Friday, 17 October 2014

ಹೆಣ(ಣೆ)ದ ಕವಿತೆ!!

ರೆಕ್ಕೆ ಬಡಿದ ಹಕ್ಕಿ
ಅಳಿವಿನಂಚಿನ ಹಾದಿ ಹಿಡಿದು
ಪುರ್ರನೆ ಹಾರಿ ಹೊರಟಿತು
ಅದಾವುದೋ ಕಾಣದ ಕನವರಿಸಿದ
ಕೈಲಾಸವೆಂಬ ಊರಿಗೆ;
ಉಳಿದವರೆಲ್ಲ ಅತ್ತರು ದುಃಖದಲ್ಲಿ
ನಕ್ಕರು ಉಡಾಫೆಯಲ್ಲಿ
ಅಲಕ್ಷಿಸಿದರು ನಿರ್ಭಾವುಕತೆಯಲ್ಲಿ!!
ಕೊನೆ ಕ್ಷಣದವರೆಗೂ ಉರಿದು
ಆ ಕೊನೆ ಕ್ಷಣ
ಎಂದೂ ಉರಿಯದಷ್ಟು ಜೋರು
ಪ್ರಜ್ವಲಿಸುತ್ತ ತನ್ನನ್ನೇ ಸುಟ್ಟ ಹಣತೆ
ಕತ್ತಲ ಒಲವಿಗೆ ಸೋತು
ತನ್ನ ತಾ ಸಮರ್ಪಿಸಿಕೊಳ್ಳುವಾಗ;
ಕುರುಡಾದವರೆಲ್ಲ ಅಲ್ಲಿ ಸೋಲನ್ನೇ ಕಂಡರು,
ಹಣತೆ ಇದಾವುದನ್ನೂ ಲೆಕ್ಕಿಸದೆ
ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿತ್ತು!!
ಬಾಚಿ, ದೋಚಿ, ಗೀಚಿದ
ಹಾಳೆಯೆದೆ ಮೇಲೊಂದು ಮೌನ;
ವಿನಾಶದ ಸುಳುವೇ ಇರಬೇಕು!!
ಎಲ್ಲ ಪದಗಳು ಕಂಬಳಿ ಹೊದ್ದು
ನಿದ್ರಾಸ್ಥಿತಿಯಲ್ಲಿ ಲೀನವಾದಾಗ
ಶೀರ್ಷಿಕೆಯೊಂದೇ ಪ್ರಚಾರಕ್ಕೆ ನಿಂತಿತ್ತು;
ಮುಗಿದ ಕವನದ ನೆಪದಲ್ಲಿ
ಮತ್ತೊಂದು ಹುಟ್ಟು ಕಂಡ ಕವಿ
ನಕ್ಕು ಉಕ್ಕಿದನು
ಕರಗದ ಭಾವನೆಯ ಮೋಡವೊಂದು
ಅವನ ಸಪೂರ ಮನಸನ್ನು ಕವಿದಾಗ!!
ನೆರೆದವರೆಲ್ಲ ಕವನದ ಕೊನೆಯಲ್ಲಿ
ಏದುಸಿರು ಬಿಡುತ್ತಿದ್ದರೆ
ಪುಣ್ಯಾತ್ಮ ಮೊದಲಾದ ಕೊನೆಯಲ್ಲಿ
ನಿಟ್ಟುಸಿರು ಬಿಟ್ಟು ಕಟ್ಟಿ ಕೂರುತ್ತಾನೆ
ಪದ ಚಟ್ಟದ ಮೇಲೊಂದು
ಹೆಣ(ಣೆ)ದ ಕವಿತೆ!!
                          -- ರತ್ನಸುತ

ಹಳೆ ರಾಗ, ಹೊಸ ಭಾವ

ಬಿಸಿಲ ಕಣ್ಣಿನ ಹುಡುಗಿ
ನೆರಳ ರೆಪ್ಪೆಯ ಹೊದಿಸು
ಕನಸ ಕಾಡುವ ಬೆಡಗಿ
ಮನದ ಒಗಟನು ಬಿಡಿಸು
ಇರುಳ ಮೌನವ ಕೆಣಕಿ
ಎದೆಯ ಕದವನು ತೆರೆಸು
ಬಯಲ ದೀಪದ ಹಣತೆ
ನಿನ್ನಂಜಲಿಯಲಿ ನನ್ನುಳಿಸು
ದಾರಿ ಮರೆಯುವ ತಿರುಕ
ನೀ ನನಗೆ ಸಿಗುವ ತನಕ
ಮೇರೆ ಮೀರುವ ಪುಳಕ
ಹೂನಗೆಯ ಚೆಲ್ಲಿದ ಬಳಿಕ
ನಿನ್ನಾಸೆ ಎಲ್ಲವೂ ನನದು
ನಿರಾಸೆ ಆಗಲು ಬಿಡೆನು
ಈ ಜೀವ ಜೀವನ ನಿನದು
ನಾ ನಿನ್ನ ಕಾವಲಿನವನು
ಕೆನ್ನೆ ಚಂದ್ರನ ಚೂರು
ಅಧರ ಅಮೃತ ತೇರು
ನಿನ್ನ ಹೊಗಳದೆ ನೂರು
ಕವಿತೆ ಬರೆವುದು ಬೋರು
ಅದಾವ ಉಡುಗೊರೆ ಕೊಡಲಿ
ಅವೆಲ್ಲ ಸೊನ್ನೆ ನಿನ್ನೆದುರು
ಅದೇನೇ ಹೇಳಲಿ ಕೊನೆಗೆ
ನೀ ಆಡೋ ಮಾತೇ ನವಿರು!!
                      -- ರತ್ನಸುತ

??

ಅದಾವ ಮೋಡ ಕರಗದೇನೆ
ನಿನ್ನ ರೂಪ ತಾಳಿತೋ
ಅದಾವ ರೆಂಬೆ ನಿನ್ನ ಜೋಲಿ
ಜೀಕಲೆಂದು ವಾಲಿತೋ
ಅದಾವ ಸೋನೆ ನಿನ್ನ ತಾಕಿ
ಧನ್ಯವೆಂದುಕೊಂಡಿತೋ
ಅದಾವ ಕಾಲಮಾನ ನಿನ್ನ
ಜನನದಲ್ಲಿ ಜನಿಸಿತೋ
ಅದಾವ ಮಿಂಚು ಹವಣೆಯಲ್ಲಿ
ನಿನ್ನ ಕಣ್ಣ ಬೆರೆಯಿತೋ
ಅದಾವ ಮಾತು ಸದ್ದಿಗೊಂದು
ಅರ್ಥ ಕಲ್ಪವಾಯಿತೋ
ಅದಾವ ದಾರಿ ಹೆಜ್ಜೆ ಗೆಜ್ಜೆ
ಗುರುತ ಒಡೆಯನಾಯಿತೋ
ಅದಾವ ಕಲ್ಲು ಪಾದ ಸ್ಪರ್ಶದಿಂದ
ಮೂರ್ತಿಯಾಯಿತೋ
ಅದಾವ ಗಾಳಿ ಹೇಳಿ ಕೇಳಿ
ಇಂಪಿನಲ್ಲಿ ಕುಣಿಯಿತೋ
ಅದಾವ ಮೌನ ಗುಪ್ತವಾಗಿ
ಸಪ್ತವಾಗಿ ಹೋಯಿತೋ
ಅದಾವ ರಾಗದಲ್ಲಿ ಕೊರಳು
ಲೀನವಾಗಿ ಹರಿಯಿತೋ
ಅದಾವ ಜಾಗದಲ್ಲಿ ಲತೆಗೆ
ಹಿತವ ನೀಡಲಾಯಿತೋ
ಅದಾವ ನೋವು ಮಂಜಿನಂತೆ
ಕರಗಿ ನೀರಾಯಿತೋ
ಅದಾವ ಸ್ವಪ್ನ ಯತ್ನದಲ್ಲಿ
ಜೀವಮಾನ ಉಳಿಯಿತೋ
ಅದಾವ ದೇವರಲ್ಲಿ ವರವ ನೀಡೋ
ಹುರುಪು ಹುಟ್ಟಿತೋ
ಅದಾವ ಗಮ್ಯದಲ್ಲಿ ರಮ್ಯ
ಚೈತ್ರ ಕಾಲ ಚಿಗುರಿತೋ
ಅದಾವ ಬಣ್ಣ ತನ್ನ ತಾನು
ಮಂಕು ಅಂದುಕೊಂಡುತೋ
ಅದಾವ ಚಿತ್ರಕಾರನಲ್ಲಿ
ಕುಬ್ಜತನವು ಕಾಡಿತೋ
ಅದಾವ ಮಾಸದಲ್ಲಿ
ಪಚ್ಚೆ ಮೈದುಂಬಿ ಮೆರೆಯಿತೋ
ಅದಾವ ದೊಂಬರಾಟವನ್ನು
ಮನಸು ಕಲಿತುಕೊಂಡಿತೋ
ಅದಾವ ಉತ್ತರಕ್ಕೆ ನಿನ್ನ
ಪ್ರಶ್ನೆ ಮಾಡಿ ಕೇಳಲಿ
ಅದಾವ ಪ್ರಶ್ನೆಯಲ್ಲಿ ನಿನ್ನ
ಉತ್ತರವ ಹುಡುಕಲಿ
ಅದಾವ ಹೆಸರನಿಟ್ಟು ನಿನ್ನ
ಉಸಿರು ಕಟ್ಟಿ ಕೂಗಲಿ
ಅದಾವ ಕವನದಲ್ಲಿ ನಿನ್ನ
ಹಿಡಿದು ಕಟ್ಟಿ ಹಾಕಲಿ?!!
              -- ರತ್ನಸುತ

ಫೇಲಾದ ಇಂಟರ್ವ್ಯೂಗಳು

ಎದೆ ಮೇಲೆ ಓಡಿದವು
ಸಾವಿರಾರು ಕುದುರೆಗಳು
ಯಾವೊಂದೂ ಗುರುತ ಬಿಟ್ಟು ಹೊರಡಲಿಲ್ಲ;
ಒಳಗೆಬ್ಬಿಸಿದ ಗಲಭೆ
ತಲ್ಲಣಕೆ ನೂಕುತಿದೆ
ಎದೆ ಬಡಿದುಕೊಳ್ಳುವುದನಿನ್ನೂ ಬಿಟ್ಟಿಲ್ಲ!!
ಶರಬತ್ತು ನೀಡಿದಳು
ಕೈಬಳೆಯ ತಾಕಿಸುತ
ಹುಚ್ಚು ಕುದುರೆಯೊಂದು ಕಾಲು ಮುರಿದಂತೆ-
ಒದ್ದಾಡಿತೆದೆಮೇಲೆ
ಗಂಟಲ ಒಣಗಿಸಿತು
ತುಟಿಗೇರಿಸಿದೆ ಲೋಟ ಗುಟುಕೂ ಬಿಡದಂತೆ!!
ಸಿಹಿ, ಖಾರ ಚೌ-ಚೌ
ತಟ್ಟೆ ಸ್ಟೀಲಾದರೂ
ಮುಖ ನೋಡಿಕೊಳುವಷ್ಟು ಸ್ವಚ್ಛವಾಗಿತ್ತು;
ಅದಕಾಗಿಯೇ ಏನೋ
ಇದ್ದಷ್ಟನೂ ಬೇಗ
ತಿಂದು ಮುಗಿಸಿ ಮೂತಿ ಒರಸಬೇಕಿತ್ತು!!
ನೂರಕ್ಕೆ ನೂರರ
ಮನೆಯ ವಿಸ್ತೀರ್ಣ
ಇದ್ದಷ್ಟೂ ಹೊತ್ತೂ ಟಿ.ವಿಯ ಗೊಡವೆ ;
ಎದೆ ದಾಟಿ ಹೊರಟ
ಕುದುರೆಗಳು ಎಲ್ಲೋ
ಮೇವು ಸಿಕ್ಕಂತೆ ತೊಲಗಿ ಬಿಟ್ಟಾವೆ!!
ಹೆಸರು ನೆನಪಿಲ್ಲ
ಮಾತು ಕೇಳಿಸಲಿಲ್ಲ
ಮುಖವಂತು ಹಸ್ತ ಪಟ ಕಣ್ಣ ಹಾಯ್ದಂತೆ;
ಇಷ್ಟು ಮುಗಿಯುವ ವೇಳೆ
ಗೇಟಿನಲ್ಲಿಯ ನಾಯಿ
ಚೀರಾಡಿತು ಪಾಪ ಅದಕೂ ಹಸಿವಂತೆ!!
ಪತ್ರ ಬರೆಯುವ ಕಾಲ
ತಾತನ ಕಾಲದ್ದು
ಮನೆ ಬಿಟ್ಟ ನಿಮಿಷಕ್ಕೆ ಒಂದು ಸಂದೇಶ;
"ಹುಡುಗ ತುಂಬ ಸಣ್ಣ
ಸರಿಹೊಂದದ ಬಣ್ಣ
ಪರಿಚಯ ಬೆಳೆಯಿತು ಅಷ್ಟೇ ಸಂತೋಷ!!"
                                    -- ರತ್ನಸುತ

ಜನುಮದ ಜೋಡಿ

ಹೆಸರಿಸಲಾಗದ ನನ್ನ
ಅಂತಃಕರಣದ ಪಾತ್ರಕ್ಕೆ
ಜೊತೆಗಾತಿಯ ಹುಡುಕುತ್ತಿರುವೆ;
ನೈಜ್ಯ ಅಭಿನಯದ ಹುಡುಗಿ
ನಿನ್ನ ಕಣ್ಣು ಹೇಳುತ್ತಿವೆ
ಅದು ನೀನೇ, ಮತ್ತಾರು ಅಲ್ಲವೆಂದು;
ತರಾತುರಿಯಲ್ಲಿ ಬಣ್ಣ ಹಚ್ಚುತೇನೆ
ಹೃದಯ ರಂಗ ಮಂಟಪಕ್ಕೆ!!
ಪಾತ್ರದ ವಿವರಣೆ ಹೀಗಿದೆ;
ನಾ ಕಣ್ಣು, ನೀ ನೋಟ
ಕಾಣುವವೆಲ್ಲ ಪೋಷಕ ಪಾತ್ರಗಳು;
ನಾ ಪ್ರಾಣ, ನೀ ಉಸಿರು
ಬಿಕ್ಕಳಿಕೆಗೆ ಅಥಿತಿ ಪಾತ್ರ;
ನಾ ಬೇರು, ನೀ ಬಳ್ಳಿ
ಹೂವುಗಳೇ ನಮ್ಮೊಲವ ಗುರುತು;
ನಾ ಮುಗಿಲು, ನೀ ಕಡಲು
ಚಂದಿರನೇ ಖಳ ನಾಯಕ!!
ಮನದಲ್ಲೇ ಹೆಣೆದು ಸಿದ್ಧ ಪಡಿಸಿ
ಕಥಾಹಂದರವ ಬಿಟ್ಟುಗೊಡದೆ
ಹಂಚಿದ ಪ್ರಚಾರ ಪತ್ರಗಳಲ್ಲಿಯ
ನಮ್ಮ ಭಾವಚಿತ್ರವ ಕಂಡು
ಭಾವನೆಗಳೆಲ್ಲ ಸಾಲುಗಟ್ಟಿವೆ
ಹೃದಯದ ಪ್ರವೇಶ ದ್ವಾರದೆದುರು;
ತಡ ಮಾಡದೆ ಅಲಂಕರಿಸು
ರಂಗ ವೇದಿಕೆಯ!!
ಇಂದಿನ ನಮ್ಮ ಪ್ರದರ್ಶನ
ಜೀವಮಾನದ ಗುರುತಾಗಿ ನಿಲ್ಲಬೇಕು
ಅಷ್ಟು ಭಾವುಕತೆ ವ್ಯಕ್ತವಾಗಲಿ
ಪ್ರತಿ ಚೌಕಟ್ಟಿನೊಳಗೂ;
ನಾಜೂಕು ನಗೆಹನಿಯ ಕಾರಣವಾಗಿ
ಉರುಳಿದ ಕಂಬನಿಗೆ ಆಸರೆಯಾಗಿ
ಬಣ್ಣ ಹಚ್ಚದ ನಾವು ಭಾವಕ್ಕನುಗುಣವಾಗಿ
ಬಣ್ಣ ತಾಳೋಣ!!
ನೂರು ದಿನ ಪೂರೈಸಿ ಮುನ್ನುಗ್ಗುತ್ತಿರುವ
ಯಶಸ್ಸಿನ ಪ್ರದರ್ಶನ ಕಾಣುತ್ತಿರುವ
ನಮ್ಮ ನಾಟಕವಲ್ಲದ ನಾಟಕಕ್ಕೆ
ಭಾವಪೂರ್ವಕ ಬೆಂಬಲ ಸಿಗುತ್ತಿದೆ;
ಪ್ರತ್ಯೇಕವಾಗಿ ಯಾರೂ ಅಲ್ಲದ ನಾವು
ಜೊತೆಗೆ ಭಲೇ ಜೋಡಿ
ಯಾವ ಪ್ರಶಸ್ತಿಗಳನ್ನೂ ಎದುರು ನೋಡದ
ಜನುಮದ ಜೋಡಿ!!
                                    -- ರತ್ನಸುತ

ಕ್ಷಮಾಪಣೆ

ಕ್ಷಮಿಸಿಬಿಡವ್ವ
ನನ್ನ ಕಣ್ಣೀರಿಗೆ ನಿನ್ನ ಕಣ್ಣೀರೊರೆಸೋ
ಶಕ್ತಿಯಿಲ್ಲವೆಂದು ತಿಳಿದೂ
ಅಳುವುದಷ್ಟೇ ನನ್ನ ಪಾಲಿಗುಳಿದ
ಅಂತಿಮ ಆಯ್ಕೆ!!
ಅತ್ತು ಬಿಟ್ಟೆ,
ಬೆಟ್ಟದಷ್ಟು ದುಃಖದಡಿ ಹುಲ್ಲನ್ನೂ
ತೇವಗೊಳಿಸಲಾಗದೆ ಹೋದೆ;
ತುತ್ತ ತುದಿಯನ್ನು ಮುಟ್ಟಿದಾಕೆ
ಇನ್ನೆಷ್ಟು ಅತ್ತೆಯವ್ವ ನೀನು?!!
ಬತ್ತಿ ಹೋಗಿರಬೇಕು
ಬಿರುಕು ಬಿಟ್ಟಿರಬೇಕು ಕಣ್ಗಳು
ಮರೆಸಬೇಡವ್ವ, ತೋರು
ಕಂಡು ಈ ಪಾಪಿ ಕಣ್ಗಳು
ಸತ್ತು ಹೋಗಲಿ!!
ಕುರುಡನಾದರೆ
ನಿನ್ನ ವೇದನೆಯ ಊಹೆ
ಚೂರು ಸಹ್ಯವೆನಿಸಬಹುದು,
ಈಗಿನ ನರಕವ ನೋಡಲಾರೆ!!
ಕ್ಷಮಿಸವ್ವ
ರಕ್ಷಿಸಿಕೊಳ್ಳಬಹುದಾದಾಗ
ಹೇಡಿಯಂತೆ ತಪ್ಪಿಸಿಕೊಂಡೆ
ಈಗ ಪರಿತಪಿಸುತ್ತಿರುವೆ
ಕಾಲ ಚಕ್ರವ ಹೊರಳಿ
ಮತ್ತೆ ಗತಕಾಲಕ್ಕೆ ಒಯ್ದು
ಎಲ್ಲವನ್ನೂ ಅಂದುಕೊಂಡಂತೆ ಸಿಂಗರಿಸುವಾಸೆ;
ಆ ಆಸೆ ಪಡಲಿಕ್ಕೂ ನಾ ಯೋಗ್ಯನಲ್ಲ!!
                                         -- ರತ್ನಸುತ

ಖಾಲಿ ಪತ್ರದ ತಿರುಳು

ಪತ್ರದಲ್ಲಿ ಏನೂ ಉಳಿದಿಲ್ಲವೆಂದು
ಹರಿದು ಬಿಸಾಡುವ ಮುನ್ನ
ಬರೆಯಲಾಗದ ಅಸಹಾಯಕತೆಯ
ಹೊರಳಿ ನೋಡಿದರೆ ಅರಿಯುವೆ
ನನ್ನ ತುಮುಲಗಳ ಆಳವ!!
ಉರಿದು ಅದೆಷ್ಟೋ ಮೇಣಗಳು
ಕರಗಿ ಹೋಗುತ್ತಿದ್ದರೂ
ತಲೆಗೆ ಬಿಡಿ ಅಕ್ಷರ ನೆಡುವಷ್ಟು
ಸೌಜನ್ಯತೆ ಮೆರೆಯದೆ
ಮೇಣದಿಂದ ಮೇಣಕ್ಕೆ ಸ್ಥಳಾಂತರಗೊಂಡ
ಬೆಳಕಿನ ಬಿಟ್ಟಿ ಸಲಹೆಗಳು ಬೇಡವಾಗಿದ್ದವು!!
ಹಸ್ತ ಬೆವರಿದ್ದೂ ಆಯ್ತು
ಇಟ್ಟ ಚುಕ್ಕಿ ಚದುರಿದ್ದೂ ಆಯ್ತು
ಹಿಂಬಾಲಿಕೆಯ ಪದಗಳು
ತಮ್ತಮ್ಮ ಕಾಲ್ತುಳಿತಕ್ಕೆ ತಾವೇ ಬಲಿಯಾಗಿ
ಸಂಸ್ಕಾರ ಮಾಡಿದ್ದೂ ಆಯ್ತು;
ಇನ್ನೂ ಅಚ್ಚಾಗಲಿಲ್ಲ ಭಾವನೆಗಳು!!
ನಿನ್ನೆದುರು ತೊದಲುವ ನಾಲಗೆ,
ನಿನ್ನ ವಿನಹ ತೊದಲುವ ಬೆರಳು;
ನೀನು ವರವೋ, ಶಾಪವೋ ಎಂಬ ಗೊಂದಲ,
ಆದರೂ ನೀನೇ ಬೇಕೆಂಬ ಹಂಬಲ;
ಬದುಕಿನ ಪರೀಕ್ಷೆಗಳಲ್ಲಿ
ಅತಿ ಕಷ್ಟಕರ ಪ್ರಶ್ನೆ ಪತ್ರಿಕೆ ನೀನು;
ಇದ್ದಷ್ಟೂ ಧೈರ್ಯವ ಒಗ್ಗೂಡಿಸಿ
ಪತ್ರವ ತಲುಪಿಸಿದ ನನ್ನ ಸಾಹಸಕ್ಕೆ
ಒಳೆಗೆ ಬಿಟ್ಟ ಖಾಲಿತನದ ಸುಳುವಿಲ್ಲ;
ಹೇಳಬೇಕಾದವುಗಳ ಬಿಚ್ಚಿಡಲಾಗಲಿಲ್ಲ
ಆದರೆ
ಏನೋ ಹೇಳ ಹೊರಟು
ಹೇಳಲಾಗುತ್ತಿಲ್ಲವೆಂಬುದ ನೀ ಗಮನಿಸಿದ್ದೇ ಆದರೆ
ಭಯದ ಕಕ್ಷೆ ದಾಟಿ
ನಿವೇದನೆಯತ್ತ ನಾ ಹೆಜ್ಜೆಯಿಟ್ಟಂತೆ;
ಒಲವಾಗಿಸಲಿನ್ನು ಮೂರೇ ಗೇಣು!!
                                          -- ರತ್ನಸುತ

ಒಲವಲ್ಲಿ ನಾಲ್ಕು ಕಿವಿಮಾತು

ಕೋಪಕ್ಕೂ ಕೊಡುವ ಪ್ರಾಮುಖ್ಯತೆ
ಇಷ್ಟು ಬೇಗ ರಾಜಿಯಾಗುವುದು ಬೇಡ
ಮುಂದೆ ಕೋಪವೂ ಕೃತಕವಾದರೆ
ಜಗಳಗಳು ಕಲೆಗುಂದುವ ಭಯವಿದೆ!!
ಸಮಯಕ್ಕೂ ಸಿಗಲಿ ಸನ್ಮಾನ
ಹೇಳಿದ ಸಮಯಕ್ಕೆ ಬಾರದ ನಾವು
ಒಬ್ಬರನ್ನೊಬ್ಬರು ಕಾಯಿಸದೆ ಕ್ಷಮಿಸಿಬಿಡುವುದು
ಕಾಯುವಿಕೆಗೆ ಅಗೌರವ ಸೂಚಕ!!
ಮುತ್ತು ಮುತ್ತಿಗೂ ಲೆಕ್ಕವಿಡುವ
ಕೊಟ್ಟಾಗ ಪಡೆವ ಉಮ್ಮಸ್ಸು
ಪಡೆದಾಗ ಕೊಟ್ಟ ಖುಷಿ ಹೆಚ್ಚಾದರೆ
ಪ್ರತಿ ಮುತ್ತೂ ಸ್ಮರಣೀಯ!!
ದಾಖಲಿಸುವ ಪ್ರತಿ ಬೇಟಿಯನ್ನೂ
ಆ ಆವರಣ, ಆ ಅನುಭವ
ಆ ವಿವಿಧ ಭಾವ ಭಂಗಿಗಳ ಸೆಳೆತ-
-ಮೊರೆತಗಳ ದೀರ್ಘ ಕಾಲ ಮರುಕಳಿಕೆಗೆ!!
ಮಾತು ಸೋತಾಗ ಮೌನವಹಿಸುವ
ಒತ್ತಾಯಿಸಿ ಗೆಲ್ಲಿಸುವುದು ಗೌಣ;
ಕೆಲವೊಮ್ಮೆ ಮಾತಿನ ಮೆರವಣಿಗೆಗಿಂತ
ಮೌನ ಅರ್ಥಗರ್ಭಿತ ಮಾರ್ಮಿಕ ಕವನ!!
ಬಿಟ್ಟುಗೊಡುವ ಜಿದ್ದು ಹಠಗಳ
ಒಮ್ಮೊಮ್ಮೆ ಕೊಟ್ಟು ಬಿಟ್ಟವುಕ್ಕಿಂತ
ಬಿಟ್ಟುಕೊಟ್ಟವುಕ್ಕೇ ಹೆಚ್ಚು ಮೌಲ್ಯ
ಅದುವೇ ನಮ್ಮೊಲವ ಪ್ರಾಭಲ್ಯ!!
                                 -- ರತ್ನಸುತ

ಚಿಟ್ಟೆ

ವೇಘ ಕಠೋರ
ಪ್ರಾಭಲ್ಯ ಕಠೋರ
ಭಾರ ಕಠೋರ
ಆ ಚಿಟ್ಟೆ ಸುರಕ್ಷತೆ ಕಂಡಿದ್ದು ಮೃದುತ್ವದಲ್ಲಿ
ಹಗುರಾದ ಅಲೆ-ಅಲೆಯ ಹಾರಾಟದಲ್ಲಿ
ಅಲ್ಲಿ ದಟ್ಟ ಮರವ ಸೀಳಿ ಛಿದ್ರ-ಛಿದ್ರಗೊಂಡ
ಬೆಳಕು ಹಾಸಿದ ಹೆದ್ದಾರಿಯ ಅಡ್ಡ ರಸ್ತೆಯಲ್ಲಿ
ನಮ್ಮಾಳ್ವಿಕೆಯ ಸಾಮ್ರಾಜ್ಯಗಳು ತೆರೆದುಕೊಳ್ಳುತ್ತವೆ
ನಾ ಅಲ್ಲಿ ಶಕ್ತಿ ಇಮ್ಮಡಿಗೊಳಿಸಿ ನಿಲ್ಲುತ್ತೇನೆ
ಪ್ರತ್ಯುತ್ತರವಾಗಿ ಆ ಸಂಭಾವಿತ ಚಿಟ್ಟೆ
ಎಂದಿಗಿಂತಲೂ ಹೆಚ್ಚು ಮೆರುಗಲ್ಲಿ ಶರಣಾಗಿ
ನನ್ನ ಒರಟು ಕಾಪಿನ ಮೇಲೆ ಹಾರಿ ಕಾಲೂರುತ್ತದೆ
                                           -- ರತ್ನಸುತ

ಸುಮ್ಕೆ ತಮಾಸೆಗೆ

ಅವ್ವ
ಹೊಟ್ಯಾಕೋ ನೋಯ್ತಾದೆ
ಹಿತ್ಲ ಕಡೆ ಹೋಗ್ಬತ್ತೀನಿ
ಹಿಟ್ಟು ತೋಳ್ಸಿಟ್ಟು ಮಡ್ಗು
ಬಿಸಿ ಆರೋಗ್ದಂಗೆ;
ಇನ್ನೆಷ್ಟ್ ಸರ್ತಿ ಹೇಳ್ತೀಯೋ
ನಿನ್ ಬಾಯಿಗ್ ಮಣ್ಣಾಕೋಗ
ಇಲ್ಲೇ ಕೂತು ಹೂಸ್ಬ್ಯಾಡ
ಉಸ್ರು ಕಟ್ದಂಗಾಗ್ತೈತೆ!!
ಕೂತ್ಕಡೆನೇ ಕೂತು
ಅಂಡೆಲ್ಲಾ ಮಾಡ್ಕೋಬ್ಯಾಡ
ಅಕ್ಕ ಪಕ್ಕ ಇಟ್ಗೆ ಸರ್ಸ್ಕೊಂಡ್
ಕಡ್ಡಿ ಗೀಟು ಮಡ್ಗು;
ತಲೆ ಮೇಲೊಸಿ ಮಣ್ಸುರ್ದ್ಬಾ
ಆ ಸಿಂಗಾರವ ನೋಡೋಕಾಗ್ದು
ಆದ್ರೆ ಬೀದಿ ನಾಯಿಗಿಕ್ಕು
ನೊಣ್ಗೊಳ್ಗ್ ಮಾತ್ರ ಬ್ಯಾಡ!!
ಶಳ್ಟು ಒಸಿ ಮೇಲುಕ್ ಸಿಕ್ಸ್ಕೋ
ಅಪ್ಪಿ ತಪ್ಪಿ ಜಾರ್ಬುಟ್ಟಾತು
ಭೂಮಿಗ್ ಮೀಸ್ಲು ಕಟ್ಟಿ ಗೊಬ್ರನ್
ಹಟ್ಟಿಗಂಟ ತರ್ಬ್ಯಾಡ;
ಮುಗ್ಸಿದ್ದಾದ್ಮೇಲ್ ಮೆಲ್ಲುಕ್ಕೂಗು
ಅಕ್ಕ ಪಕ್ದೋರ್ ಕೇಳ್ಸ್ಕೊಂಡಾರು
ನೀರಿಗ್ ಮೋದ್ಲೇ ಬರ ಇಲ್ಲಿ
ಚೊಂಬಷ್ಟ್ರಲ್ಲೇ ತ್ವಳ್ಕ!!
ಸೋಪು ಖಾಲಿ ಆಗ್ಬುಟದೆ
ಬೂದಿ ಹಾಕ್ಕೊಂಡ್ ತಿಕ್ಕು
ಚಪ್ಲಿ ಇನ್ನೊಂದಪ್ಪ ಹಾಕೊಂಡೀಯ
ತೆಪ್ಪುಗ್ ಮೂಲೆಗಿಕ್ಕು;
ಅಪ್ಪ ಬರೋ ಹೊತ್ತಾಗದೆ
ಚಡ್ಡಿ ಹಾಕ್ಕೋ ಬೇಗ
ತಡ್ಕೆಲ್ ಮುದ್ದೆ ಮಡ್ಗಿಟ್ಟಿವ್ನಿ
ಉಂಡೆದ್ದೋಗ್ಬಾ ಈಗ!!
ಅವ್ವ
ಯಾಕೋ ಹೊಟ್ನೋಯ್ತಾದೆ
ಎತ್ಮಡ್ಗು ಬತ್ತೀನಿ....
ಅಯ್ಯೊ ನಿನ್ ಮಕ ಮುಚ್ಚೋಗ ಹೋಗು...!!
                                     -- ರತ್ನಸುತ

ನಿರುತ್ತರ



ಪ್ರಾಣ ಹಿಂಡುವ ಹಸಿವು
ಎಷ್ಟು ಉಂಡರೂ ನೀಗುತ್ತಿಲ್ಲ
ಅದು ಹೊಟ್ಟೆಯ ಮೀರಿದ ಹಸಿವು
ಹೃದಯವ ಕ್ಷೋಭಿಸೋ ಹಸಿವು!!
ನೆನ್ನೆಗಳೆಲ್ಲವನ್ನೂ ಉಂಡು
ತೇಗುತ್ತ ಉಳಿದ ಜೀವಕ್ಕೆ
ನಾಳೆಗಳು ಕೇವಲ ಮುಂಬರುವ ನೆನ್ನೆಗಳು
ಇಂದಿಗಂತೂ ಹಿಂದೆ ನೀಡಿದಷ್ಟೇ ಮಾನ್ಯತೆ!!
ಅಪಾರ ಹೆಜ್ಜೆಗಳ ಮೇಲೆ
ಹೆಜ್ಜೆಯಿಟ್ಟು ಸಾಗಿ ಬಂದ
ಕನಸುಗಾರಿಕೆಯ ಕಸುಬುದಾರನಿಗೆ
ಕತ್ತಲು ಬಾಯ್ಪಾಠವಾದಂತೆ;
ಬೆಳಕಿನ ಬಳಪ ಹಿಡಿಯದಷ್ಟು ಅವಿವೇಕಿ,
ನಾನು ಕನಸುಗಾರನೆಂಬ ಲಜ್ಜೆಗೇಡು ಭಾವ!!
ಇಷ್ಟೇ ಅಲ್ಲ್ಲದ ಇನ್ನೂ ಖಾಲಿತನಗಳ
ತುಂಬಿಕೊಳ್ಳಲಾಗದ ಅಸಹಾಯಕತೆಯೇ
ನನ್ನ ಗುರುತಿನ ಚೀಟಿ;
ಸೋಲುಗಳೊಡನೆ ಪ್ರತಿ ನಿತ್ಯ
ಮುಖಾ-ಮುಖಿ ಬೇಟಿ
ಆದರೂ ಪಾಠ ತಪ್ಪುವುದೇ ಪರಿಪಾಠ!!
ಸಿಕ್ಕಿಬಿದ್ದ ಗೋಜಲನ್ನ
ಬೇಕಂತಲೇ ಜಗ್ಗಾಡಿಕೊಂಡ ಮೂರ್ಖತ್ವ
ಇನ್ನೂ ಬಿಗಿದ ಕೊರಳಿಂದ ಹೊರಡದ ಮಾತು;
ಸದ್ಯಕ್ಕೆ ಮೌನವೇ ಎಲ್ಲಕ್ಕೂ ಆಧಾರ!!
                                        -- ರತ್ನಸುತ

ಕನಸೊಂದು ಉದುರಿ ಬಿದ್ದು

ಪುಕ್ಕವೊಂದು ತುಂಡಾಗಿ
ನೆಲಕೆ ಅಪ್ಪಳಿಸುತಿದೆ
ಯಾವ ಹಕ್ಕಿ ತಿಂದ ನೋವ
ಸಾರ ಬಂದಿತೋ?
ಯಾವ ಹುಲ್ಲು ಮಡಿಲ ಮೇಲೆ
ಕನಸು ಕಟ್ಟಿಕೊಳ್ಳಲೆಂದು
ತಾಯಿ ಒಡಲ ಬಿಟ್ಟು ದೂರ
ಹಾರಿ ಬಂದಿತೋ?!!
ಕಾಗೆದೆಂದು, ಗೂಬೆದೆಂದು
ಶಕುನದಲ್ಲಿ ಅಳಿಯುತಾರೆ
ಹೇಳು ನೀನು ಯಾವ ಜಾತಿ
ಯಾವ ಸಂಕುಲ?
ಹೇಳದಂತೆ ಮೌನ ವಹಿಸಿ
ಇದ್ದರೂ ಸಹಿತ ನಿನಗೆ
ಕೊಡುವೆ ನಾನು ಪಠ್ಯ ಹಾಳೆ
ಮಡಿಲ ಬೆಂಬಲ!!
ನಿನ್ನ ಮೈಯ್ಯ ಮೇಲೆ ಯಾರು
ಇಷ್ಟು ಚಂದ ಚಿತ್ರ ಬರೆದು
ಯಾವ ಪುರಸ್ಕಾರ ಪಡೆದು
ಎಲ್ಲಿ ಇರುವರು?
ನನ್ನ ತೊಗಲ ಕಿತ್ತು ಕೊಡುವೆ
ನಿನ್ನ ಹಾಗೆ ನಾನೂ ಮೆರೆವೆ
ಹೇಳು ಎಲ್ಲಿ ಇರುವರೆಂದು
ನಿನ್ನ ದೇವರು?
ಮೊನ್ನೆ ಮಹಡಿ ಮೇಲೆ ನಿನ್ನ
ಹೋಲುವಂಥ ಹಕ್ಕಿ ಕಂಡೆ
ಹೋಗ ಬೇಕೇ ನೀನು ನಿನ್ನ
ತಾಯಿ ಮಡಿಲಿಗೆ?
ನಿನ್ನ ಬಣ್ಣ ಇಲ್ಲವಾಗಿ
ನೀರಸ ಮಳೆಬಿಲ್ಲ ನೋಡು
ಕೋಪ ನಿನ್ನ ಮೇಲೆ ಅದಕೇ
ಖಾಲಿ ಮುಗಿಲಿಗೆ!!
ಒಂಟಿಯೆಂದು ನೋಯಬೇಡ
ನಿನ್ನ ಜೊತೆ ಆಟಕೆಂದು
ತಂದೆ ನೋಡು ನವಿಲುಗರಿಯ
ಆಟವಾಡಿಕೋ;
ಅಪ್ಪಿ ತಪ್ಪಿ ಯಾರೂ ಕೂಡ
ನಿನ್ನ ಗುರುತು ಹಚ್ಚದಂತೆ
ನಾನು ಇರಿಸಿದಲ್ಲೇ ನಿನ್ನ
ಮನೆಯ ಮಾಡಿಕೋ!!
ಹಾರ ಹೊರಟು ಕಳೆವೆಯೆಂಬ
ಅಂಜಿಕೆ ನನ್ನಲ್ಲಿ ಚೂರು
ನೀನು ಇನ್ನೂ ಎಳೆಯ ರೆಕ್ಕೆ
ಚಿಗುರಿನ ಕನಸು;
ಅಂಗೈಯ್ಯ ಮೇಲೆ ಇರಿಸಿ
ಉಸಿರನ್ನೇ ಉಣಿಸುವೆನು
ನಿನ್ನ ರೆಕ್ಕೆಗಳಿಗೆ ನನ್ನ
ಕಾಳಜಿ ತಿಳಿಸು!!
                  -- ರತ್ನಸುತ

ಕೆಂಡ ಹಾಗು ಕಣ್ಣೆವೆ



ಕಣ್ಣೊಳಗೆ ಬಿದ್ದ ರೆಪ್ಪೆಗೂದಲು ನೀನು
ಅನವರತ ಉರಿಯಲ್ಲಿ ಕೊರಗಲೇನು?
ಅಥವ ತೊರೆದು ಮರುಗಿ ಮರೆಯಲೇನು?
ನೀ ಅಂದು ಅಂದಿದ್ದೆ,
ನಾ ನಿನ್ನ ಪಾಲಿಗೆ ಸೆರಗಂಚಿನ ಕೆಂಡದಂತೆ ಎಂದು;
ಹೌದು, ಕೆಂಡವಾಗಿ ಕರಕಲಾಗಿದ್ದೇನೆ
ವಿರಹಾಗ್ನಿ ಒಳಗೊಳಗೇ ಸುಟ್ಟು,
ಆದರೂ ಹೊರಗಿನ ಶೀಥಲ ಸಮರ
ನಿನ್ನ ಸುಡದಿರಲೆಂದು ನಾ ಹೂಡಿದ ನಾಟಕ!!
ಕಣ್ಣ ತೀಡುತ್ತಿದ್ದಂತೆ
ಎವೆ ಹೊರಲಾಡುತ್ತಿದೆ
ನೀ ಆವರಿಸಿಕೊಂಡ ಅಷ್ಟೂ ವ್ಯಾಪ್ತಿಯಲ್ಲಿ;
ಕೆಂಗಣ್ಣು ಕೋಪಕ್ಕಲ್ಲ, ನಿನ್ನ ಸಂತಾಪಕ್ಕೆ
ನಾಲಗೆ ಅಂಚಿನಿಂದ ಹೊರ ತೆಗೆಯುವೆಯೋ ಎಂದು!!
ಸೆರಗಂಚಿಗೆ ಇನ್ನೂ ಬಿಗಿದುಕೊಂಡಿರುವೆಯಾ ನನ್ನ?
ನಾ ಸುಡುವುದಕ್ಕೂ ಮುನ್ನ ಕಿತ್ತೆಸೆ,
ನಾ ಬೂದಿ ಮುಚ್ಚಿದ ಕೆಂಡದಂತೆ;
ನಾಟಕ ನನ್ನ ಸ್ಥಿಮಿತ ತಪ್ಪಿ ಬಯಲಾದರೆ
ನಿನ್ನ ಸುಟ್ಟ ಗಾಯಗಳ ಬೊಬ್ಬೆಯಲ್ಲಿ
ನೀರು ತುಂಬಿಕೊಂಡಂತೆ ಉಳಿದು
ಒಡೆದಾಗ ಸಂಕೋಚದಲ್ಲೇ ಹೊರಹರಿಯುತ್ತೇನೆ,
ಅದ ನೆನೆದಷ್ಟೂ ಕಠೋರಮಯ!!
ಬೇಡ,
ನೀ ನನ್ನ ಕಣ್ಣೀರಿಗೆ ಬೆಲೆ ತೆರುವುದು
ನಾ ನಿನ್ನ ಸುಟ್ಟು ಧೂಪವಾಗಿಸುವುದು
ಎರಡೂ ಸಲ್ಲ;
ಕಣ್ಣಾಚೆ ನೀ ಉಳಿ
ನಿನ್ನಿಂದ ದೂರ ನಾ ಉಳಿಯುತ್ತೇನೆ;
ಕ್ಷೇಮೋಪಚಾರಕ್ಕೆ ಅಪರೂಪಕ್ಕೆ ಸಿಗುವ,
ಕ್ಷಣಿಕ ಸುಖವೇ ಮನಮೋಹಕ!!
                                          -- ರತ್ನಸುತ

ಅಜ್ಜಿ, ತಾತ ಮತ್ತು ಕನ್ನಡಕ

ಸೂಜಿಗೆ ದಾರವ ಪೋಣಿಸಲು
ಅಜ್ಜಿ ಹರಸಾಹಸ ಪಡುತ್ತಿದ್ದರೆ
ಅತ್ತ ದಿನಪತ್ರಿಕೆ ಓದುತ್ತಿದ್ದ ತಾತ
ತನ್ನ ಕನ್ನಡಕ ಕಳಚಿ ಆಕೆಯ ಮೂಗಿಗೆ ಸಿಕ್ಕಿಸಿ
ಗಂಭೀರವಾಗಿ ನಗುತ್ತಾನೆ;
ಪೋಣಿಸಿದ ಬಳಿಕವೂ ಹಿಂದಿರುಗಿಸದೆ
ಆಕೆ ಸತಾಯಿಸುತ್ತಿದ್ದಂತೆ
ತಾತ ಗಾಂಭೀರ್ಯ ಬದಿಗಿಟ್ಟು
ಎಂದೂ ನಗದವನಂತೆ ಉಸಿರುಗಟ್ಟಿ ನಗುತ್ತಾನೆ;
ಅಜ್ಜಿಯೂ ತನ್ನ ಪಾಲು ಬೆರೆಸುತ್ತಾಳೆ!!
ದಶಕಗಳಿಂದ ಇಬ್ಬರದ್ದೂ ಒಂದೇ ಕನ್ನಡಕ
ಅದು ಅವರ ಅನ್ಯೂನತೆಯ ಪ್ರತೀಕ,
ಮುರಿದರೆ ಇಬ್ಬರಲ್ಲೂ ಮರುಕ
ಕೈಗೆ ಸಿಗದಿದ್ದರೆ ತಡಕಾಡುವ ತವಕ;
ಒಂದೇ ಕಣ್ಣು, ಒಂದೇ ನೋಟ
ಗ್ರಹಿಕೆಯಲ್ಲಿ ತುಸು ಏರು ಪೇರಾದರೂ
ಹಠದಲ್ಲಿ ತಾತ ಮೇಲು,
ಬಿಟ್ಟುಗೊಡುವಲ್ಲಿ ಅಜ್ಜಿ ಮೇಲು;
ಇಬ್ಬರದ್ದೂ ಹೊಂದಿಸಿ ಹೊಲಿದ
ಕೌದಿ ರೀತಿಯ ಸಂಬಂಧ;
ಕುಂದು-ಕೊರತೆಗಳಿಗೆ
ಅವರದ್ದೇ ಸ್ಪಷ್ಟ ಸಮರ್ಥನೆಗಳು!!
ಕನ್ನಡಕ ನಿಜಕ್ಕೂ ಧನ್ಯ;
ಅಗಾಧ ಕನಸುಗಳ ಕಂಡ
ಆ ಪೊರೆಗಟ್ಟಿದ ಕಣ್ಣುಗಳ ಕಾಯುವ
ಮಹತ್ತರ ಕುಲ ಕಸುಬು ಅದರದ್ದು!!
ತಾತನ ಕಣ್ಣಲ್ಲಿ ನೀರು ಸೋರುತ್ತದೆ,
ಸಣ್ಣಕ್ಷರಗಳ ಓದಲಾಗದೆ
ದಿಟ್ಟಿಸಿ ಹೆಣಗಾಡುತ್ತಿರಲು;
ಅಜ್ಜಿ ಕನ್ನಡಕ ಕಳಚಿ
ತಾತನ ಮೂಗಿಗೇರಿಸುತ್ತಾಳೆ
ಪ್ರಣಯ ಸಲ್ಲಾಪ ಮುಂದುವರಿಯುತ್ತದೆ...
                                     -- ರತ್ನಸುತ

ವ್ಯರ್ಥ ಸಂಜೆಗಳು

ಈ ಮಳೆ ಬೀಳುವ ಸಂಜೆಗಳು
ಎಲ್ಲಾದರೂ ಕೂತು
ಮುಗಿಯದ ಕವಿತೆ ಬರೆದುಕೊಳ್ಳಬಾರದೇ?!!
ಉರುಳಿ ಬಿದ್ದು ಸಾಯುವ ಹನಿಗಳ
ಪರಿಗಣಿಸದೆ ಬೇರೆ ವಿಧಿಯಿಲ್ಲ;
ರೊಚ್ಚು ಸಿಡಿದ ಪಾದ ರಕ್ಷೆಗಳ
ಹುಲ್ಲು ಹಾಸಿಗೆಗೆ ತಡವಿಕೊಂಡಾಗ
ಮೂಡಿತಲ್ಲೊಂದು ವರ್ಥ ಕವಿತೆ!!
ಹಿಡಿದ ಛತ್ರಿಯ ಕೆಳಗೆ
ಮುಚ್ಚಿಹೋದ ಕಿವಿಯಲ್ಲಿ ಗುನುಗುವ
ಹನಿಗಳ ನಿನಾದ;
ಕೇಳಿಯೂ ಕೇಳದಂತೆ ನಟಿಸುತ್ತ
ಕೈ ಗಡಿಯಾರ ನೋಡಿಕೊಂಡರೆ
ಸಮಯ ನಿಂತಲ್ಲೇ ನಿಂತದ್ದಲ್ಲದೆ
ಕಣ್ಣು ಮಿಟುಕಿಸಿದಾಗಲಷ್ಟೇ ಮುಂದೆ ಸರಿದು
ನನ್ನ ಸ್ಥಾವರವಾಗಿಸಿತ್ತು;
ಅಲ್ಲಿಗಾಗಲೇ ಛತ್ರಿ ಹಾರಿಹೋಗಿ
ಹಾಡು ಮತ್ತಷ್ಟು ಇಂಪಿನೊಂದಿಗೆ ನನ್ನ ನಡುಗಿಸುತ್ತಿತ್ತು!!
ಈಗ ಮಳೆಬಿಲ್ಲು ಮೂಡಿ
ನನ್ನ ಮನಸನ್ನ ಹಗುರಾಗಿಸಲಾದೀತೇ?
ನೆನಪುಗಳಿಗೆ ಬಣ್ಣ ಬಳಿದು
ಭರಣಿ ಖಾಲಿಯಾಗಿಸಿಕೊಂಡು
ಪೆಚ್ಚು ಮೋರೆಯಲ್ಲಿ ಹಿಂದಿರುಗುತ್ತಲೇ
ಕಣ್ಣು ಹೋಡೆಯಬಹುದೇ?
ಎಲಾ ಪೋಲಿ ಮಳೆಬಿಲ್ಲೇ!!
ಎಲ್ಲವೂ ಇದ್ದು ಏಕಾಂತವೇಕೆ?
ಏಕಾಂತವಿದ್ದು ಎಲ್ಲವೂ ಏಕೆ?
ಸಂಜೆಯ ಸಂಜೀವಿನಿ ಈ ಏಕಾಂತ,
ಬೆರಳಂಚಿಗೆ ಶಾಯಿಯೇ ನಿಜ ಸಂಗಾತ;
ಕವಿತೆ ಮೂಡುವುದೂ, ಮತ್ತೆ ಬಾಡುವುದೂ
ಕವಿತೆಯಾಗಿ ಮೂಡುವುದು!!
                                           -- ರತ್ನಸುತ

ಕಾಡುವ ಹುಡುಗಿ

ಅದೆಷ್ಟು ಬಾರಿ ಹೇಳ ಹೊರಟು
ಮಾತು ತಪ್ಪಿತ್ತೋ ಲೆಕ್ಕವೇ ಇಲ್ಲ,
ಅಂದು ಎಡವಿದ ನಾಲಗೆ
ಇನ್ನೂ ತಡವರಿಸುತ್ತಲೇ ಇದೆ!!
ಸುಣ್ಣದ ಗಡಿಗೆಯ ನೀರ್ಗೋಲಿನಂತೆ
ಕರಗಲೊಲ್ಲದ ಮನಸು
ಅನವರತ ಹಸಿಯಾಗಿ ಜಾರುವಂತಿದೆ;
ನಾನೇ ಎಷ್ಟೋ ಬಾರಿ ಬಿದ್ದದ್ದುಂಟು!!
ನನ್ನ ಕಣ್ಣ ಕಾವಲುದಾರರಿಗೆ ಹೇಳಿಟ್ಟಿದ್ದೇನೆ
ನಿನ್ನಾಗಮನದ ಸುಳುವು ಕೊಡಲು;
ಶುಚಿಗೊಳಿಸುವುದು ಪುಣ್ಯ ಕಾರ್ಯ
ನಿನ್ನಂಥ ಪುಣ್ಯಾತಗಿತ್ತಿಗೆ ಆಶ್ರಯ ನೀಡುಲು ಮನದೊಳಗೆ!!
ಅಬ್ಬಬ್ಬ ಆ ಹೊಳಪು!!
ತಂಪು ಕನ್ನಡಕವೂ ಕಣ್ಮುಚ್ಚುವಂತೆ;
ಒಂದೇ ನೋಟಕ್ಕೆ ನಿನ್ನ ಸೆರೆಹಿಡಿವ
ಕ್ಯಾಮರಾ ಒಂದು ಆವಿಷ್ಕಾರವೇ ಸರಿ!!
ಅಣು ಅಣುವಿನಷ್ಟೇ ನೆನಪುಗಳು ಚೂರಾಗಿ
ಪ್ರತಿಪರಿಣಾಮದಲ್ಲಿ ತೊಡಗಿದ್ದು
ಬೃಹತ್ ಪ್ರಮಾಣದ ಸ್ಪೋಟಕ್ಕೆ
ಸಜ್ಜಾದ ಸ್ಪೋಟಕವಾಗಿದೆ ಹೃದಯ!!
ಕಡಲ ತೀರದಲ್ಲಿ ತೀರದ ಗೊಂದಲ,
ಮರಳ ಗುಡ್ಡೆ ಹಾಕಿ
ಒಳಗೆ ಕೈ ಮರೆಸಿಟ್ಟಿದ್ದೇನೆ
ಕೆನ್ನೆ ಮೇಲಿನ ತುರಿಕೆಗೆ ನಿನ್ನ ಉಗುರ ಧ್ಯಾನಿಸುತ್ತ!!
ಅಲೆಯಾಗಿ ಬಂದು
ಉಸಿರ ಕದ್ದೋಗುವ ಮುನ್ನ
ಒಂದು ಕ್ಷಣ ಬದುಕಲು ಬಿಡು;
ಆತ್ಮ ನಿವೇದನೆಗೆ ಕೊನೆ ಅವಕಾಶವಾಗಿ!!
                                                -- ರತ್ನಸುತ

ನೀ... ನಾ...

"ನಾ ಹೆಣ್ಣು" ಎಂದು
ಹೆಣ್ಣೊಬ್ಬಳು ಬರೆದಾಗ,
ದೌರ್ಬಲ್ಯವ ಮೆಟ್ಟಿ ನಿಂತಿರುತ್ತಾಳೆ;
"ನಾ ಗಂಡು" ಎಂದು
ಗಂಡೊಬ್ಬ ಬೀಗಿದಾಗ
ದೌರ್ಜನ್ಯವ ಮೀರಿ ನಿಂತಿರುತ್ತಾನೆ;
"ನಾ ಹೆಣ್ಣು" ಎಂದು
ಗಂಡೊಬ್ಬ ಸಿಡಿದಾಗ
ಹೂವಿನಷ್ಟೇ ಮೃದುವಾಗುತ್ತಾನೆ;
"ನಾ ಗಂಡು" ಎಂದು
ಹೆಣ್ಣೊಬ್ಬಳು ಮಿಡಿದಾಗ
ಖಡ್ಗದಷ್ಟೇ ಹರಿತವಾಗುತ್ತಾಳೆ;
"ನೀ ಗಂಡು" ಎಂದು
ಹೆಣ್ಣೊಬ್ಬಳು ಉದ್ಗರಿಸಿದಾಗ
ಗಂಡಸ್ಥನ ಇಮ್ಮಡಿಗೊಂಡಂತೆ;
"ನೀ ಹೆಣ್ಣು" ಎಂದು
ಗಂಡೊಬ್ಬ ಗೌರವಿಸಿದಾಗ
ಹೆಣ್ತನ ವರದಾನದಂತೆ!!
                       -- ರತ್ನಸುತ

ಭಯ !!

ಕಾಡಿಗೆ ತೀಡ ಬೇಕು;
ನಾನೇ ಮಸಿಗೊಳಿಸಿದೆ-
-ನೆಂಬ ಅಪವಾದದ ಭಯ!!
ಕಂಬನಿ ತಡವ ಬೇಕು;
ನಾನೇ ಹರಿಸಿದೆನೆಂಬ
ಅನುಮಾನದ ಭಯ!!
ನೆತ್ತರ ತಡೆಯ ಬೇಕು;
ನಾ ಹೀರುವ ಪಿಪಾಸು
ಎಂದು ಆಡಿಕೊಳ್ಳುವವರ ಭಯ!!
ನಾ ನಗ ಬೇಕು;
ನಗುವವರೆದುರು
ನಗೆಗೀಡಾಗುವೆನೆಂಬ ಭಯ!!
ನಾನೂ ಅಳ ಬೇಕು;
ಮತ್ತೆ ನಗಲಾರೆನೇನೋ?
ಎಂಬ ಗೊಂದಲದ ಭಯ!!
ನಾ ಉಸಿರಾಡಬೇಕು;
ಅದರಲ್ಲೂ ಹುಳುಕು
ಹುಡುಕುವವರ ಸಮರ್ಥನೆಗಳ ಭಯ!!
ನಾ ಬದುಕ ಬೇಕು;
ಹೀಗೇ ಬದುಕು ಎಂಬ
ಕಟ್ಟುಪಾಡಿನ ಭಯ!!
ನಾನೂ ಭಯ ಪಡಬೇಕು;
ಭಯವೇ ನನ್ನ ಪಡೆದುಬಿಟ್ಟರೆ?
ಎಂಬ ಭಯ...!!
                             -- ರತ್ನಸುತ

ಹೂವಿಗೆ ಸಾವಿಲ್ಲ

ಹೂಗಳು ಮಸಣ ಸೇರುವ ಮುನ್ನ
ಸತ್ತೇ ಇರಬೇಕೆಂದು ಕಟ್ಟಪ್ಪಣೆ ಮಾಡಿದರೆ
ಸತ್ತ ಹೂಗಳಿಗೆ ಬೇಡಿಕೆ ಹೆಚ್ಚುತ್ತದಲ್ಲ?
ಹಾಗಾದರೆ, ಅವು ಸತ್ತಿವೆಯೋ
ಅಥವ ಬದುಕಿವೆಯೋ ಎಂದು ತಿಳಿಗೊಳ್ಳುವುದು ಹೇಗೆ?
ಲೆಕ್ಕಾಚಾರ ತಪ್ಪಿಬಿಟ್ಟರೆ!!
ಹೆಣಕ್ಕೆ ಹೆಣವನ್ನೇ ಜೊತೆಯಾಗಿಸಿದರೆ
ಸ್ವರ್ಗದಲ್ಲೋ, ನರಕದಲ್ಲೋ ಸಹಾಯಕ್ಕೆ ಬರುತ್ತದೆ
ಎಂದು ಯಾರೋ ಕಾವಿ ತೊಟ್ಟ ಪುಣ್ಯಾತ್ಮ ಹೇಳಿ
ಹೂವಿನ ಜೀವಂತಿಕೆಯ ಪರೀಕ್ಷಿಸುವ ಮಾರ್ಗವನ್ನ
ನಾಳಿನ ಸಂಚಿಕೆಯಲ್ಲಿ ತಿಳಿಸುವುದಾಗಿ ಹೇಳಿ
ಇಂದಿನ ಸಂಚಿಕೆ ಮುಗಿಸುತ್ತಾನೆ;
ಹಾಗಾದರೆ ಇಂದು ಸತ್ತವರ ಗತಿ?!!
ಮನುಷ್ಯನ ಕಣ್ಣಿಗೆ ಬಿದ್ದಲ್ಲೇ
ಹೂವು ವಿಲಿ-ವಿಲಿ ಒದ್ದಾಡಿ ಸಾಯುವುದು;
ಹೆಣ ಏನನ್ನೂ ಮಾಡಲೊಲ್ಲದೆಂದು
ಮತ್ತೆ ಜೀವ ಮರಳಿದರೆ
ಕಂದಾಚಾರಕ್ಕೆ ಅಪಚಾರವಾದಂತಲ್ಲವೇ?!!
"ಸತ್ತವರಿಗೆ ಸತ್ತವನ್ನೇ ಏಕೆ ಜೊತೆಯಾಗಿಸೋದು?
ಬದುಕುದ್ದವನ್ನೇ ಏಕೆ ಪರಿಗಣಿಸಬಾರದು?"
ಹೀಗೆ ಆಲೋಚನೆಗಳು ಸುಳಿದಾಡುತ್ತಿದ್ದಂತೆ
ಎಲ್ಲವೂ ಎರಡೆರಡು ಬಾರಿ ಸಾಯುತ್ತವೆ!!
ಕಟ್ಟಿ, ಪೋಣಿಸಿದ ಹಾರದಲ್ಲಿ
ದಾರಕ್ಕೆ ಕತ್ತು ಕೊಟ್ಟು ನೇಣಿಗೆ ಶರಣಾದ
ಎಷ್ಟೋ ಹೂಗಳ ಮರು ಜನ್ಮದ ಕುರಿತು
ಯಾವ ಸುದ್ದಿ ವಾಹಿನಿಯೂ ಸ್ಪೆಷಲ್ ಪ್ರೋಗ್ರಾಮ್ ಮಾಡಿಲ್ಲ!!
ದಿಕ್ಕಾರವಿರಲಿ ಮಾನವ ಜಾತಿಗೆ!!
ಮಸಣದ ದಾರಿಯುದ್ದಕ್ಕೂ ಚೆಲ್ಲಾಡಿದ ಹೂವು
ಹಿಂದೆ ಹರಿದು ಬಂದ ಚಕ್ರಗಳಡಿ ಸಿಲುಕಿ
ಬೀದಿ ಹೆಣವಾದದ್ದು
ಸಾಗಿ ಹೊರಟ ಶರೀರಕ್ಕೆ ಶಾಪದಂತೆ;
ಚಿತೆಯಲ್ಲಿ ಬುರುಡೆ ಒಡೆಯದೆ ಉಳಿವುದಂತೆ;
ನಾಯಿಗಳ ಆಹಾರಕ್ಕೆ ಸಿಕ್ಕು!!
ಚಿತೆಗೆ ಕಡ್ಡಿ ಹಾಕಿ ಅಲುಗಾಡಿಸದೆ
ಪಾಪದ ಮೂಟೆ ಬೇಯುವುದು ಕಷ್ಟ ಸಾಧ್ಯ
ಹೆಣ ಕಾಯುವವನು ಕಂಠ ಪೂರ್ತಿ ಕುಡಿದಿದ್ದಾನೆ
ಅವನ ಮೂಗಿಗೆ ಮಾಂಸದ ಘಮಲು ಬಿದ್ದರೆ
ಕೆಂಡದ ಸಮೇತ ನುಂಗಿಬಿಡುತ್ತಾನೆ;
ಅಲ್ಲೇ ಆ ಹೂಗಳು ಕೆಲಸಕ್ಕೆ ಬರುತ್ತವೆ;
ಹಸಿದ ಹೊಟ್ಟೆಗೆ ಮಲ್ಲಿಗೆ ಕಂಪು
ಯಾವ ಪುರುಷಾರ್ಥಕ್ಕೆ?
ಇತ್ತ ಹೆಣ ಕಾಯುವವನ ಗಮನ ಮತ್ತೆಲ್ಲೋ ಬರಸೆಳೆದರೆ
ಅತ್ತ ಹೆಣಕ್ಕೆ ಮುಕ್ತಿ ಸಿಕ್ಕಂತೆ;
ನೆನಪಿರಲಿ, ಕಡ್ಡಿ ಆಡಿಸುವುದಂತೂ ನಿಲ್ಲಬಾರದು!!
ಹೂವು ಕಣ್ಣಿಗೆ ಕಂಡಷ್ಟೂ ಹೊತ್ತು
ಅದು ಬದುಕಿದ್ದಂತೆಯೇ ಎಂದು ನಂಬಿದವ ನಾನು;
ಪುಸ್ತಕದ ಹಾಳೆ ನಡುವೆಯ ರೋಜ
ಈಗಲೂ ತಾಜಾ ನೆನಪುಗಳನ್ನ ಮೂಡಿಸುತ್ತದೆ;
ಹೂವಿಗೆ ಸಾವಿಲ್ಲ
ಮನುಷ್ಯ ಸಾಯಿಸುತ್ತಾನಷ್ಟೇ!!
                                                   -- ರತ್ನಸುತ

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...