ಬಂದೇ ಬರುವೆ

ಬಯಸಿ ಬಯಸಿ ಮಳೆಯಲಿ ನೆನೆದು
ಉಸಿರ ಬಿಗಿಸಿ ಹೆಸರನು ಕರೆದು
ಕಣ್ಣಿನ ಕಾವಲುಗಾರರ ದಾಟಿ
ಬರುವೆ ಕಾದಿರು ಹೂವನು ಹಿಡಿದು


ನಡುವೆ ಸುಳಿಯ ಸರಳನು ಮುರಿದು
ಎಲ್ಲ ವಿಧಿಯ ಬಾಗಿಲ ತೆರೆದು
ಸಣ್ಣಗೆ ಸತ್ತು ನುಣ್ಣಗೆ ಅತ್ತು
ಬರುವೆ ಕಾದಿರು ಹೃದಯವ ಮಿಡಿದು


ಸಾಯಂಕಾಲಕೆ ಸಾಕಾದರೂ ಸರಿ
ಮುಂಜಾವಿನ ಮಂಜಿತ್ತರೂ ಅಚ್ಚರಿ
ಬೆಳಗು ಮಬ್ಬಿನ ಹಂಗನು ತೊರೆದು
ಬರುವೆ ಕಾದಿರು ಉಂಗುಟ ಕೊರೆದು


ಬರಿಗೈ ಬಡತನ ಸವಿಸುತ ಬರುವೆ
ಹಿಡಿ ಪ್ರೀತಿಗೆ ಎದೆ ಗೂಡನು ಕೊಡುವೆ
ಮಲ್ಲಿಗೆ ಕರಗಳ ಕೋಮಲ ಸೋಂಕಿಗೆ
ಬರುವೆ ಕಾದಿರು ನಗುವನೇ ಮುಡಿದು


ಮೈಲಿಗಲ್ಲುಗಳಚ್ಚರಿ ಪಡಲಿ
ಗೇಲಿಗೈದವು ನಾಚಿಕೆ ಪಡಲಿ
ಅಂತರದಂತರ ನಂತರವಿರಲಿ
ಬರುವೆ ಕಾದಿರು ಕವಿತೆಯ ಬರೆದು!!


                                  -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩