Saturday 20 January 2018

ಯಾರ ಕಿಸೆಯಿಂದ ಕಳುವಾದ ಸ್ವತ್ತೋ

ಯಾರ ಕಿಸೆಯಿಂದ ಕಳುವಾದ ಸ್ವತ್ತೋ
ಯಾರ ಕೊರಳಿಂದ ಮರೆಯಾದ ಮುತ್ತೋ
ಇಂದು ನನ್ನನ್ನೇ ದೊರೆಯೆಂದು ಕಾಣುತಿದೆ
ಕಾಯಬೇಕಾಗಿದೆ ಕಣ್ಣಲಿಟ್ಟು

ಯಾವ ಹೂವಿಂದ ಬೇರಾದ ಗಂಧ
ಯಾವ ಕಿಚ್ಚಿಂದುಳಿದ ಕಾವಿನಿಂದ
ಮಿಂದು ತೆರೆ ಹಿಂದೆ ಅವಿತಂತೆ ಹುಡುಕಾಟ
ಗೆದ್ದು ಸೋಲುವೆ, ಗೆಲುವೇ ಸೋಲಿನಿಂದ

ಎಲ್ಲ ಮಾತಿಗೂ ಮುನ್ನ ತನ್ನ ಮಾತು
ಎಲ್ಲ ಕೊನೆಗಳು ತೊನೆದವವಗೆ ಸೋತು
ಯಾರು ಗೆರೆ ಎಳೆವರೋ ಅವರೇ ದಾಟಿಸುವ-
-ರೆಳೆ ಕೊರಳ ಶಾಸನಕೆ ತಲೆ ಬಾಗಿ ನಿಂತು


ನಿದ್ದೆ ತೂಕಡಿಕೆಯಲಿ ಹಾಲ್ಗಡಲ ಮೊರೆತ
ತೊದಲು ಪದಗಳಿಗೊಲಿದ ಅರ್ಥಗಳೇ ಸ್ವಗತ
ಏಳು ಬೀಳಿಗೆ ಬೆಂದ ಬೇಳೆ ಕಾಳಿನ ಹೆರಸು
ಆದ ಗಾಯಕೆ ಅಳು ಬೇಡಿಕೆಯ ಸಹಿತ



ಮಂಚದಂಚಿಗೆ ಇಟ್ಟ ತಲೆ ದಿಂಬಿನಡ್ಡ
ಅದರ ಮೇಗಡೆ ಬಿಡಿಸಿದ ಬಣ್ಣ ಚಿಟ್ಟೆ
ಮುಸುರೆ ಮೂಗಿನ ಕೆಳಗೆ ಕುಸುರಿದ ನಗೆ ಬುಗ್ಗೆ
ರಾಜ್ಯಭಾರಕೆ ಅಪ್ಪನೆದೆಯೊಂದು ಕೋಟೆ



ತತ್ವಗಳನೊಳಗೊಂಡ ಪಿತೃತ್ವ ಒಂದೆಡೆ
ಸತ್ವಗಳ ಸೆಲೆ ಮಾತೃತ್ವ ಮತ್ತೊಂದೆಡೆ
ಎಲ್ಲ ಎಲ್ಲೆಗಳೊಮ್ಮೆಲೆ ತೂರಿ ಸಾಗುವ
ಪುತ್ರತ್ವ ಮಿಗಿಲೆಂಬ ಸತ್ಯ ಸಿಹಿಯುಂಡೆ!!



                                      - ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...