Thursday, 30 January 2020

ಪಿಸ್ತೂಲಿನ ಸ್ವಗತ

ಕೊಂದವನ ಮತ್ತು ಸತ್ತವನ ನಡುವೆ ಪಿಸ್ತೂಲು 
ಒಂದೆರಡು ಗುಂಡು ಹಾರಿ ಋಣ ಭಾರ 
ಕೊಂದವನ ತೂಕ ಹೆಜ್ಜೆ, ಸತ್ತವನ ಮೌನ 
ಇನ್ನುಳಿದ ಗುಂಡುಗಳ ಸ್ವಗತ 

ಸತ್ತವ ಕೆಟ್ಟವನೋ, ಒಳ್ಳೆಯವನೋ?
ಕೊಂದವನು ಕೈ ಬಿಡದ ತನಕ 
ಅವನೇ ಒಳಿತು, ಒಳಿತಿಗಾಗಿ
ಚಿಮ್ಮಿದ ರಕ್ತವು ಕೈಗಂಟಿದೆ 
ವಿಚಲಿತಗೊಳ್ಳದೆ ಹಿಡಿಯ ಬಿಗಿದಿಟ್ಟ
ಭಾರಿ ಘಟ್ಟಿಗನೇ ಸರಿ 

ಇನ್ನೂ ಮೂಡದೇ ಆಕ್ರಂದನ?
ಒಂದು, ಸತ್ತವ ನೀಚನಾಗಿರಬೇಕು 
ಇಲ್ಲವೇ ಆಳುವವರ ಉಸಿರು ಬಿಗಿದಿರಬೇಕು 
ಪಾದಗಳು ಇನ್ನೂ ಒದರಾಡುತ್ತಲಿವೆ 
ನಿಮಿಷ ನಿಂತು ನೋಡೋಣ..... 

ಆ ಎರಡು ಸುತ್ತಿನ ಬಳಿಕ 
ಯಾವೊಂದು ಪ್ರತಿ ದಾಳಿಯಿಲ್ಲ?
ಅಸ್ತ್ರಗಳಿಲ್ಲದ ಶಾಂತ ತೋಟಕೆ ನುಗ್ಗಿ 
ಪ್ರತಾಪ ಮೆರೆದನೇ ಮಾಲೀಕ?
ಇಲ್ಲ, ಇಲ್ಲ.. ಹೇಡಿಯಾಗಿರಲಾರ 
ಹೇಡಿಗೆ ಪಿಸ್ತೂಲು ಹಿಡಿವ ಸ್ಥೈರ್ಯ?
ನಮ್ಮ ಸಂಗ ಮಾಡುವವ ಪರಾಕ್ರಮಿ... 
ಎದುರಾಳಿ ಸಂಚು ರೂಪಿಸುತ್ತಿರಬೇಕು 
ಇವ ಎದೆ ಹಿಗ್ಗಿಸಿ ನಿಂತಿರಬೇಕು!

ಯಾರದ್ದೋ ಅಂತಿಮ ಯಾತ್ರೆ
ಸಣ್ಣ ಮರುಕದ ಕೂಗು 
ಹೂವು, ಗಂಧ, ಕಣ್ಣೀರ ಕಂಪು ದಾಟಿ ಸಾಗಿದೆ ಮುಂದೆ
ಕೊಂದವನ ಎದೆಯಲ್ಲಿ ಕ್ರಮೇಣ ಆರಿದ ಕಿಚ್ಚು...  

ಅರೆ.. ಈಗ ಈತನೂ ಉದ್ರೇಕಕ್ಕೊಳಗಾದನಲ್ಲ?
ಮತ್ತಾರೋ ಇವನಿಗೆ ಹೆಗಲು ಕೊಟ್ಟು ಸಂತೈಸುತ್ತಿದ್ದಾರೆ 
ಅವನೆದೆಯಲ್ಲಿ ನಮ್ಮೆದೆಯ ಮಾರ್ದನಿ 
ಕೊಲ್ಲಲ್ಪಟ್ಟವನೇ ಆಗಿರಬಹುದೇ? ಓ.. ಅವನೇ!
ಇತ್ತ ಮತ್ತಾರೋ ಇವನಿಂದ ಪಿಸ್ತೂಲು ಕಸಿದು ಓಡುತ್ತಿದ್ದಾರೆ 
ಮತ್ತಷ್ಟು ಹೆಣಗಳುರುಳುವ ಸಂಭವ... 

ಯಾರ ಹೆಸರು ಬರೆದಿದೆ ನಮ್ಮಗಳ ಮೇಲೆ?
ಕೂಡಲೇ ಅಳಿಸಿ ಹಾಕಬೇಕು 
ಕೊಲ್ಲುವವರಿರುವ ತನಕ ಸಾಯುವವರು 
ಕೊಂದು ಉಳಿಸುವುದಾದರೂ ಏನನ್ನ?

ಮತ್ತೊಂದು ಗುಂಡು.. ಢಮ್!!
ಮತ್ತೆರಡು..ಮತ್ತೆ ....  ಢಮ್!! ಢಮ್!!
ಕಾಲ ಕಾಲಕ್ಕೆ ಸದ್ದಿಗೆ ಸದ್ದು ಸೆಡ್ಡು ಹೊಡೆದು 
ನಿಗ್ರಹಿಸುತ್ತಿದೆ ಎದ್ದ ದನಿಗಳ 
ನಮ್ಮಂಥ ಪಾಪದ ಗುಂಡುಗಳಿಗೆ ಬೇರೆ ಆಯ್ಕೆಯೆಲ್ಲಿ?
ಪಿಸ್ತೂಲಿನಿಂದ ಪಿಸ್ತೂಲಿಗೆ 
ಮನುಷ್ಯನಿಂದ ಮನುಷ್ಯನಿಗೆ 
ವರ್ಗಾವಣೆಯಾಗುತ್ತಲೇ ಸಾಯುತ್ತಿದ್ದೇವೆ... 

Wednesday, 29 January 2020

ಅಲೆಯ ಹೊಡೆತಕೆ ಸಿಕ್ಕ ಚಿಪ್ಪು

ಅಲೆಯ ಹೊಡೆತಕೆ ಸಿಕ್ಕ ಚಿಪ್ಪು 
ಕಡಲ ತೀರದಿ ಅವಿತು ಕುಂತು
ಮರಳ ಮನೆಯ ಕಟ್ಟೋ ಗಳಿಗೆ 
ಅಂಗೈಯ್ಯೇರಿ ಕುಳಿತುಕೊಂತು 
ತಡವಲು ಮೈ ಇದ್ದ ಮರಳು 
ನೀರ ಸಹಿತ ಜಾರಿಕೊಂಡು 
"ಒಯ್ಯಿ ನನ್ನ ನಿನ್ನ ಮನೆಗೆ 
ನೆನಪಿನ ಗುರುತಾಗಿ" ಅಂತು 

ಚಿಪ್ಪು ಚಿಪ್ಪಲೂ ಭಿನ್ನ ಕತೆಗಳು 
ಇಟ್ಟು ಆಲಿಸೆ ಕಿವಿಯ ಹತ್ತಿರ 
ಒಂದು ಹಾಡಿತು ಮನವ ಕಾಡಿತು 
ಒಂದು ಕಣ್ಮನ ಸೂರೆಗೊಂಡಿತು 
ಸಾಗಿ ಸವೆದು ಸವಕಲಾಗಿ 
ಸೋಕಿದಲ್ಲೇ ಛಿದ್ರಗೊಂಡಿತು 
ಮಿಕ್ಕ ಕೆಲುವು ಬೆರಳ ನಡುವೆ 
ತೂರಿ ಮತ್ತೆ ಕಡಲ ಸೇರಿತು 

ದಿಕ್ಕು ಕಾಣದೆ ಅಲೆದು ಬಂದು 
ದಿಕ್ಕುಗೆಟ್ಟವರನ್ನು ಸೇರಿ 
ದಕ್ಕುವ ಮಡಿಲಲ್ಲೇ ಸುಖವ 
ಕಾಣುವಂತೆ ನಿಲುವು ತಾಳಿ 
ಸಿಕ್ಕ-ಸಿಕ್ಕವರಡಿಗೆ ಸಿಕ್ಕಿ 
ಪಾದ ಗುರುತುಗಳಲ್ಲಿ ಬಿಕ್ಕಿ 
ಉಪ್ಪು ಕಣ್ಣೀರೇತಕೆಂದು 
ನಿರ್ಭಾವುಕವಾಯಿತು  

ಆಳ ಹೊಕ್ಕು ಮೇಲೆ ಜಿಗಿದು 
ತೇಲಿ, ಮುಳುಗಿ, ಬೇಲಿ ಹಾರಿ 
ಯುಗ ಯುಗಗಳ ಯಾನ ಮುಗಿಸಿ 
ಬೆನ್ನು ಕೊಟ್ಟಿತು ಮಣ್ಣಿಗೆ 
ಚಂದಗಂಡು ಹೊತ್ತು ಹೋದರು 
ತೋಚಿದಂತೆ ಕೊರೆದು ಬಿಟ್ಟರು 
ಗುಟ್ಟು ಗುಟ್ಟಾಗಿರಿಸಲೆಂದು 
ಬಚ್ಚಿ ಇಟ್ಟರು ಕಿಸೆಯಲಿ 

ಮುತ್ತು ಕಸಿದು ಚಿಪ್ಪ ಎಸೆದು 
ಮಾಲೆ ಮಾಡಿ ಕೊರಳಿಗೆರಗಿ 
ಇರುಳ ಉರಿಸಿ ಪ್ರೇಮ ಉತ್ಸವ 
ಮಾಡ ಹೊರಟರು ಮುಕ್ತಿಗೆ 
ಎಲ್ಲ ಕಂಡೂ ಕಳ್ಳರಂತೆ 
ಎಲ್ಲ ಅರಿತೂ ಮಳ್ಳರಂತೆ 
ಮುತ್ತು ಮುತ್ತಲೂ ಮೈಯ್ಯ ಮರೆಯಲು 
ಮಾಲೆ ಚೆದುರಿತು ಒಮ್ಮೆಗೆ...!

ಬಿಡುವಾದರೆ ಹೇಳು ಬಿಡಿಸಿ ಹೇಳುವೆ

ಬಿಡುವಾದರೆ ಹೇಳು ಬಿಡಿಸಿ ಹೇಳುವೆ 
ತಡ ಮಾಡದೆ ಹೃದಯ ನೀಡಿ ಮುಗಿಸುವೆ 
ಗಡಿಯಾರವು ಗಡುವು ನೀಡಿ ಕಾದಿದೆ 
ಸಮಯ ಮೀರದ ಹಾಗೆ ಚಿತ್ತ ವಹಿಸುವೆ 

ಕಡೆಗೋಲಿಗೆ ಗಡಿಗೆ ತೆರೆದ ತೋಳಲಿ 
ಕಡಿದ ಮಜ್ಜಿಗೆಯ ಬೆಣ್ಣೆ ಮುದ್ದೆಯೇ 
ಕೊಡದೇ ಹೋಗದೆ ನೀ ಕಡೆಗೆ ಸಮ್ಮತಿ
ಕರಗೋ ಕಾಡಿಗೆಯ ಹೇಗೆ ತಡೆಯುವೆ?

ಬೆಳಗು ಮೂಡುವುದೇ ನಿನ್ನ ನೆನಪಲಿ 
ಮುಗುಳು ಮಾಸದೆಲೆ ಇದ್ದ ಹುರುಪಲಿ 
ಕದ್ದು ನೋಡುವುದು ಸಾಕೆಂದನಿಸಿರಲು 
ಖುದ್ದು ಹಾಜರಿಯ ಕೊಟ್ಟೆ ಕನಸಲೂ 

ಬಿತ್ತಿ ಚಿತ್ರಗಳ ಬಿಡಿಸಿ ಬಂದೆ 
ಮನೆಯ ಸುತ್ತ ಮನದ ಬಣ್ಣ ಹಚ್ಚಿ
ಹಿತ್ತಲಲ್ಲಿ ಮಲ್ಲೆ ಗಿಡವ ನೆಟ್ಟೆ 
ನೀ ತಾಕಿ ಹೂವು ಬಿರಿಯಲೆಂದು ಗರಿಯ ಬಿಚ್ಚಿ 

ಪೋಷಾಕಿನಲ್ಲೂ ಕಂಡು ಹಿಡಿವೆ 
ಆಗದಂಥ ಮೋಸಕ್ಕೂ ನೀ ಸುಂಕ ಪಡೆವೆ 
ಉಪವಾಸ ಕೆಡವಿ ಬಿಡುವೆ ನನ್ನ 
ಮಾತಿಗವಕಾಶ ಕೊಟ್ಟಂತೆ ಕಸಿದು ಬಿಡುವೆ 

ತೆರೆದೋದು ಸರಣಿ ಲೇಖನವನ್ನ 
ಪ್ರೇಮವಲ್ಲದೆ ಬೇರೇನೂ ಬರೆದವನಲ್ಲ 
ಸಹಮತದ ಸಹಿ ಹಾಕಿ ಸುತ್ತೋಲೆಯನು
ಕಳಿಸು ಮನಸಿಗೆ ಮಾಹಿತಿ ಸಿಕ್ಕಂತಿಲ್ಲ.... 

Monday, 27 January 2020

ಒಂದು ನೂರಾದರೂ ಹೊಮ್ಮುವುದು ಎದೆಯಲಿ

**ಪಲ್ಲವಿ**
ಒಂದು ನೂರಾದರೂ ಹೊಮ್ಮುವುದು ಎದೆಯಲಿ
ಹಚ್ಚೆಯ ರೂಪ ತಾಳಿದವು ಒಂದೆರಡು ಸಾಲು
ಒಂದು ಸಾಗರವೇ ಅಡಗಿರಲು ಕಣ್ಣಿನಲ್ಲಿ
ಭಾವಕೆ ಮಣಿದು ಹರಿಯುವುದು ಒಂದೆರಡು ಹನಿಯು
ಒಂದು ಇರುಳು ದಾಟಿ ಎಷ್ಟೆಲ್ಲ ಕನಸು
ಕಾಡಿ ಕಂಗೆಡಿಸಿದವು ಒಂದೆರಡು ಮಾತ್ರ
ಒಂದು ಬದುಕಿನ ಮಡಿಲಲೆಷ್ಟೊಂದು ಬಣ್ಣ
ಹಚ್ಚಿ ಸಾಗಿಸ ಬೇಕು ನಮಗೊಲಿದ ಪಾತ್ರ

ಒಂದೆರಡು ನೆನಪುಗಳೇ ಸಾಕು, ನಗು ಮೂಡಿಸೋಕೆ.. ಅಳಿಸೋಕೆ.. 


**ಚರಣ ೧**
ಒಂದೊಂದೇ ಹೆಜ್ಜೆ ದಾರಿ ತಿರುವನಕ
ನಂತರದ ದಾರಿಗಳು ಹತ್ತು ಹಲವು
ಮಿಂದೆದ್ದು ಖುಷಿಗೆ ಮರು ಗಳಿಗೆ ಬಿದ್ದು
ಸೋಲು ಕಂಡಾಗ ಮತ್ತಷ್ಟು ಬಲವು
ಹಲವಾರರ ಪೈಕಿ ನಮಗಷ್ಟೇ ಅವಕಾಶ
ಸಿಕ್ಕಂತೆ ಬದುಕಬೇಕು ಬದುಕ ಪೂರ
ಯಾರೂ ಕೈ ಹಿಡಿಯದಿರೆ ಮೇಲೊಬ್ಬ ಇರುತಾನೆ
ಬೇರೇನನೋ ಬರೆಯುತ ಮೋಡಿಗಾರ..

ಹಿಡಿಗೊಂದು ಬೆರಳಿರಲೇ ಬೇಕು, ಕಳುವಾದ ದಾರಿ ತೋರೋಕೆ.. 

ಒಂದು ಕಿಡಿ ಸೋಕಿದ ಎಲೆ ಹೊತ್ತು ಉರಿದು
ಬೆಟ್ಟ ಗುಡ್ಡಗಳ ನುಂಗುವುದು ಪ್ರಕೃತಿಯ ನೇಮ
ಒಂದು ಕಾರ್ಮುಗಿಲು ಓಲೈಸಿ ಕರಗಿದಾಗ
ಅಲ್ಲಿ ಹೊಸ ಚಿಗುರು ಮೂಡುವುದೇ ನಿಜವಾದ ಪ್ರೇಮ

**ಚರಣ ೨**
ಮನವೆಂಬ ಕೊಳದಲ್ಲಿ ಕಲ್ಲೊಂದು ಬಿದ್ದಾಗ 
ಎದ್ದ ಅಲೆಗಳು ಮತ್ತೆ ಕೂಡುವಂತೆ 
ಅವಲಂಬಿಸಿ ಬಳ್ಳಿ ಮರವನ್ನು ತಬ್ಬಿರಲು 
ಹೂವು ಬಿಟ್ಟು ಚಂದಗೊಳಿಸಿದಂತೆ 
ಇದ್ದಂತೆ ಇರುವಾಗ ಇಬ್ಬಂದಿ ಇರದಂತೆ
ಮತ್ತೊಬ್ಬರನುಕರಣೆಯಿಂದಾಗಿ ಗೋಳು
ಕನ್ನ ಹಾಕುವ ಮನೆಯ ಕನ್ನಡಿಯ ಮೊಗದಲ್ಲಿ
ಕಾಣಬಹುದು ನಮ್ಮ ಬಿಂಬ ಅದರಲ್ಲೂ 

ಒಂದಷ್ಟು ಸೋಲುಗಳು ಬೇಕು, ಸರಿ ತಪ್ಪು ಕಲಿಸಿ ನಡೆಸೋಕೆ.. 

ಒಂದು ನೂರಾದರೂ ಹೊಮ್ಮುವುದು ಎದೆಯಲಿ
ಹಚ್ಚೆಯ ರೂಪ ತಾಳಿದವು ಒಂದೆರಡು ಸಾಲು
ಒಂದು ಸಾಗರವೇ ಅಡಗಿರಲು ಕಣ್ಣಿನಲ್ಲಿ
ಭಾವಕೆ ಮಣಿದು ಹರಿಯುವುದು ಒಂದೆರಡು ಹನಿಯು
ಒಂದು ಇರುಳು ದಾಟಿ ಎಷ್ಟೆಲ್ಲ ಕನಸು
ಕಾಡಿ ಕಂಗೆಡಿಸಿದವು ಒಂದೆರಡು ಮಾತ್ರ
ಒಂದು ಬದುಕಿನ ಮಡಿಲಲೆಷ್ಟೊಂದು ಬಣ್ಣ
ಹಚ್ಚಿ ಸಾಗಿಸ ಬೇಕು ನಮಗೊಲಿದ ಪಾತ್ರ.... 

ಒಂದೆರಡು ನೆನಪುಗಳೇ ಸಾಕು, ನಗು ಮೂಡಿಸೋಕೆ.. ಅಳಿಸೋಕೆ.. 

****ಹಾಡು***

https://soundcloud.com/bharath-m-venkataswamy/uxbd6ob3weru

Thursday, 23 January 2020

ರೋಜಾ ತೋಟ ದಾಟಿದಂತೆ ನಿನ್ನ ಮನೆ

ರೋಜಾ ತೋಟ ದಾಟಿದಂತೆ ನಿನ್ನ ಮನೆ 
ತಾಜಾ ನೋಟ ಬೀರಿದಂತೆ ನಿಂತೆ ಸುಮ್ಮನೆ 
ಸಿಟ್ಟಿನಲ್ಲಿ ಸಿಕ್ಕಿಸುತ್ತ ದಾವಣಿ ನಡುವಿಗೆ 
ಆಹಾ ಲಟ್ಟಣಿಗೆ ಹಿಡಿದು ನಿಂತೆ ಮೋಹಿನಿ 

ಎಲ್ಲರೆದುರು ಅಷ್ಟು ಸದ್ದು ಮಾಡೋ ಕಿಂಕಿಣಿ 
ಒಂಟಿ ದಾರಿಯಲ್ಲಿ ಸಿಕ್ಕರಂತೂ ಕರಗೋ ಹಿಮ ಮಣಿ 
ತಲೆ ಎತ್ತಿ ನಡೆಯುತೀಯ ನಿನ್ನ ಊರಲಿ 
ಎಲ್ಲ ಸೊಕ್ಕ ಭಾರ ಹೊತ್ತುಕೊಂಡು ಟೊಂಕದಲಿ 

ದುಂಬಿ ಹಿಂಡು ಸಾಗುತಾವೆ ನಿನ್ನ ಹಿಂದೆ 
ರೋಜಾ ಹೂವ ಜೇನ ಹೀರೋ ನೆವದಲಿ 
ನಾನು ಸಗಟು ಖರೀದಿಗೆ ಬರುವೆನು 
ದಿನವೂ ಬೇರೆ ಗ್ರಾಹಕನ ಸೋಗಿನಲ್ಲಿ 

ನೆನ್ನೆಗಿಂತ ಕೆಂಪೇರಿದಂತಿದೆ ಅನ್ನುವೆ 
ನಿನ್ನ ಚಿತ್ತ ಹಬ್ಬಿದಾಗ ತೋಟದಿ 
ಅಚ್ಚರಿಯ ರಂಗು ಹರಿದು ಗಲ್ಲಕೆ 
ಕೆಂಗುಲಾಬಿ ಬಿತ್ತು ಅಲ್ಲೇ ನನ್ನ ಕಣ್ಣಿಗೆ 

ವ್ಯಾಪಾರ ಮುರಿದರೂ ಸಂಬಂಧ ಕುದುರಿತು 
ಮನಸ್ಸೆಂಬ ತೋಟದಲ್ಲಿ ಅನುರಾಗ ಅರಳಿತು 
ಬಳಿ ಬಳ್ಳಿಯಲ್ಲೂ ನಾಳೆಗೊಂದು ಹೊಸ ಮೊಗ್ಗು 
ದುಂಬಿಯ ಪರಾಗ ಸ್ಪರ್ಶವಾಗಿ ದಳಕೆ ಸಿಗ್ಗು

ಇನ್ನೂ ತೋಟ ಕಾಯೋ ಕೆಲಸ ನನ್ನದು
ನನ್ನ ಪ್ರೀತಿ ಮಾಡೋ ಕೆಲಸ ಮಾತ್ರ ನಿನ್ನದು 
ನಮ್ಮದೊಂದು ಪುಟ್ಟದಾದ ಲೋಕ ಬೇಲಿ ಒಳಗಿದೆ 
ಅದರ ಆಚೆ ಹೊತ್ತು ಉರಿವ ಜನರ ಹೊಟ್ಟೆ ಕಿಚ್ಚಿದೆ... 

ನಿಧಾನಿಸು ನಿನಾದವೇ, ಇನ್ನೇನು ಇನಿಯ ಬರುವನು

*ಪಲ್ಲವಿ*
ನಿಧಾನಿಸು ನಿನಾದವೇ, ಇನ್ನೇನು ಇನಿಯ ಬರುವನು
ಬೇಕಂತಲೇ ಸತಾಯಿಸಿ, ನನ್ನೆಲ್ಲ ಭಾವ ಹೊರುವನು
ವಿನೋದದ ವಿನಂತಿಯ, ವಿನಮ್ರವಾಗಿ ಓದುವ  
ವಿಷಾದವ ವಿಚಾರಿಸಿ, ವಿಶೇಷ ಪ್ರೀತಿ ತೋರುವ 
ಹೇಗಾದರೂ ಒಂದಾಗುವ, ನೀ ಚೂರು ತಾಳೆಯಾ!

ನಿಧಾನಿಸು ನಿನಾದವೇ, ಇನ್ನೇನು ಇನಿಯ ಬರುವನು
ಬೇಕಂತಲೇ ಸತಾಯಿಸಿ, ನನ್ನೆಲ್ಲ ಭಾವ ಹೊರುವನು

*ಚರಣ ೧*
ಅಂಗೈಯ್ಯಲಿ ಈ ಕೆನ್ನೆಯ ಮುದ್ದಾಗಿ ಸೋಕುತ
ದಿನ ಹೊಸ ಕತೆಯ ಹೊತ್ತು ಹೇಳಿ ಕೂರುವ  
ಉಯ್ಯಾಲೆಯು ತೂಗೋ ಥರ ಸಮೀಪ ಸಾರುತ 
ಮರು ಕ್ಷಣ ತೆರೆ ಮರೆಗೆ ಜಾರಿ ಹೋಗುವ 
ನಿರಂತರ ತರಂಗವಾಗಿ ನನ್ನಲೇ ಉಲಿದರೂ 
ಮಧ್ಯಂತರ ಮೌನ ತಾಳಿದ 
ಅವಾಂತರ ಸೃಷ್ಟಿ ಮಾಡಿ ದೂರ ನಿಂತೇ ನಗುವವ 
ನಿರುತ್ತರ ರೂಢಿ ಮಾಡಿದ...  
ನಿಧಾನಿಸು ನಿನಾದವೇ, ಇನ್ನೇನು ಇನಿಯ ಬರುವನು
ಬೇಕಂತಲೇ ಸತಾಯಿಸಿ, ನನ್ನೆಲ್ಲ ಭಾವ ಹೊರುವನು

*ಚರಣ ೨*
ದಿನಂಪ್ರತಿ ದಿಗಂತಕೆ ನನ್ನನು ಒಯ್ಯುತ
ಅನಂತದಲ್ಲಿ ನನ್ನ ಅವನ ಪಾತ್ರ ಬಿಡಿಸುವ
ಅಲಂಕೃತ ಕಲಾಕೃತಿ ನಾನೆಂದು ಬಣ್ಣಿಸಿ
ಪರೋಕ್ಷವಾಗಿ ನನ್ನ ಮನಕೆ ಗಾಳ ಹಾಕುವ
ನಿರೀಕ್ಷೆಗೊಂದು ನಕ್ಷೆ ಗೀಚಿ ತಣಿಸುವ ಚೋರನು
ಪರೀಕ್ಷೆಯಲ್ಲೂ ಅಂಕ ಗಳಿಸಿದ
ಮೂರಕ್ಷರಕ್ಕೆ ನೂರು ಅರ್ಥ ಕಲ್ಪಿಸಿ ನಿರೂಪಿಸಿ
ತಟಸ್ಥನಾಗಿ ಮನವ ಸೇರಿದ

ನಿಧಾನಿಸು ನಿನಾದವೇ, ಇನ್ನೇನು ಇನಿಯ ಬರುವನು
ಬೇಕಂತಲೇ ಸತಾಯಿಸಿ, ನನ್ನೆಲ್ಲ ಭಾವ ಹೊರುವನು
ವಿನೋದದ ವಿನಂತಿಯ, ವಿನಮ್ರವಾಗಿ ಓದುವ  
ವಿಷಾದವ ವಿಚಾರಿಸಿ, ವಿಶೇಷ ಪ್ರೀತಿ ತೋರುವ 
ಹೇಗಾದರೂ ಒಂದಾಗುವ, ನೀ ಚೂರು ತಾಳೆಯಾ!

ನಾನು ನೀರು ನೀನು ಬಣ್ಣ

ನಾನು ನೀರು ನೀನು ಬಣ್ಣ
ಬೆರೆತು ಹೋಗು ನನ್ನಲಿ
ನಾನು ನೀರು ನೀನು ಹರಿವು
ತ್ರಾಣವಾಗು ನನ್ನಲಿ
ನಾನು ನೀರು ನೀನು ಆವಿ
ಹಬ್ಬುವಾಸೆ ಜಗವನು 
ನಾನು ನೀರು ನೀನು ಅಲೆಯು
ತಲ್ಲಣಿಸು ಕ್ಷಣದಲಿ..!

ನಾನು ಮಣ್ಣು ನೀನು ಹೊನ್ನು 
ಹುದುಗಿ ಹೋಗು ಕಾಣದೆ 
ನಾನು ಮಣ್ಣು ನೀನು ತೇವ 
ಬಿರುಕು ಬಿಟ್ಟ ಬಾಳಿಗೆ 
ನಾನು ಮಣ್ಣು ನೀನು ಬೇರು 
ಆಸೆ ಬಳ್ಳಿ ಚಿಗುರಲು 
ನಾನು ಮಣ್ಣು ನೀನು ಜಾಡು 
ಪ್ರೇಮ ಪಯಣ ಸಾಗಲು!

ನಾನು ಗಾಳಿ ನೀನು ಕೊಳಲು 
ಜೋಡಿ ನಾದ ಹೊಮ್ಮಲು 
ನಾನು ಗಾಳಿ ನೀನು ಉಸಿರು 
ಒಂದೇ ಆಗಲಿಬ್ಬರೂ 
ನಾನು ಗಾಳಿ ನೀನು ತಂಪು 
ತಂಗಾಳಿ ತಳಿರಿಗೆ 
ನಾನು ಗಾಳಿ ನೀನು ತೆನೆ 
ಮಾಗಿ ತೂಗಿ ತೊನೆಯಲು 

ನಾನು ಕಿಚ್ಚು ನೀನು ಹೊಸೆ 
ಹೊತ್ತುಕೊಂಡ ಒಲವಲಿ 
ನಾನು ಮಿಂಚು ನೀನು ಹುಳು 
ಸುತ್ತುವರಿದ ಇರುಳಲಿ 
ನಾನು ಕಿಡಿ ನೀನು ಗರಿಕೆ 
ಸಿಟ್ಟು ಸೆಡವು ಮಸೆದರೆ
ನಾನು ಹಣತೆ ನೀನು ಉರಿ 
ಬಾಳೇ ಬೆಳಕು ಬೆರೆತರೆ 

ನಾನು ಮುಗಿಲು ನೀನು ಹನಿ 
ಕೂಡಿ ಕಟ್ಟು ನನ್ನನು 
ನಾನು ನಕಲಿ ನೀನು ನೀಲಿ 
ಅಸ್ತಿತ್ವಗೊಂಡೆನು  
ನಾ ಬಾನು ನೀ ಬಾನುಲಿ
ಒಂಟಿತನ ಅಸಂಭವ 
ನಾ ಅನಂತ ನೀ ದಿಗಂತ 
ಗುಟ್ಟು ನಮ್ಮ ಸಂಭವ... 

Tuesday, 21 January 2020

ಕನಸಿನ ಗುರುಕುಲ ಕಲಿಸಿದೆ ಒಲವಿನ ಅಕ್ಷರ

*ಪಲ್ಲವಿ*
ಕನಸಿನ ಗುರುಕುಲ ಕಲಿಸಿದೆ ಒಲವಿನ ಅಕ್ಷರ 
ಬರೆಯುವೆ ವಿವರಿಸಿ ಕೊಡುವೆಯಾ ಹೃದಯವ ನಂತರ 
ಮೊದಲೇ ಕಾದಿರಿಸು, ಮೊಗದಿ ಹೂ ನಗೆಯ 
ಜೊತೆಗೆ ಕರೆದೊಯ್ಯುವೆ ಮನಸಾಗುವ ಕಡೆಗೆ.... 

ಕನಸಿನ ಗುರುಕುಲ ಕಲಿಸಿದೆ ಒಲವಿನ ಅಕ್ಷರ 
ಬರೆಯುವೆ ವಿವರಿಸಿ ಕೊಡುವೆಯಾ ಹೃದಯವ ನಂತರ 

*ಚರಣ ೧*
ಮಾಡಿಬಿಡುವೆ ನಿನಗೆ ಪುನಃ
ನನ್ನ ನಿನ್ನ ಪರಿಚಯ
ಹೇಳಿ ಕೊಡುವೆ ಕಣ್ಣ ಮರೆಗೆ
ಅಡಗಿಸಿಡಲು ವಿಸ್ಮಯ
ಆಗಬಹುದೇ ಹೇಳು ನಾನು ನಿನ್ನ ಸಖನು
ಮೂಡಿ ಬರುವ ಸಣ್ಣ ಬೆಳಕು
ಸೀಳುವಂತೆ ಇರುಳನು
ನಾಳೆಯನ್ನು ಅಂದಗೊಳಿಸಿ
ಮುಂಗಡ ಕಾದಿರಿಸುವೆ 
ಬಾಕಿ ಮಾತು ಭೇಟಿಯಲ್ಲೇ ಹೇಳಲೇನು?

ನಗುವೆ ನಿನಗೊಲಿದು, ಕರೆವೆ ಬರಸೆಳೆದು
ಬದುಕೇ ಬದಲಾಗಿದೆ ನೀ ತೆರೆಯಲು ಕದವ... 

 *ಚರಣ ೨*
ನಿನ್ನ ಬಳಿಯೇ ಇರಲಿ ನನ್ನ 
ತುಂಬಲಿರುವ ದಿನಚರಿ 
ಕುಂಟು ನೆಪವ ಹಿಡಿದು ಬರುವೆ 
ನಿತ್ಯ ನಿನ್ನ ಎದುರಲಿ 
ನನ್ನ ವರದಿ ನಿನ್ನ ವಿನಃ ಯಾರೂ ಕೊಡರು 
ಮುಗಿದ ಮಾತೇ ಮತ್ತೆ ಮತ್ತೆ 
ತರಿಸದೇಕೆ ಬೇಸರ 
ಹೋದಲ್ಲೆಲ್ಲಾ ಬರುತನಲ್ಲ 
ರಾತ್ರಿ ವೇಳೆ ಚಂದಿರ 
ಗುಟ್ಟು ಗುಟ್ಟಾಗುಳಿಯುವಂತೆ ಪೀಡಿಸುತಿರು 

ನಿದಿರೆ ಚದುರಿರಲು, ಬರಲಿ ನಿನ್ನ ಮುಗಿಲು 
ಬಿರಿದ ಎದೆಯನ್ನು ನೀ ಆವರಿಸುವ ಸಮಯ 


ಕನಸಿನ ಗುರುಕುಲ ಕಲಿಸಿದೆ ಒಲವಿನ ಅಕ್ಷರ 
ಬರೆಯುವೆ ವಿವರಿಸಿ ಕೊಡುವೆಯಾ ಹೃದಯವ ನಂತರ 
ಮೊದಲೇ ಕಾದಿರಿಸು, ಮೊಗದಿ ಹೂ ನಗೆಯ 
ಜೊತೆಗೆ ಕರೆದೊಯ್ಯುವೆ ಮನಸಾಗುವ ಕಡೆಗೆ.... 

***ಹಾಡು***

https://soundcloud.com/bharath-m-venkataswamy/cpq05c8kbnlw

Saturday, 18 January 2020

ಹನಿಯೊಂದಿಗೆ ಹನಿ ಕೂಡಿ ಹರಿಯಿತು

**ಪಲ್ಲವಿ**
ಹನಿಯೊಂದಿಗೆ ಹನಿ ಕೂಡಿ ಹರಿಯಿತು 
ಕಿಟಕಿ ಗಾಜಲಿ ಏನೋ ಬರೆಯಿತು 
ಹೊರಗೆ ಸುಡುವ ಚಳಿ 
ಒಳಗೆ ಕೊರೆಯೋ ಬಿಸಿ 
ನಡುವೆ ತೊನೆದಾಡಿತು ಸಂಕೋಚವು

ಹನಿಯೊಂದಿಗೆ ಹನಿ ಕೂಡಿ ಹರಿಯಿತು 
ಕಿಟಕಿ ಗಾಜಲಿ ಏನೋ ಬರೆಯಿತು 

**ಚರಣ ೧**
ಪರದೆಯ ಸರಿಸುವ ಸಮಯ ಬಂದಿದೆ 
ಸನಿಹಕೆ ಕರೆಯದೆ ದೂರ ನಿಲ್ಲುವೆ 
ಪ್ರಶ್ನೋತ್ತರ ಅಪ್ರಸ್ತುತ ಆನಂತರ
ಕರಗುವ ಮುಗಿಲಿಗೆ ಬಯಕೆ ತಣಿಯದೆ 
ಚಿಟ-ಪಟ ಪ್ರಣಯದ ಕವಿತೆ ಪಠಿಸಿದೆ 
ಶೃಂಗಾರವು ಹಂಗಿಲ್ಲದೆ ಶರಣಾಗಿದೆ
ಬಿಡುಗಡೆಯೇ ಇಲ್ಲದ 
ಸಡಗರವು ನಮ್ಮಲಿ 
ಸೆರೆಮನೆಯ ಸ್ಥಾಪಿಸಿ ಸೆರೆಯಾಗಿದೆ 

ಹನಿಯೊಂದಿಗೆ ಹನಿ ಕೂಡಿ ಹರಿಯಿತು 
ಕಿಟಕಿ ಗಾಜಲಿ ಏನೋ ಬರೆಯಿತು... 

**ಚರಣ ೨**
ಅನುಮತಿ ಇರದೆಯೇ ಕೊಟ್ಟ ಚುಂಬನ 
ತರಗತಿ ಕಲಿಸದ ಪ್ರಶ್ನೆಯಾಗಿದೆ 
ನಾ ಉತ್ತರ ಕೊಡುವಾಗ ನೀ ಕಣ್ಮುಚ್ಚಿಕೋ 
ಭಯದಲಿ ನಡುಗುವ ಸಣ್ಣ ದನಿಯಲಿ 
ತಲುಪಿದ ಮನವಿಯ ತಳ್ಳಿ ಹಾಕು ನೀ 
ತಪ್ಪಾದರೆ ನೀನೇ ಹೊಣೆ ಅಂತಂದುಕೋ 
ಸಮಯವೇ ಸಾಲದು 
ಕಣ್ಣ ತೆರೆದೋದಲು 
ಕಲ್ಪನೆಯ ಕನ್ನಡಿ ಎದುರಲ್ಲಿದೆ.. 

ಹನಿಯೊಂದಿಗೆ ಹನಿ ಕೂಡಿ ಹರಿಯಿತು 
ಕಿಟಕಿ ಗಾಜಲಿ ಏನೋ ಬರೆಯಿತು 
ಹೊರಗೆ ಸುಡುವ ಚಳಿ 
ಒಳಗೆ ಕೊರೆಯೋ ಬಿಸಿ 
ನಡುವೆ ತೊನೆದಾಡಿತು ಸಂಕೋಚವು

**ಹಾಡು**

https://soundcloud.com/bharath-m-venkataswamy/cnqwz014jdil

ನಿನ್ನದೇ ಹೆಸರನ್ನು ಕರೆವೆ, ಕೇಳಿ ನೋಡು ಆದರೆ

**ಪಲ್ಲವಿ**
ನಿನ್ನದೇ ಹೆಸರನ್ನು ಕರೆವೆ, ಕೇಳಿ ನೋಡು ಆದರೆ 
ಬೇಗುದಿ ಮನದಾಳದಿಂದ ಮೂಡಿ ಬಂತು ಈ ಕರೆ
ನಿನ್ನದೇ ಹೆಸರನ್ನು ಕರೆವೆ...   

**ಚಾರಣ ೧**
ಎಂದಿನಿಂದಲೋ ನಡೆದಿದೆ, ಪ್ರೇಮದ ದೀಪೋತ್ಸವ (೨)
ನೀನು ಹಚ್ಚಿದ ಮೇಣದಿ, ನಾನು ಕರಗುವ ಸಂಭವ

ದೂರಕೆ ಕರೆದೊಯ್ಯುವಾಗ, ಹೇಳ ಬೇಡ ಎಲ್ಲಿಗೆ
ಸಾಗುವೆ ತುಸು ಭಾರವಾಗಿ, ಹಗುರವಾಗಿಸು ಮೆಲ್ಲಗೆ 
ನಿನ್ನದೇ ಹೆಸರನ್ನು ಕರೆವೆ...   

**ಚಾರಣ ೨**
ನಿನ್ನ ಗಮನದ ಗಮ್ಯ ನಾ, ನನ್ನ ಗಮನ ನಿನ್ನೆಡೆ (೨)
ನೀನು ಇರಲು ಖುಷಿಗಳು ಸಿಕ್ಕಿದಂತೆ ಒಂದೆಡೆ 

ತೇಲಿಸು ಆ ಕಣ್ಣಿನೊಳಗೆ, ಆಸೆ ಹೊತ್ತ ಹಡಗನು 
ಆಲಿಸು ಪಿಸುಮಾತಿನಲ್ಲಿ ಹೇಳುವಾಸೆ ಒಲವನು 
ನಿನ್ನದೇ ಹೆಸರನ್ನು ಕರೆವೆ...   

**ಚಾರಣ ೩**
ನೀನು ಸೋಕುವ ವೇಳೆಗೆ, ವೀಣೆಯಾಗುವ ಹಂಬಲ (೨)
ಮಾಗಬೇಕಿದೆ ಕಾವಿಗೆ, ಒಮ್ಮೆ ಎದೆಗೆ ಒರಗಲಾ?

ಹೇರು ನೀ ಕನಸೆಲ್ಲವನ್ನು, ನಾನೇ ಹೊತ್ತು ತಣಿಯುವೆ 
ಖಾಲಿ ಉಳಿದ ಜಾಗದಲ್ಲಿ ನನ್ನೇ ತುಂಬಿ ಕಳಿಸುವೆ 
ನಿನ್ನದೇ ಹೆಸರನ್ನು ಕರೆವೆ...

ಹಾಡು 
---------
https://soundcloud.com/bharath-m-venkataswamy/i4j0odsz5dcy

Thursday, 16 January 2020

ಖಾಲಿ ಪುಸ್ತಕವೊಂದು ಸಿಕ್ಕಿದೆ

ಖಾಲಿ ಪುಸ್ತಕವೊಂದು ಸಿಕ್ಕಿದೆ
ತುಂಬಿಸಬೇಕು ತವಕದಲಿ
ರಾತ್ರಿ ಪಾಳಿಯ ಮುಗಿಸಿ ಕಾದಿವೆ
ಮನದ ಮೂಡಣದಲಿ ಸಾಲು
ಮೊದಲ ಅಕ್ಷರ ಬೆದರಿ ಸತ್ತಿದೆ 
ಚಿತೆಯ ಊರಿಗೆ ಚೀರಾಟ 
ಸಂತೆಯಲಿ ಕಳುವಾಗಿದೆ ಭಾವ 
ಮುಗಿಸಲಿ ಹೇಗೆ ಮೊದಲ ಪುಟ?

ಒಂದು ಎರಡು ಹತ್ತಾರು 
ಅದರಾಚೆಗೆ ಹರಿದರೂ ಸುಳುವಿಲ್ಲ 
ಬುಡ್ಡಿ ದೀಪದ ಬುಡದ ಕತ್ತಲು
ಗೋಡೆ ಹತ್ತಿ ಕುಳಿತಿತ್ತು 
ಬೆರಳ ಮಸಿಗೆ ರೇಗುತ 
ಮರಳಿ ತಿರುಳ ತಿದ್ದಿ ತೀಡುತ 
ಹೊರಳಿ ಕೊನೆಯ ಹಾಳೆಗೆ ತಲುಪಿದೆ 
ಒಡೆದ ಸರಣಿಯ ಜೋಡಿಸಲು 

ನಡುವೆಲ್ಲೋ ಪು.ತಿ.ನೋ ಬರೆದೆ 
ತಿರುಗಿಸಲಿರಲಾರದು ನಂಟು 
ಲೇಖನಿ ಮೊನೆಯೊತ್ತಲು ಮುರಿಯುವುದು 
ಒತ್ತಕ್ಷರಗಳೂ ಹಠಮಾರಿ 
ಎಲ್ಲ ಕಗ್ಗಂಟನು ಬಿಡಿಸಲು 
ಶಾಯಿ ಉಳಿದಿತ್ತು ಚೂರೇ ಚೂರು 
ಕಸದ ಬುಟ್ಟಿಯ ಒಳಗೆಲ್ಲೊ 
ಮೊಳಗಿತು ವಿಕೃತ ಆನಂದ 

ಗೀರಿ ಹೊತ್ತು ಹೊಳೆಯಲು 
ಬೆಂಕಿ ಕಡ್ಡಿಯೇ ತಲೆ ಬುರುಡೆ?
ಗಲ್ಲಕೆ ಬೊಟ್ಟು ಇಟ್ಟು ಅಟ್ಟಕೆ 
ಕಣ್ಣ ನೆಟ್ಟರೆ ಉದುರೀತೆ ಸಾಲು?
ತೇದರೆ ಕತ್ತನು, ಬೈದರೆ ಬೆರಳನು
ಕೈ ಹಿಡಿಯುವುದೇ ಪದ ಮಾಲೆ?
ಹಣೆ ಪಟ್ಟಿಯ ಬದಲಾಯಿಸಲು 
ಹಣೆ ಬರಹವೇ ಬದಲಾದೀತೆ?

ಮೊದಲು ಮನದ ಸೆರೆ ಬಿಡಿಸಿ 
ಹಗಲು ರಾತ್ರಿಗಳನು ಸವೆಸಿ 
ಎಲ್ಲೋ ಕನಸಿನ ಮೂಲೆಗೆ 
ಎಂದೋ ಎಸೆದ ರದ್ದಿಯ ಸಮ್ಮತಿಗೆ 
ಬುಗ್ಗೆಯ ಹಾಗೆ ಚಿಮ್ಮಲು ರಸ 
ಹಿಂದೆಯೇ ಸುಗ್ಗಿ ಸಾರಿರಲು 
ನಿದ್ದೆಯಿಂದೆಚ್ಚರವಾಗಿಸುವುದು 
ಅಲ್ಲೇ ಕವಿತೆ ಹುಟ್ಟುವುದು.... 

ತಮಾಷೆಗೊಂದು ಹಾಡು ಕೇಳಿ ಎಲ್ಲರೂ

ತಮಾಷೆಗೊಂದು ಹಾಡು ಕೇಳಿ ಎಲ್ಲರೂ 
ವಿಶೇಷವೇನೂ ಇಲ್ಲ ಇಲ್ಲಿ ಆದರೂ 
ನಾಗೋಕೆ ಬೇಕು ನಮಗೆ ಒಂದು ಕಾರಣ 
ಬಾಳೊಂದು ತುಂಡು ನಾಟಕ 

ಹೇಳಬೇಕು ಅನಿಸಿ ಹೇಳಿಕೊಂಡೆನು 
ಬೇಕು ಬೇಡ ಎಲ್ಲ ನಿಮಗೆ ಬಿಟ್ಟೆನು (೨)
ತಲೆ ಸರಿ ಇದೆ ಅನ್ನೋದೇ ಆದರೆ 
ಅದೇ ತಗೋ ನಮ್ಮಲ್ಲಿರೋ ಆ ತೊಂದರೆ 
ಕೆಡೋ ಥರ ನಾ ಹಾಡುವೆ ಈ ಹಾಡನು 
ನಾನಲ್ಲ ಒಳ್ಳೆ ಗಾಯಕ 

ಇಲ್ಲದ್ದೆಲ್ಲವನ್ನೂ ಬಲ್ಲೆ ಅಂದವ 
ಮೀಸೆ ಮಣ್ಣ ಒದರಿಕೊಂಡ ಮಾನವ (೨)
ಅದೇ ಕತೆ ಹೊಸ ಜೊತೆ ಈ ದಾರಿಗೆ 
ಆ ದೂರಕೆ ಕಾಣೋ ಬೆಟ್ಟನೂ ನುಣ್ಣಗೆ 
ನಿರಂತರ ಸವಾರಿಗೂ ಇದೆ ಕೊನೆ 
ನಾಳೆ ಅನ್ನೋದೇ ಕೌತುಕ.... 

**ಹಾಡು**

Tuesday, 14 January 2020

ಕಾರ್ತಿಕದ ಕೊಳದಲ್ಲಿ

ಕಾರ್ತಿಕದ ಕೊಳದಲ್ಲಿ ಗುಳಿ ಬಿದ್ದು ಅಲೆಯೆದ್ದು 
ತೇಲಿ ಬಿಟ್ಟ ದೀಪವ ಕುಣಿಸುತಿತ್ತು
ಚೆಲುವಿಗೂ ಮಿಗಿಲಾದ ಹೊಳೆವ ಮುಖವೊಂದರ 
ಬಿಂಬ ಗೇಲಿ ಮಾಡಿ ಬೆಳಕ ಮಣಿಸಿತ್ತು

ಗುಡಿ ದ್ವಾರದ ತೋರಣದ ಅಲಂಕಾರಕೆ 
ಚೆಲುವು ಮುಡಿದ ಹೂವ ಪರಿಚಯವೂ ಇತ್ತು 
ಗಾಳಿಯೆದುರು ಸೆಣೆಸಿ ನರ್ತನ ಮುಗಿಸಿದ 
ನೀಲಾಂಜನಕೆ ನೋಟ ನಿಟ್ಟುಸಿರ ತುತ್ತು 

ಎಚ್ಚೆತ್ತ ಪಂಚವಾದ್ಯಗಳನುಸಂಧಾನ  
ನಾದ ಸ್ವರದಿಂಚರಕೆ ಸ್ಪೂರ್ತಿಯನ್ನಿತ್ತು 
ಮೆಟ್ಟೋ ಕಲ್ಲು ದೇವರಾಗಿಲ್ಲದ ಕೊರಗ 
ಮೆಟ್ಟಿದ ಪಾದವದು ನೀಗಿಸುವ ಹೊತ್ತು 

ಸುಪ್ತ ಪರ್ವತವೊಡಲು ಹೊದ್ದ ಹಿಮವ ಸೀಳಿ 
ತೂಗಿದ ಹಸಿರಲ್ಲಿ ಚೆಲುವು ಮರೆಯಾಯ್ತು 
ಗುಪ್ತಗಾಮಿನಿಯ ದೀರ್ಘಾವಧಿ ದರ್ಶನಕೆ 
ಹಂಬಲಿಸಿ ಕಲ್ಲು ದೇವರೂ ಮಿಡಿದ ಸೋತು 

ಚಲುವ ಕೈಸೆರೆಯಾಗಿ ಎಲ್ಲವೂ ಚೆಲುವು 
ಕಾಣದವರಿಗೆ ಅದು ಅತಿಶಯವೇ ಹೊರತು 
ತಲ್ಲೀನರಾದವರು ಬಲಹೀನರೇನಲ್ಲ 
ಬಣ್ಣಿಸಲು ಸೋತು ಶರಣಾಗುವುದೇ ಗತ್ತು....

Sunday, 12 January 2020

ಎಲ್ಲಿಗೆಂದು ಹೇಳಬೇಡ ಕರೆದು ಹೋಗು ಮೆಲ್ಲಗೆ

ಎಲ್ಲಿಗೆಂದು ಹೇಳಬೇಡ
ಕರೆದು ಹೋಗು ಮೆಲ್ಲಗೆ
ಮರಳಿ ನನ್ನ ಗೂಡ ತೋರಿ
ತೊರೆಯಬೇಡ ಹಾದಿಯ
ಬಾಚಿ ತಬ್ಬಿ ಬೆಚ್ಚಗಿರಿಸಿ
ತೋಚಿದಂತೆ ನಗಿಸುತ
ಹೇಗೋ ಹಾಗೆ ಮಡಿಲಲಿರಿಸು
ಹಾಸಿ ಕನಸ ಕೌದಿಯ

ದೂರದೂರದಿ ಬೇರ ನೆಟ್ಟು
ಬೇಲಿ ಹಾಕುವೆ ಮನಸಿಗೆ
ವಾಲು ನನ್ನೆಡೆ ನನ್ನ ಹಾಗೆ
ಭುಜಕೆ ತಾಕಿಸಿ ಭುಜವನು
ಬಳ್ಳಿಯಂತೆ ನೀನು ನಾನು
ಅಂಕೆ ಮೀರಿ ಸುರುಳುತ
ಬಿದ್ದ ಹೂವ ಲೆಕ್ಕವಿಡುವ
ಹಂಚಿಕೊಂಡು ಬಾಳನು

ಕಣ್ಣ ಮುಚ್ಚಿ ತೋರು
ಆದರೆ ಬಣ್ಣಿಸು ನೀ ಬಣ್ಣವ
ಕಣ್ಣು ತೆರೆದು ನೋಡು
ಅಚ್ಚರಿ ಕಾದು ಕುಳಿತಿದೆ ಕಣ್ಣಲಿ
ನೀನು ರೂಪಿಸಿ ಹೋದ
ಮೌನವ ದಾಟಲಾರೆನು ಆದರೆ
ನೀನು ತೊಡಿಸಿದ ಗೆಜ್ಜೆ ಸದ್ದಿಗೆ
ಕುಣಿಯುವಾಸೆ ನನ್ನಲಿ

ಗಂಧ ತೀಡಿ ಕರಗುವಂತೆ
ಹರಡುವಂತೆ ಕಂಪನು
ನಿನ್ನ ಕಾಡಿಗೆ ಕಣ್ಣ ಕರಗಿಸಿ
ಉರುಳಿತೊಂದು ಕಂಬನಿ
ಕನ್ನೆಯಿಂದ ಕನ್ನೆಗಿಳಿಸಿ
ನಿನ್ನದೆಂಬಂತೆ ಬಿಂಬಿಸು
ಓಲೈಸುವೆ ಸಣ್ಣ ನಗುವಲಿ
ಭಾವ ವಿನಿಮಯವಾಗಲಿ

ನಮ್ಮ ನೆರಳ ಹಿಡಿದ ಕೊಳವು
ರಿಂಗಣಿಸಿದೆ ನಾಚುತ
ಆಚೆ ಈಚೆಗೆ ಸಾರಿ ಕುಣಿದಿದೆ
ತೇಲಿ ಬಿಟ್ಟ ದೀಪವು
ತಾರೆ ಉಟ್ಟ ಸೀರೆ ಹೊಳಪು
ಧಾರೆ ಎರೆದು ಜೊನ್ನ ಸಹಿತ
ನನ್ನ ಹುಡುಕುವ ಮುನ್ನ ಒಲಿಸಿಕೋ
ದಂಗೆ ಏಳಲಿ ನಭದಲಿ..

Saturday, 11 January 2020

ಸಾಮಜವರಗಮನ

**ಪಲ್ಲವಿ**
ನಿನ್ನ ಚರಣ ಹಿಡಿದು ಬಿಡೆನು ಅಂದವು ನೋಡೇ ಈ ಕಣ್ಣು
ನೀ ಕಣ್ಣನು ಹೀಗೆ ಮೆಟ್ಟುತ ಸಾಗುವೆ ದಯೇ ಇಲ್ಲವೇನು?
ಆ ಕಣ್ಣಿಗೆ ಕಾವಲಿನಂತೆ ನಾ ತೀಡುವೆ ಕನಸುಗಳನು
ಅದು ಚದುರಿದರೆ ಕುಲುಮೆಯಂತೆ ಕುದಿಯುವೆನು ನಾನು
ನನ್ನುಸಿರ ಧಾಟಿಗೆ ಕುಣಿಯುತಿರಲು ನೀ ಮುಂಗುರುಳನ್ನು 
ಕಿವಿ ಮರೆಗೆ ನೂಕಿ ಬಂಧಿಸುವಾಗ ಖಂಡಿಸ ಬಾರದೇನು?

ಸಾಮಜವರಗಮನ, ನಿನ್ನ ಮೇಲೆ ಹರಿದು ಗಮನ 
ಮನಸು ಹಿಡಿತ ತಪ್ಪಿದಂತೆ ಮರೆತೆ ಚಲನ ವಲನ (೨)

ಆ ಚರಣ ಹಿಡಿದು ಬಿಡೆನು ಅಂದವು ನೋಡೇ ಈ ಕಣ್ಣು
ನೀ ಕಣ್ಣನು ಹೀಗೆ ಮೆಟ್ಟುತ ಸಾಗುವೆ ದಯೇ ಇಲ್ಲವೇನು? 

**ಚರಣ**
ಮಲ್ಲಿಗೆ ಮಾಸವೇ, ಮಂಜುಳ ಹಾಸವೇ 
ಪ್ರತಿ ತಿರುವಿನಲ್ಲೂ ಎದುರುಗೊಂಡ ಸುಂದರ ಮೊಗವೇ 
ಬಿರಿದ ಹೂದೋಟವೇ, ಬಣ್ಣದ ಸಾರವೇ 
ವಶವಾಗುವಂತೆ ಬೆರಗು ಮಾಡಿ ನನ್ನನು ಸೆಳೆವೆ 

ಏನೇ ತಡೆಯಾದರೂ, ನಿನ್ನ ನೆರಳಾಗಲು
ಅನುಮತಿ ಕೊಡುವೆಯಾ ಬೇಗ?
ಎಷ್ಟೇ ಗೋಗರೆದರೂ, ನೀನೇ ಗತಿಯೆಂದರೂ 
ನೀಡಬಾರದೇಕೆ ನಿನ್ನ ಮನಸಲಿ ಜಾಗ...?

ಸಾಮಜವರಗಮನ, ನಿನ್ನ ಮೇಲೆ ಹರಿದು ಗಮನ 
ಮನಸು ಹಿಡಿತ ತಪ್ಪಿದಂತೆ ಮರೆತೆ ಚಲನ ವಲನ 

ಆ ಚರಣ ಹಿಡಿದು ಬಿಡೆನು ಅಂದವು ನೋಡೇ ಈ ಕಣ್ಣು
ನೀ ಕಣ್ಣನು ಹೀಗೆ ಮೆಟ್ಟುತ್ತ ಸಾಗುವೆ ದಯೇ ಇಲ್ಲವೇನು?
ಆ ಕಣ್ಣಿಗೆ ಕಾವಲಿನಂತೆ ನಾ ತೀಡುವೆ ಕನಸುಗಳನು
ಅದು ಚದುರಿದರೆ ಕುಲುಮೆಯಂತೆ ಕುದಿಯುವೆನು ನಾನು


*ಹಾಡು*
https://soundcloud.com/bharath-m-venkataswamy/anvgwbrusjt8

Wednesday, 8 January 2020

ಏಕೆ ಮೀಟುವ ತಂತಿ ಕೊರಳಿಗೆ ಎರಗಿತು?

ಏಕೆ ಮೀಟುವ ತಂತಿ ಕೊರಳಿಗೆ ಎರಗಿತು?
ಇಂದೇಕೆ ನಗಾರಿ ಬಾಸುಂಡೆಗಿಳಿದವು?
ಏಕೆ ಕೊಳಲು ಉಸಿರ ದೋಚೆ ಮುಂದಾಯಿತು?
ಯಾವ ಹಲಗೆ ತೊಗಲಿಗೆ ಕರೆ ಕೊಟ್ಟವು?

ಯಾವ ಪೋಷಾಕಿನಲಿ ಉತ್ತಮ ಎನಿಸುವೆ?
ಯಾವ ಗ್ರಂಥವು ಸ್ಪೂರ್ತಿ ನಿನ್ನ ಅಶಾಂತಿಗೆ?
ಯಾವ ಹೆಸರಿಗೆ ನೀ ಸ್ಪಂದಿಸುವೆ ನಿಜವಾಗಿ?
ಯಾವ ಮಣ್ಣಿಗೆ ನೀ ತಲೆ ಬಾಗುವೆ?

ಎಡವಿದ ಎಡಗಾಲ ಕತ್ತರಿಸು ಒಮ್ಮೆಗೆ 
ಬಲದಲ್ಲೇ ಬಲವೆಂದು ಕುಂಟುತ್ತ ಸಾಗು 
ಹಿಂದುಳಿದೆ ಎನಿಸಿದರೆ ಹೆಗಲ ಆಸರೆ ಇಗೋ 
ಎಡ-ಬಲದ ನಡಿಗೆಯಲಿ ದಾಟು ದೂರ 

ಹಿತವೆನಿಸುವವರೆಡೆಗೇ ಅಹಿತಕರ ಧೋರಣೆ 
ನಿಷ್ಕರುಣಿ ಮನಸು ಮರುಭೂಮಿಯಂತೆ 
ಪ್ರೇಮ ಚಿಗುರನು ಚಿವುಟಿ ವಿಷವುಣಿಸಿದೆ ಬುಡಕೆ 
ನೆರಳಿತ್ತ ಮರವನ್ನೇ ಉರುಳಿಸಿದೆ ಹಗೆಗೆ

ನೀ ನಾಳೆ ಎಲ್ಲವನೂ ಬಿಟ್ಟು ಬದುಕಲು ಬಹುದು 
ನಿನ್ನ ಕುರುಹುಗಳಲ್ಲೇ ಪ್ರಚೋದಿಸುತ್ತಿವೆಯಲ್ಲ!
ಒಬ್ಬರ ದನಿಯನ್ನು ಹೊಸಕಿ ಹಿಮ್ಮೆಟ್ಟಿದವ 
ನಿನಗೆ ದನಿಯೆತ್ತುವ ಔಚಿತ್ಯವಿಲ್ಲ...!

ದೊಣ್ಣೆ ಹಿಡಿದ ನಿನ್ನ ಕೈಯ್ಯಿ ಎಷ್ಟು ದುರ್ಬಲ

ದೊಣ್ಣೆ ಹಿಡಿದ ನಿನ್ನ ಕೈಯ್ಯಿ ಎಷ್ಟು ದುರ್ಬಲ 
ಮುಸುಕು ತೊಟ್ಟು ಬಂದೆ ನಿನ್ನ ರಾಕ್ಷಸತ್ವಕೆ 
ನೀ ರಾಡಿಗೊಳಿಸಿ ಹೋದ ಹಾದಿ ನಿನ್ನದೇ 
ನೆತ್ತರ ಮಜ್ಜನದಲ್ಲಿ ತೊಳೆಯೆ ಬಂದೆಯಾ?

ನೋಡಿಲ್ಲಿ ಗಾಯಗೊಳದ ತಲೆಗಳಿಷ್ಟಿವೆ 
ಎಲ್ಲವನ್ನೂ ಬೀಸಿ ಬರಲು ಲಾಠಿ ಎಷ್ಟಿವೆ?
ಬೆರಳಚ್ಚು ಬಿಟ್ಟೆ ಒಡೆದು ನಿನ್ನ ಮನೆಯನೇ 
ನಿನ್ನ ನೀನೇ ಕಳೆದು ಬಿಟ್ಟೆ ಎಲ್ಲಿ ಹುಡುಕುವೆ?

ಮಾತಿಗೊಂದು ಮಾತು ಬೆಳೆಸು, ನನ್ನ ಮಾತ ಪೂರ್ತಿಗೊಳಿಸು 
ನೀನೇ ನೀನು, ನಾನೇ ನಾನು. ಅಖಾಡದಲ್ಲಿ(ದೇಶದಲ್ಲಿ) ನೀನೂ-ನಾನೂ 
ನಿನ್ನ ಮಾತೇ ಗೆಲ್ಲಲೆಂದು ಇನ್ನೂ ಜೋರು ಕೇಳಿಸು 
ಕಡೆಗೆ ನನ್ನದನ್ನೂ ಚೂರು ದೂರ ನಿಂತು ಆಲಿಸು 

ನಾನು ಘಾಸಿಗೊಂಡಾಗ ತಾಯಿ ಭಾಷೆ ಚೀರಿತು 
ಅಲ್ಲಿ ನಿನ್ನ ತಾಯಿ ಗುರುತು ಬರಲಿಲ್ಲ ಏತಕೆ?
ಹೆಣ್ಣು, ಗಂಡು ತಾರತಮ್ಯ ಮಾಡಲಿಲ್ಲ ದಾಳಿಯು 
ಅಂದಮೇಲೆ ನಾನು ನೀನು ಬೇರೆ ಅನಿಸಿತೇತಕೆ?

ಕಳಚಿ ಬಾ ಮುಖವಾಡ ಅಪ್ಪಿಕೊಳ್ಳುವೆ 
ನೀನು ನೀನಾಗಿ ಇರು ಒಪ್ಪಿಕೊಳ್ಳುವೆ 
ನನ್ನ ನಿನ್ನ ನಡುವೆ ಈ ಬೇಲಿ ಇಂದಿಗೆ 
ನಾಳೆ ಅಳಿಸಿ ಹೋದರಲ್ಲಿ ಏನು ಮಾಡುವೆ?

ಹಸಿ ವನಕೆ ಕಿಚ್ಚು ಸೋಕಿ ಗಾಳಿಯೆಲ್ಲ ಮಬ್ಬು

ಹಸಿ ವನಕೆ ಕಿಚ್ಚು ಸೋಕಿ ಗಾಳಿಯೆಲ್ಲ ಮಬ್ಬು 
ಮಸಿ ಬಳಿದ ಮನಸಿಗಿನ್ನೂ ಇಳಿಯಲಿಲ್ಲ ಕೊಬ್ಬು 
ಗಸಿ ಬಿಡದೆ ನುಂಗಿ ಹೊಟ್ಟೆ, ಹಸಿವು ಎಷ್ಟು ಘೋರ 
ಕಿಸೆಯಲುಳಿದ ಕಸ-ಕಡ್ಡಿ ಕಾಸಿಗಿಂತ ಭಾರ 

ತೂತು ತಳ ಸೋರಿ ಮಡಿಕೆ, ಒಲೆಗದೇ ಕೇಡು
ಜೋಡೆತ್ತು ಹೊಲದಲ್ಲಿ ಇಟ್ಟ ಸಗಣಿ ಹೊನ್ನು
ಕಾಡಕ್ಕಿ ನಾಡಲ್ಲಿ ಕಳೆದು ಅತ್ತು ಹಾಡು
ಬೆನ್ನಿಗೂ ಭೂಮಿಗೂ ಹುಟ್ಟಿನಿಂದ ಈಡು

ಕರಗಿದ ಬೊಟ್ಟಿಗೆ ಮೂಗ ತುದಿ ಕೆಂಪು
ಸಿಂಬೆಗೆ ಒರಗಿ ಬುತ್ತಿ ಹೊತ್ತ ಕನಸ ಕಣ್ಣು
ನೆರಳಿನ ಆಟದಲ್ಲಿ ಬೆಳಕಿಗೂ ಪಾಲು
ಬೆರಣಿಯ ಮುಖ ತುಂಬ ಬೆರಳ ಗುರುತುಗಳು

ಹಿಮ ಕರಗಿ ನೀರಾಗಿ ಹರಿವ ಕೊಟ್ಟೊನು
ತಿರು-ತಿರುಗಿ ಬುಗುರಿಯ ಹಾಗೆ ಕುಣಿಸೋನು
ಬರಗಾಲ ಬೆನ್ನಿಗೆ ಮಳೆಯನ್ನ ಕಟ್ಟಿ
ಕುಸ್ತಿಲಿ ಜಟ್ಟಿ ಬಿದ್ದಾಗ್ಲೇನೇ ಗಟ್ಟಿ

ಇಕ್ಕಟ್ಟಿನ ಸಂತೆಲಿ ಮೈ ಮುರಿಯೋ ಚಾಳಿ
ಬೇಡ, ಬೇಕುಗಳನ್ನ ಕಾಯಲ್ಲ ಬೇಲಿ
ಒಂದು ಗೆರೆ ಎಳೆದು, ನಂದೇ ಅಂತನಿಸೋದು..
ಆಟಿಕೆ ಮುರಿದಾಗ ಮಗುವಂತೆ ಅಳಿಸೋದು..

ನೋಡಿಯೂ ನೋಡದಂತೆ

ನೋಡಿಯೂ ನೋಡದಂತೆ
ಕೂಗಿಯೂ ಕೂಗದಂತೆ
ಹಾಡಿಯೂ ಹಾಡದಂತೆ
ಕಾಡಿಯೂ ಕಾಡದಂತೆ
ಲೂಟಿ ಮಾಡಿ ಹೋಗೋ ಮುನ್ನ ನನ್ನ ಆಲಿಸು
ಪ್ರೀತಿ ಮಾತ ಕೇಳಿ ನನ್ನ ಮಾಯವಾಗಿಸು
ಪ್ರಾಣದಲ್ಲಿ ಪ್ರಾಣವಾಗಿ ದಾಖಲಾಗುವೆ
ನಿನ್ನ ಧ್ಯಾನ ಮಾಡುವಾಗ ಕಣ್ಣ ತುಂಬಿಸು..

ಕಾಡಿಗೆ ತೀಡಿ ಬಂದೆ ನಿನ್ನ ಕಾಣಲು
ಕಾಲವೇ ಓಡದಂತೆ ನಿಲ್ಲು ತಕ್ಷಣ
ದಾಳಿಗೆ ಸೋಲಲೆಂದು ಕೋಟೆ ದಾಟುವೆ 
ಹೂವಿನ ಬಾಣ ಹೂಡು ಪ್ರೇಮ ಲಾಂಚನ
ಅಂದವಾದ ತೇರಲಿ, ಸಣ್ಣದೊಂದು ಸ್ವಪ್ನವ
ಸೇರಿ ಎಳೆಯುವ , ದೂರ ದೂರಸಾಗುವ 
ತಾಕುವಂತೆ ತಾರಕ, ಚಾಚಿದಾಗ ಕೈಯ್ಯನು
ಕಾಲಕಳೆಯುವ, ಇದ್ದ ಲೋಕ ಮರೆಯುವ 

ತೀರದ ಮೌನದಂತೆ 
ಸಂಜೆ ಏಕಾಂತದಂತೆ 
ಕಾಡುವ ಪ್ರಾಸದಂತೆ 
ಕಾಮನ ಬಿಲ್ಲಿನಂತೆ 
ಸೂರೆ ಮಾಡಿಕೊಂಡೆ ನನ್ನ ಆತ್ಮ ಸಾಕ್ಷಿಯ
ಇನ್ನೂ ನೀನೇ ಗೀಚಬೇಕು ಬಾಳ ನಕ್ಷೆಯ
ಯಾರ ಕಣ್ಣು ಬೀಳದಂತೆ ಕಾವಲಾಗುವೆ
ನಿಂತು ನೀನೇ ಆಳು ನನ್ನ ಬಾಳ ಗಾದಿಯ... 

ರಾಗವೇ ಮೀಟಿ ನನ್ನ ಮೋಹ ತಂತಿಯ
ಹುಟ್ಟಿದೆ ನನ್ನಲೊಂದು ಸಣ್ಣ ಕಂಪನ 
ಕೋಗಿಲೆ ಗಾನವನ್ನು ಮೀರುವ ಸ್ವರ 
ಹಾಡದೆ ಹೋದರಲ್ಲಿ ಸೋತು ಬಿಡುವೆ ನಾ  
ಹಿತ್ತಲಲ್ಲಿ ಮಲ್ಲಿಗೆ, ಬಿಂಕವಾದ ಬಳ್ಳಿಗೆ
ನಿನ್ನ ಹೆರಸಿದೆ, ಅಲ್ಲೇ ನನ್ನ ಮನಸಿದೆ 
ಹೆಕ್ಕಿ ನವಿಲು ಗರಿಯನು, ಗುಚ್ಛ ಮಾಡಿ ಕೊಡುವೆನು 
ನಿನ್ನ ಅಂದಕೆ ಗರಿಗಳೆಲ್ಲ ಕೊಸರಿವೆ 

ಹೇ ಮೌನ ನಿನ್ನ ಗೆಲ್ಲೋ ಆ ಶಬ್ಧವೆಲ್ಲಿ?

ಹೇ ಮೌನ ನಿನ್ನ ಗೆಲ್ಲೋ
ಆ ಶಬ್ಧವೆಲ್ಲಿ?
ನೀನೆಲ್ಲಿ ಹೋದೆ ಕಳೆದು
ಓ ತಂಪು ಗಾಳಿ
ಗೋಗರೆದರಿಲ್ಲ ಮಳೆಬಿಲ್ಲ ಛಾಯೆ
ಒಗಟಾಯಿತೇಕೆ ಬದುಕೆಂಬ ಮಾಯೇ
ನನ್ನೇ ಗುರಿಮಾಡಿಕೊಂಡು
ಬಂತೇ ಕಣ್ಣೀರ ಹಾಡು..

ಅತಿಶಯದ ನೋವನ್ನು ವಿವರಿಸಲು ಪದವಿಲ್ಲ
ಕೊರೆದಷ್ಟೂ ನೆನೆಪಿನ್ನೂ ಕ್ರೂರ
ಅಡಿಗಡಿಗೂ ಎದುರಾಗೋ ತಿರುವುಗಳ ದಾಟಿದರೂ
ಆ ನನ್ನ ಮನೆಯಿನ್ನೂ ದೂರ
ಅನುಭವಿಸಿ ಕನಸನ್ನು ಹೊರಬಂದು ಕಂಡಾಗ
ಮುಖವಾಡ ಧರಿಸಿತ್ತು ಬದುಕು
ಮನವೊಲಿಸೋ ಮಾತನ್ನು ಗಾಯಕ್ಕೆ ಸವರಿದರೆ
ಗುಣವಾಗೋ ಮನಸಿಲ್ಲ ಅದಕೂ
ಹನಿ ಬಂದರೂ ತಡೆದಂತಿದೆ, ಅನುಮಾನವೇ ಈ ಕಣ್ಣಿಗೆ?
ಅನುಬಂಧವ ಅನುಮಾನಿಸಿ ಬಿರಿಯುತ್ತಿದೆ ಈ ಗುಂಡಿಗೆ...

ಹೇ ಮೌನ ನಿನ್ನ ಗೆಲ್ಲೋ
ಆ ಶಬ್ಧವೆಲ್ಲಿ
ನೀನೆಲ್ಲಿ ಹೋದೆ ಕಳೆದು
ಓ ತಂಪು ಗಾಳಿ...

ಹುರುಪಿರದ ಸಂತೆಯಲಿ ಹುಡುಕಿದೆನು ನಗುವನ್ನು
ಯಾರಲ್ಲೂ ಸಿಗಲಿಲ್ಲ ಇನ್ನೂ
ಕೊನೆತಲುಪದ ಪಯಣ ನಡುವಲ್ಲೇ ನಿಂತಾಗ
ಮುಗಿಲತ್ತ ಮುಖ ಮಾಡಲೇನು?
ಬಿಡುಗಡೆಯ ಅಂಚಲ್ಲಿ ಸೆರೆಯಾದ ಉಸಿರಂತೆ
ಒಂದೊಂದೂ ಕ್ಷಣ ಶಿಕ್ಷೆಯಂತೆ
ತುಡಿತಗಳು ತಕರಾತು ತೆಗೆಯುತ್ತಲಿರುವಾಗ
ತುಟಿ ದಾಟೋ ಮಾತೆಲ್ಲ ಹೀಗೇ
ಸರಿ ಉತ್ತರ ಕೊಡಹೋದರೆ ಪ್ರಶ್ನೆಗಳೇ ಬದಲಾಗಿದೆ
ಪರಿವಿಲ್ಲದ ಅಲೆಮಾರಿಗೆ ಪರಿತಾಪವೇ ವರವಾಗಿದೆ..

ಕೈ ಹಿಡಿದು ನನ್ನ ನಡೆಸು
ಓ ಅಂಧಕಾರ
ಈ ಜಾತ್ರೆ ಬೇಗ ಮುಗಿಸು
ಓ ಸೂತ್ರದಾರ
ಪ್ರತಿ ಪಾತ್ರವನ್ನೂ ರೂಪಿಸುವ ನಿನಗೆ
ಸರಿ-ತಪ್ಪು ಪಾಠ ಮಾಡುವುದು ಹೇಗೆ
ಎಲ್ಲ ಸಾಲನ್ನೂ ಒಡೆದು
ಬರೆಯೋ ಹೊಸತಾಗಿ ನನ್ನ..

Saturday, 4 January 2020

ವಿಪರೀತ ಹೃದಯದ ಬಡಿತ

ವಿಪರೀತ ಹೃದಯದ ಬಡಿತ 
ಎದುರಾಗಿ ನೀ ನಸುನಗುತ 
ಅಭಿಜಾತ ತುಸು ಅಪರಿಚಿತ 
ಜೊತೆಯಾದೆ ಖುಷಿ ಅಪರಿಮಿತ 
ಕಣ್ಣಲ್ಲೇ ನೀ ಕುಣಿಸಿರುವೆ 
ಉಸಿರಾಟಕೀಗ ತಕಧಿಮಿತ... 

ಪಾರಿಜಾತದಂತೆ ಉರುಳುವೆನು ನಾಚಿಕೆಗೆ 
ಓ ಪಾರಿವಾಳ ಹೋಗಿ ತಲುಪಿಸು ಈ ವರದಿ
ಪ್ರೇಮ ಕಾವಿನಲ್ಲಿ ಕುದಿಯುತಿದೆ ಮನ ಕುಲುಮೆ
ಇನ್ನೂ ಬೇಯುವಂತೆ ನೀಡಬೇಕು ನೀ ಅವಧಿ 
ಮುಚ್ಚು ಮರೆಯಲ್ಲೇ ಎಲ್ಲ ಆಕರ್ಷ 
ಮೆಚ್ಚಿ ಪಡೆದಾಗ ನೋವೂ ಉಲ್ಲಾಸ 
ಸದ್ದೇ ಇರದಂತೆ ಪೂರ್ತಿ ಕಳುವಾದೆ 
ನಿನ್ನ ತೋಳೀಗ ಆ ನನ್ನ ವಿಳಾಸ.. 

ವಿಪರೀತ ಹೃದಯದ ಬಡಿತ 
ಎದುರಾಗಿ ನೀ ನಸುನಗುತ 
ಅಭಿಜಾತ ತುಸು ಅಪರಿಚಿತ 
ಜೊತೆಯಾದೆ ಖುಷಿ ಅಪರಿಮಿತ.... 

ದೂರದಲ್ಲಿ ನಿಂತೆ, ನೀ ಮೀರದೆ ಸಲುಗೆ 
ಮೇರೆ ಮೀರಿದಾಗ ನೂರು ದೀಪ ನನ್ನೊಳಗೆ 
ಮೋಹದಲ್ಲಿ ಮಾಗಿ ಮತ್ತೇರಿದ ಘಳಿಗೆ 
ಹಾತೊರೆಯುವೆ ಹಾಲ್ನೊರೆಯು ಉಕ್ಕುವ ಹಾಗೆ 
ಎಲ್ಲ ಆಸೆಗೂ ಮಡಿಲು ಏಕಾಂತ 
ಕಡಿಮೆ ಸಿಕ್ಕಾಗ ಹೆಚ್ಚು ಧಾವಂತ 
ಅದಲು ಬದಲಾಗಿ ತೊದಲೋ ಅಂಚಲ್ಲಿ 
ಮತ್ತೆ ಮೊದಲಾಗೋ ಆ ಮಾತೇ ಸಂಗೀತ.. 

ಕೊಡುವಂತೆ ಸಿಹಿ ಕನಸುಗಳ 
ನಡೆಸುವೆಯಾ ನೀ ಹುಸಿ ಜಗಳ?
ಬಿಡದಂತೆ ಪ್ರತಿ ನಿಮಿಷವನೂ 
ತೆರೆದೋದು ಎದೆ ಕಡತಗಳ 
ಅಂಜಿಕೆಗೆ ನಾ ಕಂಪಿಸುವೆ 
ನೀ ಮಾಯ ಮಾಡು ತುಮುಲಗಳ...!

*ಹಾಡು*
https://soundcloud.com/bharath-m-venkataswamy/vnspdqeqojtm

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...