ಬೇಕು-ಬೇಡ

ಬರಗೆಟ್ಟ ದನಿಗಿಲ್ಲಿ
ಕಿವಿಗೊಟ್ಟು ಸತ್ತಾಗ
ಮೇಲೆತ್ತಲು ನೀನು ನಗಲೇ ಬೇಡ
ಉಸಿರುಗಟ್ಟಿದ ಎದೆಯ
ಮೇಲೊಂದು ಪದ್ಯವಿದೆ
ದಯಮಾಡಿ ನೀ ಅದನು ಓದಬೇಡ

ಮುನಿಸಲ್ಲಿ ತುಟಿನೇರಕೆ
ನೋಟ ಬೀರುವೆನು
ಕಚ್ಚಿದೇಟಿಗೆ ನನ್ನ ಕೊಲ್ಲಬೇಡ
ಹೇಳಹೆಸರಿಲ್ಲದವನಂತೆ
ನಾ ಸೋತಾಗ
ದುರುಗುಟ್ಟುತ ದೂರ ನಿಲ್ಲಬೇಡ

ಗೋಡೆಗೊರಗಿ ನಿಂತ
ಗಾಢವಾದ ಹೃದಯ
ಎಳೆದ ಗೀಟ ದಾಟಿ ಹೋಗಬೇಡ
ದೂಡುವಾಟದ ನಡುವೆ
ಸೋಲೊಪ್ಪಿಕೊಳ್ಳುವೆ
ಯಾಮಾರಿಯೂ ನನ್ನ ದೂಡಬೇಡ

ಬಿಗಿಸಿಟ್ಟರೂ ಸಹಿತ
ಕದ್ದು ಜಾರಲುಬಹುದು
ಉಟ್ಟ ಸೀರೆಗೆ ಪಾಠ ಹೇಳಬೇಡ
ಕಟ್ಟಿದ ಕುರುಳಲ್ಲಿ
ಬಡಪಾಯಿ ಪ್ರಾಣವಿದೆ
ಹಾರಿಸಿ ಉಸಿರಾಡು ಅನ್ನಬೇಡ

ಬೇಡೆನ್ನುವ ನಾನು
ಎಲ್ಲ ಬೇಡೆನ್ನೆನು
ಬೇಕಾದರೆ ತಡ ಮಾಡಬೇಡ
ಸಾಕಾಗಿದೆ ಇನ್ನು
ಭ್ರಮೆಯಲ್ಲಿ ಜೀವನ
ನಾ ಅರಳುವ ಮೊದಲೇ ಬಾಡಬೇಡ!!
                                     
                             -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩