ಎಲ್ಲ ಮುಜುಗರವ ಮೀರಿ

ಎಲ್ಲರೆದುರೇ ಕೈ ಹಿಡಿಯುವುದೇ?
ಹತ್ತಿರವೆಂದರೆ ತೀರಾ ಹತ್ತಿರ ಕರೆದು
ಗುಸು-ಪಿಸು ಮಾತಾಡಬಹುದೇ?
ಲಗಾಮಿಲ್ಲದಂತೆ ಎಲ್ಲೆಂದರಲ್ಲಿ
ಗೊಳ್ಳೆಂದು ಮನದುಂಬಿ ನಗುವುದೇ?
ಗುಡಿಯಂಥ ಗುಡಿಯಲ್ಲೂ
ಗಡಿಬಿಡಿ ಮಾಡದೆ ಚುಂಬಿಸುವುದೇ?


"ಚೂರು ತುಂಟತನ ಹೆಚ್ಚಿದೆ"
ಎಂದು ಆರೋಪಿಸುವ ಮುನ್ನ
ಮನಸನು ಮುಟ್ಟಿ ನೋಡು,
ಅಥವ ಮೆಲ್ಲಗೆ ತಟ್ಟಿ ನೋಡು
ನಿದ್ದೆಗೆ ಜಾರಿದ ತಾ ಸಾಕ್ಷಿಗಿದೆ;
ತುಂಟತನದ ಮೂಲವೂ ಅದೇ!!


ಸರಿ, ಹಾಗಿದ್ದಮೇಲೆ
ನಾನು ದೂರ ನಿಲ್ಲುತ್ತೇನೆ
ನೀನೂ ದೂರ ನಿಲ್ಲು,
ಸನಿಹಕೆ ಹಸಿರು ನಿಶಾನೆ
ಯಾರು ಮೊದಲು ತೋರುತ್ತಾರೋ ನೋಡೋಣ;
ಅದು ನಾನೇ ಆದರೆ ತಪ್ಪೇನು?
ಆಟದಲ್ಲಿ ಸೋಲುವೆನಷ್ಟೆ
ಸೋಲೊಪ್ಪಿಕೊಂಡತಲ್ಲವಲ್ಲ!!


ಉಗುರು ಬಣ್ಣದಿಂದ, ಕಣ್ಗಪ್ಪಿಗೆ
ಒಪ್ಪಿಗೆ ಪಡೆಯುವ ನಿನ್ನ ಕಣ್ಣನು
ಒಮ್ಮೆ ಗದರಿ ನೋಡಬೇಕೆಂಬ ಆಸೆ,
ಅದರುವ ರೆಪ್ಪೆ ಉದುರಿಸಿ ಮುತ್ತ
ಅಂಗೈಯ್ಯ ಸೇರುವ ಮೊದಲೇ
ಕೆನ್ನೆಗೆ ಕೆನ್ನೆ ಸೋಕಿಸಿ ರವಾನಿಸಿಕೊಳ್ಳುವೆ,
ನಿನ್ನ ಕಂಬನಿಗೆ ನನ್ನ ಕೆನ್ನೆಯೂ ತೋಯಲಿ!!


ಪತ್ರಿಕೆಗಳ ವಿಷೇಶ ಲೇಖನಗಳಲ್ಲಿ
ಸ್ತ್ರೀ ಕುರಿತಾದವುಗಳನ್ನ ಗುಟ್ಟಾಗಿ ಓದುತ್ತೇನೆ
ನಿನ್ನ ಇನ್ನಷ್ಟು ಪ್ರೀತಿಸುವ ಕಾರಣಗಳು
ಹುಟ್ಟುತ್ತಲೇ ಹೋಗುತ್ತಿವೆ,
ಬಹುಶಃ ನಾನು ಹುಲು ಗಂಡಸಾಗಿ
ಮಾಡಬಹುದಾಗಿದ್ದು ಇಷ್ಟೇ!!


                                             -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩