ರವಿ ತಾನಳಿಯದವ

ರವಿ ಎದ್ದು ಬೆಳಕು
ರವಿ ಮುಳುಗಿ ಕತ್ತಲೆ
ಅವರಿವರು, ಇವರವರು
ಯಾರು ಮುಳುಗಿಸಿದವರು?
ಉತ್ತರ ಸಿಗುವ ಮುನ್ನ
ಮೇಲೇಳಲಿ ನೂರು ಸೂರ್ಯರು
ಒಂದು ಮೂಲದ ಬೆಳಕ
ಕೊರತೆ ನೀಗಿಸಲು!!

ರವಿ ತಾನು ಸೋತವನು
ಅಂದವರು ಕಂಬಳಿಯ
ಹೊದ್ದು ಬೆಚ್ಚಗೆ ಮಲಗಿದರು
ಚುರುಕು ಮುಟ್ಟುವ ತನಕ;
ಅಂಬರವು ಎಷ್ಟೆಂದು
ತಂಬೆಲರ ಸಹಿಸುವುದು?
ಧಗೆ ಹರಿಯುವವರೆಗೆ
ಬಗೆಹರಿಯದು ಮೌಢ್ಯ

"ಮಣ್ಣಾದವನು ಮತ್ತೆ
ಹುಟ್ಟಿಬರಲಾರನೋ ತಮ್ಮ!!"
ಹುಟ್ಟುವವರಲ್ಲೇ ನೆಲೆಸುವನು ತಾ
ಬೇರಿಂದ ಬೆಂಬಲಿಸಿ
ಹೃದಯಗಳ ಹೊಕ್ಕವನ
ಯಾರಿಂದ ತಪ್ಪಿಸುವೆ?
ಹೇಗೆಂದು ತಪ್ಪಿಸುವೆ?

ಅಗೋ ಅಲ್ಲಿ ಹರಿದುರುಳಿದ
ಕಂಬನಿಗಳ ಮೇಲೊಂದು
ಮೌನ ಆವರಿಸಿದೆ,
ಘರ್ಜನೆಯ ಅದುಮಿಟ್ಟು
ಒಳಗೊಳಗೆ ಸಂಘರ್ಷಿಸಿಕೊಳ್ಳುತ್ತ
ಸ್ಪೋಟಕವಾಗುತ್ತಿದೆ,
ಮೌನ ಸಿಡಿದಾಗ
ಎಲುಬಿಲ್ಲದ ನಾಲಗೆಯ ಮಾತು
ಸ್ತಬ್ಧ, ನಿಶಬ್ಧ!!

ಇಲ್ಲೇ ಇವೆ ಎಲ್ಲ ಪುರಾವೆ
ಇಲ್ಲೇ ಎಲ್ಲೋ ಕಳುವಾಗಿವೆ
ಬೇಕು ಶುದ್ಧ ಹಸ್ತ
ನೆತ್ತರಿಗೂ, ಕಂಬನಿಗೂ
ಸಾಂತ್ವಾನಕೂ, ಸಮರಕ್ಕೂ;
ನೋಡಿಕೊಳ್ಳಿ ಇದಯಾ ನಿಮ್ಮ ಬಳಿ?
ಇದ್ದರೆ ಯುದ್ಧಕ್ಕೆ ಸಜ್ಜುಗೊಳ್ಳಿ!!
                          
                            -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩