ಚಿಟಿಕೆ ಪ್ರೀತಿಯ ಸ್ವಾದ

ಸಾಕೆನಿಸುವಷ್ಟು ಏಕಾಂತವಿದೆ ಜೊತೆಯಲ್ಲಿ
ಎಲ್ಲಿ ಮರೆಯಾಗುವುದೋ ನೀ ಸೋಕಿದಾಗ
ಅನುಭವಿಸುವಷ್ಟು ಬಡತನವಿದೆ ಬದುಕಲ್ಲಿ
ಎಲ್ಲ ಸಿರಿಯಂತೆ ನೀ ಶೃತಿಯಾಗುವಾಗ


ಆರಂಭವೆಲ್ಲ ಒಂದೊಂದಾಗಿ ಮುಗಿಯುತಿವೆ
ಆದರೊಂದೇ ಪ್ರೇಮ ಮುಗಿಯದ ಪದ್ಯ
ಕಾರಣಾಂತರದಿಂದ ಕರೆಯೊಂದು ಸೋಲುವುದು
ಮನದಲ್ಲಿ ನಿನ್ನೆಸರೇ ಜಪದಂತೆ ನಿತ್ಯ


ಉದ್ದುದ್ದ ಭಾಷಣಕೆ ನೀನಲ್ಲ ಸ್ಪೂರ್ತಿ ಸೆಲೆ
ಬದುಕೆಂಬ ಮೂರಕ್ಷರಕೆ ಸಿಕ್ಕ ಮುನ್ನುಡಿ
ಹಣೆಬರಹವ ತಿದ್ದಿ ಹೊಸ ದಿಗಂತಕೆ ಹೊಯ್ದೆ
ನೋವುಗಳು ಧೂಳಾದವಾಕ್ಷಣಕೆ ಕಾಲಡಿ


ಇಲ್ಲದಂತಿದ್ದ ನನ್ನುಸಿರ ಎಚ್ಚರಿಸಿದಾಕೆ
ಅತ್ತ ಮಾಡುವೆ ಮತ್ತೆ ಮೊಗವ ಮುನಿಸಲ್ಲಿ
ಎಲ್ಲದಕ್ಕೂ ಸಣ್ಣ ಸುಳ್ಳೊಂದು ಪರಿಹಾರ
ಸತ್ಯ ಬಿಚ್ಚಿಟ್ಟಾಗ ಪೆಟ್ಟು ನಗುವಲ್ಲಿ


ಸೂರ್ಯನಿದ್ದೆಡೆ ಉಷ್ಣ, ಚಂದ್ರನಿದ್ದೆಡೆ ಶೀತ
ಎದೆಯೊಂದೇ ನಿನಗೆ ಸರಿಹೊಂದುವ ತಾಣ
ಹಾಡು ಹಾಡಿ ನಿನ್ನ ಎಷ್ಟೇ ಬಳಸಿದರೂನು
ಮತ್ತಷ್ಟು ಸಾಮಿಪ್ಯ ನೀಡುವುದು ಮೌನ


ಬದುಕ ಪಾಕದೊಳೊಂದು ಚಿಟಿಕೆಯಷ್ಟರ ಪ್ರೀತಿ
ವಾದರಹಿತ ಮೇರು ಸ್ವಾದವದು ಖಚಿತ
ಅತ್ತಾಗಲಷ್ಟೇ ಕಣ್ಣು ತುಂಬಿ ಬರದೆಂದೂ
ನಗುವಿಗೂ ಕೊಡುಗೆ ಸಂಪೂರ್ಣ ಉಚಿತ!!


                                                 -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩