Friday, 12 June 2015

ತೋಚಿದ್ದಿಷ್ಟೇ

ಊರಿದಲ್ಲೇ ಸೂರು ಕಟ್ಟಿ
ಅಲುಗದಂಥ ತೇರನೆಳೆದ
ಒಂಟಿ ಮನದ ತಂಟೆತನಕೆ
ನೂರಯೆಂಟು ಸಂಕಟ;
ಒಮ್ಮೆ ಹೀಗೇ ಬಣ್ಣ ತೋರಿ
ಮತ್ತೆ ಮೊಗವ ಮರೆಸುತಿಹುದು
ಯಾಕೆ, ಏನು ಅರ್ಥವಾಗುತಿಲ್ಲ
ಮನದ ಪಲ್ಲಟ

ಬೀದಿಯಲ್ಲಿ ಸತ್ತು ಬಿದ್ದ
ನಾಯಿ ಮೂಳೆ, ರಕ್ತವಿನ್ನೂ
ಎಷ್ಟು ಜನ್ಮಕಾಗುವಷ್ಟು
ಸಾವ ಸವಿಯಬೇಕಿದೆ?
ಕಿವುಡು ಸೂರ್ಯ ಮುಳುಗುತಿಹನು
ಎಲ್ಲ ಕಂಡೂ ಕಾಣದಂತೆ
ಕತ್ತಲಲ್ಲಿ ಮೋಕ್ಷವೆಂಬುದೇನಾದರೂ
ದೊರೆವುದೇ?!!

ಮೋಡ ಕಿತ್ತು ಮೊಳಕೆಗಿಟ್ಟೆ
ಮಣ್ಣ ಕೆನ್ನೆ ಪಚ್ಚೆಗಟ್ಟಿ
ಬಿಸಿಲ ಕಂಡು ಓರೆ ನೋಟ
ವಕ್ರವಾಗಿ ಬೀರಿದೆ;
ಪ್ರಾಣ ಚಂಚಲಾಯಿತಿಲ್ಲಿ
ಮಸಣದಲ್ಲೇ ಅರ್ಧ ಜನ್ಮ
ಉಸಿರ ಕೊನೆಯಗಾಲಕಿಲ್ಲಿ
ಕಾಲ ಚಕ್ರವಾಗಿದೆ

ಸಣ್ಣ ಗೂಡಲೊಂದು ಬದುಕು
ಭವ್ಯ ಗೋಡೆ ಕುಸಿದು ಬಿದ್ದು
ಅರಮನೆಯ ಉಪ್ಪರಿಗೆ
ನಿರಾಧಾರವಾಯಿತು;
ಮುಂಚೆಯಿಂದ ದೂರವಿದ್ದ
ಧರ್ಮಬುದ್ಧಿಯೊಂದೇ ಕೊನೆಗೆ
ಸನಿಹದಲ್ಲಿ ಇದ್ದು ಅಲ್ಲಿ
ಸಮಾಧಾನ ಮಾಡಿತು

ಮುತ್ತನಿಟ್ಟ ತುಟಿಯ ಸುತ್ತ
ನೆಕ್ಕಿಕೊಂಡರೆಷ್ಟು ಸತ್ವ?!!
ತತ್ವವಿದ್ದರೂ ಅಲ್ಲಿ
ಯಾರು ಗ್ರಹಿಸುವಾತರು;
ಬದುಕ ಕಟ್ಟಿಕೊಳ್ಳುವಾಗ
ಕೆಡವಿಕೊಂಡ ಸತ್ಯವನ್ನ
ಮತ್ತೆ ಮತ್ತೆ ನೆನೆಸಿಕೊಂಡು
ಇಲ್ಲಿ ಎಲ್ಲ ಸತ್ತರು!!
                     -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...