ಒಂದು ಮುಟ್ಟಿನ ಕಥೆ

ನೋವ ಹೇಳಿಕೊಳ್ಳಬೇಕನಿಸುವಾಗಲೇ
ದೇವರ ಕೋಣೆಗೆ ನಿಷೇಧ ಹೇರುವಂತಾದರೆ
ದೇವರು ನಮಗೆ ಬೇಡಮತ್ತೆ, ನನ್ನ ಪತಿ ದೇವರೆಂದು ಅಪ್ಪಿತಪ್ಪಿಯೂ ಅನ್ನದಿರು,
ಮುಟ್ಟಿನ ವೇಳೆ ನಿನ್ನ ದೂರವಿಟ್ಟೇನು.
ನಿನ್ನ ಸ್ಥಾನ ಇಗೋ ನನ್ನ ಎದೆಯ ಮೇಲೆ,
ಅದೆಂಥ ಸಂದರ್ಭವಾದರೂ ಸರಿ!!ಹಿಂಜರಿಕೆಯಲ್ಲಿ
ಅದೇನನ್ನೋ ಕೊಂಡು ಬನ್ನಿ ಎಂದು
ಚೀಟಿಯಲ್ಲಿ ಬರೆದು ಕೊಟ್ಟಾಗ
ಅವಿವೇಕಿಯಂತೆ ಪ್ರಶ್ನೆ ಕೇಳುವ ನನ್ನ
ಸಾಧ್ಯವಾದರೆ ಒಂದು ನೂರು ಬಾರಿಯಾದರೂ ಕ್ಷಮಿಸಬೇಕು ನೀನು!!ಹೌದು, ನನಗೆ ಇದೆಲ್ಲ ಹೊಸತು
ಯಾರೂ ಈವರೆಗೆ ಇವನ್ನೆಲ್ಲ ಹೇಳಿಕೊಟ್ಟಿರಲಿಲ್ಲ,
ಹೇಳಿಕೊಡಬೇಕಿತ್ತೆಂಬುದು ನನ್ನ ಅಲ್ಪತನ!!ಬೆಳವಣಿಗೆಯ ಲಕ್ಷಣಗಳನ್ನ
ಲಿಂಗ ಬೇದ ಮಾಡದೆ ತಿಳಿಗೊಡುವ
ಮುಕ್ತ ಶಾಲೆಯಾಗಬೇಕಿತ್ತು ಮನೆ,
ಆದರೆ ಸಮಾಜದ ತಾರತಮ್ಯದ ಪಿಡುಗು
ಗಂಡು ಮಕ್ಕಳನ್ನ ಇಂಥವುದರಿಂದ ದೂರವಿಟ್ಟಿತ್ತು.
ಇನ್ನು ಅಂತರ ಸಲ್ಲ
ನಾ ನಿನ್ನ ಹತ್ತಿರವೇ ಇರುವೆನಲ್ಲ!!ದಿನಗಳ ಎಣಿಸುವಲ್ಲಿ ನಾನೂ ಬೆರಳ ಸವೆಸುತ್ತೇನೆ
ಕಡೆ ವರೆಗೂ ನೀ ನುಂಗುವ ನೋವ
ಸಾಧ್ಯವಾದಷ್ಟೂ ಜೀರ್ಣಿಸಿಕೊಂಡು.
ಹೇಳಲಾಗದ್ದ ಹೇಳುವ ಮೊದಲೇ ಗ್ರಹಿಸಿ
ಆದಷ್ಟೂ ಖುಷಿಯ ಪಸರಿಸುತ್ತೇನೆ!!ಸಿಡುಕು, ಮುನಿಸು, ಜಗಳಗಳ ಇತ್ಯರ್ಥಕ್ಕೆ
ತಿಂಗಳು ಪೂರ್ತಿ ಬಾಕಿಯಿದೆ
ಮುಲಾಜಿಲ್ಲದೆ ತರಾಟೆಗೆ ತಗೆದುಕೋ ನನ್ನ,
ನನಗೀಗೀಗ ಚೂರು ಚೂರೇ ಎಲ್ಲ ಅರ್ಥವಾಗುತ್ತಿದೆ
ಎಲ್ಲೂ ಅಪಾರ್ಥದ ಬಿರುಕು ಮೂಡದಂತೆ
ಎಚ್ಚರಗೊಳ್ಳಬೇಕೆಂದೇ ಎಚ್ಚರಿಕೆಯಿಂದಿದ್ದೇನೆ!!                                              -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩