Wednesday, 23 December 2020

ಮನವೆಂಬ ಕೊಳದಲ್ಲಿ ಅಲೆಯಾಗಿ ಇಳಿದು

ಮನವೆಂಬ ಕೊಳದಲ್ಲಿ ಅಲೆಯಾಗಿ ಇಳಿದು 

ಬೊಗಸೆಲಿ ಬೆಳದಿಂಗಳ ಸುಧೆ ಮಾಡಿ ಸುರಿದೆ 
ತಿಳಿಗಾಳಿ ತಳಿರನ್ನು ಮಗುವಂತೆ ತಡವಿ 
ಹಿತವಾದ ಸಾಂಗತ್ಯ ಕೊಡುವಂತೆ ಸುಳಿದೆ 
ಮುಗಿಲಿಂದ ಹನಿಯೊಂದು ಇಳಿಜಾರಿ ಬಂದು
ಇಳೆಗೆಲ್ಲೋ ಕಳುವಾದ ಸಿರಿಯು ದೊರೆತಂತೆ 
ಬರಡಾದ ನೆಲವೀಗ ಹಸಿರಲ್ಲಿ ಮಿಂದು
ಅತಿಶಯವಾದ ನಗುವಲ್ಲಿ ತೂಗಿ ತೊನೆದಂತೆ 
ಉಸಿರೇ, ಉಸಿರ ಕರುಣಿಸೋ ನಿಟ್ಟುಸಿರೆ 
ಮಳೆಯೇ, ನೀ ಒಲವ ತಣಿಸೋ ಹೂಮಳೆಯೇ 

ಮಳೆಯೇ ನಿನ್ನ ಸಂಗಾತಿಯಾಗಿ 
ಅನುಗಾಲ ಹೀಗೇ ನೆನೆವಂತ ಆಸೆ 
ಬಿಡದೆ ಹನಿಯುತ್ತಿರೋ ವೇಳೆಯಲ್ಲಿ 
ಮರುಳಾಗಿ ಜಗವ ಮರೆವಂತ ಆಸೆ 
ದೂರಾದ ಮಿಂಚೊಂದು ಎಚ್ಚೆತ್ತು ಈಗ 
ಕಣ್ಣಲ್ಲಿ ಕೂತಂತೆ ಎದುರಾಗಲು ನೀನು 
ಸಾರಂಗಿಯ ತಂತಿಯ ಮೀಟುವಂತೆ 
ನಾ ನಿನ್ನ ಬಳಿಸಾರುವೆ 
ಮಿತಿ ಮೀರದಂತೆ ಗೆರೆ ಹಾಕಿಕೊಂಡು
ಗಡಿ ದಾಟೋ ಸುಖವನ್ನು ಸವಿಯೋದೇ ಚಂದ 
ಅತಿಯಾದ ಪ್ರೀತಿ ಜೊತೆಯಾಗುವಾಗ 
ಹರೆಯಕ್ಕೆ ಹುರುಪೊಂದು ದೊರೆತ ಹಾಗೆ.. 

ಉಸಿರೇ, ಉಸಿರ ಕರುಣಿಸೋ ನಿಟ್ಟುಸಿರೆ 
ಮಳೆಯೇ, ನೀ ಒಲವ ತಣಿಸೋ ಹೂಮಳೆಯೇ

ಪ್ರೀತಿ‌ ಗರಿಗೆದರಿದೆ, ಭೂಮಿ‌ ಕಿರಿದಾಗುತಿದೆ

ಪ್ರೀತಿ‌ ಗರಿಗೆದರಿದೆ, ಭೂಮಿ‌ ಕಿರಿದಾಗುತಿದೆ

ಏನೋ ಹೊಸತನವಿದೆ, ಎಲ್ಲ ಬದಲಾಗುತಿದೆ
ಆಕಾಶ ಅನ್ನೋದೆಲ್ಲ ಸುಳ್ಳು, ನೀಲಿ ಕೂಡ
ಮುಟ್ಟೋದು ತುಂಬಾ ಸುಲಭ ಈಗ ತೆಲಾಡೋ ಮೋಡ
ಎಲ್ಲ ತಂಟೆ ಬಿಟ್ಟು ಜಂಟಿ ಅಗೋ ಒಳ್ಳೆ ಕಾಲ..

ತಡ ಮಾಡಿ ಸಿಕ್ಕು, ಕಣ್ಣಲ್ಲೇ ನಕ್ಕು
ವಿಪರೀತ‌ ಕೋಪ ತಣ್ಣಗೆ ಮಾಡೋ ನಿನ್ನ ಚಾತುರ್ಯ
ನಡು ದಾರಿಯಲ್ಲಿ, ಕೈ ಬಿಟ್ಟರೂನು
ನಿನ್ನನ್ನು ಪತ್ತೆ ಹಚ್ಚಿ‌ ಬಿಡುವೆ ನನಗೇ ಅಶ್ಚರ್ಯ
ಗಮನ ಇಟ್ಟು ಕೇಳು, ಬೆಂದರೆ ಪ್ರೀತಿ ಕಾಳು
ಸುಗ್ಗಿ ಬಂದ ಹಾಗೆ ತಟ್ಟಿಕೊಳ್ಳೋ‌ಣ ಹೋಳಿಗೆ
ಬರೆದು ಕೊಟ್ಟೆ ಬಾಳು, ಬೇರೇನು ಬೇಕು ಹೇಳು
ನುಗ್ಗಿ ಹೊಡೆಯೋ ಗುಂಡಿಗೆಗೆ ಪ್ರೀತಿಯಾಯ್ತು ಮೆಲ್ಲಗೆ... 

ಬರಡಾಗಿ ನಾನು, ಪರಿಹಾರ ನೀನು 
ಮಳೆಯಂತೆ ನನ್ನ ಹಬ್ಬು ನಡೆಯಲಿ ಪ್ರೀತಿ ವ್ಯವಸಾಯ
ಅಪರಾಧಿ ನಾನು, ಉಪಕಾರಿ ನೀನು 
ಬದುಕೆಲ್ಲ ನಿನ್ನ ಮನದ ಸೆರೆಮನೆ ಮೀಸಲಿಡುತೀಯಾ? 
ಎಲ್ಲ ಕೆಲಸ ಬಿಟ್ಟು, ಒಂದೇ ಸಮನೇ ಪಟ್ಟು 
ನಿನ್ನ ವಿನಃ ಶೋಕ ಬರಹ ಏನನ್ನೇ ಗೀಚಲು 
ಬೇಲಿ ಹಾಕುವೆಯೇಕೆ, ಹಾರಿ ಬರುವೆನು ಜೋಕೆ 
ಎಲ್ಲ ಜನುಮ ನನ್ನ ಹೃದಯ ನಿನಗಾಗಿ ಮೀಸಲು... 

ಬಹುಶಃ... ಬಹುಶಃ...

 ಬಹುಶಃ ನೀ ನನ್ನ ಕಳೆದ ಜನುಮಕೆ ಪರಿಚಯ ಇರಬಹುದೇ 

ಈ ನನ್ನ ಮನಸು ನಿನ್ನನು ಗುರುತಿಸಿ ಮಿಡಿಯುತಿದೆ...  ಹೀಗೇತಕೋ   
ಬಹುಶಃ ಕಣ್ಣಲ್ಲಿ ಕಣ್ಣ ಇರಿಸುತ ಕುಳಿತರೆ ಸಿಗಬಹುದೇ  
ಈ ನನ್ನ ಒಲವ ವಿನಿಮಯ ನುಡಿಗಳು ಅನಿಸುತಿದೆ...  ಇಂದೇತಕೊ 

ಬಹುಶಃ...   ಬಹುಶಃ...  

ಗುಣವಾಗಿಸು ಆದ ಗಾಯವನು, ಮಾತಾಡುತ ನಡುನಡುವೆ 
ಏನಾದರೂ ಕೇಳು ಮರು ಮಾತಿರದೆ ತಂದು ನಾ ಕೊಡುವೆ 
ಉಸಿರಾಟದ ದಾಟಿ ಬದಲಿಸುವೆ ಎದುರಾಗಿ ಪ್ರತಿ ಬಾರಿ 
ಬಡಪಾಯಿಯ ಕಿಸೆಯಲಿ ಕನಸುಗಳ ನೀ ತುಂಬು ದಯೆ ತೋರಿ 
ಇಷ್ಟೇ ಆದರೆ ವಿಷಯ ಚನ್ನಾಗಿತ್ತು ಬೇರೆ ಏನೋ ಇದೆ 
ನಾನಲ್ಲದೆ ಹೃದಯ ನಿನ್ನಲಿ ನೆಲೆಯೂರಲು ಚಡಪಡಿಸುತಿದೆ..

ಬಹುಶಃ...   ಬಹುಶಃ...    

ಒಂದೂ ಮಾತನಾಡದೆ

ಒಂದೂ ಮಾತನಾಡದೆ 

ಹೊತ್ತು ಹೋಗು ನನ್ನನು 
ನಿನ್ನ ಊರಿಗೆ 
ಯಾವ ತಂಟೆಯಿಲ್ಲದೆ 
ಜಾರೋ ಆಸೆಯಾಗಿದೆ 
ಕಣ್ಣೀರಿಗೆ 
ಜೀವ ಭಾರವಾಗಲು 
ನೀಡು ನಿನ್ನ ತೋಳನು 
ಯಾನ ಪೂರ್ತಿ ಮಾಡಲು
ಚಾಚು ನಿನ್ನ ಕೈಯ್ಯನು 
ನಂಬುವೆ ನಿನ್ನ ನಾ ದೇವರನ್ನು ನಂಬಿದಂತೆ.. 

ಒಂದೂ ಮಾತನಾಡದೆ 
ಹೊತ್ತು ಹೋಗು ನನ್ನನು 
ನಿನ್ನ ಊರಿಗೆ 
ಯಾವ ತಂಟೆಯಿಲ್ಲದೆ 
ಜಾರೋ ಆಸೆಯಾಗಿದೆ 
ಕಣ್ಣೀರಿಗೆ... 


ಗೂಡು ಕಾಣಲೆಂದು ಬಂದ ಹಕ್ಕಿಗೆ 
ಕಾಡು ತನ್ನ ಮಡಿಲಲಿ, ನೀಡಿದಂತೆ ನೆಲೆಯನು 
ಮುಳ್ಳು ದಾರಿ ಸಿಕ್ಕಿದಾಗ ಹೆಜ್ಜೆಗೆ 
ರೆಕ್ಕೆ ಮೂಡಿ ಬಂದರೆ, ಮುಟ್ಟಬಲ್ಲೆ ಬಾನನು 
ನಿನ್ನದೇ ಕನಸಿನ ಭಾಗವು 
ನನ್ನಲಿ ಮೂಡಲು ನಿಂತಿದೆ 
ನಿನ್ನ ಪಾಲು, ನನ್ನ ಪಾಲು ಕೂಡ ಬೇಕು ಚಂದವಾಗಿ.. 

ಏನೋ ಮೋಡಿ ನೀ ಮಾಡಿ ಹೋದಂತೆ

 ಹ್ಮ್........ ಓ...   

ಏನೋ ಮೋಡಿ ನೀ ಮಾಡಿ ಹೋದಂತೆ
ಸಾಗಿ ಬರುವೆ ನಾ ನಿನ್ನ ನೆರಳಂತೆ 
ಓ ಸಖಿ, ನೀನೆಂದೂ ನನ್ನಾಕಿ
ಹ್ಮ್........ ಓ...   
ಊರು ದಾರಿ ಬೇರೆಲ್ಲೋ ಮರೆತೋಗಿ 
ಹಾಡಿ ಬರುವೆ ನಿನ್ನ ಸೆಳೆಯೋ ಮನಸಾಗಿ 
ಓ ಸಖಿ, ನೀನೆಂದೂ ನನ್ನಾಕಿ 
ಹ್ಮ್........ ಓ...
   
ಕಳುವಾದ ಹಾಗಿದೆ ಈ ನನ್ನ ಹೃದಯ 
ನಿನ್ನಲ್ಲಿಗೆ ಬರುವೆ ನೀಡು ಸಮಯ 
ನೀನಾಗಿಯೇ ಕೊಡು ಇಂಪಾದ ಕರೆಯ  
ನಾನಾಗಲೇ ನಿನಗೆ ಸೋತ ಇನಿಯ 

ಕಣ್ಣಲ್ಲೇ ಏನೇನೋ ಸಂದೇಶ ನೀಡುವೆ 
ಮುದ್ದಾಡೋ ವೇಳೆಲಿ ಕೈ ಜಾರಿ ಹೋಗುವೆ 
ಓ ಸಖಿ, ನೀನೆಂದೂ ನನ್ನಾಕಿ 

ಆಲಿಸು ನನ್ನ ನಿನಾದ

ಆಲಿಸು ನನ್ನ ನಿನಾದ 

ಜೀವಕೆ ನೀನೇ ಸುನಾದ 
ಈಗ ಉಸಿರಾಟ ಹಾಯಾಗಿದೆ 
ಮಾಡದೆ ಏನೂ ವಿಚಾರ 
ಸಾಗುವೆ ನಿನ್ನ ಪ್ರಕಾರ 
ದಾರಿ ಕಳುವಾಗಿ ನಿಂತಂತಿದೆ 
ಅಂದಾಜಿಗೂ ಮೀರಿದ, ಹಾರಾಟವು ನನ್ನಲಿ 
ಆರಂಭದ ಭಾವನೆ ಹೀಗಾಗಿದೆ 
ಈ ಪ್ರೀತಿಯು ಶುರುವಾಗಿದೆ 

ಓ.. 
ಆಲಿಸು ನನ್ನ ನಿನಾದ 
ಜೀವಕೆ ನೀನೇ ಸುನಾದ 
ಈಗ ಉಸಿರಾಟ ಹಾಯಾಗಿದೆ 
ಮಾಡದೆ ಏನೂ ವಿಚಾರ 
ಸಾಗುವೆ ನಿನ್ನ ಪ್ರಕಾರ 
ದಾರಿ ಕಳುವಾಗಿ ನಿಂತಂತಿದೆ 


ನಿನ್ನಲ್ಲಿ ಹೇಳಲಾಗದಂಥ ಮಾತು 
ತುಟಿಯಂಚಿನಲ್ಲೇ ಕೂತು 
ತಾಳಿದಂತೆ ಮುಗುಳು ನಗೆಯನ್ನು ಹೀಗೆ ನಾನು
ಕರೆದಂತೆ ಮೌನದಲ್ಲಿ 
ಬರಲೇನು ಛಾಯೆಯಾಗಿ 
ನೀ ಬಿಟ್ಟು ಹೋದ ತಾಣ ನನ್ನ ಧ್ಯಾನಕ್ಕೆ ಮೀಸಲೇನು 
ಮುಂಜಾನೆಯ ಇಬ್ಬನಿ, ಒದ್ದಾಟವ ತಾಳದೆ 
ನನ್ನಾಸೆಯ ಮೆಲ್ಲನೆ ನುಡಿವಂತಿದೆ
ಈ ಪ್ರೀತಿಯು ಶುರುವಾಗಿದೆ  

ಆಲಿಸು ನನ್ನ ನಿನಾದ 
ಜೀವಕೆ ನೀನೇ ಸುನಾದ 
ಈಗ ಉಸಿರಾಟ ಹಾಯಾಗಿದೆ 
ಮಾಡದೆ ಏನೂ ವಿಚಾರ 
ಸಾಗುವೆ ನಿನ್ನ ಪ್ರಕಾರ 
ದಾರಿ ಕಳುವಾಗಿ ನಿಂತಂತಿದೆ 
ಅಂದಾಜಿಗೂ ಮೀರಿದ, ಹಾರಾಟವು ನನ್ನಲಿ 
ಆರಂಭದ ಭಾವನೆ ಹೀಗಾಗಿದೆ 
ಈ ಪ್ರೀತಿಯು ಶುರುವಾಗಿದೆ 

ಅರೆ ಬರೆ ಕನಸಿದು ನನ್ನದಾಗಿದೆ

 ಅರೆ ಬರೆ ಕನಸಿದು ನನ್ನದಾಗಿದೆ 

ಪರಿಚಯ ಮಾಡಸೇ ನಿನ್ನ ಕೂಗುವೆ 
ಯಾವುದಾದರೂ ಒಳ್ಳೆ ಹೆಸರಿಡು ನನ್ನ ಪಾಡಿಗೆ 
ಬಿಡುಗಡೆ ನೀಡದ ನಿನ್ನ ಕಣ್ಣಲಿ 
ಸೆರೆಮೆನೆ ಅನುಭವ ಹೇಗೆ ಹೇಳಲಿ 
ಎಲ್ಲ ಆಲಿಸು ಮನಸು ನೀಡುತ ಎದೆಯ ಗೂಡಿಗೆ 

ಬಿಡುವೇ ಇರದೇ ಗಮನ, ಹರಿಸು ನನ್ನ ಕಡೆಗೇ 
ಆಗಲೇ ನಾನು ನಿನ್ನ ಗುಂಗಲಿ ಕಳೆದು ಹೋಗಿರುವೆ... 


ಹತ್ತಿರವಾಗಲು ನಾನು, ಒಗಟನ್ನು ಹೆಣೆಯುತ ಬರುವೆ 
ಬಿಡಿಸುವ ಭರದಲಿ ಆಗ ಮತ್ತೂ ದೂರ ಓಡದಿರು 
ಮೆಚ್ಚುಗೆ ಪಡೆಯಲು ಹೇಗೋ ಉತ್ತಮನಾಗಿಯೇ ನುಡಿವೆ 
ತಪ್ಪುಗಳನ್ನು ಹುಡುಕುತ ನನ್ನ ಬಯಲಿಗೆ ಎಳೆಯದಿರು 

ಎಲ್ಲೇ ಹೋಗು ಜೊತೆಗೆ, ನೆರಳಾಗಿ ಸಾಗಿ ಬರುವೆ 
ಆಗಲೇ ನಾನು ನಿನ್ನ ನಗುವಿಗೆ ಮಾರು ಹೋಗಿರುವೆ.. 


ಹಬ್ಬಿದೆ ಸಂಕಟವೇಕೋ, ಕೊರಳ ಬಿಗಿದಿದೆ ಬಳಸಿ 
ನಿನ್ನನು ಕಾಣದೆ ನಿಮಿಷವೇ ಆದರೂ ಸಾವು ಸುಳಿದಂತೆ 
ಕಬ್ಬಿಗನಾಗುವೆ ನಿನ್ನ ನೆನೆಯುತ ಕಾವ್ಯ ಬಿಡಿಸಿ 
ಏನೇ ಹೇಳು ಪ್ರೀತಿ ಸಿಕ್ಕರೆ ಜಗವ ಗೆದ್ದಂತೆ 

ಪ್ರೀತಿ ಒಂದೇ ಕೆಲಸ, ಬೇರೇನೂ ಬೇಡದು ಹೃದಯ 
ಆಗಲೇ ನಾನು ನಿನ್ನ ಪ್ರೀತಿಯ ದಾಸನಾಗಿರುವೆ 

ಎಲ್ಲ ಅರಿತವರೆದುರು ಏನೂ ಅರಿಯದವ

ಎಲ್ಲ ಅರಿತವರೆದುರು ಏನೂ ಅರಿಯದವ 

ಕೂಡಿ ಬೆರೆತವರೊಳಗೆ ದೂರವೇ ಉಳಿದವ 
ಯಾರೂ ಕೂಗದ ಹೆಸರ ತನಗಿಟ್ಟುಕೊಂಡವ 
ಯಾವ ಸಂತೆಯ ಗದ್ದಲವನೂ ಲೆಕ್ಕಿಸದವ 

ಯಾವ ರಂಗಿಗೂ ತಾನು ಅಂಟಿಕೊಳ್ಳಲೊಲ್ಲದವ 
ಮೌನವೂ ಸಂಗೀತವೆಂದು ತಲೆದೂಗಿದವ 
ಅವರಿವರ ಮಾತಿಗೆ ಕಿವಿಗೊಡದ ಇವ 
ತನ್ನ ತಾನರಿಯದವನೆಂದು ತಾನೇ ಹೇಳುವವ 

ಭವ-ಬಂಧನದ ಎಲ್ಲ ಭಾವ ಅಭಾವ 
ಪರಿಣಮಿಸದಂತುಳಿವುದಿವನ ಸ್ವಭಾವ 
ಹಗ್ಗಕ್ಕೂ ಹಾವಿಗೂ ಗಂಟು ಬೆಸೆಯುವವ 
ಮೋಹಕ್ಕೂ ಮುಕ್ತಿಗೂ ಅಂತರ ತಿಳಿದವ 

ಎಲ್ಲ ಅಂಕಿಯ ದಾಟಿ ಶೂನ್ಯ ಹುಡುಕಿದವ 
ಎಲ್ಲ ಅಂಕೆಯ ಮೀರಿ ತಳದಲ್ಲೇ ಉಳಿದವ 
ಸ್ಥಿತಿಯಲ್ಲೂ ಇವನ ಕಣ್ಣಿಗೆ ಎಲ್ಲ ಉತ್ಸವ 
ಮೆರೆಸುವವರೊಳಗೆ ನೆಲೆಸುವುದು ಅಸಂಭವ 

ಈ ಮರುಳನ ಬಾಳಿಗೆ

ಪಲ್ಲವಿ... 

ಈ ಮರುಳನ ಬಾಳಿಗೆ 
ಹೊಸತು ದಾರಿ ನೀ ತೋರಿದೆ 
ಈ ಕವಿದ ಕನಸಲ್ಲಿಯೂ 
ನಿನದೇ ಮಧುರ ಮಳೆಯಾಗಿದೆ 
ಕಳೆದ ಪ್ರತಿ ಕ್ಷಣವೆಲ್ಲವೂ 
ನವಿರು ನೆನಪಾದಂತಿವೆ 

ನೀ ಬಿಡಿಸಿದ ಮೌನಕೆ 
ಅರಳೋ ತುಟಿಯೇ ಮಾತಾಗಿದೆ 
ನೀ ಕಲಿಸಿದ ಹಾಡನೇ 
ಮನವು ಬಯಸುತ ಹಾಡಿದೆ 
ಕರಗೋ ಹಿಮವಾಗುತ್ತಲೇ 
ಬಳಿಗೆ ಹರಿದೆ ಮೆಲ್ಲಗೆ 

ಚರಣ ೧
ಆರಂಭವೇ ಹೀಗೆ ಆಹ್ಲಾದವಾಗಿ
ಅನುಭಂದದ ಸವಿ ಕೈ ಬೀಸಿ ಕೂಗಿ 
ನನ್ನಲ್ಲಿ ಈ ನಿನ್ನ ಸ್ವೀಕಾರವಾಗಿ 
ಸಂತೋಷವು ನಮ್ಮ ಅನುಯಾಯಿಯಾಗಿ  
ಬಾ ತೆರೆಯಲು ಬಾಗಿಲ
ಬೆಳಕು ಕೊಡುವ ಚೈತನ್ಯವೇ 
ಬಾ ಬೆರೆಯಲು ಕೂಡಲೇ 
ಒಲವ ಸೆಲೆಯ ಅಧ್ಯಾಯವೇ 

ಚರಣ ೨
ತಂಗಾಳಿ ಕೂಡ ತಂಪಾದ ಹಾಗೆ  
ನೀನೆಲ್ಲೇ ಕಾಲಿಟ್ಟರೂ 
ಖುದ್ದಾಗಿ ನೀನೇ ನೆರವಾದ ಹಾಗೆ 
ನಾನೆಲ್ಲೇ ಕಂಗೆಟ್ಟರೂ 
ಆಗಾಗ ಮೂಡಲಿ ಮುನಿಸು 
ಕಣ್ಣೋಟ ಸಮರವೇ ಸೊಗಸು 
ನಾ ಸೋತು ಶರಣಾಗುವೆ 
ನಾ ನಿನ್ನ ಸಮವಾಗುವೆ... 

ಪಲ್ಲವಿ 
ಈ ಮರುಳನ ಬಾಳಿಗೆ 
ಹೊಸತು ದಾರಿ ನೀ ತೋರಿದೆ 
ಈ ಕವಿದ ಕನಸಲ್ಲಿಯೂ 
ನಿನದೇ ಮಧುರ ಮಳೆಯಾಗಿದೆ 
ಕಳೆದ ಪ್ರತಿ ಕ್ಷಣವೆಲ್ಲವೂ 
ನವಿರು ನೆನಪಾದಂತಿವೆ 

ನುಡಿಸುವವರಿರದೆ ಕೊಳಲೊಳಗೆ ಉಳಿದ ನಾದ ನಾನು

ನುಡಿಸುವವರಿರದೆ ಕೊಳಲೊಳಗೆ ಉಳಿದ ನಾದ ನಾನು

ಬಿಡಿಸಕೊಳ್ಳಲು ಬರದ ನನ್ನೊಳಗ ಬಿಗಿ ಮೌನ ನೀನು
ಬಿಡಿ ನುಡಿಗಳ ನೆಪದ ಆಸರೆ ಬೇಕೆಮಗೆ ಮಾತಾಗಲು 
ಗಡಿಬಿಡಿ ಇಲ್ಲದೆ ಸಮಯ ಜರುಗಲಿ ಚಂದ ಹಾಡಾಗಲು 

ತಾಳ ತಂಬೂರಿ. ಮೇಳ ತುತ್ತೂರಿ ಯಾವೂ ಇಲ್ಲಿಲ್ಲ  
ಉಸಿರ ಏರಿಳಿತಕ್ಕೆ ಸರಿಯಾಗಿ ಸಿಗಬಹುದೇ ರಾಗ?
ಭಾವ ಸಾಗರದಲ್ಲಿ ಅಲೆಗಳಿಗೆ ಇಂದೇಕೋ ಆಲಸ್ಯ 
ತೀರದಲಿ ಗೀಚಿದವು ದಾಖಲಾಗಲು ಒಳ್ಳೆ ಯೋಗ!

ನಗು ಒಂದು ತಂತಿ, ಅಳುವಿಗೆ ನೂರಾರು ಜೋಪಾನ 
ಯಾವುದೇ ಆದರೂ ಮಿಡಿತಕ್ಕೆ ಕೊಂಡಿಯಾಗುವುದು
ಸಭೆ ತುಂಬ ಕಿವುಡರೇ ಹಾಡೆಂತು ಕೇಳೀತು? ಹಾಡುವ 
ಹಿಂದೆಂದೋ ಸತ್ತ ನೆರಳಿಗಾದರೂ ಜೀವ ಬಂದೀತು 

ಭಿನ್ನ ಅಭಿರುಚಿಗಳು ಬೆರೆತಾಗ ಹೊಸ ರುಚಿ ಹುಟ್ಟುವುದು 
ನಾನು ನೀನು ಕೂಡಿದ ಕ್ಷಣವೂ ಕೂಡ ಹಾಗೇನೇ 
ಒಪ್ಪೊತ್ತಿಗಾದರೂ ಕೊರಳಿಂದ ಹರಿಯಲಿ ಮೆಲ್ಲುಲಿ
ಕಾಲ ಮಿತಿಯ ವಿಸ್ತರಿಸಿಕೊಳ್ಳುವೆ ಬಡಿದು ಸಾವನ್ನೇ 

ಹೊಳ್ಳೆಯನು ಮುಚ್ಚಿ ಮೆಲ್ಲ ತೆರೆಯುತ್ತಾ ಮತ್ತೆಲ್ಲೋ 
ಮತ್ತಾವುದೋ ಹೊಳ್ಳೆಯ ಕಣ್ಣಿಗೆ ಬಟ್ಟೆ ಕಟ್ಟಿ 
ಆಟವಾಡುವ ನಿನ್ನ ಬೆರಳುಗಳ ಬೆರಗಿಗೆ ಸೋತು 
ಅನುರಾಗವೆಂಬ ಹೊಸ ರಾಗಮಾಲಿಕೆ ಹೊಸೆದೆ 

ನಾ ನುಡಿದರೆ ಸಾಲದು ನೀನೂ ಮಣಿದು ಮಾತಾಗು 
ನನ್ನ ಪಯಣಕೆ ದಿಕ್ಕು ತೋರುವ ಒಲವೆಂಬ ಶೃತಿಯಾಗು 
ಗೌಣವಾಗುವೆ ನಿನ್ನ ಹೊರತಾಗಿ ಸ್ಥಾಯಿ ತಲುಪದೆಲೆ 
ಉದ್ಭವಿಸುವೆಲ್ಲ ಅದ್ಭುತಗಳ ತದ್ಭವ ನೀನಾಗು 

ಕಣ್ಣಿನ ಗುರಿಗೆ ನಾ ಸರಿಯಾಗಿ ಸಿಗದೇ ಹೋಗಬಹುದು


ಕಣ್ಣಿನ ಗುರಿಗೆ ನಾ ಸರಿಯಾಗಿ ಸಿಗದೇ ಹೋಗಬಹುದು 
ಹಾಗಾಗಿಯೇ ಗುರಿಯ ಆಚೀಚೆ ಪ್ರತ್ಯಕ್ಷನಾಗುತ್ತೇನೆ 
ಎಂಥ ಗುರಿಕಾರರಾದರೂ ಗುರಿ ತಪ್ಪಿದಲ್ಲೂ ಸಂಭ್ರಮಿಸುತ್ತಾರೆ, ಕಾರಣ
ಆ ಕೇಂದ್ರ ಭಾಗವಿದೆಯಲ್ಲ, ಅದು ಹಂಬಲವಷ್ಟೇ 
ಬಾಣ ನೆಟ್ಟಲ್ಲೇ ಗುರಿಯಿಟ್ಟೆವೆಂಬುದು ನಂತರದ ಸಮಜಾಯಿಷಿ 

ಇಗೋ ಹಣೆಗೆ ಗುರಿಯಿಡು, ಎದೆಗೆ ನಾಟಬಹುದು 
ಬೇಡ, ಇನ್ನು ಮುಂದಕ್ಕೆ ಗುರಿಯಿಡುವಾಟ ಬೇಡ 
ಕೈಚಾಚು ದೂರದಲ್ಲಿ ಬಂದು ನಿಲ್ಲುತ್ತೇನೆ 
ಹೃದಯವಂತೂ ನಿನಗಾಗಿ ಅಂಗೈಯ್ಯಲ್ಲೇ ಕಾದಿದೆ
ದೋಚುವುದೇನು ಕಷ್ಟದ ಕೆಲಸವಲ್ಲ 
ಬದಲಿ ಹೃದಯ ಅನ್ನುವುದಿದೆ ನೋಡು, ಆ ಅದೇ 
ಏನೋ ತಕರಾರು ತೆಗೆವಂತಿದೆ, ಚೂರು ವಿಚಾರಿಸು 

ಕಾವ್ಯೋನ್ಮಾದ ಹೆಚ್ಚು ಕಾಲ ಬಾಳದು 
ನಶೆ ಇಳಿವುದಕ್ಕೆ ಮೊದಲೇ ಮತ್ತೆ ಓದುತ್ತೇನೆ 
ರೂಪಕಗಳು ಹೊಂದದೆ ಹೋಗಬಹುದೇನೋ?
ಅಲ್ಲಲ್ಲೇ ತಿದ್ದಿ ಮರು ಓದಿಗೆ ಸಜ್ಜಾಗುತ್ತೇನೆ 
ಅಥವಾ ರಾಗಬದ್ಧವಾಗಿ ಹಾಡಿ 
ಎದೆ ಮುಟ್ಟಿಸುವ ಯತ್ನ ಮಾಡಿದಾಗ 
ಮುಟ್ಟಿದೆನೆಂದು ಆರೋಪಿಸಿ ಜಗಳವಾಡು 

ಬೆನ್ನು ಬೆನ್ನಿಗೆ ಎಷ್ಟೇ ಬಿನ್ನಹ ಹಾಕಿದರೂ 
ಕಣ್ಣು ನಡೆಸುವ ಚಿಂತನೆ ಮಾತಿಗೂ ಮೀರಿದ್ದು 
ಹಾಗಾಗಿ ಎದುರು-ಬದುರು ಕೂತರೆ ಅನುಕೂಲ;
ಹೇಳಲಾಗದವುಗಳ ನೀನೇ ಗ್ರಹಿಸಿಬಿಡು 
ನನಗೊಪ್ಪುವ ಪ್ರತಿಕ್ರಿಯೆ ಸಿಕ್ಕಿತೆಂದು ನಾ ಹಿಗ್ಗುವೆ 
ಇವಿಷ್ಟೇ ಅಲ್ಲದೆ ಸಲ್ಲಾಪಕ್ಕೆ ಆಸ್ಪದವೂ, ಆಸ್ವಾದವೂ... 

ಈ ವಿಲಕ್ಷಣ ರಾತ್ರಿಗಳು ಕತೆ ಕಟ್ಟುತ್ತಿವೆ 
ನಮ್ಮ ಕುರಿತು ಊಹಾಪೋಹಗಳು ಹಬ್ಬುತ್ತಿವೆ 
ಇದಕ್ಕೆ ನಾವಲ್ಲದೆ ಬೇರಾರೂ ಕಾರಣರಲ್ಲ;
ಹೊಣೆ ಹೊರಲು ನಾ ತಯಾರಿದ್ದೇನೆ 
ಬಯಸಿ ಬಯಸಿ ಕತ್ತಲಾದಾಗ 
ಬೆಳಕಿಗಾಗಿ ತಪಗೈಯ್ಯುವುದು ಮೂರ್ಖತನ 
ತಾರೆಗಳು ಕೊಂಕಾಡಿದರೂ ಮೆರುಗು 
ವದಂತಿಗಳು ನಮ್ಮನ್ನು ಮತ್ತಷ್ಟು ಗಟ್ಟಿಯಾಗಿಸಿವೆ... 

ನಿದ್ದೆಗೆ ಜಾರಲು

ನಿದ್ದೆಗೆ ಜಾರಲು 

ಸದ್ದು ಮಾಡದೆ ಬರುವೆ 
ಕದ್ದು ಹೋಗಲು ನಿನ್ನ ಕನಸುಗಳನು
ಕಣ್ಣ ಗುಡ್ಡೆಯ ಮೇಲೆ 
ಹೊದ್ದ ರೆಪ್ಪೆಗೆ ಒಮ್ಮೆ 
ಸಣ್ಣ ಮುತ್ತನು ಕೊಟ್ಟು ಹಿಗ್ಗುತಿಹೆನು

ಎಚ್ಚರವಾಗಿಸದೆ 
ವಿಷಯವ ಮುಟ್ಟಿಸುವೆ 
ಉತ್ತರಿಸು ನಿನ್ನೊಳಗೆ ನಿನಗೆ ನೀನೇ 
ಮತ್ತಿರದ ರಾತ್ರಿಯಲಿ 
ಮದಿರೆ ನೆನಪುಗಳನ್ನು 
ಹೊತ್ತು ತರುವೆನು ಸ್ಮರಿಸು ಆಗ ನನ್ನೇ 

ಗಹನವಾಗಿಸದಂತೆ 
ಅತಿ ಸರಳ ಮಾರ್ಗದಲಿ 
ತುಸು ದೂರ ಕ್ರಮಿಸುವ ಕನವರಿಸುತ 
ಚಂದಿರನ ಕೈಚಾಚು 
ದೂರದಲಿ ನಿಲ್ಲಿಸಿ 
ತೃಪ್ತಿಗೊಳ್ಳುವವರೆಗೆ ಅನುಭವಿಸುತ 

ಸದ್ದು ಗದ್ದಲ ನಡುವೆ 
ಕಳುವಾಗದಿರಲೆಂದು 
ಪಿಸು ಮಾತುಗಳನೆಲ್ಲ ಬಚ್ಚಿ ಇಡುವೆ
ಹಸಿವೆಂದು ನೊಂದರೆ 
ಬೆಟ್ಟವೇರಿ ಒಂಟಿ 
ಮರದ ಎಲೆಮರೆ ಹಣ್ಣ ಕಿತ್ತು ತರುವೆ 

ಬೆಳಕು ಮೂಡುತಲಿದೆ 
ಎಲ್ಲ ಕಟ್ಟಿಟ್ಟು ಬುಟ್ಟಿಗೆ 
ತುಂಬಿ ಹೊತ್ತು ಹೋಗುವೆ ಇಂದಿಗೆ 
ಕಣ್ಣರಳಿಸಿ ನೋಡು 
ಕನ್ನಡಿಯ ಬಿಂಬವು 
ತನ್ನ ತಾ ನೋಡಿ ನಾಚಿತು ಮೆಲ್ಲಗೆ 

ಆ ಮೋಡ, ಈ ಸೋನೆ ಇದೆಲ್ಲ ವಿಶೇಷ

ಎಲ್ಲ ಹೊಸತಾಗಿ 

ಖುಷಿಯು ಅತಿಯಾದ ಹಾಗಿದೆ 
ಮಾತು ಮರೆತಂತೆ 
ನಾನೇ ಬದಲಾದ ಹಾಗಿದೆ 
ಹೀಗಾಗಲು ಈ ಮನ
ನೀನಲ್ಲವೇ ಕಾರಣ 
ಕರೆ ನೀಡದೆ ಬಳಿಸಾರುವೆ 
ನಾನಾಗಿಯೇ .... ಹೇsss 
ಏನಾಗಿದೆ (ನನಗೆ) ಏನಾಗಿದೆ 
ಅನುರಾಗವೀಗ ಶುರುವಾಗಿದೆ  

ಆ ಮೋಡ, ಈ ಸೋನೆ ಇದೆಲ್ಲ ವಿಶೇಷ 
ನೀ ಇರುವಲ್ಲೇ ನನ್ನ ಈ ನೆರಳ ವಿಳಾಸ 
ಅದೇಕೋ ಅದೇಕೋ ಅದೇ ಕಣ್ಣಿಗೆ ಸೋಲುವೆ 
ವಿಚಾರ ನೂರಾರು ಹೇಳೋದಾ ಬಿಡೋದಾ 
ಒದ್ದಾಡೋ ವೇಳೇಲೇ ಈ ಪ್ರೀತಿ ಆಗೋದಾ 
ನಿಧಾನ ನಿಧಾನ ಚೂರೇ ಚೂರು ಉಸಿರಾಡುವೆ 
ವಿಶೇಷವಾದ ಪ್ರೀತಿ ನನ್ನದು 
ಹೀಗಾಗಲು ಈ ಮನ
ನೀನಲ್ಲವೇ ಕಾರಣ 
ಕರೆ ಮಾಡದೆ ಬಳಿಸಾರುವೆ
ನಾನಾಗಿಯೇ .... ಹೇsss 
ಏನಾಗಿದೆ ಏನಾಗಿದೆ 
ಈ ಬಡಪಾಯಿ ಮನಕೆ ಏನಾಗಿದೆ.... 

ಕಲಾವಿದ ನಿರ್ಲಕ್ಷಕ್ಕೊಳಗಾದಷ್ಟೂ ಪ್ರಬಲನಾಗುತ್ತಿದ್ದಾನೆ


ಇವನಿಗೆ ಮಂಜು ಪರದೆಯ ಮೇಲೆ
ಚಿತ್ರ ಬಿಡಿಸುವುದೆಂದರೆ ಪಂಚ ಪ್ರಾಣ
ತಾನು ಎಳೆದ ಗೀಟು ಎಲ್ಲೂ ಕೂಡದೆ 
ತನ್ನಷ್ಟಕ್ಕೆ ತಾನು ಇದ್ದು ಬಿಡಬಹುದು 
ಅಥವ ಒಂದನೊಂದು ಕೂಡಿ 
ಪೂರ್ಣಾಕೃತಿ ಪಡೆದುಕೊಳ್ಳಬಹುದು 

ಯಾರೂ ಇವನ ಕಲಾವಂತಿಕೆಯ ಮೆಚ್ಚಿ 
ಅಥವ ತೆಗಳಿ ಮಾತನಾಡುವವರಿಲ್ಲ 
ಇವನಲ್ಲಿ ಮೂಡುವ ಭಾವಕ್ಕೆ ತಕ್ಕಂತೆ 
ಓರೆಕೋರೆಗಳು ಬಾಗಿ ಬೀಗುತ್ತವೆ 
ಮತ್ತು ಅವವುಗಳೊಳಗೇ ಸುಪ್ತವಾಗುತ್ತವೆ 
ಮೂಡಿದಷ್ಟೇ ಅವಸರದಲ್ಲಿ ನೇಪಥ್ಯಕ್ಕೆ ಸರಿದು 

ಇವನಲ್ಲಿ ಪ್ರದರ್ಶನಕ್ಕೂ ಸರಕಿಲ್ಲ 
ಆ ಕ್ಷಣ, ಆ ಗಳಿಗೆಗೆ ತಕ್ಕಂತೆ ಬಿಡಿಸಬಲ್ಲ;
ನೀರ ಮೇಲೋ, ಗಾಳಿಯಲ್ಲೋ 
ಕ್ಷಿತಿಜವನ್ನು ಎಳೆತಂದು ಇಬ್ಬನಿಗೆ 
ಮಳೆಬಿಲ್ಲನ್ನು ಒಲೆಯ ಮಸಿಗೆ ಸೇರಿಸುವ
ನಿರೂಪಮಾನ ಕಲೆ ಇವನದು 

ಯಾರೋ ಕದ್ದಿರಬಹುದಾದ ಗುಮಾನಿ 
ಅಥವ ಎರವಲು ಪಡೆದ ಸಬೂಬು
ಯಾವುದೂ ಇವನನ್ನು ಬಾಧಿಸುವುದಿಲ್ಲ;
ಬಿಡಿಸಿದ ಒಗಟನ್ನು ಮತ್ತೆ ಇವನೇ 
ಗೋಜಲಾಗಿಸಿಕೊಂಡು ಬಿಡಿಸಿ ಕೂರಬಹುದು  
ಅಥವ ಏನೂ ಅರಿಯದವನಂತೆ 
ನಿರ್ಲಿಪ್ತನಾಗಿ ಉಳಿದುಬಿಡಬಹುದು 

ಘೋಷ, ಜೈಕಾರಗಳು ಕೇಳುವುದಿಲ್ಲ 
ಪಾರಿತೋಷಕ, ಬಿರುದು ಕಾಣುವುದಿಲ್ಲ 
ಬೆರಳಂಚಲಿ ಬಣ್ಣದ ಕಲೆಯೂ 
ಕಣ್ಣಂಚಲಿ ಸಾರ್ಥಕತೆಯೂ ಗೋಚರಿಸುವುದಿಲ್ಲ;
ಒಳಗೇನೋ ಮಾರ್ಮಿಕ ತುಡಿತ 
ಸದಾ ಎಚ್ಚರಿಸಿದಂತೆ ತೊಳಲಾಡುತ್ತಾನೆ 
ಮೇಲ್ನೋಟಕ್ಕೆ ಶಾಂತ ರೂಪಿಯಾಗಿ 

ಯಾರಲ್ಲೂ ಹೇಳಿಕೊಳ್ಳಲಾಗದ ನೋವು
ಎಲ್ಲರಲ್ಲೂ ಹಂಚಿಕೊಳ್ಳಬಲ್ಲ ಖುಷಿ
ಎಲ್ಲವನ್ನೂ ಏಕ ಸ್ವರೂಪದಲ್ಲಿ 
ಅರ್ಥಾತ್ ನಿರ್ಭಾವುಕವಾಗಿ ವ್ಯಕ್ತಪಡಿಸುವ 
ಖಾಲಿತನದ ಅನಾವರಣ ಪ್ರತಿ ಸಲವೂ;
ಇದು ಕಲೆ ಎಂದವರಿಗೆ ಕಲೆ, ಇಲ್ಲವೆಂದವರಿಗೆ ಇಲ್ಲ 
ಕಲಾವಿದ ನಿರ್ಲಕ್ಷಕ್ಕೊಳಗಾದಷ್ಟೂ ಪ್ರಬಲನಾಗುತ್ತಿದ್ದಾನೆ... 

Friday, 27 November 2020

ಎಷ್ಟೇ ಮಳೆಗರೆದರೂ ಇಳೆಗೆ ಸಾಕಾಗದು

ಎಷ್ಟೇ ಮಳೆಗರೆದರೂ ಇಳೆಗೆ ಸಾಕಾಗದು 

ಎಷ್ಟೇ ಮಿನುಗಿದ್ದರೂ ತಾರೆ ಕೈ ಸೇರದು 
ಎಷ್ಟೇ ಮನಸ್ಸಿದ್ದರೂ ಮಳೆಬಿಲ್ಲು ಅಳಿವುದು 
ಎಷ್ಟೇ ಒತ್ತಡವಿರಲಿ ಚಿಗುರೊಡೆಯದೆ ತಪ್ಪದು 

ಏನೇ ವಿಸ್ತಾರವಿರಲಿ ಅಲೆಗೂ ಕೊನೆಯೊಂದಿದೆ 
ಏನೇ ಬಯಕೆಗಳಿರಲಿ ಇಬ್ಬನಿ ಕೊನೆ ಕಾಣದೇ?
ಏನೇ ಸಾಂತ್ವನ ಕೊಡಲು ಕಂಬನಿಯು ಕೇಳದೆ 
ಏನೇ ರೇಖೆ ಎಳೆದರೂ ಎಲ್ಲವನ್ನೂ ಮೀರಿದೆ 

ಯಾರೇ ತಡೆಯೊಡ್ಡಿದರೂ ಗಂಧಕೆ ಚೌಕಟ್ಟೇ?
ಯಾರೇ ಎದೆ ತಟ್ಟಿದರೂ ಒಲವ ಬಾಬತ್ತೇ!
ಯಾರೇ ಆಲಿಸಲಿ ಹೃದಯ ಹಾಡುವುದು ಮತ್ತೆ 
ಯಾರೇ ಒಲವಿಗೆ ಸಿಗಲಿ ಅರಳುವುದು ಕವಿತೆ 

ಯಾವ ಬರವಣಿಗೆಗೂ ನಿಲುಕದಂಥ ಪತ್ರ 
ಯಾವ ಮುಖವಾಡವೂ ಒಲ್ಲದಂಥ ಪಾತ್ರ 
ಯಾವುದೇ ಬಣ್ಣ ನೆಚ್ಚಿ ಕಾಯದಂಥ ಚಿತ್ರ
ಯಾವ ಹಸಿವೇ ಇರಲಿ ನೀಗಿಸುವುದೇ ಮಂತ್ರ 

ಎಲ್ಲೇ ಸಾಗಿ ಹೊರಟರೂ ಹಿಂಬಾಲಿಸೋ ಮುಗಿಲು 
ಎಲ್ಲೇ ಅಡಗಿ ಕೂತರೂ ಜೊತೆಗುಳಿವ ನೆರಳು 
ಎಲ್ಲೇ ನೆಲೆ ನಿಂತರಲ್ಲೊಂದು ಕೊನೆಯ ಹೆಜ್ಜೆ 
ಎಲ್ಲೋ ಗಮನ ಸರಿದು ಮಂಕಾಯಿತು ಸಂಜೆ!

ನಿನ್ನಿಂದ ಏನಾದರೂ ಕಲಿಯದ ಹೊರತು

ನಿನ್ನಿಂದ ಏನಾದರೂ ಕಲಿಯದ ಹೊರತು

ಗುರುವೆಂದು ನಿನ್ನ ಹೇಗೆ ಕರೆಯಲೈಯ್ಯ
ಮಣ್ಣಿಂದ ಏನಾದರೂ ಬೆಳೆಯದ ಹೊರತು 
ಹಸಿವ ಗೆಲ್ಲುವ ಸಾಧನವ ತೋರಿಸೈಯ್ಯ 
ಮಾತಿಂದ ಬಿರುಕು ಮೂಡುವುದಾದರೆ ನನ್ನ
ಮೂಕನಾಗಿಸಿಬಿಡು ಮರು ಮಾತೇ ಇರದೆ 
ಮನಸಲ್ಲೇ ನೆಲೆಸಿದರೂ ಎಲ್ಲೆಲ್ಲೂ ಹುಡುಕಾಟ 
ದಣಿದಿರುವೆ ನಾನೀಗ ನೀ ಕಾಣಸಿಗದೆ ... 

ಸದ್ದಿನಲೂ ನೀರವ, ಕಣ್ತುಂಬಿಕೊಳ್ಳುವ 
ಆ ದಿವ್ಯ ಗಳಿಗೆಗಾಗಿ ಕಾಯುತಿರುವೆ 
ಬೇಡೆಂದು ಬಿಟ್ಟರೂ, ನೆರಳಾಗಿ ಬಂದವ 
ನಿನ್ನಾಟಕೆ ಸೋತು ಶರಣಾಗುತಿರುವೆ 
ನಾಮವಿರದ ಸರ್ವ ನಾಮವೂ ನಿನದೇ 
ನಿರ್ನಾಮವಾಗುವೆಡೆ ನಿನ್ನನ್ನು ನೆನೆದೆ 
ನಾನಾರು ಎಂದು ನಾ ಅರಿತವನೇ ಅಲ್ಲ 
ನಿನ್ನರಿವ ಹರಿವಲ್ಲಿ ಕಂಡದ್ದೇ ಎಲ್ಲ 

ಅಕ್ಷರ ದೀಪ್ತಿಯಡಿಗತ್ತಲ ಮಸಿ ನಾನು 
ಬೆಳಕೆಂಬೋ ಸತ್ಯವನು ತೋರಿದವ ನೀನು 
ನನ್ನ ಧ್ಯಾನಕೆ ನಿನ್ನ ಒಕ್ಕೊರಲ ರಾಗ 
ನಿನ್ನ ಶೂನ್ಯದ ಒಳಗೆ ನಾನೊಂದು ಭಾಗ 
ಕಡಿದು ಕೊಡು ನನಗೆ ಹೊಸತೊಂದು ರೂಪ 
ಹಠ ಬಿಡದ ಮಗುವಾಗಿ ಬೆರಳನ್ನು ಹಿಡಿವೆ 
ತೇಲಿಸು, ಮುಳುಗಿಸು ನಿನ್ನಂತೆ ನಡೆಸೆನ್ನ 
ನೀ ತೋರುವ ದಾರಿ ನನದೆಂದು ನಡೆವೆ 

ಅವರಿವರು ಯಾರವರು? ನಿನ್ನವರೇ ನನ್ನವರು 
ವರಿಸುವವರೆಲ್ಲ ನಿನ್ನಂತೆ ಅನಿಸುವರು 
ಇದ್ದವರು, ಇರುವವರು, ಇರಲಾಗದುಳಿದವರು 
ಇಂತಿಪ್ಪ ಬದುಕುವುದ ತೋರಿ ಕಲಿಸಿದರು 
ಆಗದವರು ದೂರವಾದವರು ಹೇರಳ 
ಉಸಿರ ಏರಿಳಿಲಿತವನು ಬಲ್ಲವರು ವಿರಳ 
ನೀನೆಂಬ ಮೂಲ ದ್ರವ್ಯದ ಆಳ ತಲುಪಿರುವೆ 
ನೀ ಅರಳಿಸಲು ನಾ ನಗುವ ಕಮಲ 

ಗಡಿಯಿಟ್ಟು ಕಾಯಲು ನೀ ವಾಯು ಆದೆ 
ಗುಡಿ ಕಟ್ಟಿಕೊಳ್ಳಲು ಕಲ್ಲಾಗಿ ಉಳಿದೆ 
ಊರ ಹೊರಗಿಟ್ಟವರ, ಕೋಟೆ ಕಟ್ಟಿಟ್ಟವರ 
ಸಮವಾಗಿಸಿ ನಿನ್ನ ಬೆವರಿಂದ ತೊಳೆದೆ 
ನೆನೆದಲ್ಲೇ ಸಿಗುವಂಥ ಸ್ಮೃತಿಯೊಂದೇ ಸಾಕು 
ಸ್ತುತಿ ಅರಿಯದವರಲ್ಲೂ ನೀ ನೆಲೆಸಬೇಕು 
ಗುರುಭಕ್ತಿಯಿಂದ ಅರ್ಪಿತ ನನ್ನ ನಮನ 
ನಾನೆಂಬುದ ಅಳಿಸಿ ಮಾಡಿಸೈ ಮನನ... 

ನನ್ನ ನಗುವಲ್ಲಿ ಲೋಪ ಕಂಡುಬಂದಲ್ಲಿ

ನನ್ನ ನಗುವಲ್ಲಿ ಲೋಪ ಕಂಡುಬಂದಲ್ಲಿ 

ಅದ ನೀನೇ ಸರಿಪಡಿಸಿಬಿಡು 
ಏಕೆಂದರೆ ನಿನ್ನೆದುರು ಮುಕ್ತನಾದೆನೆಂಬ ತೃಪ್ತಿ 
ನನಗಷ್ಟೇ ಅಲ್ಲ, ನಿನಗೂ ಸಲ್ಲಬೇಕು 

ಪ್ರೇಮ ನಿವೇದನೆ ಮಾಡುವ ಹೊತ್ತಲ್ಲಿ  
ವ್ಯಕ್ತ ಭಾವಗಳ ಪುನರುಚ್ಚರಿಸುವಂತೆ ಪೀಡಿಸದಿರು 
ಮಹಲನ್ನು ಒಮ್ಮೆಯಷ್ಟೇ ಕಟ್ಟಬಲ್ಲೆ 
ನಕಲು ಮಾಡ ಹೋದರೆ ಆಭಾಸವಾದೀತು 

ಆಡಿದ ಸುಳ್ಳನ್ನು ಸಲೀಸಾಗಿ ಹಿಡಿವೆ 
ಅಂದರೆ, ನೀನೂ ಸುಳ್ಳಾಡುವಲ್ಲಿ ನಿಸ್ಸೀಮಳೇ!
ಒಂದು ಒಪ್ಪಂದ ಮಾಡಿಕೊಳ್ಳೋಣ 
ಬದುಕು ನೀರಸವಾದಲ್ಲಿ, ಸುಳ್ಳಾಡಿ ಸಿಂಗರಿಸಿಕೊಳ್ಳೋಣ

ನಾವು ಸಾಗುವ ದೋಣಿ ಬಿರುಕು ಬಿಟ್ಟಿದೆ 
ಆಗಾಗ ಬೊಗಸೆಯಿಂದ ನೀರು ಮೊಗೆದು ಹಾಕಬೇಕು 
ಈಜು ಕಲಿತಿರಬೇಕು ಒಬ್ಬರನ್ನೊಬ್ಬರು ಕಾಪಾಡಲು 
ಸಿಕ್ಕಿದ್ದೇ ನಮ್ಮ ದಡವಾಗುವುದು ಬೇಡ 
ಮುಟ್ಟಬೇಕಾದಲ್ಲಿಗೆ ಮುಟ್ಟಿಯೇ ತೀರೋಣ

ನಿನ್ನ ಮಾತಿಗೆ ಸಾವಿರ ಅರ್ಥವಿದೆ
ನನ್ನ ಮೌನದಲ್ಲಿ ಅದಕ್ಕೂ ಮಿಗಿಲು ಅರ್ಥ ಕಾಣುತಿ 
ಹೀಗೆ ಮುಂದುವರಿದ ಸಂವಹನದಲ್ಲಿ 
ನಮ್ಮ ದೌರ್ಬಲ್ಯಗಳ ನೀಗಿಸಿಕೊಂಡು ಸಶಕ್ತರಾಗೋಣ 

ಸೂರ್ಯ, ಚಂದ್ರ, ಹಗಲು-ರಾತ್ರಿ 
ತಾರೆ, ಮೋಡ, ಹಸಿರು, ಪ್ರಾಣಿ- ಪಕ್ಷಿ
ಕಾಮನಬಿಲ್ಲು, ಮಳೆ, ಬಿರುಗಾಳಿ 
ನೆರೆ, ಬರ, ವಿಕೃತಿ, ವಿಪತ್ತು 
ಇವೆಲ್ಲವೂ ಇರಲಿ ನಮ್ಮ ಪಯಣದ ಜೊತೆ 
ಅವು ನಮ್ಮ ಕತೆಯ ಭಾಗವಾದಂತೆ 
ನಾವೂ ಅವವುಗಳ ಭಾಗವಾಗಬೇಕು 

ಇದೋ ಮರೆತೆ, ಬಣ್ಣದ ಚುಕ್ಕೆಯ ಸೀರೆ 
ಎಷ್ಟು ಬಣ್ಣಗಳಿರಬಹುದೆಂದು ಎಣಿಸಿ ಸೋತಿದ್ದೇನೆ 
ಹೇಗಿದ್ದರೂ ಜೀವನಮಾನವಿಡೀ ಉಡುತ್ತೀಯಲ್ಲ 
ಲೆಕ್ಕ ಸಿಕ್ಕರೆ ತಿಳಿಸು, ಅಥವ ಜೊತೆಗೇ ಎಣಿಸಿ ಕೂರೋಣ!

ಹೇಳಲು ಆಗದ ರೂಪವೇ ನಿನ್ನದು

ಹೇಳಲು ಆಗದ ರೂಪವೇ ನಿನ್ನದು 

ಯಾವ ಶಿಲೆಯಾದರೂ ನಾಚದೆ ಉಳಿಯದು 
ಯಾವ ಕಲೆಯಾದರೂ, ಯಾವ ಕವಿಯಾದರೂ
ನಿನ್ನ ಹಿಡಿವಲ್ಲಿ ಸೋಲುತ್ತ ಶರಣಾದರು 
ಕಂಡ ಕನಸಲ್ಲೂ ಏನಿಂಥ ಉನ್ಮಾದವು 
ಸ್ಮೃತಿ ನೀನಾದರೆ ಎಂಥ ಆಹ್ಲಾದವು 
ಮೌನವೂ ಕೂಡ ನಿನ್ನಲ್ಲಿ ಮಾಧುರ್ಯವೇ 
ನೀಡದ ಒಪ್ಪಿಗೆ ಕೂಡ ಸ್ವೀಕಾರವೇ 
ಸಾರುವೆ ಕಣ್ಣಲೇ ಏನೋ ಸಂದೇಶವ 
ನೀಡು ಈ ಹಾಡಿಗೆ ನಿನ್ನದೇ ರೂಪವ 
ಕಾಡುವ ರಾಗದ ತುಣುಕು ನೀನಲ್ಲವೇ (೨)
ಸಾಗರಿ, ಸಾಗರಿ, ಸಾಗರಿ, ಸಾಗರಿ 
ನನ್ನ ಅಲೆಯಾಗಿಸು ನಿನ್ನ ಆವರಿಸುವೆ 
ಸಾಗರಿ, ಸಾಗರಿ, ಸಾಗರಿ, ಸಾಗರಿ 
ಕಾಡುವ ರಾಗದ ತುಣುಕು ನೀನಲ್ಲವೇ  (೨)

ಬೀಸಿ ಹೋದೆ ಬಾಳಿನಲ್ಲಿ ಪ್ರೇಮ ಗಂಧವ 
ನಿಂತು ಮಾತನಾಡು ಮೆಲ್ಲ ಹೇಳು ಎಲ್ಲವ 
ಕಾಡಲಿಲ್ಲ ನಿನ್ನ ಹಾಗೆ ಯಾರೂ ನನ್ನನೂ 
ಗಾಢವಾಗಿ ಪ್ರೀತಿಯಲ್ಲಿ ಸೋತು ನಿಂತೆನು 
ನಗಿಸುವ ಓ ಮಾಂತ್ರಿಕ
ಜೊತೆಲಿರೆ ರೋಮಾಂಚಕ 
ನಿನ್ನಲ್ಲೇ ಲೋಕ ಕಾಣುವೆ 


ಬಣ್ಣದ ನೂಲಲಿ ಕಟ್ಟಿದ ಕುಸುರಿಯೇ
ಕಣ್ಣನು ಸೇರುವೆ ಮಿಂಚಿನ ಹಾಗೆಯೇ
ನಿನ್ನದೇ ರಂಗನು ಸಂಜೆಯೂ ತಾಳಿದೆ
ನಿದ್ದೆ ಕದ್ದೋಡುವೆ ಹೇಳದೆ ಕೇಳದೆ
ಮಂಜು ಕವಿದಂತೆ ನೀ ನನಗೆ ಎದುರಾದರೆ
ಮಾತಿದು ಸಾಲದು ಹೇಳುತಾ ಹೋದರೆ
ಚಿಮ್ಮಿದೆ ಸಣ್ಣ ಕಾರಂಜಿ ಮನದಾಳದಿ
ಬೇನೆಯೂ ಕೂಡ ಹಿತವಾಗಿ ಅನುರಾಗದಿ
ಸಾಗುತ ಸಾಗುತ ದಕ್ಕುವ ಉತ್ತರ
ನಮ್ಮ ಈ ಪ್ರೇಮವು ತಾಕುವ ಎತ್ತರ
ಬದುಕಿಗೆ ಭಾವ ತುಂಬಿದ್ದು ನೀನಲ್ಲವೇ (೨)
ಸಾಗರಿ, ಸಾಗರಿ, ಸಾಗರಿ, ಸಾಗರಿ 
ನನ್ನ ಅಲೆಯಾಗಿಸು ನಿನ್ನ ಆವರಿಸುವೆ 
ಸಾಗರಿ, ಸಾಗರಿ, ಸಾಗರಿ, ಸಾಗರಿ 
ಬದುಕಿಗೆ ಭಾವ ತುಂಬಿದ್ದು ನೀನಲ್ಲವೇ (೨)

ಮೌನದ ಸಂಚಿಕೆ ಮಾತಿಗೂ ಸುಂದರ
ಆಲಿಸು ಎದೆಯಲಿ ಮೂಡುವ ಇಂಚರ
ಮೌನದ ಸಂಚಿಕೆ ಮಾತಿಗೂ ಸುಂದರ
ಬದುಕು ಶುರುವಾಯಿತು ಪ್ರೀತಿಯ ನಂತರ (2)..





***********************************

ಬಣ್ಣಿಸಲಾಗದ ರೂಪವು ನಿನ್ನದು 
ಯಾವ ಶಿಲೆಯಾದರೂ ನಾಚದೆ ಉಳಿಯದು 
ಯಾವ ಕಲೆಯಾದರೂ, ಯಾವ ಕವಿಯಾದರೂ
ನಿನ್ನ ಹಿಡಿವಲ್ಲಿ ಸೋಲುತ್ತ ಶರಣಾದರು 

ಕಂಡ ಕನಸಲ್ಲೂ ಏನಿಂಥ ಉನ್ಮಾದವು 
ಸ್ಮೃತಿ ನೀನಾದರೆ ಎಂಥ ಆಹ್ಲಾದವು 
ಮೌನವೂ ಕೂಡ ನಿನ್ನಲ್ಲಿ ಮಾಧುರ್ಯವೇ 
ನೀಡದ ಒಪ್ಪಿಗೆ ಕೂಡ ಸ್ವೀಕಾರವೇ 

ಸಾರುವೆ ಕಣ್ಣಲೇ ಏನೋ ಸಂದೇಶವ 
ನೀಡು ಈ ಹಾಡಿಗೆ ನಿನ್ನದೇ ರೂಪವ 
ಕಾಡುವ ರಾಗದ ತುಣುಕು ನೀನಲ್ಲವೇ
ನನ್ನ ಅಲೆಯಾಗಿಸು ನಿನ್ನ ಆವರಿಸುವೆ 

ಬಣ್ಣದ ನೂಲಲಿ ಕಟ್ಟಿದ ಕುಸುರಿಯೇ
ಕಣ್ಣನು ಸೇರುವೆ ಮಿಂಚಿನ ಹಾಗೆಯೇ
ನಿನ್ನದೇ ರಂಗನು ಸಂಜೆಯೂ ತಾಳಿದೆ
ನಿದ್ದೆ ಕದ್ದೋಡುವೆ ಹೇಳದೆ ಕೇಳದೆ

ಮಂಜು ಕವಿದಂತೆ ನೀ ನನಗೆ ಎದುರಾದರೆ
ಮಾತಿದು ಸಾಲದು ಹೇಳುತಾ ಹೋದರೆ
ಚಿಮ್ಮಿದೆ ಸಣ್ಣ ಕಾರಂಜಿ ಮನದಾಳದಿ
ಬೇನೆಯೂ ಕೂಡ ಹಿತವೇ ಅನುರಾಗದಿ

ಸಾಗುತ ಸಾಗುತ ದಕ್ಕೀತೆ ಉತ್ತರ?
ನಮ್ಮ ಈ ಪ್ರೇಮವೇ ಎಲ್ಲಕೂ ಎತ್ತರ
ಬದುಕಿಗೆ ಭಾವ ತುಂಬಿದ್ದು ನೀನಲ್ಲವೇ
ನನ್ನ ಅಲೆಯಾಗಿಸು ನಿನ್ನ ಆವರಿಸುವೆ 

Tuesday, 17 November 2020

ನನ್ನ ನಿನ್ನ ನಡುವೆ ಕಟ್ಟಿದೆ

ನನ್ನ ನಿನ್ನ ನಡುವೆ ಕಟ್ಟಿದೆ 

ಮೋಡವು ಮಂಜಿನ ಅಂತರವ 
ಚೂರು ಕಾದರೆ ತಾನೇ ಸರಿದು 
ಕಾಣುವುದೆಲ್ಲವೂ ಸುಂದರವೇ 

ಬೆನ್ನು ತೋರುವ ಸಾಹಸವೇಕೆ?
ಮನದ ಮಾತನು ಆಲಿಸದೆ 
ನಿನ್ನ ಇಷ್ಟದ ಸಾಲಲಿ ನನಗೆ 
ದಿಟ್ಟ ಸ್ಥಾನವು ಸಿಗಬಹುದೇ?

ಮುಂಜಾವಿನ ಸೂರ್ಯನ ಹಾಗೆ 
ತಣ್ಣಗೆ ಕಾಯುವೆ ನಾ ಮರೆಗೆ
ಮಂಜಿನ ಸೆರಗು ಕಣ್ಣನು ಕಟ್ಟಲು
ನಿನಗೆ ನಾ ಕಾಣದೆ ಹೋದೆ  

ಎಲ್ಲ ಕರಗಿ ನೀರಾಗಲು ನೀ 
ಮಡಿಲಾಗುವೆ ಉರುಳುವ ಹನಿಗೆ 
ನಾನೇ ಬಂದು ತಬ್ಬಿದ ಅವುಗಳ 
ಮುದ್ದಿಸಿ ಬೇರ್ಪಡಿಸುವವರೆಗೆ 

ಹೊಳೆಯುವೆ ನನ್ನ ಕಿರಣವು ಸೋಕಿ 
ಹಸಿರು ತೊಟ್ಟರೆ ನೀ ರಮೆಯೇ 
ನನ್ನ ಪಥದ ದಾಟಿಗೆ ನಿನ್ನ 
ಕೆನ್ನೆಯ ರಂಗು ಕುಣಿಯುವುದೇ?

ಆಗೋ ಮತ್ತೆ ಹೊರಡುವ ಸಮಯ 
ಮತ್ತೆ ತರುವೆ ಹೊಸ ಬೆಳಕ 
ಅಡಗಿಸಿಟ್ಟ ಭಾವನೆಗಳನು 
ತೆರೆದಿಡುವ ಇರುಳಿನ ಬಳಿಕ 

ನಿನಗೆ ನಿನ್ನದೇ ತೊಳಲಾಟಗಳು 
ಅಂತೆಯೇ ನನಗೂ ನನ್ನವು 
ಅರಿತು ಬೆರೆತರೆ ಚಿಂತೆಯ ದಹಿಸಿ 
ಅರಳಬಲ್ಲದು ಪ್ರೇಮವು... 

ಈ ಗಾಯವಿನ್ನೂ ಹಸಿಯಾಗಿದೆ

ಈ ಗಾಯವಿನ್ನೂ ಹಸಿಯಾಗಿದೆ

ನೆನಪೆಂಬ ನೋವು ಜೊತೆಯಾಗಿದೆ
ಉಸಿರಾಟವಿನ್ನೂ ಬಿಗಿಯಾಗಿದೆ
ಬೆಳಕಾಗಿ ನೀನು ಬರಬೇಕಿದೆ 
ನಡು ನೀರಿನಲ್ಲಿ ಒದ್ದಾಡುವೆ
ದಡವಾಗು ಚೂರು ಹಗುರಾಗುವೆ 

ಬೆರಳಲ್ಲಿ ಅಂಟಿದ ಮಸಿಯೆಲ್ಲವ 
ಒರೆಸೋಕೆ ಮನಸಿಲ್ಲ ನೀನಿಲ್ಲದೆ 
ಕಣ್ಣೀರು ಹರಿವಾಗ ತಾನಾಗಿಯೇ 
ತಡೆಯೋಕೆ ಮುಂದಾಗಿ ಸಾಕಾಗಿದೆ 
ಮನದಾಳದಲ್ಲಿ ಒಲವಾಗುವಾಗ
ನಿನ್ನನ್ನು ಮರೆತಂತೆ ನಟಿಸೋಕೂ ದಿಗಿಲಾಗಿದೆ 

ಮಗುವಾಗಿ ಒರಗುತ್ತ ಆ ತೋಳಲಿ
ಜಗವನ್ನು ಮರೆವಂಥ ಬಯಕೆ ಇದೆ
ಬರಿಗೈಯ್ಯಲಿರುವಲ್ಲೂ ನಿನ್ನೊಂದಿಗೆ
ಸಿರಿವಂತನಾದಂತೆ ಭ್ರಮಿಸುತ್ತಿದೆ 
ಎದುರಾಗಿ ಮತ್ತೆ ಕಳುವಾಗುವಾಗ 
ಹೃದಯಕ್ಕೆ ಖುಷಿ ಕೊಟ್ಟು ಕಸಿದಂತೆ ಬಳಲುತ್ತಿದೆ 

ಕನಸು ಹೆಣೆಯುವ ಕುಸುರಿ

ಕನಸು ಹೆಣೆಯುವ ಕುಸುರಿ

ಕಲಿಸುವೆ ನಾ ನಿನಗೆ
ಬಾ ಒರಗು ಕಂದ ಅಪ್ಪನೆದೆಗೆ
ನಾ ಕಾಣದ ಬಣ್ಣ ನೀ ತುಂಬು
ನೀ ಬಯಸಿದ ಬಣ್ಣ ನಾ ತರುವೆ
ಕಟ್ಟೋಣ ಬಾ ಎಲ್ಲವ ಜೊತೆಗೆ

ಮಳೆ ನೀರ ಓಟಕೆ
ಹಾಳೆಗಳ ಹರಿದು ದೋಣಿ ಮಾಡಿ
ತೇಲಿಸಿ ಕೊನೆ ಮುಟ್ಟಿ ಕುಣಿಯೋಣ
ಚಂದ್ರನುದುರಿಸಿದನೆಂದೆಣಿಸಿ
ಎಲೆಯೆಲೆಯ ಇಬ್ಬನಿ ಬಿಡಿಸಿ 
ನಿಲುವಂಗಿ ಒಡ್ಡಿ ಬಾಚಿಕೊಳ್ಳೋಣ 

ಗೊಂಬೆ ರೂಪವ ಕೆಡವಿ 
ಉಟ್ಟ ತೊಡುಗೆಯ ಹರಿದು 
ಮತ್ತೆ ಹೊಸ ರೂಪ ಕೊಡುತ
ನಡು ಮನೆಯ ಹಿಡಿದು
ಮೂಲೆ ಮೂಲೆಗೆ ಹರಡಿ
ಯಾವುದೆಲ್ಲಿರಬೇಕೋ ಅಲ್ಲೇ ಇಡುತ

ಮರಳ ಗೂಡಲಿ ಬೆರಳು
ನಡೆಸುವ ಆಟವ
ಕಲಿಸುವೆ ಬಾ ಮನದ ಕಡಲ ತೀರದಲಿ
ನೆನೆದಷ್ಟೂ ನೆನೆದು
ಒಲೆ ಉರಿಗೆ ಮೈಯ್ಯೊಡ್ಡಿ
ನಡುಗುವ ಕೆನ್ನೆಗೆ ಅಂಗೈ ಚಾಚುತಲಿ 

ಗದರುವಾಗ ಅಳು
ಅಳುವ ಹಿಂದೆಯೇ ನಗು
ನಕ್ಕಾದ ನಂತರ ಮತ್ತದೇ ಸಲುಗೆ
ನನ್ನ ಪಾತ್ರವ ತಾಳಿ
ನಿನ್ನ ನನ್ನೊಳಗಿಳಿಸಿ
ಕೈಗನ್ನಡಿಯ ಹಾಗೆ ಕಂಡೆ ನನಗೆ

ಜೊತೆಗೆ ಹುಟ್ಟಿದೆವು 
ಜೊತೆಗೆ ಕಲಿತೆವು ನಾವು 
ಏಳುಬೀಳೆಂಬ ಜೀವನದ ಪಾಠಗಳ 
ಒಪ್ಪಿತ ಪಡೆದ ತಪ್ಪಾದರೂ 
ತಪ್ಪು ಮಾಡಿ ಒಪ್ಪಿಕೊಳ್ಳುವೆ 
ನಿನ್ನ ನಿಲುವಿನೆದುರು ನಾನಿನ್ನೂ ಶಿಥಿಲ...

ಯಾರಲ್ಲಿ ಹೇಳಲಿ ನಾನು ನವಿರಾದ ಅನುಭವವ

ಯಾರಲ್ಲಿ ಹೇಳಲಿ ನಾನು ನವಿರಾದ ಅನುಭವವ 

ಮನವೀಗ ಕಲಿತಿರುವಾಗ ಅನುರಾಗ ಕಲರವವ 
ನೀರಾಗಿ ಹರಿವುದು ಹೃದಯ ಆ ನೋಟ ತಾಕಿದರೆ 
ಏನೇನೋ ಜರಿಗಿತು ಒಳಗೆ ಬಳಿ ನೀನು ಬರುತಲಿರೆ 
ಈ ಜಗವೇ ವಿಸ್ಮಯದಂತೆ ನೀ ಮಾಡಿದೆ ಜಾದು
ನೀ ತೋರುವಷ್ಟು ಪ್ರೀತಿ ಇನ್ನೆಲ್ಲೂ ಸಿಗದು 

ಆ ನಿಮಿಷ, ಮರಳಿ ಮರಳಿ ನೆನಪಾಗೋ ವೇಳೆ 
ಹೂಗಳಿಗೂ ಒದ್ದಾಡೋ ಸುಖವ ಹಂಚಿ ಬರಲೇನು?
ಕಾತರಿಸಿ ಬಾಗಿಲಿಗೆ ಪ್ರಾಣ ಕೊಟ್ಟು ಬಂದಿರುವೆ 
ನೀ ಎದುರು ಸಿಕ್ಕಾಗ ನನ್ನ ನಾನೇ ಮರೆತೇನು 
ಹಿಂದೆಲ್ಲ ಬೀಳೋ ಕನಸು ಅಪೂರ್ಣವೆನಿಸಿದೆ ಏಕೋ 
ಈಗೀಗ ಅಲ್ಲೂ ನೀನಷ್ಟೇ ಆವರಿಸಿಕೊಂಡಿರುವೆ 

ಸ್ವೀಕರಿಸು ಒಂದಿಷ್ಟು ಸಲುಗೆಯ ಕಣ್ಣಲ್ಲೇ ಕೊಡುವೆ 
ಆದರಿಸೋ ಉಸಿರನ್ನು ನೀಡುತ ಮತ್ತೆ ಕಸಿಯುತಲಿ 
ತಲ್ಲಣದ ಒಂದೊಂದು ಹೆಜ್ಜೆಯ ದಾಟಿ ಬಂದಿರುವೆ 
ಅಚ್ಚರಿಯ ಒಂದಿಷ್ಟು ರಸಗಳ ಒಟ್ಟುಗೂಡುತಲಿ 
ಮೊದಲೆಲ್ಲ ಜರುಗಲು ಹೀಗೆ ಮರುಳಾದ ಸಂಶಯವು 
ಈಗೀಗ ಕಾರಣ ಸಿಕ್ಕು ಹಿತವಾದ ಭಾವನೆಯು 

ಮಾಯಾ ದರ್ಪಣದ ಬಳುವಳಿಯ ನೀಡು

ಕೋರೆಗಳ ಮರೆಸಿ ನಗುವನ್ನು ಮೂಡಿಸುವ 

ಮಾಯಾ ದರ್ಪಣದ ಬಳುವಳಿಯ ನೀಡು 
ನಿನಗೊಪ್ಪುವಂತೆಯೇ ಸಜ್ಜಾಗಿ ಬರುವೆ
ನಂತರವೇ ಪ್ರೇಮ ಪರೀಕ್ಷೆ ಮಾಡು 

ಇಗೋ ಕ್ರಾಪು ಕಾಣದಂತೆ ಕೆದರಿಕೊಂಡಿರುವೆ 
ಮುಖಕ್ಕೆ ಪೌಡರಿನ ಟಚ್ಚಪ್ಪು ಕೊಟ್ಟು
ಇಸ್ತ್ರಿ ಮಾಡಿದ ಅಂಗಿ ನಿನಗಿಷ್ಟದ ಬಣ್ಣದ್ದು 
ಒಟ್ಟಾರೆ ಎದುರಾದೆ ನನ್ನನ್ನೇ ಬದಿಗಿಟ್ಟು 

ಕಣ್ಣೇರಿದ ಕನ್ನಡಕದ ಹೊರಗೆ 
ನೀ ಕಾಣುವಷ್ಟೇ ಸ್ಪಷ್ಟ, ಕನಸಲ್ಲೂ 
ಕಣ್ಮುಚ್ಚಿಯೂ ಕಾಣಸಿಗುತೀಯ ಎಂದಾಗ 
ಸುಳ್ಳು ಹೇಳಿದೆನೆಂದು ಭಾವಿಸಬೇಡ 

ಹೇರಿಕೊಂಡಿರುವೆ ಬಾಡಿಗೆ ಶೋಕಿಯ 
ಮೆಚ್ಚಿದಂತೆ ಮೆಚ್ಚಿ ತಿರಸ್ಕರಿಸಿ ಬಿಡು 
ನಾಳೆಗಳ ವಿಸ್ತಾರ ಕಂಡವರು ಯಾರು 
ನಟಿಸುತ್ತಾ ಕಳೆವೆ, ಮರಳಿ ನನ್ನ ಹುಡುಕಿ ಕೊಡು 

ಎಲ್ಲಕ್ಕೂ ರೂಪಕಗಳ ಮೊರೆ ಹೋಗಿ 
ಏನೂ ತೋಚದೆ ಕೈಚೆಲ್ಲಿ ಕೂತಿದ್ದೇನೆ 
ಕವಿತೆ ಕಟ್ಟುವುದು ಸುಲಭದ ತುತ್ತಲ್ಲ 
ನೀ ಹಸಿದಾಗ, ನಾ ಇಲ್ಲಿ ಬರಿದು ಹೊಲ 

ಸತ್ವಹೀನ ಬಿಳಿ ಹಾಳೆಗಳು 
ಅಕ್ಷರಕ್ಕಾಗಿ ಹಪಹಪಿಸುತ್ತಿವೆ ಕಪಾಟಿನಲ್ಲಿ 
ಬೇಕಿರುವುದು ಮನಃಸ್ಪರ್ಶಿ ಸಂವಹನ 
ನೀನಿದ್ದೂ ಇಲ್ಲವಾಗಿಸುವ ಆವರಣ ಬೇಡ 
ನೀನಿರದೆಯೂ ಇರುವಂತೆ ಭಾಸವಾಗುವ ನೆನಪು ಸಾಕು.... 

ಕಿವಿಗೊಡು ಪಿಸು ಮಾತಿಗೆ

ಕಿವಿಗೊಡು ಪಿಸು ಮಾತಿಗೆ 

ತುಸು ಕರೆದರೂ ಬಳಿಗೆ ಬಾ  
ಹಸಿ ಗಾಯಕೆ ನಿನ್ನ ನೆರಳ ಉಪಶಮನದ ನೆವವು 
ನಸುಕಲ್ಲಿಯ ಪಯಣದಲಿ
ಮಿಟುಕಿಸದಿರು ಕಣ್ಣುಗಳ 
ಅರೆ ಕ್ಷಣವೂ ನಿನ್ನ ಬಿಟ್ಟಿರಲಾರದು ಮನವು 

ನಶೆಯೊಳಗಿಂದೀಚೆಗೆ 
ಬಂದೆದುರಿಗೆ ನಿಂತ ನಿಲುವು-
-ಗನ್ನಡಿಯಲಿ ಕಾಣಿಸಿತ್ತು ಕೆನ್ನೆಗಂಟಿ ಪಸೆಯು 
ದೆಸೆಯೆಂಬುದು ಕಾಣದಾಗಿ
ಹುಸಿ ಬದುಕನು ನಡೆಸುವಲ್ಲಿ 
ಗಡಿಯಾರದ ಮುಳ್ಳು ಇರಿದಂತೆ ಪ್ರತಿ ಸಲವೂ 

ಹೇರಳವಾಗಿವೆ ನೆನಪು 
ಕಣ್ಣ ಕಾವಲು ದಾಟಿ 
ಹೊಮ್ಮುವಂತೆ ಮಾಡಿವೆ ಕಂಬನಿ ಸಾಲನ್ನು 
ಚೂರೇ ಅಂತರವಿದ್ದೂ 
ಅಂಧಕಾರ ಕವಿದಂತೆ 
ಇದ್ದಲ್ಲೇ ಉಳಿದು ನಾ ಕುರುಡು ಗಾವಿಲನು

ಸೋಲನು ಗೆದ್ದು ಬರಲು 
ಯಾವುದೇ ಸುಲಭಗಳಿಲ್ಲ 
ಕಠಿಣ ದಾರಿ ಹಿಡಿಯುವುದ ಯಾಕೆ ಕಲಿಸದಾದೆ?
ಬಿದ್ದಷ್ಟೇ ಸುಲಭಕ್ಕೆ 
ಮುಂದೂಡಿಸಲಾಗದೇ?
ಪ್ರೀತಿಯ ಬಲೆ ಮತ್ತಷ್ಟು ಗೋಜಲಾಗಿ ಹೋಗಿದೆ

ಮುಟ್ಟಿ ಹೋಗು, ತಟ್ಟಿ ಹೋಗು 
ಬಿಟ್ಟು ಹೊರಡುವ ಮುನ್ನ 
ಎಚ್ಚರದಲ್ಲುಳಿದಾಗ ಖಚಿತವೆನಿಸಲಿ ಎಲ್ಲ 
ಹಾಗಲ್ಲದೆ ದೂರಾದರೆ 
ದೇವರಾದರೂ ಸರಿಯೇ 
ನಂಬಿಕೆ ಮೂಡಿಸಿದರೂ ನಾ ನಂಬುವವನಲ್ಲ... 

Wednesday, 4 November 2020

ಸಾಗಿ ಹೊರಟ ದಾರಿಯಲಿ

ಸಾಗಿ ಹೊರಟ ದಾರಿಯಲಿ 

ಅಳಿಯದ ಹೆಜ್ಜೆಯ ಗುರುತು 
ಕೊಟ್ಟು ಮರೆತ ಮಾತಿನಲಿ 
ತೀರದ ನೋವಿನ ಗುರುತು 
ಕಲ್ಲ ಕೆತ್ತಿದ ಉಳಿಯಲ್ಲಿ 
ಕ್ಷಮೆಯಾಚನೆಯ ಗುರುತು 
ಮಣ್ಣ ಬೆರೆತ ಹನಿಯಲ್ಲಿ 
ಮೋಡವ ಕಟ್ಟುವ ಗುರುತು 

ಎಲ್ಲಿದೆ ನಿನ್ನ ಗುರುತು?
ಈಗೆಲ್ಲಿದೆ ನಿನ್ನ ಗುರುತು? 
ನಿನ್ನನೇ ನೀನು ಮರೆತು ಕೂತರೆ 
ಉಳಿವುದೇ ನಿನ್ನ ಗುರುತು?

ಗಂಧವ ತೇಯುತ ಹೋದಂತೆ 
ಹೊಮ್ಮುವ ದಿವ್ಯ ಘಮಲು 
ಸವೆದ ಕೋಲಿನ ಅಂಚಿನಲಿ 
ಜೀವಂತಿಕೆಯ ಗುರುತು 
ಬಳ್ಳಿಯಿಂದ ಬೇರ್ಪಟ್ಟು 
ಮೊಗ್ಗಿನ ಅವಸ್ಥೆ ದಾಟಿ 
ಅರಳಿದ ಹೂವಿನ ನಗುವಲ್ಲಿ 
ಕಿರು ಉತ್ಸಾಹದ ಗುರುತು 

ಎಲೆಮರೆ ಕಾಯಿಗಳೆಲ್ಲ 
ಕೊನೆಗೆ ಗೆದ್ದೆವು ಎಂದು 
ಕಲ್ಲಿನ ಹೊಡೆತವು ತಪ್ಪಿ 
ಕಾದು ಹಣ್ಣಾದೆವೆಂದು 
ಮರದ ಕುರಿತು ಹೇಳಲು 
ಹಸಿದ ಹಕ್ಕಿಗೆ ನೀಡಲು 
ಉಳಿದ ತನ್ನಲಿ ಕಾಣುವುದು 
ಸಂತೃಪ್ತಿಯ ಗುರುತು 

ದೂರದ ಬೆಟ್ಟದ ತುದಿಯಲ್ಲಿ 
ಕಟ್ಟಿದ ಗೋಪುರದಡಿಯಲ್ಲಿ 
ನೆಲೆಸಿದ ಮೂರ್ತಿಗೆ ನಿತ್ಯವೂ 
ಮೌನಾಚರಣೆಯ ಗುರುತು 
ಅಟ್ಟದ ಮೇಲೆ ಕಟ್ಟಿಟ್ಟು 
ಯಾರಿಗೂ ಕಾಣದೆ ಬಚ್ಚಿಟ್ಟು 
ಉಳಿಸಿದ ದವಸದ ಮೊಳಕೆಯಲಿ 
ತೆನೆ ತೂಗಾಡುವ ಗುರುತು 

ಬತ್ತಿದ ಕಾಲುವೆಗಳಿವು 
ದಟ್ಟ ಮೋಡವ ಕಂಡು 
ಎಲ್ಲೋ ಮುಂದೆ ಕರಗಬಲ್ಲವು 
ಎನ್ನುತ ಹಿಗ್ಗಿ ಬಿರಿದು 
ತುಂಬಿ ಹರಿದು ಜಲಸಿರಿ 
ಹೊತ್ತು ತಂದಿದೆ ಓಲೆಯ 
ಶುಭ ಸಂಕೇತದ ಕರೆಯೋಲೆ
ಹಸಿರು ಪಸರುವ ಗುರುತು... 

ಜೋಗುಳ ಪದ

ಮಲಗು ಮಲ್ಲಿಗೆ ಹೂವೆ

ಮಲಗು ಸಂಪಿಗೆ ಘಮಲೇ
ಮಲಗು ತಾಯ್ಮಡಿಲೊಳಗೆ ನಲಿವ ಕುಡಿಯೇ
ಮಲಗು ಚಂದಿರ ಮೊಗದಿ
ಶಾಂತ ಮುಗುಳಿನ ಗರಿಯ
ಹೊತ್ತು ತಣಿದಿರುವಂತೆ ಬಾಳ ಸಿರಿಯೇ

ಬೆಳಕು ಮುಗಿದಿದೆ ಇರುಳು
ಕವಿದುಕೊಂಡಿದೆ ಮಿನುಗೋ
ತಾರೆಗಳು ಲೆಕ್ಕ ಮೀರುವ ಸಂಖ್ಯೆಯಲ್ಲಿ
ಹೊತ್ತು ತರುತಿದೆ ತಂಪು
ಬೀಸಿ ಹೊರಟಿದೆ ಮುಂದೆ
ತಂಗಾಳಿಗೆ ಪಾಪ ಬಿಡುವೆಂಬುದೆಲ್ಲಿ

ಬೆಚ್ಚಿ ಬೀಳುವೆ ಏಕೆ?
ಬೆರಳ ಬಿಗಿಹಿಡಿಯುತ್ತ
ಗುಮ್ಮನಾದರೂ ತಾನು ಮುದ್ದುಗೈಯ್ಯುವನು
ಹಸಿದು ಕುಸುಕುವ ನಿನ್ನ
ಅಂಗೈಯ್ಯ ಹೂ ಮಾಡಿ
ಎದೆಗಪ್ಪಿ ಜೋಗುಳದಿ ಹಾಡಿ ತಣಿಸುವೆನು

ಮುಂಜಾವಿನ ಹೊನ್ನ
ಕಿರಣಗಳು ಮುತ್ತಿಟ್ಟು
ಕಾವಿಟ್ಟು ಕಾಯುತಿವೆ ಎಲ್ಲ ಕನಸುಗಳ
ಆಕಳಿಸಿ ಕಣ್ಬಿಟ್ಟು
ಜಗದ ಸಂತೃಪ್ತಿಯಲಿ
ನೀ ತೃಪ್ತನಾಗುವೆ ಅದು ಎಷ್ಟು ಸರಳ

ಇದ್ದಲ್ಲಿ ಉಸಿರಿಟ್ಟು 
ಕಾಣದಿರೆ ಕಂಗೆಟ್ಟು 
ಮತ್ತೆ ಹುಡುಕಲು ನಿನ್ನ ಅಚ್ಚು ಮೆಚ್ಚೆನಗೆ
ರಾಜಿಯಾಗದೆ ವಿಧಿಸು
ಶಿಸ್ತು ಷರತ್ತುಗಳ 
ನಿನ್ನ ಖುಷಿ ಕಾರ್ತಿಕದ ಪ್ರಣತಿ ಈ ಮನೆಗೆ 

ಬಿಡುಗಡೆ ಹೊಂದುತಲಿ 
ಸ್ವಾವಲಂಬಿಯ ರೀತಿ  
ಮತ್ತೆ ಹಿಡಿಯುವೆ ಬೆರಳ ಸಮತೋಲನಕ್ಕೆ 
ಆಕಾಶ ಭೂಮಿಯನು 
ಒಂದುಗೂಡಿಸೋ ಅಳು 
ಮಳ್ಳನೆಂಬಂತೆ ಮರು ಗಳಿಗೆಯಲಿ ನಕ್ಕೆ 

ತುತ್ತು ಕಾಯಲಿ ನಿನ್ನ 
ಮುತ್ತಿಟ್ಟು ಅಕ್ಕರೆಯ 
ಎರೆಯುತ್ತ ರೂಪಿಸುವ ಚಂದ ಕಸುಬೆನಗೆ 
ನಿನ್ನ ಒಗಟಿನ ನುಡಿಗೆ 
ನಾ ಅಲ್ಪನಾಗುತ್ತ 
ಉತ್ತರವ ನೀಡದೆ ಸೋಲುವೆನು ಕೊನೆಗೆ 

ವಿದಾಯವಲ್ಲ ಇದು ಸಣ್ಣ ವಿರಾಮ

ವಿದಾಯವಲ್ಲ ಇದು ಸಣ್ಣ ವಿರಾಮ 

ಮತ್ತೆ ಚೈತನ್ಯ ತುಂಬಿಕೊಳ್ಳುವ ತಾಲೀಮು 
ಆದ ತಪ್ಪುಗಳ ಆತ್ಮಾವಲೋಕನಕ್ಕೆ ಸಕಾಲ 
ನಾಳೆಗಳ ಸ್ವೀಕಾರಕ್ಕೆ ಗಹನವಾದ ಚಿಂತನೆ 

ಮರ ಕಡಿದು ಆಸರೆ ಕಳೆದುಕೊಂಡ ಬಳ್ಳಿ 
ಬಿದ್ದಲ್ಲಿಂದಲೇ ಬೇರೊಂದು ಜೊತೆ ಹುಡುಕಿದಂತೆ 
ಬೇರು ಇರುವ ತನಕ, ಚಿಗುರು ಬಿಡುವ ತನಕ 
ಹೊಸ ದಿಕ್ಕು, ಹೊಸ ದಾರಿ ಹುಡುಕಾಟವೇ ಬದುಕು 

ದುಡುಕಿ ಆಡಿದ ಪದ, ಕೆಡುಕು ಮಾಡಿದ ಮನ 
ತಿದ್ದುಕೊಳ್ಳಲಿಕ್ಕಲ್ಲವೇ ಸಮಯ ನವೀಕರಿಸಿಕೊಳ್ಳುವುದು?
ಬೇಡದಿದ್ದರೂ ಬೆಳಕು ಮೂಡುವುದು
ತಡೆದು ನಿಂತರೂ ಕತ್ತಲಾಗುವುದು 
ಎಲ್ಲಕ್ಕೂ ಉತ್ತರಿಸಬೇಕಾದ ತುರ್ತೇನೂ ಇಲ್ಲ 
ಉತ್ತರಿಸಲೇ ಬೇಕಿರುವೆ ಹೊಣೆಯಂತೂ ಇದ್ದೇ ಇದೆ 

ಬಚ್ಚಿಟ್ಟ ಸತ್ಯವ ಬಿಚ್ಚಿಟ್ಟು ಹಗುರಾಗಿ 
ಜಾತ್ರೆಯ ನೆರಳಿಗೆ ಬೆಚ್ಚುವ ಅಗತ್ಯವಿಲ್ಲ 
ಅನುಮಾನದಲಿ ಜಗವ ಎದುರುಗೊಳ್ಳುವ ಬದಲು 
ಅನುಬಂಧಗಳ ಸರಪಳಿಯ ಕೊಂಡಿ ಹಿಡಿವುದೇ ಸೂಕ್ತ

ಬೆಳಕು, ಕಿಡಿ ಒಂದೇ ಗರ್ಭದ ಕುಡಿಗಳು 
ಬೆಳಕು ಕಿಚ್ಚಾಗಿ, ಕಿಚ್ಚು ಬೆಳಕಾದ ನಿದರ್ಶನಗಳೂ ಇವೆ 
ತಿರುಗು ಬಾಣವ ಅಡಗಿ ಹೂಡಿದರೇನು 
ಇಟ್ಟ ಗುರಿ ತಪ್ಪಿದರೂ, ಇಟ್ಟವರಲ್ಲ 

ಬಿಟ್ಟು ಹೊರಟಲ್ಲೇ ಹುಡುಕಿದರೆ ಕಳುವಾದುದ 
ಸಿಕ್ಕರೂ ಸಿಗಬಹುದು ಬೇಕಾದ ಗುರುತು 
ಅಸ್ತಿತ್ವ ಇರದಲ್ಲಿ ಇದ್ದು ಸಾಧಿಸುವುದೇನಿದೆ 
ಗಳಿಸಿ ಉಳಿಸಿಕೊಳ್ಳುವ ಆತ್ಮಾಭಿಮಾನದ ಸಲುವಾಗಿ... 

ಎತ್ತಿನ್ ಬಂಡಿ ಚಕ್ರಕ್ಕೊಂದು ಸತ್ಯ ಗೊತ್ತೈತೆ

ಎತ್ತಿನ್ ಬಂಡಿ ಚಕ್ರಕ್ಕೊಂದು ಸತ್ಯ ಗೊತ್ತೈತೆ 

ಬಂದ ದಾರಿ ಮಧ್ಯೆ ಒಂದು ಹಳ್ಳ ಇತ್ತಂತೆ 
ಹಳ್ಳ ತಪ್ಪಿದ್ದೆಂಗೆ ಅಂತ ಯಾರ್ಗೂ ಗೊತ್ತಿಲ್ಲ 
ಕೇಳೋಣಾಂದ್ರೆ ಪಾಪ ಎತ್ಗೊಳ್ಗ್ ಮಾತೇ ಬರಲ್ಲ 

ಹುಲ್ಲಿನ್ ಹಾಸ್ಗೆ ಮೇಲೆ ಕೂತು ಚಾಟಿ ಬೀಸೋನು 
ಹೆಚ್ಚೇನಿಲ್ಲ ಹೊತ್ಸಿಟ್ಟವ್ನೆ ಮಂಕು ಲಾಟೀನು 
ಕಾಲಿಗ್ ಕಟ್ಟಿದ್ ಗೆಜ್ಜೆ ನಾದ ಮಾಂಪ್ರು ತರ್ಸಿತ್ತು 
ಊರ್ದಾರಿ ಬಿಟ್ಟು ಬಂಡಿ ದೂರ ಸಾಗಿತ್ತು 

ಹಿಂದೆ ಕಾಡು, ಮುಂದೆ ಕಾಡು, ಸುತ್ಲೂ ಕಗ್ಗತ್ಲು 
ಎಂದೋ ಬೈಕೊಂಡಿದ್ಕೆ ಪತ್ತೆ ಇಲ್ಲ ಬೆಳ್ದಿಂಗ್ಳೂ 
ಮರ್ಗಳ್ ಶಬ್ಧ ಮಾಡ್ಬೋದಿತ್ತು ಯಾಕೋ ಅವತ್ತು 
ಗಾಳಿ ಸತ್ತಂಗಿತ್ತು ಬಾಯಿಗ್ ಬೀಗ ಹಾಕ್ಕೊಂಡು 

ಗೂಬೆ ಕೂಗಿ ಗುಂಡ್ಗೆ ಧಡ ಧಡ ಅಲ್ಲಾಡೋಗಿತ್ತು 
ನರಿಗಳ್ಗೇನೋ ಬಾದೆ ಆಗಾಗ್ ಬಾಯ್ಬೊಡ್ಕೋತಿತ್ತು 
ಕೊಂಬಿನ್ನೇರ ಯಾರೋ ದೂರ್ದಲ್ ಕಂಡಂಗೇ ಕಂಡು 
ಮಾಯಾ ಆಗ್ವಾಗ್ ದೆವ್ವ ತಲೆ ಮೇಲ್ ಕೂತಂಗೆ ಖುದ್ದು 

ಅವ್ವ ಕಟ್ಟಿದ್ ಆಂಜಿನೇಯನ್ ಯಂತ್ರ ನೆನ್ಪಾಗಿ 
ಕಣ್ಣು ಮುಚ್ಚಿ ಮುಷ್ಠಿಲಿಡ್ದು ಜೋರಾಗ್ ಕೂಗ್ಕೊಂಡೆ   
ಧೋ ಅಂತ ಮಳೆ ಬಿದ್ದಂಗ್ ಕಣ್ಬಿಟ್ನೋಡಿದ್ರೆ 
"ಹೊತ್ತು-ಗೊತ್ತು ಇಲ್ಲ" ಅಂತ ಅವ್ವ ಬೈತಿದ್ಲು 

ಗಾಡಿ ಕಟ್ಟು ಸಂತೆಗೋಗಿ ಬರಿವೆ ಅಂತಂದ್ಲು 
"ಹಗ್ಲ್-ಗನ್ಸು ನಿಜ್ವಾಯ್ತದೆ ಅಲ್ವಾ?" ಅಂತಂದೆ 
"ನೆನ್ನೆ ಗಂಟ ರಾಜ್ಕುಮಾರನ್ ಕನ್ಸ ಕಾಣ್ತಿದ್ದೆ" 
"ಆದ್ರೂ ಭೂಮಿಗ್ ಭಾರ ಎದ್ದೋಗ್ ಕ್ಯಾಮೆ ನೋಡಂದ್ಲು"  

ಯಾವತ್ನಂಗೆ ಎತ್ಗೋಳ್ ಭುಜಕ್ಕೆ ನೊಗನ ಕಟ್ಕೊಂಡು 
ಚಕ್ರ ಪಕ್ರ, ಆಚೆ ಈಚೆ ಕಣ್ಣು ಹಾಯ್ಸ್ಕೊಂಡು 
ಕತ್ಲಾದ್ರಿರ್ಲಿ ಅಂತ ಲಾಟೀನ್ ಕೊಟ್ಳು ನನ್ನವ್ವ  
ಹಳ್ಳ ಗಿಳ್ಳ ಕಂಡ್ರೆ ಹಂಗೇ ಒದ್ದಾಡೋದ್ ಜೀವ... 

ಮಂಜಿನ ಪರದೆ

ಮಂಜಿನ ಪರದೆಯ ಹಿಂದಿನ ಮಾತುಗಳೆಲ್ಲವೂ ಹೀಗೇನೇ 

ಅಂಗೈ ಸವರಿ ಕೆನ್ನೆಯ ಬೆಚ್ಚಗೆ ಇರಿಸುವ ಹಾಗೇನೇ 
ತೂಕಡಿಸುತ್ತಲೇ ಎಚ್ಚರ ತಾಳುತ ಭಾವನೆಗಳ ತೋರಿ 
ಚಳಿಗೆ ನಡುಗುವ ತುಟಿಗಳೂ ಹಾಡಿವೆ ಬಯಕೆಯ ಹಾಡನ್ನೇ 

ಎಲ್ಲೋ ಕಳೆದ ಮಧುರ ಕ್ಷಣಗಳ ಮತ್ತೆ ಎಳೆತಂದು 
ಎಳೆ ಎಳೆಯಾಗಿ ಬಿಡಿಸಿ ಕೂತರೆ ಸಮಯ ನಿಂತಂತೆ 
ಒಂದೊಂದ ಮತ್ತೊಂದಕ್ಕೆ ಪೋಣಿಸಿ ಕೂರುವ ವೇಳೆ 
ಬೆಳಗೋ ಮೇಣ ಸುಮ್ಮನೆ ನೋಡುತ ಕರಗಿ ಹೋದಂತೆ 

ಗಾಜಿನ ಮೇಲೆ ವಾಲಿತು ಬಿಸಿಲು ಕರಗಿಸಲು ಹಿಮವ
ಗಳಿಗೆಗೆ ವಿಧವಿಧ ರೂಪವ ಪಡೆದು ಚಿತ್ರವು ಪರಾಭವ 
ಓಲೈಸುವ ಇಬ್ಬನಿ ಕಾದಿದೆ ಮರದೆಲೆಗಳ ಅಂಚಲ್ಲಿ 
ಸಾಕಾದರೂ ಬೇಕಾಗಿಯೇ ಹಿಡಿದಿವೆ ಕಿರಣವ ಸೆಳೆಯುತಲಿ 

ಮನಸು ಮನಸುಗಳ ನಡುವೆ ಕವಿದಿದ್ದ ದಟ್ಟಣೆಯ
ಸರಿಸುವ ಕಾಲಕೆ ಬೆತ್ತಲೆಗೊಳ್ಳುವ ಮಗುವಿನ ಮುಗ್ಧತೆಯು 
ತೊಡುವ ಬಣ್ಣಕೆ ಬೆಳೆದ ಅಂತರ ಮೇಲು-ಕೀಳೆನುತ
ಬಿಟ್ಟು ಹೊರಟಿದೆ ಆವಿಯು "ಮತ್ತೆ ಸಂಧಿಸುವ" ಎನುತ 

ಮೋಡದ ಒಳಗೆ ಮಾಗಿದ ಹನಿಗಳು ಮಳೆಗೆ ಸಜ್ಜಾಗಿ  
ಪರಿತಪಿಸುವ ನೆಲವನ್ನು ತಲುಪಲು ರೂಪಾಂತರಗೊಂಡು 
ಹಿಮವೋ, ಮಂಜೋ, ಆಲಿಕಲ್ಲೋ ಅಥವ ಬರಿ ಹನಿಯೋ 
ಹೇಗೇ ಸಿಕ್ಕರೂ ಅಷ್ಟೇ ಅಕ್ಕರೆ ವರ್ಷ ಋತುಮಾನ... 

Monday, 26 October 2020

ಕವಿ ಮತ್ತು ಚಂದ್ರ 

ಅರೆ ಚಂದಿರ ಮೊಗವ

ಮುಗಿಲ ಹೆಗಲಿಗಿರಿಸಿ 
ಸುಮ್ಮನೆ ಕಣ್ಮುಚ್ಚಿಹನು,
ಗಮನಿಸಿದ ಪ್ರೇಮಿ  
ವಿರಹಿಯ ಸೋಗಿನಲ್ಲಿ 
ಶೋಕ ಗೀತೆ ಬರೆದಿಹನು

"ಏನು ಆ ಕಲೆ?"
"ಪಸೆ" ಎಂದ ಚಂದ್ರ
ತನ್ನ ಕೆನ್ನೆ ಸವರಿಕೊಂಡ
ಪ್ರೇಮಿ ನೆನೆದು ಸಖಿಯ
ಮುಂದುವರಿದ ಮಾತು-ಕತೆ 
ಸತ್ವಹೀನವೆಂಬಂತೆ 
ಕುಸಿ ಕುಸಿಯಿತು ಕವಿತೆ..

"ಖಾಲಿ ಬಿಟ್ಟ ಸ್ಥಳವ
ತುಂಬಿಕೊಳ್ಳಲೇನು?"
ಅಪ್ಪಣೆಗೆ ಕಾದಿತ್ತು 
ಕಣ್ಣಂಚಲಿ ಕಂಬನಿ
ರೆಪ್ಪೆ ಒಪ್ಪಿಗೆ ಕೊಡುತಲೇ 
ಜಾರಿ ಹಾಳೆಯ ತಬ್ಬಿ
ಮೈ ಚೆಲ್ಲಿಕೊಂಡಿತು 

ಬಹುಶಃ ಚಂದ್ರನೂ 
ಏನನ್ನೋ ಗೀಚುತಿದ್ದ  
ಮಸಿ ಮೋಡಗಳು 
ದುಂಡಗೆ ಅಕ್ಷರದಂತೆ 
ಅಲ್ಲಲ್ಲಿ ಬಿಡಿಯಾಗಿ 
ಮುಂದೆಲ್ಲೋ ಬಿಗಿಯಾಗಿ 
ಲಿಪಿಯನ್ನು ಹೋಲುತಿತ್ತು 

ಆಗಸಕ್ಕೆ ಕಣ್ಣು ನೆಟ್ಟು 
ಕೆನ್ನೆಗೆ ಆನಿಸಿ ಬೆಟ್ಟು 
ಏನೋ ಹೊಳೆದಂತೆ 
ಬರೆದು ಒಡೆದಂತೆ 
ಮತ್ತೆ ಬೆಳದಿಂಗಳನ್ನು 
ಸೀಳಿ ಹೊರಟ ನೋಟ 
ತಿಳಿ ಮೋಡ ಪರದೆ ಹಿಂದೆ 
ಮಸಲತ್ತಿನ ಆಟ 

ಕಾಗದದ ಉಂಡೆ ರಾಶಿ 
ತನ್ನ ಸುತ್ತ, ಪ್ರೇಮಿ ತಾನು 
ಏನು ಬರೆಯಲೆತ್ನಿಸಿದರೂ 
ಕೈಲಾಗದೆ ಸೋತ 
ಎಷ್ಟೋ ಕವಿತೆಯ ಕಟ್ಟಿ 
ಎಷ್ಟೋ ಕವಿಗಳ ಮುಟ್ಟಿ 
ವಿರಹಿಯ ತಲುಪದ ಚಂದ್ರ 
ಮುಖ ಊದಿಸಿ ಕೂತ 

ನಡು ರಾತ್ರೆ ನಿದ್ದೆಯಲ್ಲಿ 
ಲೋಕ ಮೈ ಮರೆತಿರಲು 
ಇಳಿದು ಬಂದ ಭುವಿಗೆ 
ಉಂಡೆಗಳ ಹರಡುತ 
ಅಲ್ಲೊಂದು ಇಲ್ಲೊಂದು 
ಸಾಲಗಳ ಹೆಕ್ಕಿ 
ವಿರಹಿಯ ಮನಸಿಗಿಟ್ಟು 
ಕರಗಿದ ಬಿಟ್ಟ ಚಂದ್ರ 

ಎಚ್ಚರಗೊಂಡವ ತನ್ನ 
ತನ್ನಲ್ಲೇ ಒಗ್ಗೂಡಿಸಿ  
ಏನೋ ಹೊಳೆದವನಂತೆ 
ಚಡಪಡಿಸುತಲಿದ್ದ ಕವಿ 
ಅರೆ ಬೆಂದ ಸಾಲುಗಳ 
ಪೂರ್ಣಗೊಳಿಸಿ ಹಾಡಿದ 
ತೂಕಡಿಸುತ್ತಿದ್ದ ಚಂದ್ರ 
ಸುಖ ನಿದ್ದೆಗೆ ಜಾರಿದ.... 

ಇನ್ನೆಷ್ಟು ಸನಿಹ ಬರಬೇಕು

ಇನ್ನೆಷ್ಟು ಸನಿಹ ಬರಬೇಕು ನಾನು ನಿನ್ನುಸಿರ ಸೇವಿಸೋಕೆ

ಇನ್ನೆಷ್ಟು ದಿವಸ ಈ ಒಂಟಿ ಪಯಣ? ಒಲವಾಯಿತೆಂಬ ಶಂಕೆ!

ಗಾಯಕ್ಕೆ ಇಟ್ಟ ಕಣ್ಣೀರ ಮದ್ದು, ಹೃದಕ್ಕೆ ನೆನಪ ನೋವು
ನಿಮಿಷಕ್ಕೆ ಸಿಕ್ಕು ಕ್ಷಣದಲ್ಲಿ ದೂರ, ಗಡಿಯಾರ ಮುಳ್ಳು ನಾವು

ಕಳೆದದ್ದು ಸುಳ್ಳು ಹಾಗಿದ್ದೂ ಕೂಡ ಒಂದಾಗುವಾಸೆ ಏಕೆ?
ಒಂದೊಂದೇ ಪದವ ನೀಡುತ್ತಾ ಹೋಗು ಈ ಶೂನ್ಯ ನೀಗಿಸೋಕೆ

ಹಾಲಂತೆ ನೀನು ಒಡೆದಾಗ ನಾನು ಸಹಿಸೋದು ಹೇಗೆ ಹೇಳು?
ಈ ನನ್ನ ದುಃಖ ದುಮ್ಮಾನದಲ್ಲಿ ನಿನಗುಂಟು ಅರ್ಧ ಪಾಲು

ಕಂಡಂತೆ ಕಂಡು ಮರೆಯಾಗೋ ಆಟ ಮುರಿದಂತೆ ಕೊಟ್ಟ ಮಾತ
ಪಳಗುತ್ತ ಹಾಗೆ ಕಲಿಯೋಣವೇನು ಮನಸಿಟ್ಟು ಪ್ರೇಮ ಪಾಠ?

ಬಿಳಿ ಹಾಳೆಯಂಥ ಬಾಳಲ್ಲಿ ಹಾಗೆ ಒಂದಿಷ್ಟು ಬಣ್ಣ ಚೆಲ್ಲು
ಕಣ್ಣಲ್ಲಿ ಕಣ್ಣು ಇಟ್ಟಾಗ ಕರಗೋ ಕಾಡಿಗೆಯ ಕದ್ದು ಕೇಳು

ಗುರಿ ಮಾಡು ನಿನ್ನ ಕೋಪಕ್ಕೆ ನನ್ನ ನಗುವಲ್ಲಿ ಸಿದ್ಧನಾದೆ
ನೀ ನೆಟ್ಟ ಪ್ರೇಮ ಹೆಮ್ಮರದ ಕೆಳಗೆ ಧ್ಯಾನಿಸುವ ಬುದ್ಧನಾದೆ!

Thursday, 22 October 2020

ನೆತ್ತಿ ಮೇಲೆ ರಂಗು ಬಳಿದ ತುಂಬು ಚಂದಿರ

ನೆತ್ತಿ ಮೇಲೆ ರಂಗು ಬಳಿದ ತುಂಬು ಚಂದಿರ 

ಹೊತ್ತು ಬರುವೆ ನನ್ನ ಮನವ ತಂಪುಗೊಳಿಸೆ ನೀ
ಚಂದ್ರನಿಂದ ಎರವಲಾಗಿ ಪಡೆದ ಜೋನ್ನಲಿ 
ಮಿನುಗುವಂತೆ ಹೂವಿನೊಡಲ ತಬ್ಬಿದಿಬ್ಬನಿ 

ಏನು ನಿನ್ನ ಹೆಸರು ಯಾವ ಲೋಕ ನಿನ್ನದು?
ಕೇಳಲಿಲ್ಲ ಅಷ್ಟರಲ್ಲೇ ಆಪ್ತಳಾಗುವೆ 
ಹೇಳಬೇಕು ಅನಿಸುವಷ್ಟು ಆಸೆ ನನ್ನಲಿ 
ನಾಲಿಗೆ ನುಲಿದ ಹಾಗೆ ಸುಮ್ಮನಾಗುವೆ 

ಬುಟ್ಟಿ ತುಂಬ ಶ್ವೇತ ಪುಷ್ಪ ನಡುವೆ ಮರೆಯಲಿ 
ಗುಡಿಯ ಮೀರಿ ಎದುರುಗೊಂಡೆ ಏನು ಕಾರಣ?
ಆಗಲೇ ಕೆನ್ನೆಗೆಂಪು ಹೂವಿಗಿಳಿದಿದೆ 
ಪ್ರೇಮ ದೇವರೊಲಿಯದಿರಲು ತುಂಬ ದಾರುಣ 

ರೂಪುರೇಷೆ ಹಾಕಿಕೊಂಡು ಭೇಟಿ ಮಾಡುವೆ 
ಸಾಧ್ಯವಾದಷ್ಟೂ ಅದಕೆ ಅಂಟಿಕೊಳ್ಳುತಾ 
ಭಾಷೆ ಇಷ್ಟು ಸಡಿಲವೇಕೆ ನಗುವಿನೆದುರಲಿ 
ಹಾಗಾಗಿ ಆಗಿ ಬಿಡುವೆ ಮೂಕ ವಿಸ್ಮಿತ 

ಕದ್ದು ಹೃದಯ ಖಾಲಿ ಬಿಟ್ಟ ಜಾಗದಲ್ಲಿದೋ 
ತಾಜ ಮಹಲೂ ನಾಚುವಂಥ ಪ್ರೇಮ ಸ್ಮಾರಕ  
ಪೂರ್ತಿ ನಿನ್ನ ಹೆಸರಲೀಗ ಖಾತೆ ಮಾಡುವೆ 
ತುಟಿಗೆ ತುಟಿಯ ಒಪ್ಪಿಗೆ ಪಡೆವ ಮೂಲಕ... 

Thursday, 15 October 2020

ಗಾಢವಾದ ಪ್ರೀತಿಯಲ್ಲಿ ಬೀಳಬೇಕು ಒಮ್ಮೆ ಹಾಗೆ

ಗಾಢವಾದ ಪ್ರೀತಿಯಲ್ಲಿ ಬೀಳಬೇಕು ಒಮ್ಮೆ ಹಾಗೆ 

ಯಾವ ತಂಟೆ ಇಲ್ಲದಂತೆ ನಿನ್ನ ತೋಳಲಿ 
ರೂಢಿಯಾಗಿ ನಿನ್ನ ಹಿಂದೆ ಸಾಗಿ ಬಂದೆ ಸೋತ ಹಾಗೆ 
ಬಿಂಬವಾಗಲೇನು ನಿನ್ನ ಖಾಲಿ ಕಣ್ಣಲಿ 

ದೂರವೇನು ಸನಿಹವೆನು ಹೃದಯ ಮಾತಿಗಿಳಿಯುವಾಗ 
ಒಂದು ಮಿಡಿತದಲ್ಲಿ ನೂರು ಭಾವ ಹೊಮ್ಮಿತು 
ಪದ್ಯವೇನು ರಾಗವೇನು ಮೌನ ತಾನೇ ಹಾಡುವಾಗ 
ನೋಟದಲ್ಲೇ ಪೂರ್ತಿಯಾಗಿ ಅರ್ಥವಾಯಿತು 

ಒಂಟಿ ಸ್ವಪ್ನದಲ್ಲಿ ಏನೋ ಮಂಕು ಬಳಿದ ಶಂಕೆ ಮೂಡಿ 
ಸತ್ವ ಹೀನ ಕನಸುಗಳನು ಗಂಟು ಕಟ್ಟುವೆ 
ನೀನು ಇರದ ಸ್ವರ್ಗವಾದರೇನು ಕಿಚ್ಚು ಹಚ್ಚಿ ಬರುವೆ 
ನಿನ್ನ ನೆರಳ ಪತ್ತೆ ಹಚ್ಚಿ ಧನ್ಯನಾಗುವೆ 

ಕದ್ದು ನೋಡುವಾಗ ವಾರೆ ನೋಟದಲ್ಲಿ ವಾಹ್ ರೇ ವಾಹ್ 
ಮುದ್ದು ಬಹಳ ಮುದ್ದು ನೀನು ಹೊದ್ದು ಅಂದವ
ಹೆಚ್ಚು ಕಾಯಿಸುತ್ತಾ ಶಾಪಗ್ರಸ್ತನಾಗಿ ಬಿಡುವೆನು 
ನಾನೇ ಬೇಕೆಂದು ಆಸೆ ಹಿಡಿದು ಇಟ್ಟವ 

ಇಷ್ಟು ಜರುಗಿ ಏನೂ ನಡೆಯದಂತೆ ನಟಿಸಲೆಷ್ಟು ಕಠಿಣ 
ದಾರಿ ಕಾಣದಂತೆ ನಿಂತು ಬಿಡುವೆ ಸುಮ್ಮನೆ 
ಲೋಕ ಮರೆತು ತಬ್ಬುವಾಗ ತಬ್ಬಿಬ್ಬು ಆಗಲೇಕೆ?
ಚಂದ್ರ, ಚುಕ್ಕಿ ದಿಟ್ಟಿಸುತ್ತ ನೋಡಲೆಮ್ಮನೇ!

ನೂರು ಮಾತು ಬಂದು ಹೋಗಿ ಚುಚ್ಚಿದಂತೆ ತೋಚಿದಾಗ 
ಕೋಪವನ್ನು ಕಚ್ಚಿಯಿಟ್ಟು ಪ್ರೀತಿ ಮಾಡುವ 
ಇಲ್ಲದವರು ಬಡವರೆಂದು, ಪಾಪ ಇಲ್ಲವಾಗಿ ನೊಂದು 
ಚುಚ್ಚು ಮಾತನಾಡಿಯಾರು ಕ್ಷಮಿಸಿ ನೋಡುವ 

ದಾರಿ ಇನ್ನೂ ದೂರ ಸಾಗಿ, ಪಯಣವೆಷ್ಟು ಸಣ್ಣದೆಂದು 
ಅನಿಸುವಲ್ಲಿ ಮತ್ತೆ ಹೊರಡಿಸೋಣ ಹೊಸತನು 
ನಾಳೆಗಳಿವು ಮುಳ್ಳು ಹಾದಿಯಾಗಿ ಮಾರ್ಪಡಲು ಬಹುದು 
ಹೆಜ್ಜೆ ಇರಿಸುವ ಹಾಸಿ ಮಧುರ ನೆನಪನು... 



https://youtu.be/036aagJd6U0

ಸರಿಗಾಮೆ ಪದನಿಸೇ

 ಹೇ... ಹೇ... ಹೇ.. 

Say ಸ, say ರಿ, say ಗ, say ಮೇ.. say what?
ಬದಲಾಯಿಸೆ,  ಬದಲಾಯಿಸೆ,  ಬದಲಾಯಿಸೆ.. that's what we say
ಸರಿಗಾಮೆ ಪದನಿಸೇ 
ಬದಲಾಯಿಸೆ that's what we say
ಸರಿಗಾಮೆ ಪದನಿಸೇ 
ಬದಲಾಯಿಸೆ that's what we say
ಸೇರಿಸು ಲಕ್ಕು ಕಾಲ್ಕಿಲೋ 
ಲಾಸು ಕಾಲ್ಕಿಲೋ, ಲೇಬರ್ ಕಾಲ್ಕಿಲೋ 
ಕೂಡುತಾ ಭಕ್ತಿ ಕಾಲ್ಕಿಲೋ 
ಹೋಪು ಕಾಲ್ಕಿಲೋ, ಟ್ಯಾಲೆಂಟ್ ಕಾಲ್ಕಿಲೋ 
ಎಲ್ಲವ ಒಂದುಗೂಡಿಸಿ ಕಟ್ಟು ನಿನ್ನದೇ secret of success

ಸರಿಗಾಮೆ ಪದನಿಸೇ 
ಬದಲಾಯಿಸೆ that's what we say
ಈ ಹಾಡಿದು ನಮ್ಮದೇ ಹೇಯ್ 
ಏನೇ ಬರಲಿ ಹಾಡೋಕೆ ಸೈ 
To be a star
We'll show you how
Reach for the sky
and never never give it up

ಓಹೋ.... ಹಾಡೇ ವಿಜಯದ ಸಂಕೇತ... 

ಗೋಡೆ ಹತ್ತಿ ಕೂತು ಬಿಟ್ಟಿ ಮಾತನಾಡಿ 
ಪ್ರೀತಿ ಮಾಡುತ ಪಾಠ ಕಲಿಯೋದಿಲ್ವ
adolescent ಏಜು ಬೇಕಿದ್ದನ್ನ ಕೋರಿ 
ಏಟು ತಿಂದು ತಿದ್ದಿಕೊಂಡೋರಲ್ವ 
ತಪ್ಪನ್ನು ಮಾಡುತ ಮುಂದೆ, ಸರಿಯಾದ ದಾರಿಯ ಹಿಡಿದೋ 
mistakes are the secret of success
ನಾವು ಎಲ್ಲೆ ದಾಟುತಾ ಹೊರಟು ಮನವ 
ದೋಚಿಕೊಂಡೆವು ಒಲವ ಜೊತೆಗೆ 
love is the secret of success

ಸರಿಗಾಮೆ ಪದನಿಸೇ 
ಬದಲಾಯಿಸೆ that's what we say
ಸರಿಗಾಮೆ ಪದನಿಸೇ 
ಬದಲಾಯಿಸೆ that's what we say

Here we come here we comin
Yeah..we comin up with something and
U know that we are bringing it to number one
Full of fun and laughter
Coming' a little faster
Yeah you know we are having fun  
ಮಂಗನಂತೆ, ಉಡದಂತೆ ಸಿಕ್ಕಿದ್ದೆಲ್ಲಾ ಹಿಡಿ ಹಿಡಿ 
ಹೇಳಿ ಕೇಳಿ ಬರೋದಿಲ್ಲ ಅವಕಾಶ 
announce ಮಾಡಿ ಬಂದರೂ, label ಅಂಟಿ ಬಂದರೂ 
ಹೇಗೇ ಬಂದರೂ ಸಹ seize the day

ಸರಿಗಾಮೆ ಪದನಿಸೇ 
ಬದಲಾಯಿಸೆ that's what we say
ಈ ಹಾಡಿದು ನಮ್ಮದೇ ಹೇಯ್ 
ಏನೇ ಬರಲಿ ಹಾಡೋಕೆ ಸೈ 
To be a star
We'll show you how
Reach for the sky
and never never give it up

ಎದ್ದರೂ ಬಿದ್ದರೂ ಕಷ್ಟವೇ ಆದರೂ 
ನುಗ್ಗಿ ಗಟ್ಟಿಯಾಗಿ ನಾ ಹೇಳುವೆನು 
ಗೆಲುವಿಗೆ secret, ಗೆಲುವಿಗೆ shortcut
ಎಂದಿಗೂ ಎಂದಿಗೂ ಪರಿಶ್ರಮವೇ 
ಶ್ರಮವೇ ವಿಜಯದ ರಹದಾರಿ.. 

Monday, 12 October 2020

ಅಲೆ ಅಲೆ ....

ಜಿಗಿಯುತ ಹಾಗೆ ಮೋಡ ತಾಕಿದೆ 

ಹಾರುವ ಆಸೆ ರೆಕ್ಕೆ ಪಡೆದಿದೆ 
ರೆಕ್ಕೆಯ ಬೀಸಿ ಬಯಕೆ ಹಾಡಿದೆ 
ಹಾಡಿಗೆ ಕುಣಿದು ಹೂವು ಅರಳಿದೆ 

ಅಲೆ  ಅಲೆ .... 

ಹೇ ನಿನ್ನತ್ತ ಮೋಹಗೊಂಡು ಮಿಡಿವೆ 
ಒಂದೊಂದು ಮಾತಿನಲ್ಲೂ ನಗುವೆ 
ಇನ್ನಷ್ಟು ಹತ್ತಿರಕ್ಕೆ ಬರುವೆ.. ನಾಚಿಕೆಯಾ?

ನಾ ಕಣ್ಣಲ್ಲಿ ಕಣ್ಣನಿಟ್ಟು ಕರೆವೆ .. ಕರಗುವೆಯಾ?

ಅಲೆ  ಅಲೆ .... 

ಪ್ರೀತಿಗೆ ಸಂದ ಜಯವೇ 
ಇದು ದಾರಿ ತೋರೋ ಗುರುವೇ 
ಬೇಡದೆ ಬಂದ ವರವೇ  .. ಓ.. 


ಒಲವೆನುವ ಈ ಸೆರೆಮನೆಯ 
ತಲುಪಿರುವೆ ನೀ ಬಂಧಿಸೆಯಾ?
ಉಸಿರಿಡಿದು ನಾ ಕಾದಿರುವೆ 
ಕರುಣಿಸು ಬಾ ನೀ ಬಿಡುಗಡೆಯ

ಹುಡುಕಾಟಕೂ ಮುನ್ನವೇ ಹಿಡಿಯುವೆ 
ಈ ಆಟದಿ ಸೋತರೂ ಸುಖಮಯವೇ 
ಅಲೆ  ಅಲೆ .... 
ತಡ ಮಾಡದೆ ತಾಕಿಸು ಬೆರಳನು 
ಖುಷಿಯಲ್ಲಿ ಜಾರಿದೆ ಕಂಬನಿಯೇ 

ಪ್ರೀತಿಗೆ ಸಂದ ಜಯವೇ 
ಇದು ದಾರಿ ತೋರೋ ಗುರುವೇ 
ಬೇಡದೆ ಬಂದ ವರವೇ  .. ಓ.. 


ಹೊಸ ಬಗೆಯ ಈ ಅನುಭವಕೆ 
ರಸಿಕತೆಯ ಮಳೆಗರೆಯುತಿದೆ 
ಜನುಮಗಳ ಹೊಂದಿಸಿ ಕಳೆದು
ಈ ಜನುಮ ಮರುಕಳಿಸಿಹುದೇ

ಕರಾರು ಮಾಡುವೆ ಬಂದರೆ
ಹಣೆಗೊಂದು ಮುತ್ತನು ನೀಡುತಲಿ
ಅಲೆ ಅಲೆ ....
ಗೆರೆ ದಾಟಿ ಬರುವೆನು ಭರದಲಿ
ಎದೆಯಾಳ ತಲುಪುವೆ ಮುಳುಗುತಲಿ

ಪ್ರೀತಿಗೆ ಸಂದ ಜಯವೇ 
ಇದು ದಾರಿ ತೋರೋ ಗುರುವೇ 
ಬೇಡದೆ ಬಂದ ವರವೇ  .. ಓ.. 

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...