ಕನಸುಗಳೇ ಹೀಗೆ

ಕನಸಲಿ ಎಚ್ಚೆತ್ತು ಕನವರಿಸುತಲಿತ್ತು ಕಣ್ಣು
ಅದೆಷ್ಟು ಕನಸೊಳಗಿನ ಕನಸುಗಳೋ!!


ನಿಜದಿ ಎಚ್ಚರಗೊಳ್ಳಲು ಸೀಮೆ ದಾಟಿ
ಬಾಗಿಲುಗಳ ಮುರಿದು ಬರಬೇಕಿತ್ತು
ಹಾಸಿಗೆಯ ಮೇಲಿಂದ ನಿರ್ಭಾವುಕನಾಗಿ
ಆಕಳಿಸುತ್ತ ಮೇಲೆದ್ದು ಕೂರಲಿಕ್ಕೆ


ಪಕ್ಕ ಮಲಗಿದ್ದವರು ವಿಷಯವೇನೆಂದು ಕೇಳುತ್ತಾರೆ
ಏನೆಂದು ಹೇಳಲಿ? ಯಾವುದರ ಕುರಿತು ಹೇಳಲಿ?


ಒಂದರಿಂದ ಮತ್ತೊಂದಕ್ಕೆ ಸೂಜಿ ನೇಯ್ದ
ದಾರದಂತೆ ಸಲೀಸಾಗಿ ಸಾಗಿದವು
ಅದೇ ದಾರಿಯ ಹಿಡಿದು ವಾಪಸ್ಸಾಗುವಾಗ
ಗೋಜಲಾಗಿ ಪರಣಮಿಸಿದ್ದೇ
ಅದೆಷ್ಟೋ ಕನಸುಗಳ ತುಂಡರಿಸಲು ಕಾರಣ


ಹೋದ ದಾರಿಗೆ ಮೈಲಿಗಲ್ಲು ನೆಡುವಷ್ಟು
ಪುರುಸೊತ್ತು ಕೊಡದ ಇರುಳು
ಬೆಳಕಿನ ಗುಲಾಮಗಿರಿ ನಡುವೆ ಸಾಯುತ್ತದೆ,
ಮತ್ತೆ ಹುಟ್ಟುತ್ತದೆ ಸಾಯಲಿಕ್ಕೆ


ಇರುಳುಗನಸುಗಳ ಬದುಕು ನಿಜಕ್ಕೂ ನಿಕೃಷ್ಠ!!

ನಕಲಿ ಜೋಡಣೆಗಾದರೂ ನಿಲುಕಬೇಕು
ಒಮ್ಮೊಮ್ಮೆ ಮನಸನ್ನ ಹಗುರಾಗಿಸಿಕೊಳ್ಳಲು,
ಊಹುಂ.. ಸುತಾರಾಂ ಒಪ್ಪದು!!


ಕನಸುಗಳೇ ಹೀಗೆ
ನನ್ನ ಪಾಲಿನ ಮಟ್ಟಿಗೆ!!


                                              -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩