Saturday, 20 January 2018

ಬಣ್ಣದ ಕಾಗದದ ಹೂವು


ಬಣ್ಣದ ಕಾಗದದ ಹೂವು
ನಿಜವಾದ ಹೂವನ್ನು ಅಣುಕಿಸುತ್ತಿತ್ತು
ಅಣುಕಿಸುತ್ತಿದೆ ಹಾಗು ಅಣುಕಿಸುತ್ತಲೇ ಇರುತ್ತೆ



ಇತ್ತ ನಿಜದ ಹೂವು ಹುಟ್ಟಿ...
ಚಿಗುರಿ, ಅರಳಿ, ಬಾಡಿ
ಚೆದುರಿ, ಉದುರಿ ಮತ್ತೆ ಚಿಗುರಿ
ಯಾವ ಅಳುಕಿಲ್ಲದೆ ತಲೆಮಾರುಗಳ ಎಣಿಸುತ್ತಿದೆ,
ಕಾಗದದ ಹೂವಿನ ಅಣುಕು ಕಿಂಚಿತ್ತೂ ಕುಂದದಾಗಿತ್ತು...



ಬಳ್ಳಿಯಲ್ಲಿ ಬಿರಿದು, ಬೆರಳುಗಳ ತಾಕಿ
ಉಸಿರಿನಲ್ಲಿ ಬೆರೆತು, ಹೊಸೆದುಕೊಂಡು ಬೆಳೆದು
ಕೆಸರ ಮೆಟ್ಟಿ ನಿಂತು, ಕೊಸರಿಗಿಷ್ಟು ಸಿಕ್ಕು
ನೂರು ತವರ ತೊರೆದ ಹೆಂಗರುಳ ಹೂವು
ಎಂದೂ ಕಾಗದದ ಹೂವ ಅಣುಕಿಸಲಿಲ್ಲ
ಬದಲಾಗಿ ತಾನೇ ನಕಲೇನೋ ಎಂಬಂತೆ
ಶರಣಾಗತಿ ಸಲ್ಲಿಸುತ್ತಿತ್ತು ಸುಳ್ಳಿಗೆ..



ಕೊಂಡಾಗಿನಿಂದ ಕೊಂಡಾಡಿದವರೇ
ತೊಟ್ಟು ನೀರು ಚಿಮುಕಿಸದೆಯೂ
ಬಾಡದ ಕಾಗದದ ಹೂವಿಗೆ ಕೊನೆಗೂ ಮತ್ಸರ.
ಹುಟ್ಟು ಅನಿರೀಕ್ಷಿತವಾದರೂ
ಸಾವು ಅನಿವಾರ್ಯವೆನಿಸಿದರೂ ಬಾರದೆ
ಅದೇ ಕೃತಕ ನಗೆ ಚೆಲ್ಲಿ
ಅದೆಷ್ಟು ಬಾರಿ ಬದುಕಿದ್ದೇ ಸತ್ತಿತೋ ಪಾಪದ ಹೂವು...



ಮಡಿದವರಿಗೂ, ಮುಡಿದವರಿಗೂ
ಒಂದೇ ತಕ್ಕಡಿಯ ತೂಕದ
ನಿಜದ ಹೂವು ಮೆರವಣಿಗೆ ಹೊರಟಾಗ
ಕಾಗದದ ಹೂವ ಪಕಳೆಗಳು ಪಟ-ಪಟನೆ
ಒದರಿಕೊಂಡವು ಮೈಯ್ಯ, ಚೆದುರಿ ಹೋಗಲು...
ಮೆತ್ತಿದ ಗೋಂದು, ಸುತ್ತಿದ ತಂತಿ ಬಿಟ್ಟರೆ ತಾನೆ?



ಒಮ್ಮೆ ನಿಜ ಮತ್ತು ಸುಳ್ಳು, ಇವೆರಡನ್ನೂ
ಒಂದೇ ಆಕಾರದ, ಅಳತೆಯ ಬುಟ್ಟಿಯಲ್ಲಿಟ್ಟರು..
ಸೋತವರು ಸೂಚಿಸಿದ ಬೇಸರವೇ ಸುಳ್ಳಿನ ಗೆಲುವು
ಗೆದ್ದವರು ಗಮನಿಸಿದ ಸೂಕ್ಷ್ಮಗಳೇ ನಿಜದ ಗೆಲುವು
ಆದರೆ ಕೊನೆಗೆ ನಿಜವೇ ಗೆಲುವು
ಸೋಲು ಹೆಣದ ಅಲಂಕಾರವಷ್ಟೇ...



                                                      - ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...