Wednesday, 9 September 2015

ಅಮೃತ ಗಳಿಗೆ


ಹೊಕ್ಕಳ ಕೆಳಗೆ ಮಕ್ಕಳ ಬರಹದಂತೆ
ಸಿಕ್ಕಿಸಿಕೊಂಡಿದ್ದ ನೆರಿಗೆಯ ಅಚ್ಚು
ಅರ್ಥವಾಗದ ಲಿಪಿಯ ಪದ್ಯವೋ? ಗದ್ಯವೋ?
ಮಧ್ಯೆ ಅಲ್ಲಲ್ಲಿ ಮುರಿದಿರಬೇಕು ಬಳಪ
ಸ್ಥಳ ಬಿಟ್ಟು ಮುಂದೆ ಮತ್ತಷ್ಟು ಅಕ್ಷರ!!



ರವಿಕೆಯ ಕೊಂಡಿ ಮುಂಬದಿಗೋ? ಹಿಂಬದಿಗೋ?
ಹುಡುಕಿ ಗೆದ್ದಿದ್ದಕ್ಕಿಂತ ಊಹೆಯಲಿ ಸತ್ತದ್ದು ಹೆಚ್ಚು,
ಕಗ್ಗಂಟಲ್ಲದಿದ್ದರೂ ಜಟಿಲ ಪಟ್ಟಿ
ಒಂದೆಳೆಯ ಹಿಡಿದೆಳೆದರೆ ಮುಂದೆಲ್ಲ ಸ್ವಚ್ಛ ಬಯಲು!!



ಎದೆಯ ಹಿಗ್ಗನು ಮರೆಸಿದ ಸೆರಗಿನ ಕಸೂತಿ
ಅಲ್ಲಿ ಗಂಡು ನವಿಲುಗಳ ನರ್ತನ.
ಕೆಂಗಣ್ಣ ಕೆಣಕಿ ತಾವ್ ತಲೆ ಮರೆಸಿಕೊಂಡಾಗ
ಬೆತ್ತಲಾಗಿಸಲೊಂದು ದಿಟ್ಟ ಸವಾಲು
ಬೆವರ ಹನಿಯ ಸುಂಕದ ಸೋಂಕಿನ ತೆರಿಗೆ
ಜಾರಿದವು ಕತ್ತಲ ಕೋಣೆಯ ಮರೆಗೆ!!



ಕಾಲುಂಗುರವೇ ಬಲ್ಲದು ಬೆರಳ ಲಜ್ಜೆ
ಹಸ್ತದ ಸಮಸ್ತ ಪಾಲು ಹಸ್ತಕೆ ಹಸ್ತಾಂತರ
ಬಿಸ್ತರವು ಬಾಯ್ಬಡಿದುಕೊಂಡಿತೊಮ್ಮೆಲೆಗೆ
ತಲೆ ದಿಂಬಿಗೊಂದು ಬಿಂದುವಿನ ಸ್ಪರ್ಶ
ನನ್ನಿಂದ ಜಾರಿ, ನಿನ್ನನ್ನು ಹೀರಿ, ನಮ್ಮನ್ನು ಮೀರಿ



ಬೈತಲೆ, ಬೊಟ್ಟಿನ ಹುಡುಕಾಟ ಆಮೇಲೆ
ಕಳೆದಿರಲೂ ಬಹುದು
ಅಥವ ಇರಲೂ ಬಹುದು ಬೆನ್ನಲ್ಲೇ.
ಕಾಣು ಕಣ್ಣಲ್ಲೇ ಒಮ್ಮೆ
ಮನಸಲ್ಲಿ ಕಂಡ ತರುವಾಯ,
ಹಿಡಿ ಕೈಯ್ಯ ಮೈ ಬಳಸಿ ಒಂದು ಸಾರಿ
ಮತ್ತೊಂದು ಸಾರಿ... ಬಾರಿ ಬಾರಿ...!!



                                                 -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...