ಪಯಣ

ಈಜಿದ್ದು ಸಾಕಾಯಿತು
ಪಾದವ ನೆಲಕೆ ತಾಕಿಸಿ
ಯಾವ ಮಟ್ಟಕ್ಕೆ ನೀರು ಬರುತ್ತದೆಯೋ
ಕೂಡಲೇ ಪರೀಕ್ಷಿಸಬೇಕು,
ನನಗೆ ಗೊತ್ತಾಗಿದೆ
ಇನ್ನು ಬಹಳ ದೂರ ಈಜಲಾರೆ


ಉಸಿರು ಬುಡ್ಡೆಗಳಾಗಿ ಒಡೆದು
ಹೆಸರಿಲ್ಲದಂತಾಗಿವೆ
ಎದೆ ಗೂಡಿಗೆ ಕನ್ನ ಹಾಕಿ
ಮತ್ತಷ್ಟು ದೋಚುವ ನೀರಿಗೆ
ಮೀನುಗಳಿಗೆ ಮಾತ್ರ ತವಕ
ನನಗದು ನರಕ


ತೇಲಿ ಬಿಡಬೇಕು
ಹೇಗಾದರೂ ತೀರ ತಲುಪಲು,
ಅದಕೆ ಸಾಯುವುದೊಂದೇ ದಾರಿಯಲ್ಲ
ಈಜು ಕಲಿತರೆ ಸಂಬಾಳಿಸಬಹುದು.
ಕಲಿಸುವರಾರಿಲ್ಲದೆ ಬಳಲಿದ್ದೇನೆ
ಅಲೆಗಳು ಗುಟ್ಟಾಗಿ ಸಂಚು ರೂಪಿಸುತ್ತಿವೆ


ಸುಳಿಯೊಂದನು ದಾಟಿ ಬಂದಿರುವೆ
ಅದರ ವ್ಯಾಪ್ತಿಯ ಅರಿವಿದೆ,
ಭಯವೆಲ್ಲ ಒಂದೇ
ಅದು ಸುಳಿಯೇ ಆಗಿರದಿದ್ದರೆ?
ಸುಳ್ಳಾಗಿದ್ದರೆ ಗತಿಯೇನು?
ಯಾವುದನ್ನೂ ಕಡಿಮೆ ಅಂದಾಜಿಸುವಂತಿಲ್ಲ!!


ಮಂಡಿ ನಿಧಾನಕೆ ಸೆಟೆದುಕೊಂಡಿತು
ಪಾದಕೆ ಏನೋ ಸಿಕ್ಕಂತಿದೆ
ಇದೇ ನೆಲವಿರಬೇಕು
ನನ್ನ ದಣಿವಾರದ ಹಂಬಲದ ಮೊದಲ ಹೆಜ್ಜೆಯ
ಮುಂದಿಕ್ಕುವ ಆತಂಕ


ಪಯಣ ಒಂದೇ ಸಮ ಇರದು
ಇದ್ದಲ್ಲೇ ಉಳಿಯಲಿಕ್ಕೂ ಮುಜುಗರ
ಪ್ರಪಾತವೊಂದರ ಪರಿಚಯವಾಗಲಿ
ಹೆಜ್ಜೆ ಇಕ್ಕಿಯೇ ತೀರುತ್ತೇನೆ,
ಮತ್ತೆ ನೆಲದ ಮಡಿಲು
ಬದುಕು ಸಾಗುತ್ತಲೇ ಇದೆ!!


                                            -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩