Saturday 20 January 2018

ಇದ್ದಕ್ಕಿದ್ದಂತೆ ಬಾಗಿಲು ಬಡಿದ ಸದ್ದು

ಇದ್ದಕ್ಕಿದ್ದಂತೆ ಬಾಗಿಲು ಬಡಿದ ಸದ್ದು
ನಾ ಅಮ್ಮನ ಮಡಿಲಲ್ಲಿ ಮಲಗಿದ್ದವ
ಗಾಬರಿಯಿಂದ ಕಣ್ಣು ಬಿಟ್ಟು ನೋಡಿದೆ,
ನನ್ನ ಯಾರೋ ಹೊರಗೆ ಕರೆದಂತೆ
ನನ್ನ ಅಂತಃಕರಣವೂ ಅದೇ ಸರಿ ಅಂದಂತೆ...

ಒಂದೇ ಉಸಿರಲ್ಲಿ ಓಡಿ ನಿಂತೆ



ಅಲ್ಲಿ ಅಪರಿಚಿತ ಕೈಗಳು ನನ್ನ ಸವರುತ್ತಿದ್ದವು
ನನಗೆ ಅಳು ಉಕ್ಕಿ ಬಂದದ್ದು ಅದೇ ಮೊದಲು
ಈ ಹಿಂದೆ ನಾ ಬದುಕಿದ್ದ ವೃತ್ತ ವ್ಯಾಪಿಸಿ
ಕಣ್ಣಿಗೆಟುಕದಂತೆ ಚಾಚಿಕೊಂಡದ್ದನ್ನು
ನಾ ಕಂಡದ್ದು ಆ ಮಾರನೆಯ ದಿನದ ಮಜ್ಜನದ ಬಳಿಕ



ನಾನು ನನ್ನಿಷ್ಟದಂತೆ ಬೆತ್ತಲಾಗಿರಲು ಬಿಡದೆ
ಅವರಿಷ್ಟದ ಬಣ್ಣದ ಉಡುಪುಗಳ ತೊಡಿಸಿ
ಹಣೆಗೆ ಮಸಿ ಮೆತ್ತಿ ಖುಷಿ ಪಡುವ ಮಂದಿ
ನನ್ನ ಕಣ್ಣಿಗೆ ಸ್ವಾರ್ಥಿಗಳಾಗಿ ಕಂಡರು
ಅಷ್ಟು ಹೊತ್ತಿಗೆ ನಾ ನಿದ್ದೆಯ ಆವರಿಸಿಕೊಂಡಿದ್ದೆ



ಕನಸಿನ ತುಂಬ ಆ ಬೆಚ್ಚನೆಯ ಕಂಬಳಿ
ಮೈ ಮುರಿದು ಗೋಡೆಯ ತೀಡಿದಾಗ
ಸಿಗುತ್ತಿದ್ದ ಸ್ಪರ್ಶದ ಅನುಭೂತಿ
ಹಿಗ್ಗು ತಗ್ಗಿನಲ್ಲಿ ಎಲ್ಲೂ ಬೀಳದಂತೆ
ಜೋಪಾನ ಮಾಡಿದ್ದ ಆ ಹೊಕ್ಕಳ ನಂಟು
ಹೊತ್ತು ಮೀರುವ ಮುನ್ನ
ಹೊಟ್ಟೆ ಪಾಡನು ಅರಿತ ಆ ಮಮತೆಯ ತುತ್ತು
ಹೃದಯಕ್ಕೆ ಪ್ರೇಮದ ಪರಿಚಯ..



ಇಲ್ಲಿ ನಾ ಬೇರೆ ಬೇರೆ ಕೈಗಳೊಡನೆ ವ್ಯವಹರಿಸಬೇಕು
ವ್ಯಂಗ್ಯ, ತಮಾಷೆ, ಚೇಷ್ಟೆ, ಬೆದರಿಕೆಗಳಿಗೆ
ತಲೆದೂಗಿ ಸಹಕರಿಸದಿದ್ದರೆ ಹೆಸರಿಡುತ್ತಾರೆ
ಅವರವರ ಇಷ್ಟಕ್ಕೆ ಅನುಸಾರವಾಗಿ,
ನಾ ಮೊದಲೇ ಹೆಸರ ಇಷ್ಟ ಪಡದವ
ಇಟ್ಟ ಹೆಸರನ್ನು ಒತ್ತಾಯಕ್ಕೆ ಒಪ್ಪಿದ್ದೇನೆ
ತಾಳ್ಮೆಯನ್ನು ಎಷ್ಟಾದರೂ ಶಿಕ್ಷಿಸಬಾರದಲ್ಲ?



ಸರಿ ಈಗ ಹೊರಡುತ್ತೇನೆ
ಅನಾಚಾರಗಳ ವ್ಯಾಪರ ಸಂತೆಯಲ್ಲಿ
ನನ್ನ ತಕ್ಕಡಿಯಲ್ಲಿಟ್ಟು ತೂಗುತ್ತಿದ್ದಾರೆ
ಮನಸು ಭಾರವಾದರೆ ಹೆಚ್ಚು ಬೆಲೆ
ತುಸು ಹಗುರಾಗಿ ಕಡಿಮೆ ಬೆಲೆಗೇ ಬಿಕರಿಯಾಗುತ್ತೇನೆ!!


                                                    - ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...