Friday, 12 June 2015

ಸಾವಿಲ್ಲದ ಪ್ರಶ್ನೋತ್ತರ

ಯಾವ ದನಿಯನ್ನು ನಾ ಬೇಡವೆಂದಿದ್ದೆನೋ
ಯಾವ ಹಾಡನ್ನು ನಾ ಕೇಳಬಯಸಿಲ್ಲವೋ
ಯಾವ ನೋವು ನನಗೆ ರುಢಿಯಾಗಿಲ್ಲವೋ
ಯಾವ ಪ್ರಶ್ನೆಗೆ ಉತ್ತರ ಸಿಗದೆ ಉಳಿದೆನೋ
ಎಲ್ಲವೂ ಅಪ್ಪಳಿಸಿ ಎದೆ ಭಾರವೆನಿಸಿರಲು
ಮೂಕ ಮನಸಲಿ ಒಂದು ಸೂತಕದ ಛಾಯೆ!!

ಎಂದೋ ಮರೆತು ಬಿಟ್ಟ ಹಳೆ ಚಪ್ಪಲಿ
ಎಲ್ಲೋ ಮೆಟ್ಟಿ ಮುರಿದ ವಿಷದ ಮುಳ್ಳು
ಯಾವುದೋ ಹೆಸರಿಲ್ಲದ ಹೂವ ಹೊಸಕಿದ್ದು
ಎಂಥದೋ ಕೀಟವನು ಅಟ್ಟಾಡಿಸೊಡೆದದ್ದು
ಎಲ್ಲವೂ ಸೇಡಿನಲಿ ಹಿಂದಿರುಗಿದಂತಿವೆ
ಮುಖವಾಡ ಧರಿಸುತ ಎದುರಲ್ಲಿ ನಿಂತಿವೆ

ಬಂದವುಗಳಲ್ಲಾವು ಕೇಡು ಬಯಸಿದವು?
ಆಗಲೇ ನಿಷ್ಠೆಯಲಿ ಆಗಮಿಸಿದವುಗಳ
ನನ್ನಿಂದ ಬಲು ದೂರ ಕೊಂದಿರಿಸಿತು ಮೌಢ್ಯ;
ಯಾರನ್ನು ನಂಬಲಿ? ಯಾರನ್ನು ದೂರಲಿ?
ಯಾರಲ್ಲೂ ಸುಳುವಿನ ನೆರಳಿಲ್ಲ,
ಆಯ್ಕೆ ಒಂದಾದರೆ ಧಿಕ್ಕಾರ ಸಾವಿರ
ಏನು ಮಾಡುವುದೋ ಯಾರಾನ ಬಲ್ಲಿರಾ?

ಅತ್ತು ಕರೆದವರೆಡೆ ನಗುವಿನ ಸಾವಿದೆ
ನಕ್ಕು ಸತ್ತವರಲ್ಲಿ ಮತ್ತದೇ ಕಂಬನಿ
ಯಾವ ಕಣ್ಣಿಗೆ ನನ್ನ ಕಣ್ಣೀರ ಕಾಣಿಸಲಿ?
ಯಾವ ಶೃತಿ ತಂತಿಯಂಚಲಿ ದುಃಖ ಹಂಚಲಿ?
ಯಾವ ಗೋರಿಯ ಮುಂದೆ ಕಂಪಿಸುತ ಸಾಯಲಿ?

ಕೆಡುಕು ಮಾಡಿದವೆಲ್ಲ ನನ್ನವುಗಳಲ್ಲವೆಂದಲ್ಲ
ಒಂದಲ್ಲ ಒಂದು ಕಡೆ ಋಣವುಳ್ಳವುಗಳೇ,
ಕೊಡಲಿ ಹಿಡಿದ ಮಾತ್ರಕ್ಕೆ ಕೊಚ್ಚಲೇ?
ಆತುರದಿ ನನ್ನನ್ನೇ ಸೀಳಲೇ?
ಕಾದವರಿಗೆ ಕೊಟ್ಟ ಮಾತು ತಪ್ಪಲು ಒಲ್ಲೆ
ತಲುಪಿ ನಂತರ ತಲೆಯ ಉರುಳಿಸಿಕೊಳ್ಳಲೇ?

ಪ್ರಶ್ನೆಯಾಚೆ ಒಂದು ಉತ್ತರವಿದೆಯೆಂದು
ಪೂರ್ತಿ ಓದಿ ಮುಗಿಸಲು ಕೊನೆಗೆ ಚಿನ್ಹೆ(!/?)
ಪ್ರಶ್ನಾರ್ಥಕಕೆ ಬೇಡ ಉತ್ಪ್ರೇಕ್ಷೆ ಸಾಲುಗಳು,
ಆಶ್ಚರ್ಯ ಚಕಿತನಾಗಲು ಒಂದು ಚುಕ್ಕಿ
ಎಲ್ಲಕ್ಕೂ ಕೆನೆಗೆ ದೀರ್ಘ ವಿರಾಮ!!
                                             
                                      -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...