ದಾಸನ ದೇವಿ

ಒಂದಾಗುವ ಸೂಚನೆಯಲ್ಲೂ
ದೂರಾಗುವ ಭಾವವೊಂದಿದೆಯಲ್ಲ
ಅಬ್ಬಬ್ಬಾ, ತೀರಾ ಅಸಹ್ಯ!!

ಸ್ಪರ್ಶದ ಗಂಧವೇ ಗೊತ್ತಿಲ್ಲದ
ಮರಗಟ್ಟಿಹೋದ ಹೃದಯಕ್ಕೆ
ಕೋಗಿಲೆ ಪುಕ್ಕವೊಂದು ಹಾಡು ಕಲಿಸಿ
"ಇನ್ನೇನಿದ್ದರೂ ನೀನೇ ಹಾಡಿಕೋ" ಅಂದಾಗ
ಹೂವಾಗಿ ಅರಳಿದ ತನ್ನ ಒಡಲಿಂದ
ಪರಾಗವೊಂದು ಬೇರಾಗಿ ಒಡಲೆಲ್ಲ ಅಲೆದಾಡಿ
ಈಗ ತನ್ನ ಮೂಲವ ಹುಡುಕುತ್ತಿದೆ,
ಬಳಸಿ ಬಂದ ದಾರಿಯೇ ಮಾಯವಾದಂತಿದೆ!!

ಹ್ಮ್ಮ್.. ಸುಮ್ಮನೆ ಕೂತರೆ ಹೇಗೆ?
ನೆನಪಿನ ಕಾಮಗಾರಿಯಲ್ಲಿ ನಿರತನಾಗಿ
ಒಂದಿಷ್ಟು ಭ್ರಮೆಯಲ್ಲಿ ಸಿಲುಕಬೇಕು,
ಏಕತಾನತೆಯಲ್ಲೂ ಮಜವಿದೆ
ಅದು ನಿನ್ನ ಕುರಿತದ್ದಾಗಿದ್ದರೆ ಮಾತ್ರ!!

ಹತ್ತಿರವಿದ್ದಾಗ ಅದೆಷ್ಟು ದೂರ,
ದೂರವಾದಾಗ ಅದೆಷ್ಟು ಹತ್ತಿರದವಳು ನೀನು?!!
ಮುಗಿಲಿಂದ ದೂರಾಗಿ
ಮತ್ತೆ ಮುಗಿಲಿಗೆ ಹವಣಿಸುವ ಹುಚ್ಚು ಕಂಬನಿಯಂತೆ
ನಾ ಹರಿದು ಹರಿದು ಧನ್ಯನಾಗುತ್ತೇನೆ
ನಿನ್ನ ಕೆನ್ನೆ ಕಾಲುವೆಗಳಲ್ಲಿ!!

ಮಾತಿಗೊಂದಿಷ್ಟು ನೆಪ
ಕೋಪಕೊಂದಿಷ್ಟು ಹಠವನ್ನ
ನಾಜೂಕಾಗಿ ಬೆರೆಸಿ ತರುವವಳು
ಎಲ್ಲಕ್ಕೂ ನನ್ನನ್ನೇ ಗುರಿ ಮಾಡುತ್ತೀಯ
ಸಿಟ್ಟು, ಪ್ರೇಮ, ಕೋಪ, ತಾಪ ಇತ್ಯಾದಿಗಳಿಗೆ
ನನಗಂತೂ ನಿರ್ಲಿಪ್ತತೆಯೇ ಆಪ್ತ,
ಅದನ್ನೂ ದಯಪಾಲಿಸು!!

ಕಣ್ಣಿಗರ್ಧದಷ್ಟು ಶಕ್ತಿ ತುಂಬಿ
ನನ್ನೊಳಗೆ ಸಂಘರ್ಷಕ್ಕೆ ಕಾರಣಳಾದವಳೇ,
ಆಗಾಗ ನಿನ್ನ ಮಗುವಿನ ಗುಣದಿಂದ
ನನ್ನ ಹಗುರಾಗಿಸುತ್ತೀಯಲ್ಲ
ಅದೇ ಇರಬೇಕು ನಿನ್ನಲ್ಲಿ ನಾ ಬಲುವಾಗಿ
ಮೆಚ್ಚಿಕೊಂಡ ವಿಷಯ!!

ಹೀಗೇ ಅದೆಷ್ಟೋ ಸಲ ಕಳೆದ ನನ್ನ
ನೀನೇ ಪತ್ತೆ ಹಚ್ಚಿ ಹಿಂದಿರುಗಿಸಿದ್ದೆ
ಈಗ ಮತ್ತೆ ಕಳುವಾಗಿದ್ದೇನೆ
ತಡ ಮಾಡದೆ ದಾಪುಗಾಲಿಟ್ಟು
ಆದಷ್ಟೂ ಸನಿಹಕೆ ಬರುವಂತವಳಾಗು,
ಅಲ್ಲಿಯವರೆಗೂ ಈ ದಾಸ
ಏಕ ತಂತಿಯ ಮೀಟಿ ಜೀವಂತವಾಗಿರುತ್ತಾನೆ!!
    
                                               -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩