Thursday, 23 January 2020

ನಾನು ನೀರು ನೀನು ಬಣ್ಣ

ನಾನು ನೀರು ನೀನು ಬಣ್ಣ
ಬೆರೆತು ಹೋಗು ನನ್ನಲಿ
ನಾನು ನೀರು ನೀನು ಹರಿವು
ತ್ರಾಣವಾಗು ನನ್ನಲಿ
ನಾನು ನೀರು ನೀನು ಆವಿ
ಹಬ್ಬುವಾಸೆ ಜಗವನು 
ನಾನು ನೀರು ನೀನು ಅಲೆಯು
ತಲ್ಲಣಿಸು ಕ್ಷಣದಲಿ..!

ನಾನು ಮಣ್ಣು ನೀನು ಹೊನ್ನು 
ಹುದುಗಿ ಹೋಗು ಕಾಣದೆ 
ನಾನು ಮಣ್ಣು ನೀನು ತೇವ 
ಬಿರುಕು ಬಿಟ್ಟ ಬಾಳಿಗೆ 
ನಾನು ಮಣ್ಣು ನೀನು ಬೇರು 
ಆಸೆ ಬಳ್ಳಿ ಚಿಗುರಲು 
ನಾನು ಮಣ್ಣು ನೀನು ಜಾಡು 
ಪ್ರೇಮ ಪಯಣ ಸಾಗಲು!

ನಾನು ಗಾಳಿ ನೀನು ಕೊಳಲು 
ಜೋಡಿ ನಾದ ಹೊಮ್ಮಲು 
ನಾನು ಗಾಳಿ ನೀನು ಉಸಿರು 
ಒಂದೇ ಆಗಲಿಬ್ಬರೂ 
ನಾನು ಗಾಳಿ ನೀನು ತಂಪು 
ತಂಗಾಳಿ ತಳಿರಿಗೆ 
ನಾನು ಗಾಳಿ ನೀನು ತೆನೆ 
ಮಾಗಿ ತೂಗಿ ತೊನೆಯಲು 

ನಾನು ಕಿಚ್ಚು ನೀನು ಹೊಸೆ 
ಹೊತ್ತುಕೊಂಡ ಒಲವಲಿ 
ನಾನು ಮಿಂಚು ನೀನು ಹುಳು 
ಸುತ್ತುವರಿದ ಇರುಳಲಿ 
ನಾನು ಕಿಡಿ ನೀನು ಗರಿಕೆ 
ಸಿಟ್ಟು ಸೆಡವು ಮಸೆದರೆ
ನಾನು ಹಣತೆ ನೀನು ಉರಿ 
ಬಾಳೇ ಬೆಳಕು ಬೆರೆತರೆ 

ನಾನು ಮುಗಿಲು ನೀನು ಹನಿ 
ಕೂಡಿ ಕಟ್ಟು ನನ್ನನು 
ನಾನು ನಕಲಿ ನೀನು ನೀಲಿ 
ಅಸ್ತಿತ್ವಗೊಂಡೆನು  
ನಾ ಬಾನು ನೀ ಬಾನುಲಿ
ಒಂಟಿತನ ಅಸಂಭವ 
ನಾ ಅನಂತ ನೀ ದಿಗಂತ 
ಗುಟ್ಟು ನಮ್ಮ ಸಂಭವ... 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...