ಖಾಲಿ ಪುಸ್ತಕವೊಂದು ಸಿಕ್ಕಿದೆ
ತುಂಬಿಸಬೇಕು ತವಕದಲಿ
ರಾತ್ರಿ ಪಾಳಿಯ ಮುಗಿಸಿ ಕಾದಿವೆ
ಮನದ ಮೂಡಣದಲಿ ಸಾಲು
ಮೊದಲ ಅಕ್ಷರ ಬೆದರಿ ಸತ್ತಿದೆ
ಚಿತೆಯ ಊರಿಗೆ ಚೀರಾಟ
ಸಂತೆಯಲಿ ಕಳುವಾಗಿದೆ ಭಾವ
ಮುಗಿಸಲಿ ಹೇಗೆ ಮೊದಲ ಪುಟ?
ಒಂದು ಎರಡು ಹತ್ತಾರು
ಅದರಾಚೆಗೆ ಹರಿದರೂ ಸುಳುವಿಲ್ಲ
ಬುಡ್ಡಿ ದೀಪದ ಬುಡದ ಕತ್ತಲು
ಗೋಡೆ ಹತ್ತಿ ಕುಳಿತಿತ್ತು
ಬೆರಳ ಮಸಿಗೆ ರೇಗುತ
ಮರಳಿ ತಿರುಳ ತಿದ್ದಿ ತೀಡುತ
ಹೊರಳಿ ಕೊನೆಯ ಹಾಳೆಗೆ ತಲುಪಿದೆ
ಒಡೆದ ಸರಣಿಯ ಜೋಡಿಸಲು
ನಡುವೆಲ್ಲೋ ಪು.ತಿ.ನೋ ಬರೆದೆ
ತಿರುಗಿಸಲಿರಲಾರದು ನಂಟು
ಲೇಖನಿ ಮೊನೆಯೊತ್ತಲು ಮುರಿಯುವುದು
ಒತ್ತಕ್ಷರಗಳೂ ಹಠಮಾರಿ
ಎಲ್ಲ ಕಗ್ಗಂಟನು ಬಿಡಿಸಲು
ಶಾಯಿ ಉಳಿದಿತ್ತು ಚೂರೇ ಚೂರು
ಕಸದ ಬುಟ್ಟಿಯ ಒಳಗೆಲ್ಲೊ
ಮೊಳಗಿತು ವಿಕೃತ ಆನಂದ
ಗೀರಿ ಹೊತ್ತು ಹೊಳೆಯಲು
ಬೆಂಕಿ ಕಡ್ಡಿಯೇ
ತಲೆ ಬುರುಡೆ?
ಗಲ್ಲಕೆ ಬೊಟ್ಟು ಇಟ್ಟು ಅಟ್ಟಕೆ
ಕಣ್ಣ
ನೆಟ್ಟರೆ ಉದುರೀತೆ ಸಾಲು?
ತೇದರೆ ಕತ್ತನು, ಬೈದರೆ ಬೆರಳನು
ಕೈ ಹಿಡಿಯುವುದೇ ಪದ ಮಾಲೆ?
ಹಣೆ ಪಟ್ಟಿಯ ಬದಲಾಯಿಸಲು
ಹಣೆ ಬರಹವೇ ಬದಲಾದೀತೆ?
ಮೊದಲು ಮನದ ಸೆರೆ ಬಿಡಿಸಿ
ಹಗಲು ರಾತ್ರಿಗಳನು ಸವೆಸಿ
ಎಲ್ಲೋ ಕನಸಿನ ಮೂಲೆಗೆ
ಎಂದೋ ಎಸೆದ ರದ್ದಿಯ ಸಮ್ಮತಿಗೆ
ಬುಗ್ಗೆಯ ಹಾಗೆ ಚಿಮ್ಮಲು ರಸ
ಹಿಂದೆಯೇ ಸುಗ್ಗಿ ಸಾರಿರಲು
ನಿದ್ದೆಯಿಂದೆಚ್ಚರವಾಗಿಸುವುದು
ಅಲ್ಲೇ ಕವಿತೆ ಹುಟ್ಟುವುದು....
No comments:
Post a Comment