ಕಾರ್ತಿಕದ ಕೊಳದಲ್ಲಿ ಗುಳಿ ಬಿದ್ದು ಅಲೆಯೆದ್ದು
ತೇಲಿ ಬಿಟ್ಟ ದೀಪವ ಕುಣಿಸುತಿತ್ತು
ಚೆಲುವಿಗೂ ಮಿಗಿಲಾದ ಹೊಳೆವ ಮುಖವೊಂದರ
ಬಿಂಬ ಗೇಲಿ ಮಾಡಿ ಬೆಳಕ ಮಣಿಸಿತ್ತು
ಗುಡಿ ದ್ವಾರದ ತೋರಣದ ಅಲಂಕಾರಕೆ
ಚೆಲುವು ಮುಡಿದ ಹೂವ ಪರಿಚಯವೂ ಇತ್ತು
ಗಾಳಿಯೆದುರು ಸೆಣೆಸಿ ನರ್ತನ ಮುಗಿಸಿದ
ನೀಲಾಂಜನಕೆ ನೋಟ ನಿಟ್ಟುಸಿರ ತುತ್ತು
ಎಚ್ಚೆತ್ತ ಪಂಚವಾದ್ಯಗಳನುಸಂಧಾನ
ನಾದ ಸ್ವರದಿಂಚರಕೆ ಸ್ಪೂರ್ತಿಯನ್ನಿತ್ತು
ಮೆಟ್ಟೋ ಕಲ್ಲು ದೇವರಾಗಿಲ್ಲದ ಕೊರಗ
ಮೆಟ್ಟಿದ ಪಾದವದು ನೀಗಿಸುವ ಹೊತ್ತು
ಸುಪ್ತ ಪರ್ವತವೊಡಲು ಹೊದ್ದ ಹಿಮವ ಸೀಳಿ
ತೂಗಿದ ಹಸಿರಲ್ಲಿ ಚೆಲುವು ಮರೆಯಾಯ್ತು
ಗುಪ್ತಗಾಮಿನಿಯ ದೀರ್ಘಾವಧಿ ದರ್ಶನಕೆ
ಹಂಬಲಿಸಿ ಕಲ್ಲು ದೇವರೂ ಮಿಡಿದ ಸೋತು
ಚಲುವ ಕೈಸೆರೆಯಾಗಿ ಎಲ್ಲವೂ ಚೆಲುವು
ಕಾಣದವರಿಗೆ ಅದು ಅತಿಶಯವೇ ಹೊರತು
ತಲ್ಲೀನರಾದವರು ಬಲಹೀನರೇನಲ್ಲ
ಬಣ್ಣಿಸಲು ಸೋತು ಶರಣಾಗುವುದೇ ಗತ್ತು....
No comments:
Post a Comment