Monday, 27 January 2020

ಒಂದು ನೂರಾದರೂ ಹೊಮ್ಮುವುದು ಎದೆಯಲಿ

**ಪಲ್ಲವಿ**
ಒಂದು ನೂರಾದರೂ ಹೊಮ್ಮುವುದು ಎದೆಯಲಿ
ಹಚ್ಚೆಯ ರೂಪ ತಾಳಿದವು ಒಂದೆರಡು ಸಾಲು
ಒಂದು ಸಾಗರವೇ ಅಡಗಿರಲು ಕಣ್ಣಿನಲ್ಲಿ
ಭಾವಕೆ ಮಣಿದು ಹರಿಯುವುದು ಒಂದೆರಡು ಹನಿಯು
ಒಂದು ಇರುಳು ದಾಟಿ ಎಷ್ಟೆಲ್ಲ ಕನಸು
ಕಾಡಿ ಕಂಗೆಡಿಸಿದವು ಒಂದೆರಡು ಮಾತ್ರ
ಒಂದು ಬದುಕಿನ ಮಡಿಲಲೆಷ್ಟೊಂದು ಬಣ್ಣ
ಹಚ್ಚಿ ಸಾಗಿಸ ಬೇಕು ನಮಗೊಲಿದ ಪಾತ್ರ

ಒಂದೆರಡು ನೆನಪುಗಳೇ ಸಾಕು, ನಗು ಮೂಡಿಸೋಕೆ.. ಅಳಿಸೋಕೆ.. 


**ಚರಣ ೧**
ಒಂದೊಂದೇ ಹೆಜ್ಜೆ ದಾರಿ ತಿರುವನಕ
ನಂತರದ ದಾರಿಗಳು ಹತ್ತು ಹಲವು
ಮಿಂದೆದ್ದು ಖುಷಿಗೆ ಮರು ಗಳಿಗೆ ಬಿದ್ದು
ಸೋಲು ಕಂಡಾಗ ಮತ್ತಷ್ಟು ಬಲವು
ಹಲವಾರರ ಪೈಕಿ ನಮಗಷ್ಟೇ ಅವಕಾಶ
ಸಿಕ್ಕಂತೆ ಬದುಕಬೇಕು ಬದುಕ ಪೂರ
ಯಾರೂ ಕೈ ಹಿಡಿಯದಿರೆ ಮೇಲೊಬ್ಬ ಇರುತಾನೆ
ಬೇರೇನನೋ ಬರೆಯುತ ಮೋಡಿಗಾರ..

ಹಿಡಿಗೊಂದು ಬೆರಳಿರಲೇ ಬೇಕು, ಕಳುವಾದ ದಾರಿ ತೋರೋಕೆ.. 

ಒಂದು ಕಿಡಿ ಸೋಕಿದ ಎಲೆ ಹೊತ್ತು ಉರಿದು
ಬೆಟ್ಟ ಗುಡ್ಡಗಳ ನುಂಗುವುದು ಪ್ರಕೃತಿಯ ನೇಮ
ಒಂದು ಕಾರ್ಮುಗಿಲು ಓಲೈಸಿ ಕರಗಿದಾಗ
ಅಲ್ಲಿ ಹೊಸ ಚಿಗುರು ಮೂಡುವುದೇ ನಿಜವಾದ ಪ್ರೇಮ

**ಚರಣ ೨**
ಮನವೆಂಬ ಕೊಳದಲ್ಲಿ ಕಲ್ಲೊಂದು ಬಿದ್ದಾಗ 
ಎದ್ದ ಅಲೆಗಳು ಮತ್ತೆ ಕೂಡುವಂತೆ 
ಅವಲಂಬಿಸಿ ಬಳ್ಳಿ ಮರವನ್ನು ತಬ್ಬಿರಲು 
ಹೂವು ಬಿಟ್ಟು ಚಂದಗೊಳಿಸಿದಂತೆ 
ಇದ್ದಂತೆ ಇರುವಾಗ ಇಬ್ಬಂದಿ ಇರದಂತೆ
ಮತ್ತೊಬ್ಬರನುಕರಣೆಯಿಂದಾಗಿ ಗೋಳು
ಕನ್ನ ಹಾಕುವ ಮನೆಯ ಕನ್ನಡಿಯ ಮೊಗದಲ್ಲಿ
ಕಾಣಬಹುದು ನಮ್ಮ ಬಿಂಬ ಅದರಲ್ಲೂ 

ಒಂದಷ್ಟು ಸೋಲುಗಳು ಬೇಕು, ಸರಿ ತಪ್ಪು ಕಲಿಸಿ ನಡೆಸೋಕೆ.. 

ಒಂದು ನೂರಾದರೂ ಹೊಮ್ಮುವುದು ಎದೆಯಲಿ
ಹಚ್ಚೆಯ ರೂಪ ತಾಳಿದವು ಒಂದೆರಡು ಸಾಲು
ಒಂದು ಸಾಗರವೇ ಅಡಗಿರಲು ಕಣ್ಣಿನಲ್ಲಿ
ಭಾವಕೆ ಮಣಿದು ಹರಿಯುವುದು ಒಂದೆರಡು ಹನಿಯು
ಒಂದು ಇರುಳು ದಾಟಿ ಎಷ್ಟೆಲ್ಲ ಕನಸು
ಕಾಡಿ ಕಂಗೆಡಿಸಿದವು ಒಂದೆರಡು ಮಾತ್ರ
ಒಂದು ಬದುಕಿನ ಮಡಿಲಲೆಷ್ಟೊಂದು ಬಣ್ಣ
ಹಚ್ಚಿ ಸಾಗಿಸ ಬೇಕು ನಮಗೊಲಿದ ಪಾತ್ರ.... 

ಒಂದೆರಡು ನೆನಪುಗಳೇ ಸಾಕು, ನಗು ಮೂಡಿಸೋಕೆ.. ಅಳಿಸೋಕೆ.. 

****ಹಾಡು***

https://soundcloud.com/bharath-m-venkataswamy/uxbd6ob3weru

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...