ನೆರಳಿನೊಂದಿಗಿರಲು

ಹಿಂದಿಂದೆ ಬಂದಾಗ ಪಕ್ಕಕ್ಕೆ ಕರೆದೆ
ಪಕ್ಕದಲಿ ನಿಂತಾಗ ದೂರ ಸರಿದೆ
ದೂರವಾಗಲು ಕಣ್ಣಂಚಿನಲಿ ಸೆಳೆದೆ
ಮರುಳಾಗಿಯೇ ನಿನ್ನ ಸೆರಗಾಗಿ ಹೋದೆ

ಗಾಳಿ ಬೀಸಲು ದಿಕ್ಕು ದಿಕ್ಕಿಗೆ ಕುರುಳು
ನನ್ನ ಸಂಬಾಳಿಸಲು ನಿನಗೆಲ್ಲಿ ಸಮಯ?
ಪ್ರತಿ ಸಲವೂ ಧಾವಿಸಲು ಆ ಕೈಯ್ಯ ಬೆರಳು
ಉಗುರು ಬಣ್ಣಕೆ ಸೋಕಿದ ಕುಂಚ ಧನ್ಯ

ಮಾತಿನ ಮೇಲೊಂದು ಮಾತು ಸೋತು
ಹೊರಬಾರದೆ ಉಳಿಯಿತು ತುಟಿಯಂಚಲಿ
ಹೃದಯವೇ ಎದೆ ಸೀಳಿ ಅವಳ ಮುಖ ನೋಡುತಿರೆ
ಎದೆ ಬಡಿತವ ಹೇಗೆ ಮರೆಸಿ ಇಡಲಿ?

ಹಂಚಿಕೊಂಡ ನಗೆಯ ಸಹಿಯೊಪ್ಪಂದದಲಿ
ಜೀವಗಳ ಸಿಹಿಗನಸುಗಳ ವಿನಿಮಯ
ಎಷ್ಟೇ ಹಳಬರಾದರೂ ಬದುಕಿಗೆ
ಮಾಡಿಕೊಳ್ಳಲೇ ಬೇಕು ಕಿರುಪರಿಚಯ

ಜೊತೆಗಿದ್ದ ದಿಗಿಲು ಬಿಟ್ಟು ಹೊರಡುವ ವೇಳೆ
ಮೊಂಡು ಧೈರ್ಯಕೆ ಮಂದಹಾಸ ಪ್ರಾಪ್ತಿ
ಇಷ್ಟೆಲ್ಲ ಜರುಗಿರಲು ಗುಟ್ಟಾಗಿ ದೊರಕಿತು
ಏಕಾಂತಕೆ ಇನ್ನು ಬಂಧ ಮುಕ್ತಿ!!

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩