ರೋಜಾ ತೋಟ ದಾಟಿದಂತೆ ನಿನ್ನ ಮನೆ
ತಾಜಾ ನೋಟ ಬೀರಿದಂತೆ ನಿಂತೆ ಸುಮ್ಮನೆ
ಸಿಟ್ಟಿನಲ್ಲಿ ಸಿಕ್ಕಿಸುತ್ತ ದಾವಣಿ ನಡುವಿಗೆ
ಆಹಾ ಲಟ್ಟಣಿಗೆ ಹಿಡಿದು ನಿಂತೆ ಮೋಹಿನಿ
ಎಲ್ಲರೆದುರು ಅಷ್ಟು ಸದ್ದು ಮಾಡೋ ಕಿಂಕಿಣಿ
ಒಂಟಿ ದಾರಿಯಲ್ಲಿ ಸಿಕ್ಕರಂತೂ ಕರಗೋ ಹಿಮ ಮಣಿ
ತಲೆ ಎತ್ತಿ ನಡೆಯುತೀಯ ನಿನ್ನ ಊರಲಿ
ಎಲ್ಲ ಸೊಕ್ಕ ಭಾರ
ಹೊತ್ತುಕೊಂಡು ಟೊಂಕದಲಿ
ದುಂಬಿ ಹಿಂಡು ಸಾಗುತಾವೆ ನಿನ್ನ ಹಿಂದೆ
ರೋಜಾ ಹೂವ ಜೇನ ಹೀರೋ ನೆವದಲಿ
ನಾನು ಸಗಟು ಖರೀದಿಗೆ ಬರುವೆನು
ದಿನವೂ ಬೇರೆ ಗ್ರಾಹಕನ ಸೋಗಿನಲ್ಲಿ
ನೆನ್ನೆಗಿಂತ ಕೆಂಪೇರಿದಂತಿದೆ ಅನ್ನುವೆ
ನಿನ್ನ ಚಿತ್ತ ಹಬ್ಬಿದಾಗ ತೋಟದಿ
ಅಚ್ಚರಿಯ ರಂಗು ಹರಿದು ಗಲ್ಲಕೆ
ಕೆಂಗುಲಾಬಿ ಬಿತ್ತು ಅಲ್ಲೇ ನನ್ನ ಕಣ್ಣಿಗೆ
ವ್ಯಾಪಾರ ಮುರಿದರೂ ಸಂಬಂಧ ಕುದುರಿತು
ಮನಸ್ಸೆಂಬ ತೋಟದಲ್ಲಿ ಅನುರಾಗ ಅರಳಿತು
ಬಳಿ ಬಳ್ಳಿಯಲ್ಲೂ ನಾಳೆಗೊಂದು ಹೊಸ ಮೊಗ್ಗು
ದುಂಬಿಯ ಪರಾಗ ಸ್ಪರ್ಶವಾಗಿ ದಳಕೆ ಸಿಗ್ಗು
ಇನ್ನೂ ತೋಟ ಕಾಯೋ ಕೆಲಸ ನನ್ನದು
ನನ್ನ ಪ್ರೀತಿ ಮಾಡೋ ಕೆಲಸ ಮಾತ್ರ ನಿನ್ನದು
ನಮ್ಮದೊಂದು ಪುಟ್ಟದಾದ ಲೋಕ ಬೇಲಿ ಒಳಗಿದೆ
ಅದರ ಆಚೆ ಹೊತ್ತು ಉರಿವ ಜನರ ಹೊಟ್ಟೆ ಕಿಚ್ಚಿದೆ...
No comments:
Post a Comment