Friday, 12 June 2015

ಇಲ್ಲದ ಕನಸಿನ ಸುತ್ತ

ಕನಸುಗಳು ಘಾಡ ನಿದ್ದೆ ಮಾಡುತ್ತಿವೆ
ಆದಕಾರಣ ನಿದ್ದೆ ಹತ್ತುತ್ತಿಲ್ಲ ಕಣ್ಣಿಗೆ,
ಎಲ್ಲ ಕನಸುಗಳು ಇಷ್ಟು ಬೇಗ
ನನ್ನ ಆಲಿಂಗಿಸಿ ದೂರಾಗಲು ಮಾಫಿ ಮಾಡಿದ್ದೇನೆ,
ಊಫಿ ನೀಡಿದ್ದೇನೆ ತಮ್ಮ ಪಾಡಿಗಿರಲು!!

ಒಂದು ಕನಸಿಗೆ ನಾನಾ ಮುಖ
ಮುಖವಾಡವೆಂದಲ್ಲ, ಆದರೆ ಸ್ವಲ್ಪ ಹಾಗೇ
ಒಂದು ಕನಸಿಗೆ ಮುಖವೇ ಇಲ್ಲ
ಗಿರುತು ಹಿಡಿಯಲಾಗದಂತದ್ದಲ್ಲ
ಆದರೆ ಒಮ್ಮೊಮ್ಮೆ ಕಾಡುವಂತದ್ದು;
ಭಯ ಹುಟ್ಟಿಸಿದ್ದು, ಚಳಿ ಬಿಡಿಸಿದ್ದು
ಪುಳಕ ಹೆಚ್ಚಿಸಿದ್ದು, ತವಕ ತುಂಬಿಸಿದ್ದು
ಎಲ್ಲವೂ ನಾಪತ್ತೆ,
ಹುಟ್ಟಿದ ಮೂಲಕ್ಕೇ ಮರಳಿ ಮಲಗಿರಬೇಕು?
ಅದ ಹುಡುಕುವ ಗೋಜಿಗೆ ಹೋಗಲಾರೆ!!

ಒಂದು ಕನಸು ದಿನಂಪ್ರತಿ ನನ್ನ ಪೀಡಿಸುತ್ತ
ಜಾಲಾಡುತ್ತಿದ್ದದ್ದು ಇಂದೆಲ್ಲಿ?
ಜೋಡಿ ರೆಕ್ಕೆಗೆ ಬಣ್ಣ ತುಂಬುತ್ತಿದ್ದ ತಾನು
ಹಾರುವಷ್ಟರಲ್ಲೇ ಬೆಳಕರಿದು
ಹಾಸಿಗೆಯಿಂದ ಮೇಲೇಳಿಸುತ್ತಿತ್ತು,
ನನಗೋ "ಆಗಸವ ಮುಟ್ಟಲಿಲ್ಲವಲ್ಲ!!" ಎಂಬ ಬೇಜಾರು,
ಈ ಹೊತ್ತಿಗೆ ಅದು ತಲೆಮರೆಸಿಕೊಂಡಿದೆ!!

ಕ್ಲೌಡ್ ನೈನ್ ಕಾಣುತ್ತಿದೆ
"ಅದೆಲ್ಲಿ?" ಎಂಬುದು ವ್ಯಾಕರಣಕ್ಕೆ ನಿಲುಕದ್ದು
ನಾನಾಗಲೇ ಅದ ಏರಿ ಕೂತಿದ್ದೇನೆ
ಆಗಲೇ ಸಣ್ಣ ಸವಾರಿಯೂ ನಡೆಸಿದ್ದಾಯ್ತು;
ಆಕಾಶಕ್ಕೆ ಏಣಿ ಹಾಕುವ ನೆಪದಲ್ಲಿ
ಸದಾ ಕಾಲ ನನ್ನ ಕಾಲೆಳೆಯುತ್ತಿದ್ದ ಕನಸು
ಈಗ ಯಾವ ಬಾರಲ್ಲಿ ಕೂತು ಟೈಟ್ ಆಗಿದೆಯೋ ಕಾಣೆ!!

ತಾಜಾ ತೋರಣವೊಂದನ್ನ
ತಲೆ ನೇವರಿಸಿ ಸಾಗುವಂತೆ
ಎಲ್ಲ ದ್ವಾರಗಳು ತೆರೆದುಕೊಂಡಾಯ್ತು,
ಎಲ್ಲೆಲ್ಲೂ ಸಂಭ್ರಮ ಕೂಡಿದ
ಸ್ವಾಗತದ ಅಚ್ಚೋಲೆಗಳು,
ನಾನೀಗ ಎಲ್ಲೆಲ್ಲೂ ಬೇಕಾಗಿದ್ದೇನೆ
ಆದರೆ ಎಲ್ಲೂ ಪೂರ್ಣವಾಗಿರಲಾರೆ
ಹಾಗಾಗಿ ಈ ಹೊತ್ತಿಗೆ ನನ್ನನ್ನ ನನಗೇ ಬಿಟ್ಟುಕೊಡಬೇಕು

ಕನಸುಗಳ ಕ್ಷಮೆ ಕೋರಿ
ಇಂದು ನನ್ನದೇ ಲೋಕವನ್ನ
ಕನಸಿಗಿಂತಲೂ ಸುಂದರವಾಗಿಸುವ ದಿನ,
ನಾಳೆಗಳ ಹೊಸ ಸ್ವರೂಪಗಳ ಸ್ವಾಗತಿಸುತ್ತ
ಹಳೆ ಸರಕಿಗೆ ಮಂಗಳ ಹಾಡಿದೆ
ಕನಸುಗಳೂ ಈಗ ಕನಸಾಗಿ ಉಳಿದಿವೆ!!
                                           
                                                 -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...