೋಲುವ ಧಾವಂತ
ಎಲ್ಲವೂ ಸರಿಯೇ ಮೇಲೆ
ರಕ್ಕಸನಿರುತಿದ್ದ
ನೆತ್ತರ ಹೀರುವ ಕೂಪದ
ನಕ್ಷೆಯ ಗೀಚಿದ್ದ

ಯಾರೂ ಊಹಿಸಲಾರದ
ಬೆಂಕಿಯ ಹುದುಗಿಟ್ಟು
ತನ್ನ ಈರ್ಷೆಯ ಜ್ವಾಲೆಗೆ
ಎಲ್ಲವನೂ ಸುಟ್ಟು
ಸೇಡಿನ ಸ್ವಾರ್ಥದ ಹಠದಲಿ
ಏನೆಲ್ಲಾ ಕಳೆದ
ತನಗಂಟಿದ ಮಸಿಯ
ನಂಬಿದವರಿಗೆಲ್ಲ ಬಳಿದ

ಎಲ್ಲರೂ ಎಣಿಸಿದ್ದರು
ಬೆಳ್ಳಗೆ, ಕುಳ್ಳಗೆ ಇವನು
ಪುಟ್ಟ ಮೀಸೆಯ ಹೊತ್ತು
ಏನನು ಸಾಧಿಸಿಯಾನು,
ಯಾರನು ಬೆದರಿಸಿಯಾನು,
ಆಗಲೇ ನಲುಗಿದ ದೇಶ
ಮತ್ತೆ ಕಟ್ಟುವನೇನು?
ಮತಿಗೇಡಿಯ ಮಾತಿಗೆ
ಮರುಳಾದರು ಕಡೆಗೆ

ತಾನಲ್ಲದೆ ಬೇರಿಲ್ಲ
ಎನ್ನುತ ನೆಗೆದವ ಕೊನೆಗೆ
ಬೇರು ಕಿತ್ತ ಮರವಾಗಿ
ನೆಲಕೆ ಅಪ್ಪಳಿಸಿದ
"ವಿಜ್ಞಾನವು ಅಜ್ಞಾನಿಯ
ಕೈವಶವಾದರೆ ಹೀಗೇ"
ಎನ್ನುವ ಸಂದೇಶ ಸಾರಿ
ಚರಿತ್ರೆಯ ಪುಟವಾದ

ಅಲ್ಲಿಯ ತನ ಜಗದೆಲ್ಲೆಡೆ
ಭುಜಬಲ ಮೆರೆದ
ತನ್ನ ನೆರೆ ಹೊರೆಯ ದೂರ್ತರ
ಮೂಢರ ಎಚ್ಚರಿಸಿದ
ದಬ್ಬಾಳಿಕೆಯಿಂದ ಸಿಗುವು-
-ದಾವುದೂ ಶಾಶ್ವತವಲ್ಲ
ಶಾಂತಿಯೊಂದೇ ಸೌಖ್ಯವೆಂಬ
ಕುರುಹು ಬಿಟ್ಟು ಹೋದ..

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...