Saturday, 4 January 2020

ವಿಪರೀತ ಹೃದಯದ ಬಡಿತ

ವಿಪರೀತ ಹೃದಯದ ಬಡಿತ 
ಎದುರಾಗಿ ನೀ ನಸುನಗುತ 
ಅಭಿಜಾತ ತುಸು ಅಪರಿಚಿತ 
ಜೊತೆಯಾದೆ ಖುಷಿ ಅಪರಿಮಿತ 
ಕಣ್ಣಲ್ಲೇ ನೀ ಕುಣಿಸಿರುವೆ 
ಉಸಿರಾಟಕೀಗ ತಕಧಿಮಿತ... 

ಪಾರಿಜಾತದಂತೆ ಉರುಳುವೆನು ನಾಚಿಕೆಗೆ 
ಓ ಪಾರಿವಾಳ ಹೋಗಿ ತಲುಪಿಸು ಈ ವರದಿ
ಪ್ರೇಮ ಕಾವಿನಲ್ಲಿ ಕುದಿಯುತಿದೆ ಮನ ಕುಲುಮೆ
ಇನ್ನೂ ಬೇಯುವಂತೆ ನೀಡಬೇಕು ನೀ ಅವಧಿ 
ಮುಚ್ಚು ಮರೆಯಲ್ಲೇ ಎಲ್ಲ ಆಕರ್ಷ 
ಮೆಚ್ಚಿ ಪಡೆದಾಗ ನೋವೂ ಉಲ್ಲಾಸ 
ಸದ್ದೇ ಇರದಂತೆ ಪೂರ್ತಿ ಕಳುವಾದೆ 
ನಿನ್ನ ತೋಳೀಗ ಆ ನನ್ನ ವಿಳಾಸ.. 

ವಿಪರೀತ ಹೃದಯದ ಬಡಿತ 
ಎದುರಾಗಿ ನೀ ನಸುನಗುತ 
ಅಭಿಜಾತ ತುಸು ಅಪರಿಚಿತ 
ಜೊತೆಯಾದೆ ಖುಷಿ ಅಪರಿಮಿತ.... 

ದೂರದಲ್ಲಿ ನಿಂತೆ, ನೀ ಮೀರದೆ ಸಲುಗೆ 
ಮೇರೆ ಮೀರಿದಾಗ ನೂರು ದೀಪ ನನ್ನೊಳಗೆ 
ಮೋಹದಲ್ಲಿ ಮಾಗಿ ಮತ್ತೇರಿದ ಘಳಿಗೆ 
ಹಾತೊರೆಯುವೆ ಹಾಲ್ನೊರೆಯು ಉಕ್ಕುವ ಹಾಗೆ 
ಎಲ್ಲ ಆಸೆಗೂ ಮಡಿಲು ಏಕಾಂತ 
ಕಡಿಮೆ ಸಿಕ್ಕಾಗ ಹೆಚ್ಚು ಧಾವಂತ 
ಅದಲು ಬದಲಾಗಿ ತೊದಲೋ ಅಂಚಲ್ಲಿ 
ಮತ್ತೆ ಮೊದಲಾಗೋ ಆ ಮಾತೇ ಸಂಗೀತ.. 

ಕೊಡುವಂತೆ ಸಿಹಿ ಕನಸುಗಳ 
ನಡೆಸುವೆಯಾ ನೀ ಹುಸಿ ಜಗಳ?
ಬಿಡದಂತೆ ಪ್ರತಿ ನಿಮಿಷವನೂ 
ತೆರೆದೋದು ಎದೆ ಕಡತಗಳ 
ಅಂಜಿಕೆಗೆ ನಾ ಕಂಪಿಸುವೆ 
ನೀ ಮಾಯ ಮಾಡು ತುಮುಲಗಳ...!

*ಹಾಡು*
https://soundcloud.com/bharath-m-venkataswamy/vnspdqeqojtm

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...