Saturday 20 January 2018

ಏರು ದನಿಯ ಹಾಡಿನಲ್ಲಿ


ಏರು ದನಿಯ ಹಾಡಿನಲ್ಲಿ
ಸಣ್ಣ ಮೌನ ತಂತಿಯ
ಮೀಟಿಕೊಂಡ ರಾಗದಲಿ
ಮಲ್ಲ ಬಂದು ಕುಂತೆಯಾ?
ಸುತ್ತ ಮುತ್ತ ನೋಡಿ ಮತ್ತೆ...

ಬೆಳಗಿ ನಿಂತ ದೀಪಕೆ
ನಿನ್ನ ಬೆರಳ ನೆರಳಿನಾಟ
ಸಂಗ ಮಾಡಿ ಬಿಟ್ಟೆಯಾ!



ಒಂದು ಎರಡು ಮೂರು
ಮತ್ತೆ ಲೆಕ್ಕ ತಪ್ಪಿ ಬಿಡುವೆನು
ನಿನ್ನ ತಬ್ಬುವಾಸೆಯಲ್ಲಿ
ಸೊನ್ನೆ ಸುತ್ತುತಿರುವೆನು
ಮುಳು ಸರಿದ ಸದ್ದಿನೊಳಗೂ
ನಿನ್ನ ಮುಗುಳು ಕೇಳಲು
ಒಂದು ಕ್ಷಣವ ಕೂಡ ಬಿಡದೆ
ಎಣಿಕೆಯಲ್ಲೇ ಕಳೆವೆನು



ಕದ್ದು ಬಿಡುವೆ ನಿನ್ನ ಕನಸ
ಹೊಸೆದು ನನ್ನ ಕನಸನು
ಮತ್ತೆ ನಿನ್ನ ವಶಕೆ ಬಿಡುವೆ
ತೊಡಿಸಿ ಪೋಷಾಕನು
ಬಣ್ಣವೊಂದ ಅದ್ದಿ ಕೊಡುವೆ
ಬಿನ್ನವಾದ ಭಾವಕೆ
ನಿನ್ನ ಕಣ್ಣ ಭಾಷೆಯಲ್ಲೇ
ನುಡಿಸು ಈಗ ನನ್ನನೂ



ನಗೆಯ ಚಾಟಿ ಎದೆಗೆ ಬೀಸಿ
ನೋಡು ಹೃದಯ ಬೆಚ್ಚಿದೆ
ಶಾಂತ ಚಿತ್ತದೊಳಗೆ ಅವಿತ
ಸಣ್ಣದೊಂದು ಕಿಚ್ಚಿದೆ
ಹೊತ್ತಿಸೆನ್ನ, ನಾನು ಉರಿದು
ನಿನ್ನ ಬೆಚ್ಚಗಿರಿಸುವೆ
ಎಲ್ಲ ಪ್ರಶ್ನೆಗಳೊಳಗಿರುವೆ
ಉತ್ತರಿಸುವುದೇನಿದೆ!!



ಸೋಕಿ ಹೋದೆಯೆಂಬ ಸೊಕ್ಕು
ನನ್ನಿಷ್ಟಕೆ ಸುಖಕರ
ನೀನು ಹಾದ ಮೇಲೆ ಮನದ
ಹಾದಿಯಲ್ಲಿ ಸಡಗರ
ಎಲ್ಲ ಸಾಲಿನುದ್ದಗಲಕೂ
ನಿನ್ನ ಸೊಲ್ಲ ಪರಿಚಯ
ನೀನು ತಲೆಯದೂಗಿದಲ್ಲೇ
ನನ್ನ ಹಾಡು ಸುಮಧುರ!!



                       - ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...