ಗೂಡು ಮತ್ತು ಪಂಜರ

ಯಾರೂ ಇಲ್ಲದ ಪಂಜರದೊಳಗೆ
ಆಟವಾಡಲು ಹೋಗಿ ಸಿಕ್ಕಿಬಿದ್ದು
ಇನ್ನೂ ಹೊರಬರಲಾಗದೆ ಮಿಡುಕಾಡಿದೆ ಹಕ್ಕಿ

ಹೆತ್ತವಕ್ಕೂ ಗೊತ್ತಿಲ್ಲದ ಕಠೋರ ಸತ್ಯ,
ಪಾಪ ಅವು ಆಗತಾನೆ ಕಾಡಿಂದ ವಲಸೆ ಬಂದು
ನಾಡಿನಲ್ಲಿ ಗೂಡು ಕಟ್ಟಿಕೊಳ್ಳುತ್ತಿದ್ದವು
ಸ್ವೇಚ್ಛೆಯ ಸುಳುವಿದ್ದು ಬಂಧನದ ಅರಿವಿರದೆ

ಅತ್ತ ಗೂಡು ಸಜ್ಜಾಗುತ್ತಿತ್ತು
ನಾರು, ಬೇರು, ಕಡ್ಡಿ, ಕಸ
ತಂತಿ, ಹತ್ತಿ, ಬಟ್ಟೆ ಚೂರುಗಳಿಂದ,
ತಾಯಿ ಹಕ್ಕಿ ಪಂಜರದಲ್ಲಿಯ ಮರಿಯ ಕಂಡು
"ಅಬ್ಬಬ್ಬಾ, ಅರಮನೆ ಸಿಕ್ಕಿದ್ಯಲ್ಲೇ ನಿನ್ಗೆ!!"
ಎಂದು ಉದ್ಗಾರ ಹಾಡಿತು

ಹೊತ್ತೊತ್ತಿಗೆ ಗುಟುಕು
ಮೆತ್ತಗೆ ಹಾಸಿದ ಹುಲ್ಲ ಕುಪ್ಪೆ,
ಅಲ್ಲೇ ಚೂರು ಮಲಗಿದ್ದು
ಎದ್ದು ಹಾರಲು ಹೊರಟ ಹಕ್ಕಿಯ
ರೆಕ್ಕೆಗೆ ಸಿಗಬೇಕಿದ್ದ ಮಾನ್ಯತೆಯ
ಕಸಿದು ತೇಗುತ್ತಿತ್ತು ಸರಳು;
ಬೀಗ ಜಡಿದ ಪಂಜರವ ಸೀಳಿತು ಬೆಳಕು,
ಗೋಡೆ ಮೇಲೆ ನೋವ ನೆರಳು!!

ಅತ್ತ ಗೂಡಿನ ಹಕ್ಕಿಗಳು ಹಸಿವಲ್ಲೂ ತೃಪ್ತ
ಇತ್ತ ಒಂಟಿ ಹಕ್ಕಿಯ ಪಾಲಿಗೆ ಖಾಲಿ ನಿರ್ಲಿಪ್ತತೆ,
ಬಂದು ಹೋದವರೆಲ್ಲ ಮುದ್ದು ಮಾಡಿದವರೇ ವಿನಹ
ಯಾರ ಕಣ್ಣಿಗೂ ಬೀಳದೆ ಉಳಿಯಿತು
ಹಳೆ ಕಣ್ಣೀರ ಪಸೆ!!

ಪಾಠ ಕಲಿಸಿತು ಪಂಜರ
ಆಟದ ಬೆಲೆಗೆ
ನೊವಿನ ಆಯಾಮಗಳು ನೂರು
ಕಣ್ಣೀರೇ ಕಡೆಗೆ
ಗೂಡು ಮತ್ತು ಪಂಜರ
ಒಂದಕ್ಕೆ ದಕ್ಕಿದ್ದು ಮತ್ತೊಂದಕ್ಕಿಲ್ಲ!!
                                 
                                        -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩