Friday, 12 June 2015

ಸೂತ್ರವಿಲ್ಲದ ನಾಟಕ

ಇಲ್ಲ ಸಲ್ಲದ ಚಿಂತೆ
ಹೊಂಗೆ ನೆರಳಿನ ಅಡಿಯ
ಕಿರುಬೆರಳ ಉಗುರಿಂದ
ಕೆರೆದು ಗಾಯವ ಮಾಡಿ
ಬಿಸಿ ಮುಟ್ಟಿಸುವ ಹೊತ್ತು
ಯಾವ ಎಲೆ ಉದುರದೆ
ಉದುರಿದೆಲೆ ಚೆದುರದೆ
ಕಿಚ್ಚು ಹೊತ್ತಿಸಿಕೊಂತು?

ಹುಚ್ಚು ಮನಸಿಗೆ ತಾನೆ
ಎಲ್ಲಿ ಒಂದೇ ಮುಖ?
ಕ್ಷಣಕೊಮ್ಮೆ ಬದಲಾಗಿ
ಮೊದಲಾಗಿ ಕೊನೆಗೊಂಡು
ಮೂಕಾಭಿನಯದಲ್ಲಿ
ಬಣ್ಣ ತೊಟ್ಟವನನ್ನೇ
ಬದಲಾಯಿಸಿತು ಅಲ್ಲಿ
ರಂಗದಂಗಳದಲ್ಲಿ ಮಂಗನಾಟ!!

ಅತ್ತವರ ಜೊತೆ ಅತ್ತು
ಸತ್ತವರ ಜೊತೆ ಸತ್ತು
ಮಿಕ್ಕವರ ಮರೆತಂತೆ
ಸಿಕ್ಕವರು ಸಿಗದಂತೆ
ಅಟ್ಟಿಸಿ ಬಿಟ್ಟರಾ
ಒಡಲಿಗಂಟಿದ ನೆರಳ?
ಮುದ್ದು ಮಾತಲಿ ಸೆಳೆದು
ಕಪ್ಪು ಮುಸುಡಿಗೆ ಬಳಿದು

ಯಾವ ಪಾತ್ರವು ತಾನೆ
ಜೀವಂತವೆನಿಸುವುದು?
ಯಾವ ಅರ್ಥವು ತಾನೆ
ತರ್ಕವನು ನೀಡುವುದು?
ಇದ್ದವುಗಳಿದ್ದಂತೆ ಇರಲಿ
ಬಿದ್ದವುಗಳು ಎದ್ದು ಬರಲಿ
ಕೂಗುವಾಟಕೆ ಇಲ್ಲಿ
ಕೊರಳ ಬೆಂಬಲ ಸಿಗಲಿ!!

ಮುಗಿದ ನಾಟಕವನ್ನ
ಕೈ ಮುಗಿದು ಕೇಳಿದೆ
"ತಿಳಿಯಲೊಲ್ಲದು ಏನೂ
ಏನು ನಿನ್ನ ಮರ್ಮ?
ಬೆತ್ತಲಾಗು ಬಿಡಿಸಿ
ಹಸಿವ ನೀಗಿಸು ಬಡಿಸಿ
ಚಿತ್ತದ ಚೀಕ್ತಾರವನು ಆಲಿಸು
ದಯಪಾಲಿಸು ಸೂತ್ರಧಾರಿ!!"

ದೀಪ ಆರುವುದರಲ್ಲಿದೆ
ಕೋಪವೂ ಕತ್ತಲಲಿ ಲೀನವಾಗಬಹುದು,
ಕೋಪವೆಂಬುವುದೊಂದು
ಇತ್ತೆಂಬುದನ್ನೇ ಸುಳ್ಳಾಗಿಸಿ
ನಂಬಿಸಿ ಬಿಡಬಹುದು ಪ್ರಾಣ,
ಹಗುರಾಗಿ ಹಾರಾಡಿ
ಇರುವನಕ ತ್ರಾಣ,
ಮುಗಿಲ ತೋರಣದಾಚೆ ಕಂಡವರು ಯಾರು?
                                               
                                      -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...