ಬರೆಯದ ಕವಿತೆ

ಕವಿತೆ ಬರೆಸುತ್ತಾಳೆ ಆಕೆ
ಕೈಲಿದ್ದ ಲೇಖನಿಯ ಕಸಿದುಕೊಂಡು
ಕಣ್ಣಲ್ಲೇ ಬರೆ ಅನ್ನುವಂತೆ
ಅಮಾಯಕ ನೋಟ ಬೀರುತ್ತಲೇ
ನಿಯಂತ್ರಿಸುತ್ತಾಳೆ ಮನದ ಭಾವಗಳ;

ಆಕೆ ಜನನಿ, ಕವನ ಕೂಸು
ಮತ್ತೆ ನಾನು ಮತ್ತು ಲೇಖನಿ
ಇದ್ದರೆಷ್ಟು, ಹೋದರೆಷ್ಟು?

ಬರೆದದ್ದನ್ನೆಲ್ಲ ಎದುರಿಟ್ಟು
ನಿರೀಕ್ಷೆಯ ಕಾವಲ್ಲಿ ಮೈ ಬೆಚ್ಚಗಾಗಿಸಿಕೊಳ್ಳುವಾಗ
ಒಂದು ತಂಪು ನಗೆ ಚೆಲ್ಲಿ
ಸುಮ್ಮನಾಗದ ಅವಳು
ಅದ ಮರೆಸುವ ಯತ್ನದಲಿ
ನನ್ನನ್ನೇ ಮರೆಸಿಡುತ್ತಾಳೆ,

ನಾ ಕಳುವಾದೆನೆಂದು ಗೋಳಿಡಲಿಲ್ಲ
ಕಳ್ಳತನಕ್ಕೆ ಬೆಂಬಲವಾಗಿ ನಿಂತೆ
ಇದ್ದಷ್ಟೂ ಒಲವನ್ನ ಅವಳಲ್ಲಿ ಹೂಡಿ
ಖಾಲಿ ಹೃದಯವನ್ನ ಗುಡಿಸುತ್ತ ಕೂತೆ;

ಯಾವುದೇ ಸಮಯಕ್ಕೆ ಕರೆ ಬರಬಹುದು,
ಒಪ್ಪೊತ್ತು ಗಂಜಿ ಕಾಯಿಸಿಟ್ಟು
ಹೊಟ್ಟೆ ತಣ್ಣಗಾಗಿಸಲವಳು
ದಿನಾಲೂ ಬೇಡಿಕೆಯಿಟ್ಟು
ಅಲ್ಲೇ ನೆಲೆಯೂರಲೂಬಹುದು!!

ಅವಳು ಬರುವ ಹೊತ್ತಾಯಿತು,
ಶೂನ್ಯಕ್ಕೆ ಮರಳುತ್ತೇನೆ;
ಅವಳೇ ನನ್ನ ಮೌಲ್ಯ ಮಾಪಿಸಿ
ಹೆಚ್ಚು ಕಡಿಮೆ ಉತ್ತೀರ್ಣಗೊಳಿಸುವವಳು,
ನಾನಿನ್ನೂ ಅನುತ್ತೀರ್ಣನಾಗಿಯೇ ಉಳಿಯುವ ಆಸೆ
ಅವಳ ಕಕ್ಷೆಯ ಬಿಡದೆ
ಸುತ್ತುತ್ತಾ.. ಸುತ್ತುತ್ತಾ...
                                                -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩