Saturday, 20 January 2018

ಸಂಜೆಯಷ್ಟರಲ್ಲಿ ಅವನಿಗೊಂದು ನಿದ್ದೆ ಆಗಬೇಕಿತ್ತು


ಸಂಜೆಯಷ್ಟರಲ್ಲಿ ಅವನಿಗೊಂದು ನಿದ್ದೆ ಆಗಬೇಕಿತ್ತು
ಆದರೆ ಆಟದಲ್ಲಿ ತೊಡಗಿಕೊಂಡು ಮರೆತಿದ್ದ,
ಈಗ ವಿಪರೀತ ಅಳುತ್ತಿದ್ದಾನೆ
ವರ್ಷ ಮೀರಿದವಗೆ ಎದೆ ಹಾಲು ಚಟದಂತೆ, ಬಿಡಿಸುವುದಸದಳ
ಜೋಗುಳಕ್ಕೆ ನಿಲ್ಲುವಂತದ್ದಲ್ಲ ಆ ಅಳು...

ಹಸಿವು ನೀಗಿಸುವುದು ಪುಣ್ಯದ ಕೆಲಸ
ಗಂಡಸರೆಲ್ಲ ಒಂದಲ್ಲೊಂದು ರೀತಿ ಪಾಪಿಗಳೇ!!



ಅಮ್ಮ ಬಂದದ್ದೇ ಅಳು ದುಪ್ಪಟ್ಟಾಗಿ
ಚೂರು ಚೂರೇ ನಿಂತು ಬಿಕ್ಕಳಿಕೆಯ ಹಂತ ತಲುಪಿದಾಗ
ಕುರುಚಲು ಗಡ್ಡವನ್ನೊಮ್ಮೆ ಗೀರಿಕೊಂಡು
ಕನ್ನಡಿಯಲ್ಲಿ ನೋಡಿಕೊಂಡೆ
ಮೀಸೆ ಅಸಹಾಯಕತೆಯಿಂದ ಬಳಲಿದ್ದು
ಮುಖಕ್ಕೆ ನೀರೆರಚಿಕೊಂಡಾಗಲೂ ಚಿಗುರಲಿಲ್ಲ



ಈಗ ಸ್ವಲ್ಪ ಹೊತ್ತಿಗೆ ಮುಂಚೆ ಮಲಗಿದ
ಅವನ ಪಕ್ಕ ಹಗುರವಾಗಿ ಕೂತು
ಅವನ ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಿದ್ದೆ
ಅರೆ!! ಅವು ನನ್ನವೇ ಅನಿಸುವಷ್ಟರಲ್ಲಿ
ಏನೋ ಗೊಂದಲದಲ್ಲಿ ಕಣ್ಗುಡ್ಡೆ ಹೊರಳಾಡಿದ್ದು
ಮುಚ್ಚಿದ ರೆಪ್ಪೆ ಪದರದ ಮೇಲೆ ಕಂಡು ಬೆಚ್ಚಿ ಬಿದ್ದೆ..
ಅರೆ ನಿದ್ದೆಯಲ್ಲಿ ಎದ್ದರವ ರಾಕ್ಷಸ...



ಅವನ ಅಂಗೈಯ್ಯಿಗೆ ಬೆರಳ ಕೊಟ್ಟು
ಬಿಗಿ ಹಿಡಿತ ಬಯಸುವ ಹುಂಬ ನಾನು.
ಅಂದರೆ, ಅವ ನನ್ನ ಬಿಟ್ಟಿರಲೊಲ್ಲ ಎಂಬ
ಭಾವ ನನ್ನಲ್ಲಿ ಮೂಡಬೇಕೆಂಬ ಹುಂಬತನ
ಆದರೆ ಅವ ಅಮ್ಮನ ಮಗ
ಎಚ್ಚರವಾದಾಗ ಅವನ ಕಣ್ಣು ನನ್ನ ನಿರ್ಲಕ್ಷಿಸಿ
ಅಮ್ಮನ ಹುಡುಕಾಟದಲ್ಲಿದ್ದಾಗ ನನಗೆ
ಎಲ್ಲಿಲ್ಲದ ಧರ್ಮ ಸಂಕಟ!!



ತಾಯಿ ಆದವಳಿಗೆ ಹೊಣೆಗಾರಿಕೆ ತಾನಾಗೇ ರೂಢಿಯಾಗುತ್ತೆ
ಈ ತಂದೆಯಾದವನಿಗೆ ತಂದೆ ಅನಿಸಿಕೊಳ್ಳುವ
ಅಥವ ತಂದೆತನದ ಸ್ವಭಾವಗಳನ್ನ ಮೈಗೂಡಿಸಿಕೊಳ್ಳುವುದು
ತುಸು ಮಂದ ಗತಿಯಲ್ಲೇ ಅನಿಸುತ್ತೆ
ಅದರಲ್ಲೂ ಗಂಡು ಮಗುವಿನ ವಿಚಾರದಲ್ಲಿ
ತಂದೆಯಾದವನಿಗೆ ಮೆಚ್ಯೂರಿಟಿ ಕಮ್ಮಿ



ಹೆಣ್ಣು ಮಕ್ಕಳು ಎಲ್ಲವನ್ನೂ ಕಲಿಸುತ್ತಾರೆ
ಗಂಡು ಮಕ್ಕಳು ಹಾಗಲ್ಲ, ಚೂರು ಹೆಚ್ಚಿಗೇ ಕಾಯಿಸುತ್ತಾರೆ
ನಾನು ನನ್ನಪ್ಪನಿಗೆ ಕಾಯಿಸಿದಂತೆ
ಅಪ್ಪ ನನಗಾಗಿ ಕಾದಂತೆ
ಅಷ್ಟರೊಳಗೆ ಅಮ್ಮ ಎಲ್ಲವನ್ನೂ ವ್ಯಾಪಿಸಿಕೊಂಡಂತೆ...



                                                        - ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...