Saturday 20 January 2018

ಬೆನ್ನ ಹಿಂದೆ ಬೆಳಕ ಬಿಟ್ಟು


ಬೆನ್ನ ಹಿಂದೆ ಬೆಳಕ ಬಿಟ್ಟು
ಮುಂದೆ ಸಾಗಿ ಬಂದ ಮೇಲೆ
ನೆರಳು ನಿನ್ನ ನಾಲ್ಕರಷ್ಟು
ಬೆಳೆಯಿತೆಂಬ ಅಂಜಿಕೆ
ಅರಿವು ಮೂಡೋ ಮುನ್ನ ಬೆಚ್ಚಿ...

ಕಣ್ಣು ಅಪ್ಪುಗೆಯ ನೆಚ್ಚಿ
ರೆಪ್ಪೆ ಬಡಿಯೆ ಮಿಂದು ಬಂತು
ಮುತ್ತು ಮಣಿಯ ಮಾಲಿಕೆ



ಕದ್ದು ಬಿಡುವ ಮುದ್ದು ಚಟಕೆ
ನಿದ್ದೆ ಸೋತ ಬಗೆಯ ಹೀಗೆ
ವಿವರಿಸುತ್ತ ಕಳೆದ ಇರುಳ
ಬಾನ ತಾರೆ ಎಣಿಸಿವೆ
ನಗುವು ಬಿರಿದ ಸದ್ದಿನಲ್ಲಿ
ಒಲವು ಉಕ್ಕಿ ಬರುವ ಮುನ್ನ
ಪೆದ್ದು ತನದ ಬೆನ್ನ ಏರಿ
ತುಂಟ ಆಸೆ ಕುಣಿದಿವೆ



ಯಾವ ಸೀಮೆ ಅಡ್ಡಿ ಪಡಿಸೆ
ಯಾರ ಗುಡುಗು ಸುಮ್ಮನಿರಿಸೆ
ದಾಟಿ ಬರುವುದೆಷ್ಟು ಸುಲಭ
ನಿನ್ನ ಪುಟ್ಟ ಮನಸಿಗೆ
ಮಸಿಯು ಮೆತ್ತಿಕೊಂಡ ಬೆರಳ
ಗೋಡೆಗೊರಗಿಸುತ್ತ ಬಳಿವೆ
ಅಕ್ಷರಗಳು ಹಂಬಲಿಸಿವೆ
ನಿನ್ನ ಬರಹ ರೇಖೆಗೆ



ಬೆತ್ತ ಹಿಡಿಯದೆ ಪಾಠ
ಚಿತ್ತ ಚದುರಿಸೋ ಆಟ
ಬಿಟ್ಟ ಸ್ಥಳದಲೊಂದು ಭವ್ಯ
ನೂತನ ಬೃಂದಾವನ
ಅತ್ತ ಚಪ್ಪರಕ್ಕೆ ಚಾಚಿ
ಇತ್ತ ಮಣ್ಣ ಮುಕ್ಕುತೀಯೆ
ಸೋಜಿಗ ನೀನೆಂದು ಅನಲು
ಬೇಕೇ ಬೇರೆ ಕಾರಣ?



ಪಾದದಿಂದ ಕೆನ್ನೆಗೊರೆಸಿ
ಮೌನ ನಾದದಲ್ಲಿ ಸುಖಿಸಿ
ಮಗುವ ಸೋಗಿನಲ್ಲಿ ಬಂದ
ಬುದ್ಧನೆಂದು ಭಾವಿಸಿ
ಆಟವನ್ನು ಮುಂದುವರಿಸಿ
ನೆನಪಿಗೊಂದು ಬಣ್ಣವಿರಿಸಿ
ಇರುವೆ ನಿನ್ನ ನೆರಳ ಕಾಯೋ
ಸೇವೆಯ ಸಂಪಾದಿಸಿ!!



                       - ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...