ಎರಡೊಂದ್ಲ ಒಂದು

ಎಲ್ಲ ಲೆಕ್ಕಕ್ಕೂ ಮುತ್ತೇ ಕಾಯಿ,
ಜಗಳ, ಮುನಿಸು, ಸಮರಸಕೆ
ಒಂದು ಕಾಯಿ ಹೆಚ್ಚಿಗೇ ಇಟ್ಟು
ಮುತ್ತಿನ ಲೆಕ್ಕ ತೀರಿಸಿಕೊಂಡರಾಯ್ತು


ಕತ್ತಲ ಹಾದಿಯ ನಡುನಡುವೆ
ಬೀದಿ ದೀಪಗಳ ಕೇಕೆ
ಕತ್ತಲ ಸೀಮೆಯಲ್ಲೇ ಪಾದ ಸವೆಸಿ
ಬೆಳಕ ಬಹಿಷ್ಕಾರಕ್ಕೆ ಸಂಚು ಹೂಡುವ


ಸಂತೆಯಲ್ಲಿ ಅಂತೆ ಕಂತೆಗಳ ಬಾಯ್ಮುಚ್ಚಿ
ಕೈ ಹಿಡಿದು ದಿಲ್ದಾರಾಗಿ ನಡೆವಾಗ
ಬೆರಳು ಅಂಜುಬುರುಕ ನೆರಳಿಗೆ
ಸಾಹಸ ಗಾಥೆ ಹೇಳಿಕೊಂಡಿರಲಿ


ಕನಸುಗಳ ಕಟ್ಟಲು ಪಲ್ಲಂಗ ಬೇಕಿಲ್ಲ
ನಾಲ್ಕು ಗೇಡೆಗಳ ಹಂಗಿಲ್ಲ
ಮಡಿಲಲ್ಲಿ ಹಿಡಿ ಪ್ರೇಮ ಕೌದಿಯಾದರೆ
ಕನಸುಗಳ ಪಾಲಿಗದು ರಾಜಾಶ್ರಯ


ನಾಳೆಯೆಂಬುದು ಬರದೆ ಉಳಿಯದೆಂದು
ನೆನ್ನೆಯೆಂಬುದು ಮರಳಿ ಬಾರದೆಂದು
ಕ್ಷಣದ ಸುಖದಲ್ಲಿ ಕಹಿ ಹಿಂಡಲು
ಹೆಪ್ಪುಗಟ್ಟಿದ ಹೃದಯ ಬಡಿದೇ ಒದ್ದಾಡಿತು


ತಾರೆ ಕುಸುರಿಯ ಬಾನು ಹೊದಿಕೆಗಾಗಿ
ಭುವಿಯ ತುಂಬ ನಮ್ಮ ಹೆಜ್ಜೆ ಗುರುತು
ನಾವು ನಾವಾಗಿ ಒಂದಾಗಿ ಬಾಳುವ ಆಗ
ಮೆಚ್ಚಿ ಗೊಣಗಲಿ ಲೋಕ ನಮ್ಮ ಕುರಿತು


                                        -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩