ನಾನು ಕಂಡಂತೆ

ಬಣ್ಣ ಗುರುತಿಸಲೆಂದಷ್ಟೇ
ಬಣ್ಣವೇ ಗುರುತಾಗಿಬಿಟ್ಟರೆ?!!
ಒಂದು ಬದಿಯಲ್ಲಿ ಯುದ್ಧ
ಸರ್ವಾಧಿಕಾರಿಗಳ ತ್ರಾಣ
ಮತ್ತೊಂದು ಬದಿಯಲ್ಲಿ ದುಃಖ
ಶಾಂತಿದೂತರ ಧ್ಯಾನ!!


ಧರ್ಮ ಆಚರಣೆಯ ಗುರುತಷ್ಟೇ
ಧರ್ಮವೇ ಗಿರುತಾಗಿಬಿಟ್ಟರೆ?!!
ಒಂದು ಬದಿಯಲ್ಲಿ ಕಿಚ್ಚು
ಹೊಟ್ಟೆ ತುಂಬಿದವರ ತೇಗು
ಮತ್ತೊಂದು ಬದಿಯಲ್ಲಿ ಮೌನ
ಹಸಿವಿನಾಕ್ರಂದನದ ಕೂಗು!!


ವಿಜ್ಞಾನ ಜ್ಞಾನದ ಗುರುತಷ್ಟೇ
ವಿಜ್ಞಾನವೇ ಮಿಗಿಲಾಗಿಬಿಟ್ಟರೆ?!!
ಒಂದು ಬದಿಯಲ್ಲಿ ಅಸ್ಮಿತೆ
ನಾನೇ ಎಂಬ ವಿಪರೀತ ಬುದ್ಧಿ
ಮತ್ತೊಂದು ಬದಿಯಲ್ಲಿ ಕಗ್ಗತ್ತಲು
ಅಳುವ ಹಸುಗೂಸುಗಳಿಗಿಲ್ಲದ ಕೌದಿ!!


ಗಡಿ-ರೇಖೆ ಕೂಡಿಸುವ ಸೂತ್ರವಷ್ಟೇ
ತಾನೇ ಬೇಲಿಯಾಗಿಬಿಟ್ಟರೆ?!!
ಎರಡೂ ಬದಿಯಲ್ಲಿ ಸೇಡಿನ ಜ್ವಾಲೆ
ಅಂಧಕಾರದಲಿ ಸೋತ ಭಾವೈಕ್ಯತೆ
ಎರಡೂ ಬೆನ್ನು ಮುಖಾಮುಖಿ
ಮುಖ ಭಾವನೆಗಳ ಅರಾಜುಕತೆ!!


ಭಾಷೆ ಅಭಿವ್ಯಕ್ತಿ ಮಾಧ್ಯಮ
ಅಭಿಮಾನ, ಸ್ವಾಭಿಮಾನದ ಗುರುತು
ದುರಾಭಿಮಾನದಿಂದ ಅನ್ಯ ಭಾಷೆಗಳೆಡೆಗೆ
ಅಸೂಯೆಗೆ ನಾಂದಿಯಾದರೆ?!!
ಅನೇಕತೆಯ ನಡುವೆ ಏಕತೆಯ ಕಗ್ಗೊಲೆ
ಕಣ್ಣೀರ ಭಾಷೆಯಲ್ಲೇ ಕೋಟಿ ಕೋಟಿ ಪ್ರಶ್ನೆಗಳು,
ಸಿಗುವ ಉತ್ತರಗಳು ಅಸಮಾಧಾನಕರ!!


                                                  -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩