ಇರುಳಚ್ಚರಿ

ಮುತ್ತಿಗೆ ಸುಲಭಕೆ ದಕ್ಕುವ ನಿನ್ನ
ತುಸು ದೂರದಲೇ ಮುದ್ದಿಸುವೆ
ತುಟಿಗೆ ತಲುಪಿಸಿ ಮೌನದ ಬಿಸಿಯ
ಒಡಲುದ್ದಗಲಕೂ ಹಬ್ಬಿಸುವೆ


ಬಯಸದೆ ಮೂಡಿದ ಬಿರುಸಿನ ಬಯಕೆಯ
ಬಯಸಿ ಬಯಸಿ ಮರೆಸಿಡುವೆ
ಕನಸಲಿ ಬರೆದ ರತಿ ಕಾವ್ಯವನು
ಕಣ್ಣಲಿ ಕಟ್ಟಿ ಒಪ್ಪಿಸುವೆ


ಮಧುರಾತಿಮಧುರ ಇರುಳಚ್ಚರಿಗಳ
ಅಚ್ಚೆಯಂತೆ ನಮೂದಿಸಿವೆ
ಎಲ್ಲಿಯೆಂದು ನೀ ಹುಡುಕಬೇಡ
ಕೊನೆಯಲ್ಲಿ ನನ್ನಲೇ ಬಿಂಬಿಸುವೆ


ಮಾಗಿ ಕೆಂಪು, ಹೂವಂಥ ನುಣುಪು
ನಿನ್ನಂಥ ವಿಸ್ಮಯಕೆ ಹೆಸರಿಡುವೆ
ಅಕ್ಷರಕ್ಕೇ ಮಾತ್ಸರ್ಯ ತರಿಸಿ
ಒಂದೊಂದೇ ಇಳಿಸಿ ಮುಡಿಗಿಡುವೆ


ಒಂದು ಮಾತು ಮತ್ತೊಂದು ಮಾತು
ಮಾತೆಲ್ಲ ಮುಗಿಯಲು ಕಾದಿರುವೆ
ಇಂಥ ಹೊತ್ತು ಮತ್ತಷ್ಟು ಸಿಗಲಿ
ಎಂತೆಂಬ ಹಂಬಲಕೆ ಜೋತಿರುವೆ


                                    -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩