ಅವಳೊಬ್ಬಳೇ ಅಲ್ಲ

ಗೋಡೆಗಾನಿ ನಿಂತ ಅವಳು
ಗೋಡೆಯದ್ದೇ ಬಣ್ಣದವಳು
ಅಲ್ಲಿ ಇಲ್ಲಿ ಚಕ್ಕೆ ಉದುರಿದಂತೆ ಮೊಡವೆ ಕಲೆಗಳು
ಮರದ ನೆರಳು ಗೋಡೆ ಮೇಲೆ
ಬಿರುಕು ಬಿಟ್ಟ ನಾಕು ಮೂಲೆ
ಸುಣ್ಣ ಬಳಿಯಲಾಗಲಿಲ್ಲದಂತೆ ಇಷ್ಟು ದಿನಗಳು

ಅಷ್ಟೋ ಇಷ್ಟೋ ಕಣ್ಣುಗಳಿಗೆ
ಕಪ್ಪು ಮಸಿಯ ಬಳಿದುಕೊಂಡು
ತುಟಿಗೆ ಕೆಂಡದಂಥ ಬಣ್ಣ, ಯಾರು ಕಂಡು ಹಿಡಿದರೋ?
ದೂರದಿಂದ ಕಂಡ ಮಂದಿ
ಚಳುಕು ಹಚ್ಚಿಕೊಂಡು ಬಂದು
ಹತ್ತಿರಕ್ಕೆ ಕಂಡು ಮುನಿದು ಮೈಯ್ಯ ಮುರಿದುಕೊಂಡರು!!

ಪೇಟೆಯೆಲ್ಲ ಸುತ್ತಿ ಅವಳು
ತರುವಳಂತೆ ಪೂಸಿಕೊಳಲು
ಹತ್ತು ಹಲವು ಬಗೆಯ ವಿದೇಶಿ ಕಾಂತಿವರ್ಧಕ
ತನ್ನ ವಯಸಿನವರಿಗೆಲ್ಲ
ಕೈಯ್ಯಲೊಂದು, ಕಂಕ್ಳಲ್ಲೊಂದು
ಯಾರ ಜೊತೆಗೂ ಕೂಡುತಿಲ್ಲ ಪಾಪ ಅವಳ ಜಾತಕ

ಹೊಟ್ಟೆಗಿಲ್ಲದಿದ್ದರೂನು
ಜುಟ್ಟಿಗಿಷ್ಟು ಮೊಲ್ಲೆ ಮುಡಿದು
ಸುತ್ತುತಾಳೆ ಸುಂದ್ರಿಯಂತೆ ಊರ ತುಂಬ ಬಳುಕುತ
ಹೊಟ್ಟೆ ಉರಿಯ ಪಟ್ಟುಕೊಂಡು
ದೃಷ್ಟಿ ತಾಕಬಹುದು ಎಂದು
ಬೊಟ್ಟನಿಕ್ಕಿಕೊಳ್ಳುತಾಳೆ ಕನ್ನಡಿಯ ಹಿಡಿಯುತ

ಯಾರು ಕೂಡ ಇಲ್ಲಿ ವರೆಗೆ
ಕಂಡು ಕೇಳರಿಯಲಿಲ್ಲ
ಗುಪ್ತವಾಗಿ ಅಳುವಳಂತೆ ಊರ ದೇವರೆದುರಲಿ
ಸುತ್ತ ಮುತ್ತ ಹಳ್ಳಿ ಹೈಕ್ಳ
ಎಣಿಸಿ ಬಿಟ್ಟುಕೊಟ್ಟಿದ್ಲಂತೆ
ಅರಸಿ ಬರಲು ಬಾಗಿಲಿಗೆ ತನ್ನ ಉಕ್ಕುವಯಸಲಿ!!

ಮಗಳು ಒಂಟಿಯಾದಳೆಂಬ
ನೋವಿನಲ್ಲೇ ಉಸಿರು ಬಿಟ್ಟ
ಹೆತ್ತವರ ಜಾಗಕೀಗ ಅಜ್ಜಿ ಮಾತ್ರ ಆಸರೆ
ಹಿಂದೆ ಆದುದಕ್ಕೆ ಅವಳು
ತಲೆಯ ಕೆಡಿಸಿಕೊಳ್ಳಲಿಲ್ಲ
ಇನ್ನೂ ಹದಿಹರೆಯದವಳು ಹಲ್ಲು ಬಿಟ್ಟು ನಕ್ಕರೆ

ಬುಡ್ಡಿ ದೀಪದಲ್ಲಿ ಖಾಲಿ
ಎಣ್ಣೆ-ಬತ್ತಿ, ಬೆಂಕಿ-ಬೆಳಕು
ನೆರಳು ಕೂಡ ಅವಳ ದೂರ ಮಾಡಿಕೊಂಡ ಹಾಗಿದೆ
ಸುತ್ತ ಹಳ್ಳಿಗಳಲಿ ಅವಳ
ಹೆಸರಿನೊಡನೆ ಅಂಟಿಕೊಂಡ
ಹೆಸರುಗಳ ಪಟ್ಟಿ ಈಗ ಆಕಾಶ ಮುಟ್ಟಿದೆ!!
                                                       -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩