Thursday, 31 March 2016

ಮನೆ ತುಂಬಬೇಕು

ಜೋಳಿಗೆ ಕಟ್ಟಬೇಕು
ಉಪ್ಪರಿಗೆ ಗಟ್ಟಿಯಿದೆಯೋ ಇಲ್ಲವೋ
ಒಮ್ಮೆ ಪರೀಕ್ಷಿಸಿಕೊಳ್ಳಬೇಕು


ಹಾಲಾಡಿಗೆ ಇರುವೆ ಹತ್ತಿದೆ
ತೆಂಗಿನ ನಾರಲ್ಲಿ ತಿಕ್ಕಿ ತೊಳೆಯಬೇಕು
ಏನೊಂದಕ್ಕೂ ಬೇಕಾಗಬಹುದು


ಮೊದಲೇ ಬೇಸಿಗೆ
ಮೊಗಸಾಲೆಗೆ ಬಿಸಿಲು ಬಡಿಯದಂತೆ
ಚಪ್ಪರ ಹಾಸಿ ಬಿಡಬೇಕು


ಅಜ್ಜಿ ಸೀರೆಗಳನ್ನೆಲ್ಲ ಮಡಿ ಮಾಡಿ
ಬಣ್ಣ ಬಣ್ಣದ ಕೌದಿಗಳ ಹೊಲಿದು
ಮಡಿಸಿ ಜೋಡಿಸಿಡಬೇಕು


ಹಂಡೆಗೆ ಕಿಚ್ಚು ಹೊತ್ತಿಸಿ
ಉಗುರು ಬೆಚ್ಚಗಾದರೂ ಇರಿಸಬೇಕು
ನೀರು ಸುಧೆಯಷ್ಟೇ ನಂಜೂ ಹೌದು


ಮುಂಬಾಗಿಲ ಸಾರಿಸಿ
ಏಳು ಸುತ್ತು ಮಲ್ಲಿಗೆಯ ಮಾಲೆ ಕಟ್ಟಿ
ತೋರಣದ ಸಹಿತ ಅಲಂಕರಿಸಬೇಕು


ಕ್ಷೀರ-ಹಣ್ಣಿನ ರಸ
ಕಾಯ್ಹೋಳಿಗೆ ಪಾಯಸ
ಸಿಹಿ ತಿನಿಸುಗಳನ್ನೇ
ಅಡುಗೆ ಕೋಣೆಯ ತುಂಬ ತುಂಬಬೇಕು


ಸಿಂಗರಿಸಿದ ಬಂಡಿ ಅಲ್ಲಿ
ಕಣ್ಣಿಗೆಟುಕೋ ದೂರದಲ್ಲಿ
ಆರತಿ ತಟ್ಟೆಯೊಡನೆ ಕಾದು ನಿಲ್ಲಬೇಕು


ಮೂಲ ಮನೆಯ ಬಿಟ್ಟು
ಮೂಲದವರ ಮನೆಗೆ ಬಂದ
ಅತಿಥಿಯ ಬಾಚಿ ಬಿಗಿದು
ಮನೆ ತುಂಬಬೇಕು
ಖುಷಿಯು ಮನೆ ತುಂಬಬೇಕು!!


                                     - ರತ್ನಸುತ

ಆ ಸಂಜೆ

ಅವಳಿಗೆ ಸ್ನಾನ ಮಾಡಿಸಿ
ಸ್ವತಃ ಕೂದಲೊರೆಸಿ ಮೈ ಸವರಿ
ಬಟ್ಟೆ ತೊಡಿಸಿ ಕ್ರೀಮ್ ಬಳಿದು
ಪೌಡರ್ ಹಚ್ಚಿ ಮುತ್ತಿಟ್ಟೆ
ಅವಳು ಆಗಲೇ ಅರ್ಧ ಕರಗಿದ್ದವಳು
ಪೂರ್ತಿ ನೀರಾಗಿ ಹೋದಳು


ಕೈ ಹಿಡಿದು ಮೆಲ್ಲ ನಡೆಸಿ
ಮೆಟ್ಟಿಲುಗಳ ಒಂದೊಂದಾಗಿ ಎಣಿಸಿ
ಹೆಜ್ಜೆಗೆ ಹೆಜ್ಜೆ ಕೂಡಿಸಿ
ಮುದ್ದಿಸಿ ಮಾತನಾಡಿಸಿ
ಮುದ್ದಿಸಿ ಮಾತನಾಡಿಸಿ
ಮುದ್ದಿಸಿ... ಮುದ್ದಿಸಿ... ಮೌನವಾಗಿಸಿ!!


ಹೇಳಿದ್ದಕ್ಕೆಲ್ಲ ತಲೆದೂಗಿ
ಕೇಳಿದ್ದನ್ನೆಲ್ಲ ಮುಂದಿಟ್ಟು
ಸಮಯದ ಮುಳ್ಳನ್ನು ಮುರಿದಿಟ್ಟು
ಕಣ್ಣಲ್ಲಿ ಕಣ್ಣಿಟ್ಟು
ಒಟ್ಟು ಸಂಭಾಷಣೆಯನ್ನು ಮುಗಿಸಿ
ಮೊದಲಾಗಿಸಲಲ್ಲೊಂದು ಸಿಗ್ಗು


ಮರ, ಹಕ್ಕಿ, ಗೂಡು
ಗಿರಿ, ಗಗನ, ಮೋಡ
ರಸ್ತೆ, ಹೊಂಡ, ಗಾಡಿ
ಕಣ್ಣಿಗೆ ಕಂಡವುಗಳ ಕೂಡಿ
ಒಂದಾದೆವು ಮತ್ತೆ
ಮತ್ತೆ, ಮತ್ತೆ ಹೇಳಿಕೊಂಡೆವು
ನಾವೊಂದೇ
ಬೇರಾದರೂ ನಾವೊಂದೇ!!


ಒಲೆಯ ಮೆಲೆ ಉಕ್ಕಿದ ಹಾಲು
ಸೀದು ಹೋಗುವ ಮುನ್ನ
ಬಗ್ಗಿಸಿ ಲೋಟದೊಳಗೆ
ಒಂದು ಗುಟುಕು ರುಚಿಗೆ
ಎಂಜಿಲಾಗಿಸಿ ಬೇಕಂತಲೇ
ಒತ್ತಾಯಕೆ ಕುಡಿಸಿ
ಕೊನೆಗೊಂದು ಗುಟುಕುಳಿಸಿ
ನಾನೇ ಮುಗಿಸಿ...


ಎದೆಗೊರಗಿಸಿ ಜೊತೆಯಲಿ
ಪಾತ್ರವೊದಗಿಸಿ ಕಥೆಯಲಿ
ನೊಗದಿ ಜೋಡೆತ್ತು ಸಾಗಿದಂತೆ
ಎಳೆದು ಇರುಳ ಬಂಡಿ.
ಜೋಗುಳಕೆ ತೂಕಡಿಸಿ, ತೂಕಡಿಸಿ
ನಿದ್ದೆಗೆ ಜಾರಿದಾಗ ಆಕೆ
ಮತ್ತು ಇನ್ನೂ ಹುಟ್ಟಿಲ್ಲದ ಕನಸು
ಎರಡೂ ಒಂದೇ!!


                             - ರತ್ನಸುತ

Tuesday, 29 March 2016

ಬೇಜಾರಿಗೊಂದು

ತುಂಬ ದಿನ ಕಳೆದಿಲ್ಲ
ಆದರೂ ಏನೋ ಕಳೆದಂತೆ
ಮೆಲ್ಲ ಒಂದೊಂದೇ ಅಕ್ಷರ ಕೂಡಿಸಿ
ಪದ್ಯವೊಂದು ತಯಾರಾಗುತ್ತಿತ್ತು



ಎಲ್ಲೂ ಸಾಗದ
ಇನ್ನೂ ಮಾಗದ ಅದೇ
ಎಳೆ ಬಾಳೆಯ ಗೊನೆಯಂತೆ
ಏಟು ತಿಂದವು ಕೊಳೆತವು
ತಿನ್ನದಿದ್ದವೂ...



ಅರ್ಧ ಈರುಳ್ಳಿ, ಮತ್ತುಳಿದ ತರಕಾರಿ ಹೆಚ್ಚಿ
ಚಿಟಿಕೆ ಉಪ್ಪು-ಖಾರ ಉದುರಿಸಿ
ಪಕ್ವವಾಗಿ ಬೆಂದ ರವೆಯ ಉಪ್ಪಿಟ್ಟು
ವಾರಾಂತ್ಯದ ಬಾಡಿನ ಉಂಗುಟಕೂ ಎಟುಕದೆ
ಸಪ್ಪೆ ಹೊಡೆಯುತ್ತಿತ್ತು



ಬೇಸಿಗೆಯ ಸೆಕೆ
ಮನೆಯೊಳಗೂ ಬಾಳಿಸದೆ
ಬೀದಿಗೂ ಬೀಳಿಸದೆ
ಹೊಸ್ತಿಲಲ್ಲಿ ನಿಲ್ಲಿಸಿ ಕಾಡುವಾಗ
ಬಾಗಿಲು ದಢಾರನೆ ಮುಚ್ಚಿಕೊಳ್ಳುತ್ತೆ
ಬೆರಳು ಬಾಗಿಲಿಗೆ ಸಿಲುಕಿ



ಏನೊಂದೂ ನೆನಪಿಗೆ ಬಾರದಿದ್ದಾಗ
ಆತ್ಮಾವಲೋಕನದ ಸರದಿ
ಅದೇನು ವಿಲಕ್ಷಣ ಭಾವ
ಮನದ ಬಿತ್ತಿ ಚಿತ್ರಗಳೆಲ್ಲ ಹರಿದು
ಎಂದೋ ಅಂಟಿಸಿಕೊಂಡವು ಕಂಡು
ಧುತ್ತನೆ ಕುಸಿದದ್ದು ತಿಳಿಯದೆ ಹೋಯ್ತು!!



ಮುಖ್ಯ ಅಮುಖ್ಯಗಳೆಲ್ಲ ಕೂಡಿ
ರಾಡಿಯಾಗಿ ಹರಡಿದಲ್ಲಿ
ಅಲ್ಲೊಬ್ಬರಿಗೆ ಕಲೆ ಕಂಡರೆ
ಮತ್ತೊಬ್ಬರಿಗೆ ಕಂಡದ್ದು ಕೆಸರೇ
ಎಲ್ಲವೂ ಪ್ರಮುಖವೇ!!

                                 
                                      - ರತ್ನಸುತ

Wednesday, 23 March 2016

ಹೋಳಿ

ಚಿಟ್ಟೆಗಳೊಡನೆ
ಹೋಳಿ ಆಚರಿಸಿದ ತರುವಾಯ
ಸ್ನಾನ ಮುಗಿಸಿ ಬಂದೆ
ಚೆಟ್ಟೆಗಳಿನ್ನೂ
ಆಚರಣೆಯಲ್ಲೇ ತೊಡಗಿದ್ದವು!!


                        - ರತ್ನಸುತ

Monday, 14 March 2016

ನಾಲ್ಕು ಗೋಡೆಯ ಸುತ್ತ

ಮನೆ ಅಂದರೆ ಭಯ ಹುಟ್ಟಿಸುತ್ತೆ
ಅದೇನು ಆಳದ ಉತ್ಖನನ
ಅಲ್ಲಿ ಜಲ್ಲಿ, ಮರಳು, ಸಿಮೆಂಟು
ಕಾಸಿಗೆ ಕಾಸು ಕೂಡಿಸಿಟ್ಟ ಕನಸುಗಳ
ನಿರಾಯಾಸ ಸಮಾಧಿಯೊಂದಿಗೆ
ಸಿದ್ಧವಾಗುವ ಪಾಯದ ಗೋರಿ


ಅಲ್ಲಿಗೆ ಉದ್ದುದ್ದ ಸ್ಥಂಬಗಳ ಆಧಾರದ ಮೇಲೆ
ಒಂದೊಂದೇ ಇಟ್ಟಿಗೆಯ ಜೋಡಿಸುತ ಸಾಗಿ
ಕಿಟಕಿ ಬಾಗಿಲುಗಳ ಕೂರಿಸಿ
ಬೆಳಕಿಗೆ ನಿರ್ದಿಷ್ಟ ಹಾದಿ ನಿರ್ಮಿಸುತ್ತೇವೆ
ಕದ್ದು ನುಸುಳಿದಲ್ಲೆಲ್ಲ ತೇಪೆ ಹಾಕುತ್ತಾ
ನಮಗೆ ಬೇಕಾದ ಎತ್ತರ, ವಿಸ್ತಾರಗಳ ಕೋಟ್ಟು
ತೀರದ ತಾಪತ್ರಯಗಳಿಗೆ ಅಣಿಯಾಗುತ್ತೇವೆ


ಅಸಲಿಗೆ ಮನಸಿಗೆ ಮನೆಯೇ ಬೇಡ
ಬೇಕಿರುವುದೆಲ್ಲವೂ ದೇಹಕ್ಕೆ ಮಾತ್ರ
ಜಾಗೃತ ಅಸ್ಮಿತೆಗಳ ಶಾಂತವಾಗಿಸಲು
ಒಂದು ಸೂರಿನಡಿ ಬಂಧಿಯಾಗಬೇಕು
ಕಾಲ ಕಾಲಕ್ಕೆ ಧೂಳುದುರಿಸಿಕೊಂಡು
ಗುಡಿಸಿ ಸಾರಿಸಿ ಶುಚಿ ಕಾಪಾಡಬೇಕು
ನೋಡುಗರ ನೋಟಕ್ಕೆ ಸಿಕ್ಕಿಬೀಳದಿರಲು


ಮನೆ ಗೋಡೆಗಳು ಮಾಸದಂತೆ
ಬಿರುಕು ಬಿಡದಂತೆ ಬಣ್ಣ ಪೂಸಿ
ಕಿಟಕಿ ಗರಿಗಳ ಗಾಜಿನ ಒಳಗೂ ಹೊರಗೂ
ಯಾವುದೇ ಬೆರಳ ಅಚ್ಚು ಬೀಳದಂತೆ
ಎಚ್ಚರ ವಹಿಸುತ್ತಲೇ ಬದುಕಬೇಕು
ಇದ್ದೂ ಇಲ್ಲದವರಂತೆ


ಹುಚ್ಚರಾಗಿ ಅರಚುವಾಗ ದನಿ ಹೊರ ಜಾರದಂತೆ
ಒಗ್ಗರಣೆ ವಾಸನೆ ನೆರೆಯವರ ತಟ್ಟದಂತೆ
ಗುಟ್ಟುಗಳ ಕಾಪಾಡಲೊಂದು ಕೋಣೆ
ಸ್ವಚ್ಛ ಗಾಳಿ ಸೇವನೆಗೆ ಒಂದು ಮೂಲೆ
ಒಂದು ಐದಾದರೂ ಚಿಲಕವಿರುವ ಮುಂಬಾಗಿಲು
ಇದ್ದರೂ ನಮ್ಮದಲ್ಲದ ಹಿತ್ತಲು


ಮನೆಯೆಂದರೆ ಏನೋ ಅಸ್ಥಿರ ಭಾವ
ಸದಾ ಒಂದಲ್ಲೊಂದು ಗೊಂದಲದ ಗೋಂದು
ಅಲ್ಲಿ ಸಿಕ್ಕಿ ನರಳುವವರು ಯಾರೂ ಒಪ್ಪಿಕೊಳ್ಳರು;
ಕೆಲ ಸತ್ಯ ಸಂಗತಿಗಳೇ ಹಾಗೆ
ಬಹಿರಂಗವಾಗಿ ಬೆತ್ತಲಾಗುವ ಬದಲು
ನಾಲ್ಕು ಗೋಡೆಗಳ ನಡುವೆ ಭದ್ರವಾಗಿರಲು ಒಪ್ಪುತ್ತವೆ!!


                                                         - ರತ್ನಸುತ

Wednesday, 9 March 2016

ಬಾ ಕನಸೇ

ಎಲ್ಲಿ ಸಾಯುವೆ ಕನಸೇ
ಅಕ್ಷ ಸಾಗರದಲ್ಲಿ ಮುಳುಗಿ
ಮೋಕ್ಷ ಪಡೆಯೆಲು ಬಾ
ನಿದ್ದೆ ಜೊಂಪಿನ ನಡುವೆ
ತೂಗುತಾ ತೂಗುತಾ
ಕೊನೆಗೆಲ್ಲೋ ಉದುರೆ ಬಾ
ಇಷ್ಟಪಟ್ಟ ಉಡುಪ ತೊಟ್ಟು
ಕೊನೆಯದಾಗಿ ಕೊನೆದು
ಅರಳುವಷ್ಟು ದಣಿದು
ಮರಳಿ ಮರಳಿ ಮರಳಿ ಬಾ


ಬಾ ಕನಸೇ
ಎಂದೋ ಹೇಳದೆ ಬಿಟ್ಟ
ಗುಟ್ಟೊಂದ ನುಡಿವಂತೆ
ಇಂದೇ ಕೊನೆಯೆಂಬಂತೆ
ಸುಳಿದು ಮನಬಂದಂತೆ
ಅಂತೆ, ಕಂತೆಗಳಂತೆ
ಚಿಂತೆ, ಚಿತ್ತಾರದಂತೆ
ಎಂತಾದರೂ ಬಾ
ನೀ ಕಣ್ಣ ಅತಿಥಿ


ಬೆಕ್ಕು ಹಾಲುಂಡಂತೆ
ಸಿಕ್ಕೂ ಕೈ ಸಿಗದಂತೆ
ಸೊಕ್ಕಿದ ಸಿಬಿರಂತೆ
ಹೊಕ್ಕು ಕಾಡೆನ್ನನು
ಬಿಟ್ಟುಗೊಡದೆ ನನಗೆ
ಮತ್ತೊಮ್ಮೆ ನನ್ನನು!!


ಬೆಟ್ಟದ ತುದಿಯಲ್ಲಿ ತಳೆದು
ಕಡಲಿನ ತಟದಲ್ಲಿ ಕರಗು
ಮೂಡಣದ ಹರಿವಲ್ಲಿ ಕಂಡು
ತೋರಣದ ಇಬ್ಬನಿಯ ವರೆಗೂ
ಮಣ್ಣಿನ ಧೂಳಲ್ಲಿ ಎದ್ದು
ಕಣ್ಣ ಪೊರೆ ಸೀಳು
ಮೀಸಲಿಡಲಿ ಪಾಪೆ
ನಿನಗಿಷ್ಟು ಪಾಲು


ಬಾ ಕನಸೇ ಹೆಸರಿಡುವೆ
ಅಲೆದಲೆದು ದಣಿದಿರುವೆ
ಚೂರು ನೆಲೆಸು ಮನದಿ
ಬೆನ್ನೀರ ಮಜ್ಜನಕೆ
ಕಾಯಿಸಿದ ಹಸಿ ಬಯಕೆ
ಹೊಗೆಯಾಡದಂತೆ ತಾ
ಬೆಂದು ಕರೆದಿಹುದು
ನಿನ್ನಲ್ಲೇ ಮಿಂದು
ಚೂರಲ್ಲಿ ಉಳಿದಿಹುದು!!


                    - ರತ್ನಸುತ

Tuesday, 8 March 2016

ಸ್ತ್ರೀ

ಎಲ್ಲೇ ನೋಡಲು ನಿನ್ನ ಬೆರಳ ಅಚ್ಚಿನ ಹೊರತು
ಕಾಣದಾದೆನು ಮತ್ತು ಬೇರೇನನೂ
ಬೇಕಾದ್ದ ನೀಡಿದೆ ನಿರೀಕ್ಷೆಗೂ ಮುನ್ನವೇ
ಬೇಡಲು ಉಳಿದಿಲ್ಲ ಬೇರೇನನೂ


ಎಂದೂ ಬರೆದವನಲ್ಲ ಬಿಗಿ ಹಿಡಿತವಿಲ್ಲದೆ
ಇಂದೇಕೋ ನಿನ್ನ ಕಂಡಷ್ಟೇ ಹಿತ
ನಿನ್ನ ಕರೆಗೆ ಸಿಗುವ ಎಲ್ಲ ಅಕ್ಷರಕೂ
ಹೊಸ ರೂಪ ಸಿಕ್ಕಷ್ಟೇ ಖುಷಿಯಾಯಿತಾ?!!

 
ಎಚ್ಚರ ತಪ್ಪದ ಕನಸುಗಳ ಕಾವಲಿಗೆ
ಬೆಚ್ಚನೆಯ ಅಪ್ಪುಗೆಯ ಕೌದಿಯಂತೆ
ಕಂದೀಲಿನ ಉರಿಗೆ ಕಂಡಷ್ಟು ದೂರಕೆ
ಬರಮಾಡಿಕೊಳ್ಳುವ ಹಾದಿಯಂತೆ


ನೀ ಇರಲು "ನಾ" ಇರದು
ನಾವೆಂಬ ಆತ್ಮ ಸಂತೃಪ್ತ ಭಾವ
ಹಂಚಿಕೊಂಡರೆ ಎಲ್ಲ ಮಿಂಚಿ ಹೋಗುವುದಲ್ಲ
ಸಂಕಟದ ಆಚೆ ಹಗುರಾಗಿ ಜೀವ


ಹೆಣ್ಣೇ ನೀ ಬಣ್ಣಗಳ ರಾಯಭಾರಿ
ಕಣ್ಣಲೇ ಅರಳುವ ಕುಸುಮ ನಾರಿ
ಮನ್ನಣಿ ಸಿಕ್ಕೆಡೆ ಹೊನ್ನ ಗೌರಿ
ತಪ್ಪನು ಖಂಡಿಸೋ ರೌದ್ರ ಮಾರಿ


ಜನನಿ, ಗೆಳತಿ, ಜಾಯೆ, ಭಗಿನಿ
ಸಕಲಕೂ ನೀವೇ ಬೆಳಕು-ರಜನಿ!!

                     - ರತ್ನಸುತ

Tuesday, 1 March 2016

ಬಿಡಿ ಬಿಡಿಯ ಆಸೆಗಳು

ಅತಿಯಾದ ಪ್ರೇಮದಲಿ ಪ್ರೇಮವಲ್ಲದೆ ಮತ್ತೆ
ಬೇರೇನ ಬರೆಯಲಿ ಹೇಳು ನೀನೇ
ಮಿತವಾಗಿ ನಕ್ಕರೂ ಸೋಲುವ ನನ್ನನ್ನು
ನಗುವಲ್ಲಿ ಗೆದ್ದವಳು ನೀನೇ ತಾನೆ?!


ಹಲವಾರು ಕಾರಣ ಇದ್ದರೂ ಏನೊಂದ
ನುಡಿಯದೆ ನಿನ್ನನ್ನೇ ಇಷ್ಟ ಪಡುವೆ
ಕಣ್ಣೆದುರು ಇದ್ದರೆ ನಿನ್ನದೇ ಚಿತ್ರ ಪಟ
ನೋಡುತ್ತ ಜಗವನ್ನೇ ಮರೆತು ಬಿಡುವೆ


ನೀರಂಥ ನೀರೆ ನೀ ನೀರಾಗಿಸುವೆ ನನ್ನ
ಹರಿಯೋಣ ಬಾ ಜೊತೆಗೆ ಕೂಡಿಕೊಂಡು
ಜೀವಂತವಾಗಿಸುವ ಮೈಲಿಗಲ್ಲುಗಳನ್ನು
ನಮ್ಮ ಪ್ರಣಯದ ಕುರಿತು ಹೇಳಿಕೊಂಡು


ನುಡಿದ ಆಸೆಗಳನ್ನು ನುಡಿಸಿಕೊಂಡೆ ನೀನೇ
ಬಿಡಿಸಿಕೊಳ್ಳುವ ಆಸೆ ಇನ್ನೂ ಚೂರು
ನಾವು ಹೊರಟ ದಾರಿಯಲಿ ಹೂವು ಚೆಲಿದೆ
ಸಾಗಿರಲುಬಹುದೇನೋ ಪ್ರೇಮ ತೇರು!!


ಎಳೆಯ ಸಂಪಿಗೆ ನಿನ್ನ ಸ್ಪರ್ಶದ ಹವಣಿಕೆಗೆ
ರೆಕ್ಕೆ ತೊಡಿಸುವ ಕಾಲ ಬರಲಿ ಬೇಗ
ಅಲ್ಲಿ ಇಲ್ಲಿ ಹುಡುಕದಿರು ನಿನ್ನ ಸ್ಥಾನಕ್ಕೆ
ಹೃದಯ ತುಂಬಿ ಕೊಡುವೆ ಅಲ್ಲೇ ಜಾಗ!!


                                           - ರತ್ನಸುತ

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...