Thursday, 23 January 2020

ನಿಧಾನಿಸು ನಿನಾದವೇ, ಇನ್ನೇನು ಇನಿಯ ಬರುವನು

*ಪಲ್ಲವಿ*
ನಿಧಾನಿಸು ನಿನಾದವೇ, ಇನ್ನೇನು ಇನಿಯ ಬರುವನು
ಬೇಕಂತಲೇ ಸತಾಯಿಸಿ, ನನ್ನೆಲ್ಲ ಭಾವ ಹೊರುವನು
ವಿನೋದದ ವಿನಂತಿಯ, ವಿನಮ್ರವಾಗಿ ಓದುವ  
ವಿಷಾದವ ವಿಚಾರಿಸಿ, ವಿಶೇಷ ಪ್ರೀತಿ ತೋರುವ 
ಹೇಗಾದರೂ ಒಂದಾಗುವ, ನೀ ಚೂರು ತಾಳೆಯಾ!

ನಿಧಾನಿಸು ನಿನಾದವೇ, ಇನ್ನೇನು ಇನಿಯ ಬರುವನು
ಬೇಕಂತಲೇ ಸತಾಯಿಸಿ, ನನ್ನೆಲ್ಲ ಭಾವ ಹೊರುವನು

*ಚರಣ ೧*
ಅಂಗೈಯ್ಯಲಿ ಈ ಕೆನ್ನೆಯ ಮುದ್ದಾಗಿ ಸೋಕುತ
ದಿನ ಹೊಸ ಕತೆಯ ಹೊತ್ತು ಹೇಳಿ ಕೂರುವ  
ಉಯ್ಯಾಲೆಯು ತೂಗೋ ಥರ ಸಮೀಪ ಸಾರುತ 
ಮರು ಕ್ಷಣ ತೆರೆ ಮರೆಗೆ ಜಾರಿ ಹೋಗುವ 
ನಿರಂತರ ತರಂಗವಾಗಿ ನನ್ನಲೇ ಉಲಿದರೂ 
ಮಧ್ಯಂತರ ಮೌನ ತಾಳಿದ 
ಅವಾಂತರ ಸೃಷ್ಟಿ ಮಾಡಿ ದೂರ ನಿಂತೇ ನಗುವವ 
ನಿರುತ್ತರ ರೂಢಿ ಮಾಡಿದ...  
ನಿಧಾನಿಸು ನಿನಾದವೇ, ಇನ್ನೇನು ಇನಿಯ ಬರುವನು
ಬೇಕಂತಲೇ ಸತಾಯಿಸಿ, ನನ್ನೆಲ್ಲ ಭಾವ ಹೊರುವನು

*ಚರಣ ೨*
ದಿನಂಪ್ರತಿ ದಿಗಂತಕೆ ನನ್ನನು ಒಯ್ಯುತ
ಅನಂತದಲ್ಲಿ ನನ್ನ ಅವನ ಪಾತ್ರ ಬಿಡಿಸುವ
ಅಲಂಕೃತ ಕಲಾಕೃತಿ ನಾನೆಂದು ಬಣ್ಣಿಸಿ
ಪರೋಕ್ಷವಾಗಿ ನನ್ನ ಮನಕೆ ಗಾಳ ಹಾಕುವ
ನಿರೀಕ್ಷೆಗೊಂದು ನಕ್ಷೆ ಗೀಚಿ ತಣಿಸುವ ಚೋರನು
ಪರೀಕ್ಷೆಯಲ್ಲೂ ಅಂಕ ಗಳಿಸಿದ
ಮೂರಕ್ಷರಕ್ಕೆ ನೂರು ಅರ್ಥ ಕಲ್ಪಿಸಿ ನಿರೂಪಿಸಿ
ತಟಸ್ಥನಾಗಿ ಮನವ ಸೇರಿದ

ನಿಧಾನಿಸು ನಿನಾದವೇ, ಇನ್ನೇನು ಇನಿಯ ಬರುವನು
ಬೇಕಂತಲೇ ಸತಾಯಿಸಿ, ನನ್ನೆಲ್ಲ ಭಾವ ಹೊರುವನು
ವಿನೋದದ ವಿನಂತಿಯ, ವಿನಮ್ರವಾಗಿ ಓದುವ  
ವಿಷಾದವ ವಿಚಾರಿಸಿ, ವಿಶೇಷ ಪ್ರೀತಿ ತೋರುವ 
ಹೇಗಾದರೂ ಒಂದಾಗುವ, ನೀ ಚೂರು ತಾಳೆಯಾ!

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...