ಹಸಿವಲ್ಲಿ

ಹಸಿದಾಗ ಕನಸೊಂದು ಮುಸಿನಕ್ಕು ಕರೆದಿತ್ತು
ರಾತ್ರಿ ಔತಣದಲ್ಲಿ ಸತ್ತ ಹೆಗ್ಗಣಗಳು
ಬೀದಿ ದೀಪದ ಕೆಳಗೆ ಮೈ ಹರಡಿದ ಬೆಳಕು
ಅದ ಕೂಡಿ ಬಿಕ್ಕಳಿಸಿ ಸತ್ತ ನೆರಳು


ಅತ್ತ ನಾಯಿ ಬೊಗಳಿ ಇತ್ತ ಮೌನವ ಮುರಿದು
ಎತ್ತ ಸಾಗಲೂ ಚಿತ್ತ ದಿಕ್ಕೆಟ್ಟ ಹಾಗೆ
ನೂರು ಚಿಂತೆಯ ಕಂತೆ ಒಂದೊಂದೇ ತೆರೆದಾಗ
ನಿಸ್ಸಹಾಯಕ ಬೆವರು ನುಸುಳಿತು ಹೊರಗೆ


ಪಾಪ ಎಲ್ಲರ ಸ್ವತ್ತು, ಪುಣ್ಯ ಗಳಿಸಿದರಷ್ಟೇ
ತೂಗು ತಕ್ಕಡಿ ಎಂದೂ ಪಾಪದ ಕಡೆಗೇ
ಅಳತೆ ಮುಳ್ಳಿನ ರೀತಿ ಬದುಕಿನ ಕಾಲ್ದಾರಿ
ತಪ್ಪೆಂದು ತಿಳಿದರೂ ನರಕದ ಕಡೆಗೇ!!


ದೇವರೇ ನಂಬಿಸಲಿ ದೇವರಿಹನೆಂದು
ರಾಯಭಾರಿಗಳೆಲ್ಲ ದೂರ ನಿಲ್ಲಲಿ ಚೂರು
ಭೂಮಿ ಆಕಾಶವನು ಒಂದುಗೂಡಿಸುವಂಥ
ಹಸಿವಿನ ಅಳಲನ್ನ ನೀಗಿಸುವರಾರು?


ಭಾಗ್ಯಗಳು ಎಷ್ಟೆಂದು ಮನೆ ಬಾಗಿಲ ಒಳಗೆ
ಕಾಲು ಮುರಿದಂತೆ ಬಿದ್ದಿರಲು ಸಾಧ್ಯ
ಹಸಿವು ಹಸಿವನ್ನ ಮರೆಸುವ ಹಸಿವ ಹುಟ್ಟಿಸಲಿ
ಆಗ ಸಾರುವೆ "ದೇವರೇ ನೀನು ಸತ್ಯ"


                                                 -- ರತ್ನಸುತ

Comments

Popular posts from this blog

ಜೋಡಿ ಪದ

ಗರುಡ ಪ್ರಯತ್ನ ೩

ಗರುಡ ಗೀತ ಸಾಹಿತ್ಯ ೧