Thursday 15 December 2022

ಮುತ್ತು ಅಪೂರ್ವವಾಗಿಸಲೆಂದೆ

ಮುತ್ತು ಅಪೂರ್ವವಾಗಿಸಲೆಂದೆ 

ನೀ ಅಪೂರ್ಣವಾಗಿಸಿ ನಾಚಿ ಓಡಿದೆ 
ಪ್ರತಿ ಬಾರಿ ಇದೇ ಖುಷಿ,
ತಪ್ಪಿತೆಂದು ನಿನಗೆ 
ಬೇಡುವಂತೆ ನನಗೆ  

ಅಷ್ಟಕ್ಕೂ ಮುತ್ತು ಕೊಡುವುದಲ್ಲ 
ಹಂಚಿಕೊಳ್ಳುವುದು 
ನಿನ್ನಧರ ನನ್ನಧರ ಅರ್ಧರ್ಧ;
ಹತ್ತಿರವಾದಾಗ ಅಂತರ ಮೂಡಿದಷ್ಟೇ 
ಉಸಿರಾಟದ ಕೊರಗು 
ನಂತರ ಎಲ್ಲ ಸರಾಗ 

ಹಂಚಿಕೊಂಡ ಮೇಲೆ 
ಪಾಲು ನನಗೇ ಹೆಚ್ಚೆಂದೆ  
ಅಲ್ಲವೆಂದು ನೀನು;
ಎಲ್ಲವ ಶೂನ್ಯವಾಗಿಸಿ 
ಮತ್ತೆ ಹೊಸ ಲೆಕ್ಕ 
ನೀ ತಪ್ಪಿಸಿಕೊಂಡದ್ದು, ನಾ ಬೇಡಿದ್ದು.. 

ಇದಿಷ್ಟು ತುಟಿಗೆ ತುಟಿಯ ಲೆಕ್ಕ 
ಮಿಕ್ಕಿದ್ದು ನಗಣ್ಯವಾ? ಎಂದೇ ನೀ 
ಥಟ್ಟನೆ ಹೊಸ ಖಾತೆ ತೆರೆದೆ 
ಲೆಕ್ಕ ತಪ್ಪುತ್ತಲೇ ಹೋಯಿತು 

ಕಣ್ಣೊಳಗೆ ಕಣ್ಣಿಟ್ಟು 
ಹೂಡಿದ್ದೇ ಉಳಿತಾಯವೆಂದೆ ನಾ
"ಅದು ಹೇಗೆ?
ಮುತ್ತಿಡುವಾಗ ಕಣ್ಣು ಮುಚ್ಚಿತ್ತಲ್ಲ?" ಅಂದೆ  
ಅಸಲಿಗೆ ಇಬ್ಬರದ್ದೂ;
ಯಾರಿಗೆ ಯಾರೂ ಕಾಣದಂತೆ 
ನಮಗೆ ನಾವೇ ಕಂಡಂತೆ!

ಎಲ್ಲವನ್ನೂ ಪೋಣಿಸಿ 
ಬಿಗಿದು ಎತ್ತಿಡುವಾಗಲೆಲ್ಲ 
ಗಂಟು ಕಳಚಿ ನೆಲಕೆ ಸುರಿದು 
ಹೆಜ್ಜೆಯಡಿಗೆ ಚಕ್ರವಾಗಿ 
ಇಬ್ಬರನ್ನೂ ಮತ್ತೆ ಕೂಡಿಸಿ 
ಮುತ್ತು ಬೀರಿತ್ತು ಗತ್ತನು

ಮತ್ತಿನರಮನೆಯಲ್ಲಿ ನಿನ್ನ 
ಸೆರೆಯ ಮಾಡಿದ ನನ್ನ ಸೊಕ್ಕನು 
ಮುರಿದು ಓಡಿದೆ ಮತ್ತೆ ನೀ 
ಅಪೂರ್ಣವಾಗಿಸಿ ಮುತ್ತನು... 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...