Thursday 11 June 2015

ದಾವೆ ಪತ್ರ

ಮನಸಿಗೆ ಹಚ್ಚಿಕೊಂಡದ್ದ
ಸುಲಭಕ್ಕೆ ಬಿಡಿಸಿಕೊಳ್ಳಲಾಗದಲ್ಲ?
ಹಚ್ಚಿಕೊಳ್ಳುವ ಮುನ್ನ ಎಚ್ಚರಿಸದೆ
ಬಿಡಿಸಿಕೊಳ್ಳಬಹುದಾದ ಭಯದಲ್ಲಿ ಬದುಕುವುದು
ನಿಜಕ್ಕೂ ಹಿಂಸೆಯೇ ಸರಿ!!

ಅಲ್ಲ, ಈಗ ಬಿಡುಗಡೆಯ ಮಾತೇಕೆ?
ಹದವಾಗಿ ಬೆರೆತ ಉಸಿರಂತೆ
ಎದೆಯೆಲ್ಲ ಅವಳ ನಗೆಯ ಸಹಿ,
ನಕಲು ಮಾಡಲಾಗದಷ್ಟು ಅನುಪಮ ಸ್ಮಿತ!!

ವಿಷಯಕ್ಕೆ ಬರುವುದಾದರೆ,
ನಾನೇ ಕಳುವಾಗಿದ್ದೇನೆ
ತ್ವರಿತ ದಾವೆ ಹೂಡಬೇಕಿದೆ
ಅದೂ ಬಲು ಗುಪ್ತವಾಗಿ;
ಕಿಡಿಗೇಡಿ ಕಣ್ಣುಗಳು ನನ್ನನ್ನೇ ದಿಟ್ಟಿಸುತ್ತಿವೆ,
ಎಲ್ಲವನ್ನೂ ಮೀರಿ ನ್ಯಾಯ ಕೋರಬೇಕಿದೆ
ಆದರೆ ಉಮೇದಿನ ಕೊರತೆ!!

ಟೆಂಡರ್ ಕರೆಯದೆ
ಮನಸಿನ ಎಲ್ಲ ಕಾಮಗಾರಿಗಳನ್ನೂ
ಆ ಒಂದೇ ಕಂಪನಿಗೆ ಕೊಡಲಾಗಿದೆ,
ಎಲ್ಲೂ ಭ್ರಷ್ಟಾಚಾರದ ಸುಳುವಿಲ್ಲ
ಆದರೂ ಅದು ಮನಸನ್ನೇ ದೋಚುತ್ತಿದೆ,
ಕಂಪನಿಯ ಹೆಸರೂ, ಅವಳ ಹೆಸರೂ ಒಂದೇ
ನಿಜಕ್ಕೂ ಸೋಜಿಗದ ಸಂಗತಿ!!

ನನ್ನಲ್ಲಿ ನಾನೊಬ್ಬನಿದ್ದೆನೆಂಬುದನ್ನೇ ಮರೆಸಿ
ನಾಮಫಲಕವನ್ನೂ ತಿದ್ದಿದವಳೀಗ
ಅವಳ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾಳೆ,
ಆಯಾಸದಲ್ಲೂ ಏನೋ ಸುಖ
ನಾನು ನನ್ನನ್ನೇ ಮರೆತು ಕುಣಿಯುತ್ತಿರುವ ತಿಕ್ಕಲು ಪೂಜಾರಿ!!
                                                   
                                                         -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...