ಜೀವನ ಸಂಜೀವನ

ಸುಮ್ಮನೆ ಯಾರೋ ಹಾಗೆ ಬಂದು
ಬದುಕಿಗೆ ಗಂಟು ಬೀಳುವುದಿಲ್ಲ,
ಕಾರಣಗಳು ಇರದಿದ್ದರೂ
ಹುಟ್ಟಿಕೊಳ್ಳುವ ಸಲುವಾಗಿಯೋ
ಹುಡುಕಿಕೊಳ್ಳುವ ಸಲುವಾಗಿಯೋ
ಒಂದುಗೂಡುವಾಟದಲ್ಲಿ
ಎಲ್ಲರೆದುರು ಒಂದಿಷ್ಟು ನೇಮ
ಏಕಾಂತದಲ್ಲಿ ಎಲ್ಲವೂ ಕ್ಷೇಮ

ಗೂಡಲ್ಲಿ ವಾಸ್ತವ್ಯ ಹೂಡುವ ಜೋಡಿ
ಹೆಕ್ಕಿ ತರುವ ಪ್ರತಿ ನಾರಿನಲ್ಲೂ
ಅವರ ಹೆಸರಿರಿಸಿಕೊಂಡರಷ್ಟೇ
ತಾವುಳಿದಾಗಿನ ಉಲಿಗೆ
ಮರದ ರೆಂಬೆ ತಲೆದೂಗಿ
ಚಿರಂತನವಾಗಿಸಬಹುದಾದ ಸತ್ಯ ಅರಿತಾಗ
ಕ್ಷಣ ಕ್ಷಣವೂ ಪ್ರೇಮಮಯ!!

ಮುನಿಸುಗಳು ಅಲ್ಲಲ್ಲಿ ಎದುರಾಗಿ
ಸಂತೈಸುವಿಕೆಯ ಸುಖವನ್ನೂ ನೀಡಲಿ
ಸಿಟ್ಟಿನ ಮಾತು ಸಿಹಿ ಮುತ್ತಿಗೆ ಸಿಗಲಿ
ಬಾಳ ಹೊತ್ತಿಗೆ ತುಂಬ ನೆನಪಿನ ಅಕ್ಷರಗಳ
ಮಧುರ ಕಾವ್ಯ ಮೂಡುತ್ತಲೇ
ಅನರ್ಥಗಳ ಅರಿವಾಗಿ
ಅಪಾರ್ಥಗಳು ದೂರಾಗಿ
ಅರ್ಥಗರ್ಭಿತ ಸಾಲುಗಳು ಮಾತ್ರ ಮಿನುಗಲಿ,
ಜೀವನ ಸಂಜೀವನವಾಗಲಿ!!

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩