Wednesday, 8 January 2020

ಹೇ ಮೌನ ನಿನ್ನ ಗೆಲ್ಲೋ ಆ ಶಬ್ಧವೆಲ್ಲಿ?

ಹೇ ಮೌನ ನಿನ್ನ ಗೆಲ್ಲೋ
ಆ ಶಬ್ಧವೆಲ್ಲಿ?
ನೀನೆಲ್ಲಿ ಹೋದೆ ಕಳೆದು
ಓ ತಂಪು ಗಾಳಿ
ಗೋಗರೆದರಿಲ್ಲ ಮಳೆಬಿಲ್ಲ ಛಾಯೆ
ಒಗಟಾಯಿತೇಕೆ ಬದುಕೆಂಬ ಮಾಯೇ
ನನ್ನೇ ಗುರಿಮಾಡಿಕೊಂಡು
ಬಂತೇ ಕಣ್ಣೀರ ಹಾಡು..

ಅತಿಶಯದ ನೋವನ್ನು ವಿವರಿಸಲು ಪದವಿಲ್ಲ
ಕೊರೆದಷ್ಟೂ ನೆನೆಪಿನ್ನೂ ಕ್ರೂರ
ಅಡಿಗಡಿಗೂ ಎದುರಾಗೋ ತಿರುವುಗಳ ದಾಟಿದರೂ
ಆ ನನ್ನ ಮನೆಯಿನ್ನೂ ದೂರ
ಅನುಭವಿಸಿ ಕನಸನ್ನು ಹೊರಬಂದು ಕಂಡಾಗ
ಮುಖವಾಡ ಧರಿಸಿತ್ತು ಬದುಕು
ಮನವೊಲಿಸೋ ಮಾತನ್ನು ಗಾಯಕ್ಕೆ ಸವರಿದರೆ
ಗುಣವಾಗೋ ಮನಸಿಲ್ಲ ಅದಕೂ
ಹನಿ ಬಂದರೂ ತಡೆದಂತಿದೆ, ಅನುಮಾನವೇ ಈ ಕಣ್ಣಿಗೆ?
ಅನುಬಂಧವ ಅನುಮಾನಿಸಿ ಬಿರಿಯುತ್ತಿದೆ ಈ ಗುಂಡಿಗೆ...

ಹೇ ಮೌನ ನಿನ್ನ ಗೆಲ್ಲೋ
ಆ ಶಬ್ಧವೆಲ್ಲಿ
ನೀನೆಲ್ಲಿ ಹೋದೆ ಕಳೆದು
ಓ ತಂಪು ಗಾಳಿ...

ಹುರುಪಿರದ ಸಂತೆಯಲಿ ಹುಡುಕಿದೆನು ನಗುವನ್ನು
ಯಾರಲ್ಲೂ ಸಿಗಲಿಲ್ಲ ಇನ್ನೂ
ಕೊನೆತಲುಪದ ಪಯಣ ನಡುವಲ್ಲೇ ನಿಂತಾಗ
ಮುಗಿಲತ್ತ ಮುಖ ಮಾಡಲೇನು?
ಬಿಡುಗಡೆಯ ಅಂಚಲ್ಲಿ ಸೆರೆಯಾದ ಉಸಿರಂತೆ
ಒಂದೊಂದೂ ಕ್ಷಣ ಶಿಕ್ಷೆಯಂತೆ
ತುಡಿತಗಳು ತಕರಾತು ತೆಗೆಯುತ್ತಲಿರುವಾಗ
ತುಟಿ ದಾಟೋ ಮಾತೆಲ್ಲ ಹೀಗೇ
ಸರಿ ಉತ್ತರ ಕೊಡಹೋದರೆ ಪ್ರಶ್ನೆಗಳೇ ಬದಲಾಗಿದೆ
ಪರಿವಿಲ್ಲದ ಅಲೆಮಾರಿಗೆ ಪರಿತಾಪವೇ ವರವಾಗಿದೆ..

ಕೈ ಹಿಡಿದು ನನ್ನ ನಡೆಸು
ಓ ಅಂಧಕಾರ
ಈ ಜಾತ್ರೆ ಬೇಗ ಮುಗಿಸು
ಓ ಸೂತ್ರದಾರ
ಪ್ರತಿ ಪಾತ್ರವನ್ನೂ ರೂಪಿಸುವ ನಿನಗೆ
ಸರಿ-ತಪ್ಪು ಪಾಠ ಮಾಡುವುದು ಹೇಗೆ
ಎಲ್ಲ ಸಾಲನ್ನೂ ಒಡೆದು
ಬರೆಯೋ ಹೊಸತಾಗಿ ನನ್ನ..

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...