Friday 18 September 2015

ನೀನೇನಾ


ನೀನೇ ಇದ್ದೆಯಾ ಮರದ ನೆರಳಲಿ
ತಂಪು ಬೀರುತ ಎಂದಿನಂತೆ?
ನೀನೇ ಇಟ್ಟೆಯಾ ಹೆಸರ ಹೂವಿಗೆ
ಎಂದೂ ನಗುನಗುತಿರುವಂತೆ?


ನೀನೇ ಬರೆದೆಯಾ ನಭದಿ ಚಿತ್ರ
ದಿನಕೊಂದು ರೂಪು ಪಡೆವಂತೆ?
ನೀನೇ ಕೊಟ್ಟೆಯಾ ನಿಗದಿ ವಿಳಾಸ
ಚಂದಿರ ತಪ್ಪದೆ ಮೂಡುವಂತೆ?


ನೀನೇ ತಿಳಿಸಿ ಕೊಟ್ಟೆಯೇನು
ಶಬ್ಧವೂ ಇಂಪಾಗುವಂತೆ?
ನೀನೇ ಬಿಡಿಸಿ ಬಿಟ್ಟೆಯೇನು
ಬೆಳಕು ಸಪ್ತವಾಗುವಂತೆ?


ನೀನೇ ಕಂಡುಕೊಟ್ಟಿರಬೇಕು
ತಂಬೆಲರಿಗೆ ಬೀಸಲೊಂದು ದಿಕ್ಕು?
ನೀನೇ ಒದಗಿಸಿ ಬಿಟ್ಟೆಯೇನು
ಉದುರಿದೆಡೆ ಚುಗುರೊಡೆವ ಹಕ್ಕು?


ನೀನೇ ಹೂಡಿದ ಸಂಚು ತಾನು
ಮಿಂಚು ಹುಳುವಿಗೆ ಸ್ಪೂರ್ತಿಯಾಯ್ತೇ?
ನೀನು ಬರೆಯದೆ ಬಿಟ್ಟ ಪದಗಳೂ
ದಿವ್ಯ ಕಾವ್ಯ ಸಂಕಲನವಾಯ್ತೇ?


ನೀನು ನೋಯಿಸದಿರೆಂತು ನೋವು?
ನೀನು ಕಾಯಿಸದಿರೆಂತು ಕಾವು?
ನೀನು ಕೊಡುವುದೇ ಆದರೆ
ಅತಿ ಚಂದವಾದೀತಲ್ಲ ಸಾವು?!!


                                     -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...