Saturday, 20 January 2018

ಅವಳಿಗಾಗಿ ಹಾಡುತ್ತಿದ್ದೆ... ಈಗ ಇವನಿಗಾಗಿ!!


ಅವಳಿಗಾಗಿ ಹಾಡುತ್ತಿದ್ದೆ
ಈಗ ಇವನಿಗಾಗಿ..
ಹಂಚಿಕೊಂಡವರೇ ಇಬ್ಬರೂ ಬದುಕನ್ನ
ಅವಳು ಅಳಿದುಳಿದದ್ದ ಮತ್ತು ನಾನೂ
ಇವ ಉಳಿಸಿಕೊಂಡದ್ದೆಲ್ಲವ


ಅವಳು ಜಗಳ ತೆಗೆಯುತ್ತಾಳೆ
ಇವನಿಗಾಗಿ ಮಾತ್ರ ಹಾಡುವೆನೆಂದು..
ಅವಳು ಹಾಡುವುದ ಬಿಟ್ಟು
ಬಹಳ ಕಾಲವಾಗಿದೆ
ಇಂದಿಗೂ ಎದೆಗಾನಿಕೊಳ್ಳುತ್ತೇನೆ
ಅಲ್ಲಿ ನಾಳೆಗಳ ನಿರೀಕ್ಷೆಗಳ ಕಂತೆ
ಶೃತಿ ಬದ್ಧವಾಗಿ ಹಾಡಿಕೊಂಡಂತೆ...



ಇವನಿಗೆ ಎಲ್ಲ ಹಾಡುಗಳೂ ಹೊಸತು
ಕೆಲವೊಂದಕ್ಕೆ ತಲೆದೂಗುತ್ತ
ಇನ್ನು ಕೆಲವನ್ನು ತಾತ್ಸಾರದಿಂದ ನಿರಾಕರಿಸಿ
ಎಷ್ಟು ಸ್ಪಷ್ಟವಾಗಿ ಆರಿಸುತ್ತಾನೆಂದರೆ
ವಾಡಿಕೆ ಬಿಟ್ಟು ಹೊರ ಬರಲು
ಬಲವಾದ ಕಾರಣವಿರದ ಹೊರತು
ಅವನ ಚೌಕಟ್ಟಿನಲ್ಲೇ ಉಳಿವುದಿದೆಯಲ್ಲ..



ಎಲ್ಲದರ ನಡುವೆ ಹಳೆ ಹಾಡುಗಳ ಹಾವಳಿ
ಇವ ಅವುಗಳ ಒತ್ತಾಯಕ್ಕೂ ಒಪ್ಪಲಾರ
ಅವು ನಾವುಗಳು ಕೇಳಿ ಆಸ್ವಾದಿಸಿದವು
ಹಾಡಿಕೊಂಡವರ ಕೊರಳಿಗೂ ಮುಪ್ಪು ತಟ್ಟಿದೆ
ತಲೆಮಾರುಗಳು ಉರುಳಿ ಒತ್ತಡ ಹೇರಬಾರದು
ಅವರವರ ಸ್ಥಾನಗಳನ್ನರಿತು ನಡೆಯಬೇಕು
ಎಲ್ಲಕ್ಕೂ ಇದೇ ನೇಮ, ಪ್ರೀತಿಗಾದರೂ..



ಘಟಿಸಿದ ನೆನ್ನೆಗಳಿಗೊಂದು ಗಂಟು
ಘಟಿಸುತ್ತಿರುವ ಇಂದಿಗೊಂದು
ಘಟಿಸಬಹುದಾದ ನಾಳೆಗಳಿಗೊಂದು,
ಎಲ್ಲ ನಂಟುಗಳನ್ನ ಬಿಗಿದಿಟ್ಟು
ಜೋಪಾನ ಮಾಡುವ ಪ್ರಮಾಣ ಮಾಡಿದ್ದೆ
ಅದರ ನೆನಪಿನ ಸಾಕ್ಷಿಯಾಗಿ ಇವ
ನನ್ನ ಸದಾ ಎಚ್ಚರದಿಂದಿಡುತ್ತಾನೆ...



                                          - ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...