ಇಷ್ಟರಲ್ಲೇ

ಭಯವೆಂದು ಭುಜಕಾನಿ
ನಡುಗುತ್ತ ಮುತ್ತಿಟ್ಟು
ಪಡೆದದ್ದು ನೂರೆಂಟು
ಲೆಕ್ಕವೇ ಬೋರು
ಖುಷಿಯಲ್ಲಿ ಮಿಂದೆದ್ದು
ನೋವಲ್ಲಿ ಮೈ ಒದರಿ
ಸಹಜ ಸ್ಥಿತಿಯಲ್ಲೊಂದು
ಶಾಂತ ಕಣ್ಣೀರು

ಅವರ ಮಾತಿಗೆ ಎಳೆದು
ಇವರ ಬಿಟ್ಟುಕೊಟ್ಟು
ನಾವು ನಾವಾಗಿರದೆ
ನಮ್ಮನ್ನೇ ಕೆದಕಿ
ಎಲ್ಲೋ ಮರೆತ ಹಾಗೆ
ಹೆಜ್ಜೆಯಿಟ್ಟು ಕೊನೆಗೆ
ಜಂಟಿ ಸೋಲೊಪ್ಪಿದೆವು
ಕಣ್ಮುಚ್ಚಿ ಹುಡುಕಿ

ದೇವರೆದುರೇ ಬಾಗಿ
ಬೈಗುಳದ ಮಳೆಗರೆದು
ನೆತ್ತಿಗಿಟ್ಟ ಬೊಟ್ಟು
ಕರಗುತಿದೆ ಚೂರು
ಹಳ್ಳ-ಕೊಳ್ಳದ ಹಾದಿ
ಅಲ್ಲೊಂದು ಮುದಿ ಸೂರ್ಯ
ಮಂದ ಬೆಳಕಿನ ನಡುವೆ
ನಾವೆಳೆದ ತೇರು

ನಿದ್ದೆಯಿಲ್ಲದ ಇರುಳ
ಕನಸ ಕಾವಲಿನವರು
ಈಗೀಗ ಬೇಡಿಹರು
ಕೂಲಿ ಪಗಾರ
ಹಂಚಿಕೊಂಡದ್ದೆಷ್ಟೋ
ಬಚ್ಚಿಯಿಟ್ಟದ್ದೆಷ್ಟೋ
ನೂಕು ನುಗ್ಗಲಿನಲ್ಲಿ
ಎಷ್ಟೋ ವಿಚಾರ

ಮೊಗಸಾಲೆ ಚಿತ್ರಕ್ಕೆ
ಹಿತ್ತಲಿನ ಹೂಘಮಲು
ಅಂತಃಪುರದ ಬಾಗಿಲು
ಚೂರು ಸಡಿಲು
ಉಪ್ಪರಿಗೆಯ ಮೇಲೆ
ಒಣಗಿಸಿಟ್ಟ ಖಾರ
ಪಲ್ಲಂಗದ ಮೇಲೆ
ನಿತ್ಯ ಹೂ ಮುಗಿಲು
              -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩