Wednesday, 4 January 2012

ನೀನಿಲ್ಲವಾದಲ್ಲಿ

ನೀ ತಂದ ಏಕಾಂತ, ಕಾಡು ಮಲ್ಲಿಗೆಯಂತೆ
ಅನುಭವಿಸುವಂತಿಲ್ಲ, ಆಚರಿಸುವಂತಿಲ್ಲ
ಕೇವಲ ಹುಡುಕಾಟದೇ ಸವೆಯಬೇಕೆ ಬಾಳು?
ಬಾ ಬೇಗ ಈ ಪ್ರಶ್ನೆಗೆ ಉತ್ತರವ ಹೇಳು

ನೀ ಕೊಟ್ಟ ನೆನಪುಗಳು, ನೀರಿನೊಳಗ ಅಲೆಗಳಂತೆ
ಹಿಡಿದು ಕೂರುವಂತಿಲ್ಲ, ಹರಿದು ಬಿಡುವಂತಿಲ್ಲ
ಕೇವಲ ನೋಡಿಕೊಂಡೆ ಕಳೆಯಬೇಕೇ ಬಾಳು?
ಹುಡುಕೋ ಮೊದಲೆ ಬಂದು ಒಮ್ಮೆ ಕಣ್ಣಿನೊಳಗೆ ಬೀಳು

ನೀ ಬಿಟ್ಟ ಹಿಜ್ಜೆ ಗುರುತು, ಮೀನ ಈಜು ದಾರಿಯಂತೆ
ಹಂಬಲಿಸುವಂತಿಲ್ಲ, ಹಿಂಬಾಲಿಸುವಂತಿಲ್ಲ
ಕೇವಲ ಊಹೆಯಲ್ಲೇ ರಚಿಸಬೇಕೆ ಬಾಳು?
ಬದಲಿಗೆ ಸುಮ್ಮನಿರುವುದೇ ಮೇಲು

ನೀ ಸುಟ್ಟ ಕನಸುಗಳು, ಸಾಲು ಮರದ ಸಾವಿನಂತೆ
ಹಿಂದಿರುಗಿಸಲಾಗಲ್ಲ, ಹಾಗೆ ಬಿಡಲೂ ಆಗಲ್ಲ
ಕೇವಲ ಮರುಜನ್ಮವ ಅರಸಬೇಕೆ ಬಾಳು?
ಕೊರಳು ಮುಂದಾಗದಿರಲು ಮುಂದಾದವು ಬೆರಳುಗಳು.... ಹೀಗೆ ಬರೆದುಕೊಳ್ಳಲು.....

                                                                                -ರತ್ನಸುತ

No comments:

Post a Comment

ಬರುವೆ ನಿನಗಾಗಿ

ಬರುವೆ ನಿನಗಾಗಿ  ಇರುವೆ ಜೊತೆಯಾಗಿ  ಪ್ರತಿ ಗಳಿಗೆ ಬೇಕಿದೆ ನಿನ್ನಾಸರೇ  ನೀನದೇ ಈ ಹಾಡು  ಹಿಡಿದು ಹೊಸ ಜಾಡು  ನಾ ಹಾಡುವೆನು ಕೂಡಿ ಬಾ ನೀ ಆದರೆ  ಬೆರೆತ ಮನದಲ್ಲಿ  ಪುಟಿ...