ಕಾದು ಕಾದು ಗೀಚಿದ್ದು

ಕಾಯಿಸಿದ್ದಲ್ಲದೆ
ಬರುವಷ್ಟರಲ್ಲಿ ಕಾವ್ಯ ಗೀಚೆಂದಳು,
ಪಟ್ಟು ಹಿಡಿದು ಬರೆಯುತ್ತ ಕೂತವನು
ಕತ್ತಲಾಗಿದ್ದನ್ನೇ ಮರೆತು ಹೋದೆ,
ಚಂದ್ರನೇಕೋ ನಾಚಿಕೊಂಡ
ಮುಗಿಲ ಹಿಂದೆ ಅವಿತು ಕೂತೂ
ಅದೆಷ್ಟು ಬೆಳದಿಂಗಳು!!
ಆಕೆ ಬರುವ ಹೊತ್ತಾಗಿರಬೇಕು

ಅಂಗಡಿ-ಮುಂಗಟ್ಟುಗಳ
ವಿದ್ಯುತ್ ದೀಪಳು ಹೊಳೆಯುತ್ತಿದ್ದಂತೆ
ನಾ ಕುಳಿತುಕೊಂಡಿದ್ದ ಕಾಫಿ ದುಖಾನೂ
ಮಂದ ಬೆಳಕಲ್ಲಿ ಸಿಂಗಾರಗೊಂಡಿತ್ತು,
ಆಗಷ್ಟೇ ಬೀಸಿದ ಕಾಫಿ ಬೀಜದ ಪುಡಿ
ಮತ್ತವಳ ಪರ್ಫ್ಯೂಮು ಘಮಲು
ಎರಡರ ಪಕ್ವ ಸಮ್ಮಿಶ್ರಣದ ತಿಳಿಗಾಳಿ
ನನ್ನ ಸೋಕುವುದೊಂದೇ ಬಾಕಿ

ಕಾಯುವಾಗಿನ ಖುಷಿ
ಕಾಯಿಸುವವರಿಗೆ ಎಲ್ಲಿ ಸಿಕ್ಕೀತು?!!
ಎಲ್ಲಕ್ಕೂ ಯೋಗವಿರಬೇಕು;
ಜೀವನವಿಡೀ ಕಾಯುವ ಬರವಸೆ ಕೊಟ್ಟವ
ಈ ನಾಲ್ಕು ಕ್ಷಣ ಕಾದರೆ
ಬೆಂದುಹೋಗಲಾರ,
ಕಾಯುವುದೇ ಸೊಗಸು
ಪ್ರೀತಿಸುವವರಿಗಂತೂ ತೀರಾ ಸಲೀಸು!!

ಕಾದವನ ಬಾಗಿಸುವ ಕಲೆ
ಆ ಕಣ್ಣಿಗೆ ಕರಗತವಾದಂತಿದೆ,
ಅಗೋ ನೋಡು
ನನ್ನ ಪಾಡು ಕೇಳಲು
ಚಂದಿರ ಇಣುಕುವ ಪರಿ,
ಅವನೂ ಕಾಯುತ್ತಾನೆ
ಸಾಲದ ಬೆಳಕಲ್ಲಿ
ಬೆಚ್ಚಿದ ಇಳೆಯನ್ನ ಮುಚ್ಚಲೆಂದು
ಪ್ರಣಯ ಪೌರ್ಣಮಿಯಂದು!!
                               
                                     -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩